ಎನ್ ಪಿಎಸ್ ಹಾಗೂ ಎಫ್ ಡಿ ಇವೆರಡೂ ಹೂಡಿಕೆಗೆ ಉತ್ತಮ ಆಯ್ಕೆಗಳೇ ಆಗಿವೆ. ಆದರೆ, 30ರ ಆಸುಪಾಸಿನಲ್ಲಿರೋರಿಗೆ ದೀರ್ಘಾವಧಿಯ ಹೂಡಿಕೆಗೆ ಅವಕಾಶವಿರುವ ಕಾರಣ ಅವರು ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡೋದು ಉತ್ತಮ ಮತ್ತು ಏಕೆ? ಇಲ್ಲಿದೆ ಮಾಹಿತಿ.
Business Desk:ಹೂಡಿಕೆದಾರರ ಆದ್ಯತಾ ಪಟ್ಟಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ಹಾಗೂ ಸ್ಥಿರ ಠೇವಣಿ (ಎಫ್ ಡಿ) ಎರಡೂ ಪ್ರಮುಖ ಸ್ಥಾನಗಳಲ್ಲಿರುತ್ತವೆ. ಈ ಎರಡೂ ಹೂಡಿಕೆ ಯೋಜನೆಗಳು ತಮ್ಮದೇ ಆದ ಪ್ರಯೋಜನಗಳನ್ನು ಹಾಗೂ ಮಿತಿಗಳನ್ನು ಹೊಂದಿವೆ. ಈ ಎರಡೂ ಯೋಜನೆಗಳಲ್ಲಿ ಯಾವುದು ಬೆಸ್ಟ್ ಎಂದು ಕೇಳಿದ್ರೆ ನಿರ್ಧರಿಸೋದು ಕಷ್ಟವೇ ಸರಿ. ಈ ಎರಡರ ನಡುವಿನ ಆಯ್ಕೆ ನಿಮ್ಮ ಹಣಕಾಸಿನ ಯೋಜನೆಗಳು, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ನಿಮ್ಮ ಒಟ್ಟಾರೆ ಹಣಕಾಸಿನ ಪರಿಸ್ಥಿತಿಯನ್ನು ಅವಲಂಬಿಸಿದೆ. ಇನ್ನು 30ರ ಆಸುಪಾಸಿನ ವಯಸ್ಸಿನಲ್ಲಿರೋರಿಗೆ ಈ ಎರಡೂ ಯೋಜನೆಗಳು ಹೂಡಿಕೆಗೆ ಉತ್ತಮ ಆಯ್ಕೆಗಳೇ ಆಗಿವೆ. ಹಾಗಿದ್ರೆ ಈ ಎರಡೂ ಯೋಜನೆಗಳ ನಡುವೆ ಯಾವುದು ಉತ್ತಮ ಎಂದು ಆಯ್ಕೆ ಮಾಡೋದು ಹೇಗೆ?
ಎನ್ ಪಿಎಸ್ ಅಂದ್ರೇನು?
ಎನ್ ಪಿಎಸ್ ಅಂದ್ರೆ ರಾಷ್ಟ್ರೀಯ ಪಿಂಚಣಿ ಯೋಜನೆ. ಇದು ಮಾರ್ಕೆಟ್ ಲಿಂಕ್ಡ್ ರಿಟರ್ನ್ಸ್ ನೀಡುತ್ತದೆ. ಈಕ್ವಿಟಿ, ಡೆಟ್ ಹಾಗೂ ಹೈಬ್ರಿಡ್ ಫಂಡ್ ಗಳಲ್ಲಿ ಎನ್ ಪಿಎಸ್ ಹಣ ಹೂಡಿಕೆ ಮಾಡುವ ಕಾರಣ ಇದರ ರಿಟರ್ನ್ಸ್ ಅವುಗಳ ಕಾರ್ಯನಿರ್ವಹಣೆಯನ್ನು ಅವಲಂಬಿಸಿದೆ. ಇನ್ನು ಎನ್ ಪಿಎಸ್ ಕೊಡುಗೆ ಮೇಲೆ ತೆರಿಗೆ ಕಡಿತ, ನಿವೃತ್ತಿ ಬಳಿಕದ ವಿತ್ ಡ್ರಾ ಮೇಲೆ ತೆರಿಗೆ ವಿನಾಯ್ತಿ ಸೇರಿದಂತೆ ಅನೇಕ ತೆರಿಗೆ ಪ್ರಯೋಜನಗಳನ್ನು ಕೂಡ ಒಳಗೊಂಡಿದೆ.
ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದಾ,ಬೇಡ್ವಾ? ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಸ್ಥಿರ ಠೇವಣಿ (ಎಫ್ ಡಿ)
ಸ್ಥಿರ ಠೇವಣಿ ಅಥವಾ ಎಫ್ ಡಿ ನಿಗದಿತ ರಿಟರ್ನ್ಸ್ ನೀಡುತ್ತದೆ. ಇದರ ರಿಟರ್ನ್ಸ್ ನಲ್ಲಿ ಯಾವುದೇ ವ್ಯತ್ಯಾಸವಾಗೋದಿಲ್ಲ. ಆದರೆ, ಎಫ್ ಡಿ ಯಾವುದೇ ತೆರಿಗೆ ಪ್ರಯೋಜನಗಳನ್ನು ಒದಗಿಸೋದಿಲ್ಲ. ಆದರೆ, ಇದರಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ.
ಯಾವುದು ಜಾಸ್ತಿ ರಿಟರ್ನ್ಸ್ ನೀಡುತ್ತದೆ?
ಈಗಾಗಲೇ ತಿಳಿಸಿರುವಂತೆ ಎನ್ ಪಿಎಸ್ ಮೇಲಿನ ಹೂಡಿಕೆ ಮಾರ್ಕೆಟ್ ಗೆ ಲಿಂಕ್ಡ್ ಆಗಿರುತ್ತದೆ. ಈ ರಿಟರ್ನ್ಸ್ ಹೂಡಿಕೆ ಫಂಡ್ ಗಳಾದ ಈಕ್ವಿಟಿ, ಕಾರ್ಪೋರೇಟ್ ಬಾಂಡ್ಸ್, ಸರ್ಕಾರಿ ಸೆಕ್ಯುರಿಟೀಸ್ ಇತ್ಯಾದಿಗಳ ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಆದರೆ, ಸಾಮಾನ್ಯವಾಗಿ ಎನ್ ಪಿಎಸ್ ಹೂಡಿಕೆ ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ನೀಡುತ್ತದೆ ಎಂದೇ ಹೇಳಲಾಗುತ್ತದೆ. ಆದರೆ, ಇವು ಕೆಲವೊಂದು ಅನಿರೀಕ್ಷತೆ ಹಾಗೂ ಅಪಾಯಗಳನ್ನು ಕೂಡ ಒಳಗೊಂಡಿರುತ್ತವೆ. ಎಫ್ ಡಿ ಗಳು: ಸ್ಥಿರ ಠೇವಣಿಗಳು ಸ್ಥಿರ ಹಾಗೂ ನಿಗದಿತ ರಿಟರ್ನ್ಸ್ ನೀಡುತ್ತವೆ. ಆದರೆ, ಮಾರ್ಕೆಟ್ ಲಿಂಕ್ಡ್ ರಿಟರ್ನ್ಸ್ ಗೆ ಹೋಲಿಸಿದರೆ ಬಡ್ಡಿದರ ಕಡಿಮೆ ಇರುತ್ತದೆ.
ಅಪಾಯ ಯಾವುದರಲ್ಲಿ ಹೆಚ್ಚು?
ಎನ್ ಪಿಎಸ್ ರಿಟರ್ನ್ಸ್ ಮಾರುಕಟ್ಟೆ ಏರಿಳಿತಗಳಿಂದ ಪ್ರಭಾವಿತವಾಗಿದೆ. ಸಾಮಾನ್ಯವಾಗಿ ಇದು ಅಧಿಕ ರಿಟರ್ನ್ಸ್ ನೀಡಿದರೂ ಕೆಲವು ಸಂದರ್ಭಗಳಲ್ಲಿ ಮಾರುಕಟ್ಟೆ ಕಳಪೆ ನಿರ್ವಹಣೆಯಿಂದ ಹಣ ಕಳೆದುಕೊಳ್ಳುವ ಅಪಾಯ ಕೂಡ ಇರುತ್ತದೆ. ಎಫ್ ಡಿಗಳನ್ನು ಕಡಿಮೆ ಅಪಾಯದ ಹೂಡಿಕೆ ಎಂದು ಪರಿಣಿಸಲಾಗುತ್ತದೆ. ಏಕೆಂದರೆ ಇದು ನಿಗದಿತ ರಿಟರ್ನ್ಸ್ ಭರವಸೆ ನೀಡುತ್ತದೆ. ಹೀಗಾಗಿ ಇದರಲ್ಲಿ ಹೂಡಿಕೆ ಮಾಡಿದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.
ಯಾವುದರಲ್ಲಿ ಹಣದ ಲಭ್ಯತೆ ಸುಲಭ?
ಎನ್ ಪಿಎಸ್ ದೀರ್ಘಾವಧಿಯ ಲಾಕ್ ಇನ್ ಹೂಡಿಕೆಯಾಗಿದೆ. ಇದನ್ನು ನಿವೃತ್ತಿ ಕೇಂದ್ರೀಕೃತ ಹೂಡಿಕೆ ಮಾದರಿಯಲ್ಲಿ ರೂಪಿಸಲಾಗಿದೆ. ಹೀಗಾಗಿ ನಿವೃತ್ತಿಗೂ ಮುನ್ನ ನಿಮಗೆ ಹಣದ ಅಗತ್ಯವಿದ್ದರೆ ದು ಉತ್ತಮ ಆಯ್ಕೆಯಲ್ಲ.ಎನ್ ಪಿಎಸ್ ಗೆ ಹೋಲಿಸಿದರೆ ಎಫ್ ಡಿಯಲ್ಲಿ ಹಣದ ಲಭ್ಯತೆ ಬೇಗ. ಮೆಚ್ಯೂರಿಟಿಗೂ ಮುನ್ನವೇ ಹಣ ವಿತ್ ಡ್ರಾ ಮಾಡಲು ಇದರಲ್ಲಿ ಅವಕಾಶವಿದೆ. ಆದರೆ, ಇದಕ್ಕೆ ದಂಡ ಸಹ ವಿಧಿಸಲಾಗುತ್ತದೆ.
ಹೂಡಿಕೆ ಮಾಡುವಾಗ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿದ್ರೆ ನೀವು ಗುರಿ ತಲುಪೋದು ಗ್ಯಾರಂಟಿ
ತೆರಿಗೆ ಪ್ರಯೋಜನ ಯಾವುದಕ್ಕಿದೆ?
ಎನ್ ಪಿಎಸ್ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಹಾಗೂ 80CCD(1B)ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಸಿಗುತ್ತವೆ. ಆದರೆ, ಎಫ್ ಡಿ ಮೇಲಿನ ಬಡ್ಡಿದರಕ್ಕೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಗೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.
ಹಣದುಬ್ಬರ ಸುರಕ್ಷತೆ
ಎನ್ ಪಿಎಸ್ ಈಕ್ವಿಟಿ ಹೂಡಿಕೆಗಳನ್ನು ಒಳಗೊಂಡಿರುವ ಕಾರಣ ಹಣದುಬ್ಬರದ ವಿರುದ್ಧ ದೀರ್ಘಾವಧಿಯಲ್ಲಿ ಉತ್ತಮ ಸುರಕ್ಷತೆ ಒದಗಿಸುತ್ತದೆ. ಆದರೆ, ಎಫ್ ಡಿ ಹಣದುಬ್ಬರದ ವಿರುದ್ಧ ಸುರಕ್ಷತೆ ಒದಗಿಸಲಾರದು.