India Russia Oil Deal: ರಷ್ಯಾದಿಂದ ತೈಲ ಖರೀದಿಗೆ ಟೀಕೆ: ಭಾರತ ತಿರುಗೇಟು

By Kannadaprabha News  |  First Published Mar 19, 2022, 7:27 AM IST

*ತೈಲಸಮೃದ್ಧ ದೇಶಗಳು ನಮ್ಮ ವ್ಯವಹಾರ ಟೀಕಿಸುವುದು ತಪ್ಪು
*ಕಾನೂನುಬದ್ಧ ವ್ಯಾಪಾರವನ್ನು ರಾಜಕೀಕರಣಗೊಳಿಸಬಾರದು
*ರಷ್ಯಾದಿಂದ ನಾವು ಮೊದಲಿಂದಲೂ ತೈಲ ಖರೀದಿಸುತ್ತಿದ್ದೇವೆ
*ತೈಲ ಖರೀದಿ ವ್ಯವಹಾರ ನಡೆದಿದ್ದು ಸರ್ಕಾರಗಳ ನಡುವೆ ಅಲ್ಲ
 


ನವದೆಹಲಿ (ಮಾ. 19): ಉಕ್ರೇನ್‌ ಮೇಲೆ ಯುದ್ಧ ಸಾರಿದ್ದಕ್ಕಾಗಿ ರಷ್ಯಾ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿರುವುದರ ನಡುವೆ ರಷ್ಯಾದಿಂದ ಭಾರತದ ತೈಲ ಕಂಪನಿಗಳು ಸೋವಿ ಬೆಲೆಗೆ ತೈಲ ಖರೀದಿಸಿರುವುದನ್ನು ಭಾರತ ಸರ್ಕಾರ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಟೀಕೆಗೆ ಸರ್ಕಾರದ ಮೂಲಗಳು ತಿರುಗೇಟು ಕೂಡ ನೀಡಿವೆ.‘ಭಾರತದ ಕಾನೂನುಬದ್ಧ ಇಂಧನ ವ್ಯವಹಾರವನ್ನು ಯಾರೂ ರಾಜಕೀಕರಣಗೊಳಿಸಬಾರದು. ತಮಗೆ ಬೇಕಾದ ತೈಲವನ್ನು ತಾವೇ ಉತ್ಪಾದಿಸಿಕೊಳ್ಳುವ ತೈಲಸಮೃದ್ಧ ದೇಶಗಳು ಅಥವಾ ಸ್ವತಃ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳು ಈಗ ಏಕಾಏಕಿ ಆಮದು ನಿರ್ಬಂಧದ ಪರ ವಕ್ತಾರರಂತೆ ಮಾತನಾಡುವುದು ಸಲ್ಲದು’ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.

‘ಭಾರತ ಹಾಗೂ ರಷ್ಯಾ ಸರ್ಕಾರಗಳ ನಡುವೆ ತೈಲ ಖರೀದಿ ವ್ಯವಹಾರ ನಡೆದಿಲ್ಲ. ಭಾರತದ ಕಂಪನಿಗಳು ರಷ್ಯಾದ ಕಂಪನಿಗಳಿಂದ ತೈಲ ಖರೀದಿಸಿವೆ. ಇದು ಮೊದಲಿನಿಂದಲೂ ನಡೆಯುತ್ತಿರುವ ವ್ಯವಹಾರ. ಇಷ್ಟಕ್ಕೂ ಭಾರತವು ರಷ್ಯಾದಿಂದ ಖರೀದಿಸುವ ತೈಲದ ಪ್ರಮಾಣ ನಮ್ಮ ಅಗತ್ಯದ ಶೇ.1ರಷ್ಟುಕೂಡ ಆಗುವುದಿಲ್ಲ. ‌ಉಕ್ರೇನ್‌ ಬಿಕ್ಕಟ್ಟು ಎದುರಾದ ನಂತರ ತೈಲ ಬೆಲೆಯಲ್ಲಿ ಆದ ಗಣನೀಯ ಏರಿಕೆಯು ಸಹಜವಾಗಿಯೇ ಕಡಿಮೆ ಬೆಲೆಗೆ ತೈಲ ಎಲ್ಲಿ ಸಿಗುತ್ತದೆ ಎಂಬುದನ್ನು ನಾವು ಹುಡುಕುವಂತೆ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಇದನ್ನೂ ಓದಿ: India Russia Oil Deal: ಮಂಗಳೂರಿಗೂ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

ಯುರೋಪ್‌ನ ದೇಶಗಳು ಕೂಡ ತೈಲ ಖರೀದಿಸುತ್ತವೆ- ಬಗ್ಚಿ: ಅನೇಕ ಪಾಶ್ಚಾತ್ಯ ದೇಶಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದ ನಂತರ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಆರಂಭಿಸಿವೆ. ಈ ಬಗ್ಗೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲ ಯುರೋಪಿಯನ್‌ ದೇಶಗಳೂ ಭಾರತದ ನಡೆಯನ್ನು ಟೀಕಿಸಿವೆ ಎನ್ನಲಾಗಿದೆ. 

ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗ್ಚಿ, ‘ಭಾರತ ತನಗೆ ಬೇಕಾದ ಬಹುಪಾಲು ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ರಷ್ಯಾ ನಮಗೆ ದೊಡ್ಡ ಪೂರೈಕೆದಾರನೇನೂ ಅಲ್ಲ. ಯುರೋಪ್‌ನ ಅನೇಕ ದೇಶಗಳು ಕೂಡ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತವೆ. ನಾನು ಹೆಚ್ಚೇನೂ ಹೇಳುವುದಿಲ್ಲ’ ಎಂದು ಸೂಚ್ಯವಾಗಿ ಭಾರತದ ನಡೆ ಸಮರ್ಥಿಸಿಕೊಂಡಿದ್ದರು.

ಭಾರತದ ಇಂಧನ ಅಗತ್ಯ ಪೂರೈಕೆಗೆ ಇರಾನ್‌ ಸಿದ್ಧ: ಒಪೆಕ್‌ ಸದಸ್ಯ ರಾಷ್ಟ್ರವಾದ ಇರಾನಿನ ತೈಲ ರಫ್ತಿನ ಮೇಲೆ ವಿಧಿಸಿದ ನಿರ್ಬಂಧವನ್ನು ತೆಗೆದುಹಾಕುವ ಕುರಿತು ವಿಶ್ವ ಶಕ್ತಿಗಳು ಮತ್ತು ಇರಾನ್‌ ನಡುವೆ ಮಾತುಕತೆಗಳು ಮುಂದುವರಿದಿರುವಾಗಲೇ, ಭಾರತದ ಇಂಧನ ಅಗತ್ಯವನ್ನು ಪೂರೈಸಲು ಇರಾನ್‌ ಸಿದ್ಧವಿದೆ ಎಂದು ಇರಾನಿನ ಭಾರತದ ರಾಯಭಾರಿ ಅಲಿ ಚೆಗೇನಿ ಶುಕ್ರವಾರ ತಿಳಿಸಿದ್ದಾರೆ. ಅಲ್ಲದೆ, ಮಧ್ಯವರ್ತಿಗಳಿಲ್ಲದ ನೇರ ವ್ಯವಹಾರದ ಆಫರ್‌ ನೀಡಿದ್ದಾರೆ.

ಇದನ್ನೂ ಓದಿಡಾಲರ್ ಗೆ ಯುವಾನ್ ಟಕ್ಕರ್; ಚೀನಾಕ್ಕೆ ಕಚ್ಚಾ ತೈಲ ಡಾಲರ್ ಬದಲು ಯುವಾನ್ ನಲ್ಲಿ ಮಾರಾಟಕ್ಕೆ ಸೌದಿ ಸಿದ್ಧತೆ!

‘ರುಪಾಯಿ-ರಿಯಾಲ್ ನಡುವಣ ವ್ಯಾಪಾರ ಕಾರ್ಯವಿಧಾನವು ಎರಡೂ ದೇಶಗಳ ಕಂಪನಿಗಳು ಪರಸ್ಪರ ನೇರವಾಗಿ ವ್ಯವಹರಿಸಲು ಮತ್ತು ಮೂರನೇ ವ್ಯಕ್ತಿಯಗಳಿಂದಾಗುವ ಮಧ್ಯವರ್ತಿ ವೆಚ್ಚಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.

ಇರಾನ್‌, ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿತ್ತು. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ… ಟ್ರಂಪ್‌ ಇರಾನ್‌ನೊಂದಿಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದು, ಅದರ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದ ಹೇರಿಸಿದ ನಂತರ ಭಾರತ ಟೆಹ್ರಾನ್‌ನಿಂದ ಆಮದು ನಿಲ್ಲಿಸಿದೆ. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ರಾಷ್ಟ್ರವಾಗಿರುವ ಭಾರತ ಶೇ.80ರಷ್ಟುಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ.

click me!