
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು: ಭಾರತ 'ಡಿಜಿಟಲ್ ಇಂಡಿಯಾ' ಯೋಜನೆ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದು, ಜನಸಾಮಾನ್ಯರ ಜೀವನದಲ್ಲಿ ತಂತ್ರಜ್ಞಾನವನ್ನು ಹಾಸುಹೊಕ್ಕಾಗಿಸಿದರೆ ಅವರ ಬದುಕನ್ನು ಯಾವ ರೀತಿ ಸುಗಮವಾಗಿಸಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಗುರುವಾರ ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಯುವ ಭಾರತಕ್ಕಾಗಿ ನವ ಭಾರತ’ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದಂತೆ ಜನತೆಗಾಗಿ ಸರ್ಕಾರ 100 ರೂ ಬಿಡುಗಡೆ ಮಾಡುತ್ತಿದ್ದರೆ ಫಲಾನುಭವಿಗಳಿಗೆ ಕೇವಲ 15 ರೂ ತಲುಪುತ್ತಿತ್ತು. ಆದರೆ, 2016ರಲ್ಲಿ ಡಿಜಿಟಲ್ ಇಂಡಿಯಾ ಅನುಷ್ಠಾನಕ್ಕೆ ಬಂದ ಬಳಿಕ ಪರಿಸ್ಥಿತಿ ಭಿನ್ನವಾಗಿದೆ. ದೇಶವನ್ನು ಹಿಂದುಳಿಯುವಂತೆ ಮಾಡಿದ್ದ, ಜನತೆಗೆ ಸಮಸ್ಯೆಯಾಗುತ್ತಿದ್ದ ಎಲ್ಲ ಅಡ್ಡಿಗೂ ಇಂದು ಡಿಜಿಟಲೀಕರಣ ಪರಿಹಾರ ಕಲ್ಪಿಸಿದೆ ಎಂದರು.
ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ತಂತ್ರಜ್ಞಾನ ಕೆಲಸ: ಸಚಿವ ರಾಜೀವ್ ಚಂದ್ರಶೇಖರ್
ಆಧಾರ್ ಕಾರ್ಡ್‌ನ ಸಮರ್ಪಕ ಬಳಕೆ, ಯುಪಿಐ, ರುಪೇ ಮೂಲಕ ಹಣ ವರ್ಗಾವಣೆ(Money Transfer) , ಸರಳ ಜೀವನಕ್ಕಾಗಿ ಡಿಜಿ ಲಾಕರ್‌ನಂತ ವ್ಯವಸ್ಥೆ ಹಾಗೂ ಕೋವಿಡ್ ಸಂಕಷ್ಟದ ವೇಳೆ ಕೋವಿನ್ ಆ್ಯಪ್ ಮುಖೇನ ನೆರವು ನೀಡಲಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಾಗರಿಕರ ದಿನನಿತ್ಯದ ಬದುಕನ್ನು ಯಾವ ರೀತಿ ಬದಲಿಸಬಹುದು , ಉದ್ಯೋಗವಕಾಶ ಕಲ್ಪಿಸಬಹುದು ಎಂಬುದಕ್ಕೆ ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.
ವಿದ್ಯಾರ್ಥಿನಿ ಜ್ಯೋತಿಕಾ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಹತ್ತು ವರ್ಷಗಳಲ್ಲಿ ಎಲ್ಲ ಕ್ಷೇತ್ರದಲ್ಲಿ ತ್ರಂತ್ರಜ್ಞಾನ ಸಾಕಷ್ಟು ತಲ್ಲಣಕ್ಕೆ ಕಾರಣವಾಗಲಿದೆ. ಇದನ್ನು ಎದುರಿಸಿ ಯಶಸ್ವಿಯಾಗಲು ಯುವಕರು ಈಗಲೇ ವಿಶೇಷ ಕೌಶಲ್ಯ ರೂಢಿಸಿಕೊಳ್ಳಬೇಕು. ಪ್ರಾಥಮಿಕ ಡಿಜಿಟಲ್ ಜ್ಞಾನ ಎಲ್ಲ ಉದ್ಯೋಗದಲ್ಲೂ ಅಗತ್ಯ. ಕೃತಕ ಬುದ್ಧಿಮತ್ತೆ, ಆಲ್ಗರಿದಮಿಕ್‌ನ ಕಾರ್ಯವೈಖರಿಯನ್ನು ಅರಿಯುವುದು ಅತ್ಯವಶ್ಯಕವಾಗಲಿದೆ ಎಂದು ತಿಳಿಸಿದರು.
ಬಡಿಗೆ ವೃತ್ತಿ, ಪ್ಲಂಬರ್, ಫಿಟ್ಟರ್ ರೀತಿಯ ಬ್ಲೂ ಕಾಲರ್ ಸ್ಕಿಲ್ ತರಬೇತಿ ಒಂದು ಕಡೆಯಾದರೆ, ವೈಟ್ ಕಾಲರ್ ಸ್ಕಿಲ್ ಎಂದು ಕರೆಯಲ್ಪಡುವ ಎಐ, ಡ್ರೋಣ್ ವಿನ್ಯಾಸ, ಕೋಡಿಂಗ್, ಐಟಿ ಸ್ಕಿಲ್ಸ್, ಮೈಕ್ರೋ ಪ್ರೊಸೆಸರ್, ಹಾರ್ಡ್‌ವೇರ್ ತರಬೇತಿ, ಮೈಕ್ರೋ ಎಲೆಕ್ಟ್ರಾನಿಕ್, ಸೆಮಿಕಂಡಕ್ಟರ್ ಕಾರ್ಯವೈಖರಿ ಕುರಿತಾಗಿಯೂ ಹೆಚ್ಚು ಅಧ್ಯಯನಶೀಲರಾಗಬೇಕು. ಅದಕ್ಕಾಗೆ ಕಳೆದ ಬಜೆಟ್‌ನಲ್ಲಿ ಭವಿಷ್ಯದ ಕೈಗಾರಿಕೆಗಳಿಗಾಗಿ ಭವಿಷ್ಯದ ಕೌಶಲ್ಯದ ಕುರಿತು ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಆರೋಗ್ಯ ಕ್ಷೇತ್ರದ ಬಹುದೊಡ್ಡ ಒಪ್ಪಂದಕ್ಕೆ ಭಾರತ ಸಹಿ
ಸೆಮಿಕಂಡಕ್ಟರ್ ಸಂಶೋಧನಾ ಸಂಸ್ಥೆ ಸ್ಥಾಪನೆ
ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಸೆಮಿ ಕಂಡಕ್ಟರ್ ವಲಯದಲ್ಲಿ ಜಾಗತಿಕ ಪ್ರಬಲ ಸ್ಪರ್ಧಿಯಾಗಲಿದೆ. ಎಲೆಕ್ಟ್ರಾನಿಕ್, ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ನಾವೀಗ ಪ್ರಗತಿಯ ಹಾದಿಯಲ್ಲಿದ್ದೇವೆ. ಜತೆಗೆ ಸೆಮಿಕಂಡಕ್ಟರ್ ರೂಪು ರೇಷೆ, ವಿನ್ಯಾಸ, ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಸ್ಟಾರ್ಚ್‌ಪ್‌ಗಳಿಗೂ ಹೆಚ್ಚು ಪ್ರೋತ್ಸಾಹ ನೀಡಲಾಗಿದೆ. ಚಿಪ್ ವಿನ್ಯಾಸದ 14 ಕಂಪನಿಗಳು ಆರಂಭವಾಗುತ್ತಿವೆ. ಜತೆಗೆ ಶೀಘ್ರದಲ್ಲೇ ದೇಶದಲ್ಲಿ ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಸಂಶೋಧನಾ ಸಂಸ್ಥೆ (Semi conductor Research Institute) ಸ್ಥಾಪನೆಯಾಗಲಿದೆ. ಕರ್ನಾಟಕದಲ್ಲೂ ಇದಕ್ಕೆ ಸಂಬಂಧಿಸಿದ ಸ್ಯಾಟಲೈಟ್ ಕೇಂದ್ರ ಸ್ಥಾಪನೆಯಾಗುವ ಸಾಧ್ಯತೆ ಇದೆ ಎಂದರು.
ಹತ್ತು ವರ್ಷಗಳ ಹಿಂದೆ ಸೆಮಿ ಕಂಡಕ್ಟರ್ (semi conductor) ಕ್ಷೇತ್ರದಲ್ಲಿ ಭಾರತ ಹಿಂದುಳಿದಿತ್ತು. ಶೇ. 82 ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಪ್ರಸ್ತುತ ಶೇ. 100ರಷ್ಟುಮೊಬೈಲ್‌ಗಳು ಭಾರತದಲ್ಲೇ ತಯಾರಾಗುತ್ತಿವೆ. ನಾವೀಗ 90 ಸಾವಿರ ಕೋಟಿ ಮೌಲ್ಯದ ಮೊಬೈಲ್‌ಗಳನ್ನು ರಫ್ತು ಮಾಡುತ್ತಿದ್ದೇವೆ ಎಂದು ವಿವರಿಸಿದರು.
ನಮ್ಮ ಬೆಂಗಳೂರು ಧ್ಯೇಯ
ಬೆಂಗಳೂರು ನಮ್ಮೂರು. ಆಧುನಿಕತೆ (Modernization) ಅಬ್ಬರದಲ್ಲಿ ನಾವು ನಗರದ ಐತಿಹಾಸಿಕ ಮೌಲ್ಯವನ್ನು ಮರೆತಿದ್ದೇವೆ. ನಾವು ಯಾರು, ನಮ್ಮ ಇತಿಹಾಸ (History) , ಸಂಸ್ಕೃತಿ (Culture)ಮರೆಯದೆ ಅವುಗಳನ್ನು ಕಾಪಾಡಿಕೊಂಡು ಹೋಗಬೇಕು. ಅದರ ಸಲುವಾಗಿ ಎಲ್ಲರೂ ಕೈ ಜೋಡಿಸಬೇಕು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದೆ. ಈ ನಗರದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಬೇಕು ಎಂಬುದು ನಮ್ಮ ಬೆಂಗಳೂರು ಫೌಂಡೇಶನ್ ಧ್ಯೇಯ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.