ಗೃಹಸಾಲ ತೀರಿಸಿದ ತಕ್ಷಣ ತಪ್ಪದೇ ಈ 5 ಕೆಲಸಗಳನ್ನುಮಾಡಿ, ಇಲ್ಲವಾದ್ರೆ ತೊಂದ್ರೆ ಖಚಿತ!

By Suvarna News  |  First Published Sep 15, 2023, 4:22 PM IST

ಗೃಹಸಾಲ ತೀರಿಸಿದ ಬಳಿಕ ಅಬ್ಬಾ! ಎಲ್ಲವೂ ಮುಗಿಯಿತು ಎಂದು ಖುಷಿಪಡಬೇಡಿ. ಆ ಬಳಿಕವೂ ಮರೆಯದೆ ಕೆಲವೊಂದು ಕೆಲಸಗಳನ್ನು ಮಾಡೋದು ಅಗತ್ಯ. ಹಾಗಾದ್ರೆ ಗೃಹಸಾಲ ತೀರಿಸಿದ ತಕ್ಷಣ ತಪ್ಪದೇ ಮಾಡಬೇಕಾದ ಕೆಲಸಗಳನ್ನು ಯಾವುವು? ಇಲ್ಲಿದೆ ಮಾಹಿತಿ. 
 


Business Desk:ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಇವೆರಡೂ ಪ್ರತಿಯೊಬ್ಬರ ಬದುಕಿನ ಮಹತ್ವದ ಸಂಗತಿಗಳು ಮಾತ್ರವಲ್ಲ, ಇವುಗಳಿಗೆ ಸಾಕಷ್ಟು ಹಣದ ಅಗತ್ಯ ಕೂಡ ಇದೆ. ಗೃಹಸಾಲ ತೀರಿಸೋದು ಖಂಡಿತ ಸುಲಭದ ಕೆಲಸವಲ್ಲ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ ಕೂಡ. ಗೃಹಸಾಲವನ್ನು ತೀರಿಸಿದ ತಕ್ಷಣಕ್ಕೆ ಕೆಲಸ ಮುಗಿಯಿತು ಎಂದು ಸುಮ್ಮನೆ ಕೂರುವಂತಿಲ್ಲ. ಗೃಹಸಾಲ ತೀರಿಸೋದು ಖಂಡಿತಾ ಮನೆ ಖರೀದಿಸಿದವರ ಪಾಲಿಗೆ ಸಂತಸದ ಸಂಗತಿಯೇ ಆಗಿದೆ. ಆದರೆ, ಹಾಗೆಂದು ಖುಷಿ ಪಡುತ್ತ ಕುಳಿತರೆ ಮುಖ್ಯವಾದ ಕೆಲಸಗಳನ್ನು ಮಾಡೋದು ಮರೆತಂತೆಯೇ ಸರಿ. ಬ್ಯಾಂಕಿಗೆ ಗೃಹಸಾಲವನ್ನು ಮರುಪಾವತಿಸಿದ ಬಳಿಕ ಕೆಲವೊಂದು ಮುಖ್ಯವಾದ ಕೆಲಸಗಳನ್ನು ಮಾಡೋದು ಅಗತ್ಯ. ಹಾಗಾದ್ರೆ ಗೃಹಸಾಲ ತೀರಿಸಿದ ಬಳಿಕ ಮಾಡಬೇಕಾದ ಪ್ರಮುಖ ಕೆಲಸಗಳು ಯಾವುವು? ಯಾವೆಲ್ಲ ದಾಖಲೆಗಳನ್ನು ಪಡೆಯಬೇಕು? ಅವು ಏಕೆ ಮುಖ್ಯ? ಇಲ್ಲಿದೆ ಮಾಹಿತಿ.

ಎನ್ ಒಸಿ ಪ್ರಮಾಣಪತ್ರ ಪಡೆಯಿರಿ
ಒಮ್ಮೆಗೆ ನೀವು ಗೃಹಸಾಲವನ್ನು ಪೂರ್ಣ ಪ್ರಮಾಣದಲ್ಲಿ ತೀರಿಸಿದ ಬಳಿಕ ಬ್ಯಾಂಕಿಗೆ ಈ ಬಗ್ಗೆ ಪತ್ರ ಬರೆಯಬೇಕು ಹಾಗೂ ಲೋನ್ ಕ್ಲೋಸರ್ ಸ್ಟೇಟ್ಮೆಂಟ್ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ ಒಸಿ) ನೀಡುವಂತೆ ಕೋರಬೇಕು. ಇದನ್ನು ನೋ ಡ್ಯೂಸ್ ಸರ್ಟಿಫಿಕೇಟ್ (ಎನ್ ಡಿಸಿ) ಎಂದು ಕೂಡ ಕರೆಯುತ್ತಾರೆ. ಎನ್ ಒಸಿ ಪ್ರಮಾಣಪತ್ರ ಗೃಹಸಾಲ ಒಪ್ಪಂದದ ಮಾಹಿತಿಗಳು, ಇಎಂಐ ಮಾಹಿತಿಗಳು, ಪ್ರಿನ್ಸಿಪಲ್ ಔಟ್ ಸ್ಟ್ಯಾಂಡಿಂಗ್, ಓವರ್ ಡ್ಯೂ ಇಂಟ್ರೆಸ್ಟ್, ಒಟ್ಟು ಸ್ವೀಕೃತಿ ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಸಾಲವನ್ನು ಕ್ಲೋಸ್ ಮಾಡಿದ ಕಾರಣ ಸಾಲಗಾರರು ಎಲ್ಲ ಬಾಕಿಗಳನ್ನು ಪಾವತಿಸಿದ್ದಾರೆ ಹಾಗೂ ಸಾಲ ನೀಡಿದವರಿಗೆ ಆಸ್ತಿ ಮೇಲೆ ಯಾವುದೇ ಹಕ್ಕು ಅಥವಾ ಕ್ಲೇಮ್ಸ್ ಇಲ್ಲ ಎಂಬುದನ್ನು ಕೂಡ ಈ ಪ್ರಮಾಣಪತ್ರ ಹೊಂದಿರಬೇಕು. ಈ ಎನ್ ಒಸಿ ಸಹಿ ಹೊಂದಿರಬೇಕು ಹಾಗೂ ಬ್ಯಾಂಕ್ ಸ್ಟ್ಯಾಂಪ್ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

Tap to resize

Latest Videos

ಗೃಹಸಾಲ ಬೇಗ ಮರುಪಾವತಿಸೋದಾ ಅಥವಾ ಹೂಡಿಕೆ ಮಾಡೋದಾ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಮೂಲದಾಖಲೆಗಳನ್ನು ಹಿಂಪಡೆಯಿರಿ
ಸಾಲ ತೆಗೆದುಕೊಳ್ಳುವ ಪ್ರಾರಂಭದಲ್ಲಿ ನೀವು ಬ್ಯಾಂಕಿಗೆ ನೀಡಿರುವ ಎಲ್ಲ ಮೂಲದಾಖಲೆಗಳನ್ನು ಹಿಂಪಡೆದುಕೊಳ್ಳುವುದು ಅತ್ಯಗತ್ಯ. ಇನ್ನು ಈ ದಾಖಲೆಗಳನ್ನು ಬ್ಯಾಂಕ್ ನಿಮಗೆ ಕಳುಹಿಸುವ ಬದಲು ನೀವೇ ಖುದ್ದಾಗಿ ತೆರಳಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ನೀವು ಬ್ಯಾಂಕ್ ಕಚೇರಿಯಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಲು ಸಾಧ್ಯವಾಗುವ ಜೊತೆಗೆ ಯಾವುದೇ ದಾಖಲೆ ಮಿಸ್ ಆಗದಂತೆ ಪರಿಶೀಲಿಸಲು ಸಾಧ್ಯವಾಗುತ್ತದೆ. ಯಾವುದೇ ಸ್ವೀಕೃತಿಗೆ ಸಹಿ ಹಾಕುವ ಮುನ್ನ ಪ್ರತಿ ದಾಖಲೆಯ ಎಲ್ಲ ಪುಟಗಳನ್ನು ಸಮರ್ಪಕವಾಗಿ ಪರಿಶೀಲಿಸೋದು ಅಗತ್ಯ. ಇದರಿಂದ ಯಾವುದಾದರೂ ಪುಟ ಮಿಸ್ ಆಗಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. 

ಆಸ್ತಿ ಮೇಲಿನ ಋಣಭಾರ ತೆಗೆಯಿರಿ
ಕೆಲವು ಸಂದರ್ಭಗಳಲ್ಲಿ ಬ್ಯಾಂಕ್ ಗಳು ಆಸ್ತಿಯ ಮೇಲೆ ಹಕ್ಕು ಚಲಾಯಿಸುತ್ತವೆ. ಅಂದರೆ ಆಸ್ತಿಯ ಮಾಲೀಕರಿಗೆ ಅದನ್ನು ಮಾರಾಟ ಮಾಡದಂತೆ ನಿರ್ಬಂಧ ವಿಧಿಸೋದು. ಹೀಗಾಗಿ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ತೀರಿಸಿದ ಬಳಿಕ ಅದರ ಮೇಲಿನ ಋಣಭಾರ ತೆಗೆಯೋದು ಅಗತ್ಯ. ಇದಕ್ಕಾಗಿ ನೋಂದಣಿ ಅಧಿಕಾರಿ ಕಚೇರಿಗೆ ಭೇಟಿ ನೀಡೋದು ಅಗತ್ಯ. 

ಅಪ್ಡೇಟ್ ಆಗಿರುವ ಎನ್ಕಂಬರೆನ್ಸ್ ಪ್ರಮಾಣಪತ್ರ (ಇಸಿ) ಪಡೆಯಿರಿ
ಆಸ್ತಿಗೆ ಸಂಬಂಧಿಸಿದಂತೆ ಎಲ್ಲ ಹಣಕಾಸು ವಹಿವಾಟುಗಳ ದಾಖಲೆಯಾಗಿ ಎನ್ಕಂಬರೆನ್ಸ್ ಪ್ರಮಾಣಪತ್ರ ಕಾರ್ಯನಿರ್ವಹಿಸುತ್ತದೆ.  ಹೊಸ ಎನ್ಕಂಬರೆನ್ಸ್ ಪ್ರಮಾಣಪತ್ರ ನೀಡಿದಾಗ ಅದು ಮನೆ ಮಾಲೀಕತ್ವದ ವರ್ಗಾವಣೆ, ಆಸ್ತಿ ಮೇಲಿನ ಪ್ರಸಕ್ತ ಋಣಭಾರ ಹಾಗೂ ಯಾವುದೇ ಋಣಭಾರ ತೆಗೆಯೋ ಕುರಿತ ಮಾಹಿತಿಗಳನ್ನು ಹೊಂದಿರುತ್ತದೆ. ಇನ್ನು ಈ ದಾಖಲೆ ಕಾನೂನಾತ್ಮಕ ಮಹತ್ವ ಹೊಂದಿದ್ದು, ಆಸ್ತಿಯು ಹಣಕಾಸಿನ ಋಣಭಾರಗಳಿಂದ ಮುಕ್ತವಾಗಿದೆ ಎಂಬುದನ್ನು ತೋರಿಸುತ್ತದೆ.

ಜಂಟಿ ಗೃಹ ಸಾಲ ಪಡೆಯೋದು ನಿಜಕ್ಕೂ ಒಳ್ಳೆಯದಾ? ಅದ್ರಿಂದ ಏನೆಲ್ಲ ಪ್ರಯೋಜನಗಳಿವೆ?

ಕ್ರೆಡಿಟ್ ವರದಿ ಅಪ್ಡೇಟ್ ಮಾಡಿ
ನೀವು ಸಾಲವನ್ನು ತೀರಿಸಿದ ಬಳಿಕ  ನಿಮ್ಮ ಕ್ರೆಡಿಟ್ ದಾಖಲೆಗಳನ್ನು ಕ್ರೆಡಿಟ್ ಬ್ಯುರೋಗೆ ಅಪ್ಡೇಟ್ ಮಾಡುವಂತೆ ಬ್ಯಾಂಕ್ ಗೆ ಮನವಿ ಮಾಡಿ. ಸಾಲ ತೀರಿಸಿದ 30 ದಿನಗಳೊಳಗೆ ಬದಲಾವಣೆ ಕಾಣಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 


 

click me!