ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ: ಎನ್​ವಿಡಿಯಾ ಜತೆ ಒಪ್ಪಂದ- ಅಂಬಾನಿ ಮಾತಿಗೆ ಸಿಇಒ ಭಾವುಕ

By Suchethana D  |  First Published Oct 25, 2024, 11:45 AM IST

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಅಮೆರಿಕದ  ಎನ್​ವಿಡಿಯಾ ಜತೆ ಮುಕೇಶ್​ ಅಂಬಾನಿ ಒಪ್ಪಂದ ಮಾಡಿಕೊಂಡಿದ್ದಾರೆ. 
 


ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಇದೀಗ ಉದ್ಯಮ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿದ್ದು, ಭಾರತಕ್ಕೆ ಕೃತಕ ಬುದ್ಧಿಮತ್ತೆಯನ್ನು ತರುವ ಸಂಬಂಧ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಜಾಗತಿಕ ಕಂಪನಿಯಾದ ಅಮೆರಿಕದ ಎನ್​ವಿಡಿಯಾದ (NVIDIA) ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನಿನ್ನೆ ಅವರು ಎನ್​ವಿಡಿಯಾದ್  ಸಿಇಓ ಜೆನ್ ಶೆಂಗ್ ಹುವಾಂಗ್ ಜೊತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಒಪ್ಪಂದ ನಡೆದಿದೆ. 

ಆದರೆ ಎಲ್ಲರ ಗಮನ ಸೆಳೆದದ್ದು, ಮುಕೇಶ್​ ಅಂಬಾನಿಯವರ ಮಾತು. ಎನ್​ವಿಡಿಯಾಕ್ಕೆ ತಮ್ಮದೇ ಆದ ಅರ್ಥ ಕೊಡುವ ಮೂಲಕ ಅಂಬಾನಿಯವರು ವಿದೇಶದ ಗಣ್ಯರಿಂದಲೂ ಶಹಬ್ಬಾಸ್​ಗಿರಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಮುಕೇಶ್​ ಅವರು ಹೇಳಿದ್ದೇನೆಂದರೆ,  ನನ್ನ ಪ್ರಕಾರ NVIDIA ಅಂದರೆ ವಿದ್ಯೆ. ಇದರರ್ಥ ಭಾರತದಲ್ಲಿ ಜ್ಞಾನ ಎಂದು ಹೇಳಿದರು. 'ಎನ್​ವಿಡಿಯಾ' ಸಂಸ್ಕೃತದ 'ವಿದ್ಯಾ' ಪದವನ್ನು ಪ್ರತಿಧ್ವನಿಸುತ್ತದೆ. ವಿದ್ಯೆ ಅಂದರೆ ಜ್ಞಾನ. ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ಜ್ಞಾನದ ದೇವತೆಯಾಗಿ ಕಾಣಲಾಗುತ್ತದೆ.  ಸರಸ್ವತಿಗೆ ನಿಮ್ಮನ್ನು ನೀವು ಅರ್ಪಿಸಿದಾಗ ಸಂಪತ್ತು, ಸಮೃದ್ಧಿ ಬರುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಸಂಪತ್ತಿನ ದೇವತೆ ಲಕ್ಷ್ಮಿ. ಎನ್‌ವಿಡಿಯಾ ಈಗ ವಿಶ್ವದಲ್ಲಿ ಜ್ಞಾನದ ಕ್ರಾಂತಿ ಮಾಡುತ್ತಿದೆ ಎಂದು ಹೇಳಿದರು. ಇವರ ಮಾತಿಗೆ ಅಲ್ಲಿ ನೆರೆದಿದ್ದ ಗಣ್ಯರಿಂದ ಚಪ್ಪಾಳೆಗಳ ಸುರಿಮಳೆಯೇ ಆಯಿತು. ಜಿಯೋ ಈಗ ವಿಶ್ವದ ಅತಿದೊಡ್ಡ ಡೇಟಾ ಕಂಪನಿಯಾಗಿದೆ.  ಈಗ  ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗುವುದು.  ಈ ಪಾಲುದಾರಿಕೆಯು ಭಾರತವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ಮುಕೇಶ್​ ಅಂಬಾನಿ ನುಡಿದರು.

Tap to resize

Latest Videos

undefined

ಆಕಾಶ್​ಗೆ ಗುರುವಾಗಿದ್ದ ರತನ್​ ಟಾಟಾ: ಅಗಲಿದ ಉದ್ಯಮಿ ಕುರಿತು ನೀತಾ ಅಂಬಾನಿ ಭಾವುಕ

ಆದರೆ ಎನ್​ವಿಡಿಯಾ ಶಬ್ದಕ್ಕೆ ಮುಕೇಶ್​ ಅಂಬಾನಿಯವರು ನೀಡಿರುವ ವರ್ಣನೆ ಕೇಳಿ,  ಜೆನ್ಸನ್‌ ಹುವಾಂಗ್‌ ಭಾವುಕರೂ ಆದರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಅವರೇ ಹೇಳಿದಂತೆ,  ಆರಂಭದಲ್ಲಿ ನಾನು ಕಂಪನಿಗೆ NVIDIA ಎಂದು ಹೆಸರನ್ನು ಇರಿಸಿದಾಗ ಬಹಳಷ್ಟು ಟೀಕೆ ಎದುರಿಸಿದ್ದೆ. ಏನಿದು ಕೆಟ್ಟ ಹೆಸರು ಎಂದು ಹಲವರು ಹೇಳಿದರು. ಕೊನೆಗೂ 32 ವರ್ಷದ ನಂತರ ನನ್ನ ಕಂಪನಿಗೆ ನಾನು ಸರಿಯಾದ ಹೆಸರನ್ನು ಇರಿಸಿದ್ದೇನೆ ಎನ್ನುವುದು ಗೊತ್ತಾಯಿತು' ಎಂದು ಹೇಳಿದರು.  

ಭಾರತವು ತನ್ನದೇ ಆದ ಕೃತಕ ಬುದ್ಧಿಮತ್ತೆ ತಯಾರಿಸಬೇಕು ಎಂಬ ಅಂಬಾನಿಯವರ ಮಾತು  ಸಂಪೂರ್ಣ ಅರ್ಥಪೂರ್ಣವಾಗಿದೆ. ಬುದ್ಧಿವಂತಿಕೆಯನ್ನು ಆಮದು ಮಾಡಿಕೊಳ್ಳಲು ನೀವು ಡೇಟಾವನ್ನು ರಫ್ತು ಮಾಡಬಾರದು. ಭಾರತವು ಬ್ರೆಡ್ ಆಮದು ಮಾಡಿಕೊಳ್ಳಲು ಹಿಟ್ಟು ರಫ್ತು ಮಾಡಬಾರದು ಎಂದು ಜೆನ್ಸನ್ ಹುವಾಂಗ್  ಹೇಳಿದರು. ಮುಕೇಶ್ ಅಂಬಾನಿ ಅವರು, ಭಾರತದ ದೊಡ್ಡ ಕನಸುಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ದೇಶವು ಇಂದು ಡಿಜಿಟಲ್ ಕ್ರಾಂತಿಯ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದರು. ಇದಕ್ಕೆ ಜೆನ್ಸನ್​ ಅವರು,  ಭಾರತದ ಐಟಿ ಕ್ಷೇತ್ರದ ಸಾಮರ್ಥ್ಯವನ್ನು ಮೆಚ್ಚಿದರು, "ಕಂಪ್ಯೂಟರ್ ಸೈನ್ಸ್ ಮತ್ತು ಐಟಿ ಕ್ಷೇತ್ರದಲ್ಲಿ ತರಬೇತಿ ಪಡೆದ ಹಲವಾರು ಜನರಿರುವ ವಿಶ್ವದ ಕೆಲವೇ ದೇಶಗಳಿವೆ” ಎಂದರು. 

ಅನಂತ್​ ಅಂಬಾನಿ ಮದ್ವೆಯಿಂದ ಸ್ಫೂರ್ತಿ ಪಡೆದ ಚೀನಾದ ಕುಟುಂಬ: ವಿಡಿಯೋ ವೈರಲ್​

click me!