Karnataka Budget: ಅಂಜನಾದ್ರಿಗೆ ಘೋಷಿಸಿದ್ದ ನಯಾ ಪೈಸೆನೂ ಬಂದಿಲ್ಲ..!

By Kannadaprabha News  |  First Published Mar 3, 2022, 12:47 PM IST

*  ಬೊಮ್ಮಾಯಿ ಬಜೆಟ್‌ನಲ್ಲಿ ಸಿಗುವುದೇ ಬಂಪರ್‌?
*  ಸಮರ್ಪಕವಾಗಿ ಸಿಗದ ಶೈಕ್ಷಣಿಕ, ಮೂಲ ಸೌಕರ್ಯ
*  ನೀರಾವರಿ, ಪ್ರವಾಸೋದ್ಯಕ್ಕೆ ನೀಡಲಿ ಆದ್ಯತೆ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.03):  ಕೋವಿಡ್‌(Covid-19) ಸಂಕಷ್ಟದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್‌(Budget)ಮಾ.4 ರಂದು ಮಂಡನೆ ಆಗುತ್ತಿರುವುದರಿಂದ ಕಳೆದೆರಡು ವರ್ಷಗಳಿಂದ ಆಗಿರುವ ಕೊರತೆಯನ್ನು ನೀಗಿಸುವ ಆದ್ಯತೆ ಈ ಬಜೆಟ್‌ನಲ್ಲಿ ಸಿಗುವೇ ಎನ್ನುವುದು ಜಿಲ್ಲೆಯ ಜನತೆಯ ನಿರೀಕ್ಷೆಯಾಗಿದೆ. 1997ರ ಆ. 24ರಂದು ಜಿಲ್ಲೆ ರಚನೆ ಆಗಿರುವುದರಿಂದ ಅನೇಕ ಕೊರತೆಗಳು ಕಾಡುತ್ತಿವೆ. ಅದರಲ್ಲೂ ಮೂಲ ಸೌಕರ್ಯ ಹಾಗೂ ಶೈಕ್ಷಣಿಕ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ಸಿಗುತ್ತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಆಗಬೇಕಾಗಿದೆ.

Tap to resize

Latest Videos

ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರ, ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯಾಗಬೇಕಾಗಿದೆ. ಈ ಕುರಿತು ಹಲವು ಬೇಡಿಕೆಯನ್ನು ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ(Government of Karnataka) ಸಲ್ಲಿಸಿದ್ದಾರೆ. ಜತೆಗೆ ಪ್ರವಾಸೋದ್ಯಮ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಆದ್ಯತೆ ನೀಡುವ ಕುರಿತು ಹೇಳಿರುವುದರಿಂದ ಕೂತೂಹಲ ಹೆಚ್ಚಿದೆ. ಈ ಕುರಿತು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ(University) ಆಗಬೇಕಿದೆ. ಸ್ನಾತಕೋತ್ತರ ಶಿಕ್ಷಣ(Higher Education)ಸೇರಿದಂತೆ ಉನ್ನತ ಶಿಕ್ಷಣದ ಅಗತ್ಯ ಕೊರತೆ ನೀಗಿಸಲು ತುರ್ತಾಗಿ ವಿವಿ ಆಗಬೇಕು. ಈಗಾಗಲೇ ಸರ್ಕಾರದಿಂದ ಭರವಸೆ ಸಿಕ್ಕಿದ್ದು, ಅಧಿಕೃತ ಮುದ್ರೆಯನ್ನು ಒತ್ತಿ ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಅಂತ ಸಾಹಿತಿ ಮಹಾಂತೇಶ ಮಲ್ಲನಗೌಡ್ರ ತಿಳಿಸಿದ್ದಾರೆ. 

Karnataka Budget 2022-23: ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಬೇಕು ಒತ್ತು

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರವಾಸೋದ್ಯಮ(Tourism) ಅಭಿವೃದ್ಧಿಗೆ ಒತ್ತು ನೀಡಬೇಕು. ಅನೇಕ ಅವಕಾಶಗಳು ಇರುವುದರಿಂದ ರಾಜ್ಯ ಸರ್ಕಾರ ಅದನ್ನು ಸ್ಥಳೀಯರಿಗೆ ಉದ್ಯೋಗ ದೊರೆಯುವಂತೆ ವಿನೂತನ ರೀತಿಯಲ್ಲಿ ಯೋಜನೆಯನ್ನು ರೂಪಿಸಬಹುದು. ಅನೇಕ ಶೈಕ್ಷಣಿಕ ಸಮಸ್ಯೆಗಳನ್ನು ನೀಗಿಸಬೇಕಾಗಿದೆ ಅಂತ ಕೊಪ್ಪಳ ವಕೀಲ ವಿಜಯ ಅಮೃತರಾಜ ಹೇಳಿದ್ದಾರೆ.  

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಕಿರ್ಣ ಕಟ್ಟಡ ಬೇಗನೇ ನಿರ್ಮಾಣವಾಗುವುದಕ್ಕೆ ಸರ್ಕಾರ ಅನುದಾನ ನೀಡಬೇಕು. ಜಿಲ್ಲೆಯಲ್ಲಿ ರಸ್ತೆಗಳು ಬಹುತೇಕ ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯವಾಗಬೇಕು. ಇದಕ್ಕಾಗಿ ವಿಶೇಷ ಪ್ಯಾಕೇಜ್‌ ಘೋಷಣೆಯಾಗಬೇಕು ಅಂತ ವಕೀಲ ಮಂಜುನಾಥ ಪೊಲೀಸಪಾಟೀಲ್‌ ತಿಳಿಸಿದ್ದಾರೆ. 

ನೀರಾವರಿ ಯೋಜನೆಗಳು ಸಾಕಷ್ಟು ನನೆಗುದಿಗೆ ಬಿದ್ದಿವೆ. ಅವುಗಳನ್ನು ಕಾರ್ಯಗತಗೊಳಿಸಲು ದೊಡ್ಡಮಟ್ಟದ ಅನುದಾನ ಬೇಕು. ಅದರಲ್ಲೂ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ(Irrigation Projects) ರೈತರ ಭೂಮಿಗೆ ನೀರು ನೀಡಬೇಕಾಗಿದೆ ಅಂತ ಹೋರಾಟಗಾರ ವಿಜಯಕುಮಾರ ಕವಲೂರು ತಿಳಿಸಿದ್ದಾರೆ. 

ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಬೇಕು. ಕೊಪ್ಪಳಕ್ಕೆ ಪ್ರತ್ಯೇಕ ವಿವಿ ಸ್ಥಾಪನೆಯಾಗಬೇಕು. ಜಿಲ್ಲೆಯಾಗಿ 24 ವರ್ಷ ಆಗಿದ್ದರೂ ಮೂಲ ಸೌಕರ್ಯಗಳ ಕೊರತೆ ಅಧಿಕವಿದೆ. ಆರೋಗ್ಯ ಕ್ಷೇತ್ರದ ಪ್ರಗತಿಗೆ ಒತ್ತು ನೀಡಬೇಕು ಅಂತ ಉಚ್ಚಲಕುಂಟಾ ಗ್ರಾಮದ ದೇವೇಂದ್ರಗೌಡ ಜೀರ್ಲಿ ಹೇಳಿದ್ದಾರೆ. 

ಬಾಲಕರ ಬಾಲಮಂದಿರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಮಕ್ಕಳ ಅನೇಕ ಸಮಸ್ಯೆಗಳು ಇವೆ. ಅದರಲ್ಲೂ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಸುಸಜ್ಜಿತ ಕಟ್ಟಡ ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಬೇಕು ಅಂತ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಶೇಖರಗೌಡ ಪಾಟೀಲ್‌ ತಿಳಿಸಿದ್ದಾರೆ. 

ಅಂಜನಾದ್ರಿ(Anjanadri Hill) ಪರ್ವತದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಿಸಬೇಕು. ಈ ಪ್ರದೇಶಕ್ಕೆ ದೇಶ- ವಿದೇಶದಿಂದ ಭಕ್ತರು ಆಗಮಿಸುತ್ತಿದ್ದರಿಂದ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಜತೆಗೆ ಹಿರೇಬೆಣಕಲ್‌ನಲ್ಲಿರುವ ಮೌರ್ಯರ ಗುಡ್ಡ ಮತ್ತು ಕುಮಾರರಾಮನ ಬೆಟ್ಟದ ಪ್ರದೇಶದ ಅಭಿವೃದ್ಧಿ ಸರ್ಕಾರ ಅನುದಾನ ಮೀಸಲಿರಿಸಬೇಕು ಅಂತ ಗಂಗಾವತಿ ನಗರದ ಪ್ರಲ್ಹಾದ ಹೇರೂರು ಹೇಳಿದ್ದಾರೆ. 

ಗಂಗಾವತಿಯಲ್ಲಿ ಈಗಾಗಲೇ ಕೃಷಿ ಕಾಲೇಜು ಪ್ರಾರಂಭವಾಗಿದೆ. ಇದಕ್ಕೆ ಕಟ್ಟಡ ಅವಶ್ಯಕತೆ ಇದ್ದು, ಸರ್ಕಾರ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. 300ಕ್ಕೂ ಹೆಚ್ಚು ಎಕರೆ ಪ್ರದೇಶ ಇದರ ವ್ಯಾಪ್ತಿಯಲ್ಲಿದ್ದು, ಕಟ್ಟಡ ಅವಶ್ಯವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಬೇಕು. ವಿದ್ಯಾರ್ಥಿಗಳ ವಸತಿನಿಲಯಕ್ಕೂ ಸರ್ಕಾರ ಪ್ರಾಶಸ್ತ್ಯ ನೀಡಬೇಕು ಅಂತ ಉದ್ಯಮಿ ಅಮರೇಶಪ್ಪ ಇಂಗಳಗಿ ತಿಳಿಸಿದ್ದಾರೆ. 

ಗಂಗಾವತಿ ನಗರ ಸೇರಿದಂತೆ ತಾಲೂಕಿನಲ್ಲಿ ಐತಿಹಾಸಿಕ ಪ್ರದೇಶಗಳಿದ್ದು, ಈ ಭಾಗದಲ್ಲಿ ಸ್ಮಾರಕಗಳು ಸೇರಿದಂತೆ ಹಳೆಯ ದೇವಸ್ಥಾನಗಳಿವೆ(Temples). ಈ ಭಾಗಕಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದರಿಂದ ಅವರ ಮಾಹಿತಿಗಾಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಚಿತ್ರಗಳನ್ನು ವೀಕ್ಷಿಸಲು ವಸ್ತು ಸಂಗ್ರಾಹಲಯ ನಿರ್ಮಾಣವಾಗಬೇಕು. ಬಜೆಟ್‌ನಲ್ಲಿ ಗಂಗಾವತಿ ನಗರಕ್ಕೆ ವಿಶೇಷ ಅನುದಾನ ಅವಶ್ಯಕತೆ ಇದೆ ಅಂತ ಗಂಗಾವತಿ ನಗರದ ಗುರುರಾಜ್‌ ಬೆಳ್ಳುಬ್ಬಿ ಹೇಳಿದ್ದಾರೆ. 

Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು

ಗಂಗಾವತಿ ನಗರಕ್ಕೆ ತುಂಗಭದ್ರಾ ನದಿ ಅಂಟಿಕೊಂಡಿದೆ. ದೇವಘಾಟ್‌ನಲ್ಲಿರುವ ನದಿಯ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಪಡಿಸಬೇಕಿದೆ. ಪ್ರವಾಸಿಗರಿಗೂ ನದಿಯ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಪಡಿಸುವದು ಅವಶ್ಯ. ಅಲ್ಲದೇ ಪಕ್ಷಿಧಾಮ ನಿರ್ಮಾಣವಾಗಬೇಕು ಅಂತ ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಕೆ. ಚಂದ್ರಪ್ಪ ಉಪ್ಪಾರ ಹೇಳಿದ್ದಾರೆ. 

ಅಂಜನಾದ್ರಿಗೆ ಘೋಷಿಸಿದ್ದ ನಯ್ಯಾ ಪೈಸೆನೂ ಬಂದಿಲ್ಲ

ಕೊಪ್ಪಳ: ಕಳೆದ ಬಾರಿ ಬಜೆಟ್‌ನಲ್ಲಿ ಕೊಪ್ಪಳ(Koppal) ಜಿಲ್ಲೆಗೆ ಅನುದಾನ ಘೋಷಣೆಯಾಗಿದ್ದೇ ತೀರಾ ಕಡಿಮೆ. ಅದು ಸಹ ಕಾರ್ಯಗತವಾಗಲೇ ಇಲ್ಲ. ಬಹುತೇಕ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗಿದ್ದು ಇದೇ ರೀತಿಯಾಗುತ್ತಿದೆ.
ಕಳೆದೆರಡು ವರ್ಷಗಳ ಹಿಂದೆ ಬಜೆಟ್‌ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 20 ಕೋಟಿ ಘೋಷಣೆಯಾಗಿದ್ದರೂ ಇದುವರೆಗೂ ನಯಾಪೈಸೆ ಬಂದಿಲ್ಲ.

ಕಳೆದ ವರ್ಷ ಸ್ವಸಹಾಯ ಸಂಘಗಳಿಗೆ ಇ​- ಮಾರುಕಟ್ಟೆ ಸ್ಥಾಪಿಸುವ ಕುರಿತು ಘೋಷಣೆಯಾಗಿದ್ದರೂ ಅದು ಕಾರ್ಯಗತವಾಗಲೇ ಇಲ್ಲ. ತೋಟಗಾರಿಕಾ ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ಘೋಷಣೆಯಾಗಿದ್ದ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್(Horticultural Technology Park) ಕಾರ್ಯಾನುಷ್ಠಾನವೇ ಆಗುತ್ತಿಲ್ಲ. ಕುರಿ ತಳಿ ಅಭಿವೃದ್ಧಿಗಾಗಿ ಕುಷ್ಟಗಿ ತಾಲೂಕಿನಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನ ಕೇಂದ್ರ ಇನ್ನೂ ಪ್ರಾರಂಭವಾಗಿಲ್ಲ. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಪ್ರಸ್ತಾಪವಾಗಿರುವುದು ಮಾತ್ರ ಪ್ರಾಥಮಿಕ ಸರ್ವೆಯಾಗಿ, ಡಿಪಿಆರ್‌ ಸಿದ್ಧ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ(Kalyana Karnataka) 1500 ಕೋಟಿ ಘೋಷಣೆಯಾಗಿದ್ದು, ಕೊಪ್ಪಳ ಜಿಲ್ಲೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಂದಿಲ್ಲ.
 

click me!