ಆದಾಯ ತೆರಿಗೆ ಪಾವತಿಸಲು ಈಗ ಗಂಟೆಗಟ್ಟಲೆ ಹೆಣಗಾಡಬೇಕಿಲ್ಲ.ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಆ್ಯಪ್ ಇದ್ರೆ ಸಾಕು, ಸುಲಭವಾಗಿ ತೆರಿಗೆ ಪಾವತಿಸಬಹುದು.
Business Desk: ಸುದೀರ್ಘ ಪ್ರಕ್ರಿಯೆಯ ಕಾರಣಕ್ಕೆ ಆದಾಯ ತೆರಿಗೆ ಪಾವತಿ ಅನೇಕರಿಗೆ ಕಷ್ಟದ ಕೆಲಸ ಎಂದೇ ಹೇಳಬಹುದು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಪಾವತಿಯನ್ನು ಸುಲಭಗೊಳಿಸಲು ಫಿನ್ ಟೆಕ್ ಸಂಸ್ಥೆ ಫೋನ್ ಪೇ 'ಆದಾಯ ತೆರಿಗೆ ಪಾವತಿ' ಅಪ್ಲಿಕೇಷನ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರ ಮೂಲಕ ತೆರಿಗೆದಾರರು ಅಥವಾ ಉದ್ಯಮಿಗಳು ಸ್ವ ಮೌಲ್ಯಮಾಪನ ಮಾಡಿದ ತೆರಿಗೆಯನ್ನು ಹಾಗೂ ಮುಂಗಡ ತೆರಿಗೆಯನ್ನು ಫೋನ್ ಪೇ ಅಪ್ಲಿಕೇಷನ್ ಮೂಲಕ ಸುಲಭವಾಗಿ ನೇರ ಪಾವತಿ ಮಾಡಬಹುದು. ಇದೆಲ್ಲವನ್ನೂ ಮಾಡಲು ನೀವು ಐಟಿ ಪೋರ್ಟಲ್ ಗೆ ಲಾಗಿನ್ ಆಗಬೇಕಾದ ಅಗತ್ಯವಿಲ್ಲ. ಈ ನಡುವೆ ಜನರು ಐಟಿ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆಗಳಿರುವ ಬಗ್ಗೆ ಆಗಾಗ ದೂರುಗಳನ್ನು ಹೇಳುತ್ತಲಿರುತ್ತಾರೆ. ಹೀಗಾಗಿ ತೆರಿಗೆ ಫೈಲಿಂಗ್ ಗೆ ಇದು ಪರ್ಯಾಯ ವ್ಯವಸ್ಥೆಯಾಗಿರುವ ಜೊತೆಗೆ ವೆಬ್ ಸೈಟ್ ಮೇಲಿನ ಹೊರೆಯನ್ನು ಕೂಡ ತಗ್ಗಿಸುತ್ತದೆ. ಈ ವ್ಯವಸ್ಥೆಯನ್ನು ಕಲ್ಪಿಸಲು ಪೇಟಿಎಂ ಬಿ2ಬಿ ಪಾವತಿಗಳು ಹಾಗೂ ಸೇವೆಗಳನ್ನು ನೀಡುವ ಪೇಮೇಟೆ ಜೊತೆಗೆ ಸಹಭಾಗಿತ್ವ ಹೊಂದಿದೆ.
ಫೋನ್ ಪೇ 'ಆದಾಯ ತೆರಿಗೆ ಪಾವತಿ' ಅಪ್ಲಿಕೇಷನ್ ಮೂಲಕ ಬಳಕೆದಾರರು ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಿಕೊಂಡು ತಮ್ಮ ಆದಾಯ ತೆರಿಗೆ ಪಾವತಿಸಬಹುದು. ಇನ್ನು ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಆದಾಯ ತೆರಿಗೆ ಪಾವತಿಗಳ ಮೇಲೆ ಬಳಕೆದಾರರು 45 ದಿನಗಳ ಬಡ್ಡಿರಹಿತ ಅವಧಿ ಹಾಗೂ ರಿವಾರ್ಡ್ ಪಾಯಿಂಟ್ಸ್ ಪಡೆಯಲಿದ್ದಾರೆ. ಇನ್ನು ಈ ರಿವಾರ್ಡ್ ಪಾಲಿಸಿ ವಿವಿಧ ಬ್ಯಾಂಕ್ ಗಳಿಗೆ ವ್ಯತ್ಯಾಸವಾಗುತ್ತವೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ನಲ್ಲಿ ಈಗ ಆಧಾರ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಸುಲಭ!
ತೆರಿಗೆ ಪಾವತಿ ಪೂರ್ಣಗೊಂಡ ಬಳಿಕ ತೆರಿಗೆದಾರರಿಗೆ ವಿಶಿಷ್ಟ ವಹಿವಾಟಿನ ರೆಫರೆನ್ಸ್ (UTR) ಸಂಖ್ಯೆ ತೆರಿಗೆ ಪಾವತಿಗೆ ದಾಖಲೆಯಾಗಿ ಸಿಗಲಿದೆ. ಇನ್ನು ಯುಟಿಆರ್ ಒಂದು ದಿನದೊಳಗೆ ಸಿಗಲಿದೆ. ಆದರೆ, ಚಲನ್ ಎರಡು ಕಾರ್ಯನಿರತ ದಿನಗಳೊಳಗೆ ಸಿಗಲಿದೆ.
'ಫೋನ್ ಪೇ ಅಪ್ಲಿಕೇಷನ್ ಮೂಲಕ ಆದಾಯ ತೆರಿಗೆ ಪಾವತಿಸುವ ನಮ್ಮ ಹೊಸ ಫೀಚರ್ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇನ್ನು ತೆರಿಗೆಗಳನ್ನು ಪಾವತಿಸೋದು ಸಂಕೀರ್ಣ ಹಾಗೂ ಸಮಯ ಹಿಡಿಯುವ ಕೆಲಸವೂ ಆಗಿದೆ. ಫೋನ್ ಪೇ ಈಗ ತನ್ನ ಬಳಕೆದಾರರಿಗೆ ಕಷ್ಟವಿಲ್ಲದ ಹಾಗೂ ಸುರಕ್ಷಿತವಾದ ವಿಧಾನದ ಮೂಲಕ ತೆರಿಗೆ ಜವಾಬ್ದಾರಿಗಳನ್ನು ನಿಭಾಯಿಸಲು ನೆರವು ನೀಡುತ್ತಿದೆ' ಎಂದು ಫೋನ್ ಪೇ ಬಿಲ್ ಪಾವತಿಗಳು ಹಾಗೂ ರೀಚಾರ್ಜ್ ಉದ್ಯಮದ ಮುಖ್ಯಸ್ಥೆ ನಿಹಾರಿಕಾ ಸೈಗಲ್ ತಿಳಿಸಿದ್ದಾರೆ.
ಫೋನ್ ಪೇ ಮೂಲಕ ತೆರಿಗೆ ಪಾವತಿ ಹೇಗೆ?
*ಫೋನ್ ಪೇ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಹಾಗೂ ಸ್ಥಾಪಿಸಿ.
*ಫೋನ್ ಪೇ ಅಪ್ಲಿಕೇಷನ್ ಹೋಮ್ ಪೇಜ್ ತೆರೆಯಿರಿ ಹಾಗೂ ‘Income Tax’ಐಕಾನ್ ಮೇಲೆ ಟ್ಯಾಪ್ ಮಾಡಿ.
*ಆ ಮೌಲ್ಯಮಾಪನ ವರ್ಷಕ್ಕೆ ನೀವು ಪಾವತಿಸಲು ಬಯಸುವ ತೆರಿಗೆ ವಿಧಾನವನ್ನು ಆಯ್ಕೆ ಮಾಡಿ.
*ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ನಮೂದಿಸಿ.
*ನಿಮ್ಮ ಆಯ್ಕೆಯ ಪೇಮೆಂಟ್ ಮೋಡ್ ಬಳಸಿ ಒಟ್ಟು ತೆರಿಗೆ ಮೊತ್ತ ನಮೂದಿಸಿ ಹಾಗೂ ಪಾವತಿಸಿ.
*ಪಾವತಿ ಯಶಸ್ವಿಯಾದ ಬಳಿಕ, ಎರಡು ಕಾರ್ಯನಿರತ ದಿನಗಳೊಳಗೆ ನಿಮ್ಮ ಟ್ಯಾಕ್ಸ್ ಪೋರ್ಟಲ್ ಗೆ ಮೊತ್ತ ಕ್ರೆಡಿಟ್ ಆಗುತ್ತದೆ.
ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಪ್ರಯೋಗಕ್ಕೆ ಧಾರವಾಡ ಜಿಲ್ಲೆ ಆಯ್ಕೆ
ಈ ಸೌಲಭ್ಯದಿಂದ ಫೋನ್ ಪೇ ಅಪ್ಲಿಕೇಷನ್ ಹೊಂದಿರುವ ತೆರಿಗೆದಾರರು ಇನ್ಮುಂದೆ ಆದಾಯ ತೆರಿಗೆ ಪೋರ್ಟಲ್ ಗೆ ಭೇಟಿ ನೀಡದೆ ಮೊಬೈಲ್ ನಲ್ಲೇ ಸುಲಭವಾಗಿ ತೆರಿಗೆ ಪಾವತಿಸಬಹುದು. ಅಲ್ಲದೆ, ಖಾತೆಯಲ್ಲಿ ಪಾವತಿಸಲು ಹಣವಿಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ 45 ದಿನಗಳ ಬಡ್ಡಿರಹಿತ ಅವಧಿ ಹಾಗೂ ರಿವಾರ್ಡ್ ಪಾಯಿಂಟ್ಸ್ ಕೂಡ ಪಡೆಯಬಹುದು.