ದೇಶದಲ್ಲಿ ಮೊದಲ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಾವಳಿಯೊಂದನ್ನು ಆರಂಭ ಮಾಡುತ್ತಿದೆ. ಏನದು ಹೊಸ ನಿಯಮ..?
ಮುಂಬೈ (ಫೆ.06): ಸಣ್ಣ ಹೂಡಿಕೆದಾರರು ಕೂಡ ನೇರವಾಗಿ ಸರ್ಕಾರಿ ಸಾಲದ ಬಾಂಡ್‌ಗಳನ್ನು ಖರೀದಿಸಲು ದೇಶದಲ್ಲಿ ಮೊದಲ ಬಾರಿ ಅವಕಾಶ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸುವ ವೇಳೆ ಇದನ್ನು ಘೋಷಿಸಿದೆ. ಇದು ಹಣಕಾಸು ಮಾರುಕಟ್ಟೆಯಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ ಎಂದು ಹೇಳಲಾಗಿದೆ.
ಜಗತ್ತಿನ ಕೆಲವೇ ದೇಶಗಳು ಸರ್ಕಾರದ ಸಾಲವನ್ನು ಚಿಲ್ಲರೆ ಹೂಡಿಕೆದಾರರು ಖರೀದಿಸುವ ಅವಕಾಶ ನೀಡಿದ್ದು, ಇಂತಹ ಅವಕಾಶ ನೀಡಿದ ಏಷ್ಯಾದ ಮೊದಲ ದೇಶ ಭಾರತವಾಗಿದೆ.
undefined
ಇದರಿಂದ 2 ಪ್ರಮುಖ ಪ್ರಯೋಜನಗಳಿವೆ. ಮೊದಲನೆಯದಾಗಿ ಸರ್ಕಾರಿ ಷೇರುಗಳನ್ನು ಯಾವುದೇ ಅಡೆತಡೆಯಿಲ್ಲದೇ ಹೂಡಿಕೆದಾರರು ನೇರವಾಗಿ ಖರೀದಿಸಬಹುದಾಗಿದೆ. ಎರಡನೆಯದಾಗಿ ಸರ್ಕಾರವು ಹೂಡಿಕೆದಾರರಿಂದ ಹಣ ಸಂಗ್ರಹಿಸುವ ಕಾರ್ಯ ಚುರುಕುಗೊಳ್ಳಲಿದೆ.
ಇಷ್ಟುದಿನ ಏನಿತ್ತು? ಇನ್ನೇನು?:
ಈವರೆಗೂ ಸರ್ಕಾರದ ಸಾಲದ ಬಾಂಡ್‌ಗಳನ್ನು ಹೂಡಿಕೆದಾರರು ಷೇರು ಮಾರುಕಟ್ಟೆಮೂಲಕ ಮಾತ್ರ ಖರೀದಿಸಬಹುದಿತ್ತು. ಅದಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಈ ನಿಯಮ ಬದಲಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಸ್ವತಂತ್ರವಾಗಿ ಬಾಂಡ್ ಖರೀದಿ-ಮಾರಾಟ ಮಾಡಬಹುದಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ ಈ ಖರೀದಿ ಆರ್‌ಬಿಐ ನಿಗಾದಲ್ಲಿ ನಡೆಯಲಿದೆ.
ದೇಶದಲ್ಲಿನ್ನು ಆರ್‌ಬಿಐ ಡಿಜಿಟಲ್ ಕರೆನ್ಸಿಗೆ ಶೀಘ್ರ ಮಾನ್ಯತೆ ಸಾಧ್ಯತೆ!
ಪ್ರಕ್ರಿಯೆ ಹೇಗೆ?:
ಆರ್‌ಬಿಐನಲ್ಲಿ ‘ಗಿಲ್ಟ್ ಸೆಕ್ಯುರಿಟಿ ಖಾತೆ’ (ರೀಟೇಲ್ ಡೈರೆಕ್ಟ್ ಖಾತೆ) ತೆರೆಯಬೇಕಾಗುತ್ತದೆ. ಆ ಮೂಲಕ ನೇರವಾಗಿ ಬಾಂಡ್ ಖರೀದಿಸಬಹುದು. ಇದರಿಂದ ಸರ್ಕಾರಿ ಷೇರುಗಳಲ್ಲಿ ಸಣ್ಣ ಹೂಡಿಕೆದಾರರಿಗೆ ನೇರ ಭಾಗೀದಾರಿಕೆ ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ. ಈ ಕುರಿತ ವಿಸ್ತೃತ ನಿಯಮಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಬ್ರೆಜಿಲ್, ಹಂಗರಿ ಹಾಗೂ ಬ್ರಿಟನ್ ಇಂಥ ಅವಕಾಶವನ್ನು ತಮ್ಮ ಸಣ್ಣ ಹೂಡಿಕೆದಾರರಿಗೆ ಈಗಾಗಲೇ ನೀಡಿವೆ. ಆದರೆ ಏಷ್ಯಾದಲ್ಲಿ ಯಾವ ದೇಶವೂ ಇದಕ್ಕೆ ಈವರೆಗೂ ಅವಕಾಶ ನೀಡಿಲ್ಲ.