ಏ.1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ?ಇಲ್ಲಿದೆ ಮಾಹಿತಿ

By Suvarna NewsFirst Published Mar 31, 2023, 12:05 PM IST
Highlights

ನಾಳೆಯಿಂದ ಹೊಸ ಆರ್ಥಿಕ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಕೆಲವು ಬದಲಾವಣೆಗಳು ಆಗಲಿವೆ. ಈ ಹಿಂದಿನ ಕೆಲವು ಯೋಜನೆಗಳು ಸ್ಥಗಿತಗೊಳ್ಳಲಿವೆ. ಹಾಗೆಯೇ ಕೆಲವು ಯೋಜನೆಗಳಲ್ಲಿ ಬದಲಾವಣೆಯನ್ನು ಕೂಡ ಮಾಡಲಾಗಿದೆ. ಇನ್ನು ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ಕೂಡ ಬದಲಾವಣೆ ಆಗಲಿದೆ. ಹೀಗಾಗಿ ಈ ಎಲ್ಲ ಮಾಹಿತಿಗಳನ್ನು ಹೊಂದಿರೋದು ಅಗತ್ಯ. 
 

ನವದೆಹಲಿ (ಮಾ.31): ನಾಳೆಯಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. 2023-24ನೇ ಸಾಲಿನ ಮೊದಲ ದಿನವಾದ ಏಪ್ರಿಲ್ 1ರಂದು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳು ಆಗಲಿವೆ. ಕೆಲವೊಂದು ಯೋಜನೆಗಳು ಕೂಡ ಏ.1ರಿಂದ ಲಭ್ಯವಿರೋದಿಲ್ಲ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಗೃಹ ಸಾಲದ ಬಡ್ಡಿದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಕಾರುಗಳ ಬೆಲೆಯೇರಿಕೆ, ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಮಾಸಿಕ ಆದಾಯ ಯೋಜನೆಗಳಲ್ಲಿನ ಹೂಡಿಕೆ ಮಿತಿ ಹೆಚ್ಚಲಿದೆ. ಹೀಗೆ ಜನಸಾಮಾನ್ಯರ ನಿತ್ಯದ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಗಳು ನಾಳೆಯಿಂದ ಆಗಲಿವೆ. ಹೀಗಾಗಿ ನಾಳೆಯಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ಆಗುತ್ತದೆ ಎಂಬ ಮಾಹಿತಿ ಹೊಂದಿರೋದು ಅಗತ್ಯ. 2023ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ ಕೆಲವು ಯೋಜನೆಗಳು, ಬದಲಾವಣೆಗಳು ಏ.1ರಿಂದಲೇ ಜಾರಿಗೆ ಬರುವ ಕಾರಣ ಅವುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುವ ಯಾವೆಲ್ಲ ಬದಲಾವಣೆಗಳು ಆಗಲಿವೆ? ಇಲ್ಲಿದೆ ಮಾಹಿತಿ.

ಹೊಸ ತೆರಿಗೆ ವ್ಯವಸ್ಥೆ
ಹೊಸ ತೆರಿಗೆ ವ್ಯವಸ್ಥೆ ಇನ್ನು ಮುಂದೆ ಡಿಫಾಲ್ಟ್ ಆಯ್ಕೆ ಆಗಲಿದೆ. ಆದರೆ, ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಗೃಹಸಾಲದ ಬಡ್ಡಿ ಏರಿಕೆ
ಎಸ್ ಬಿಐ, ಎಚ್ ಡಿಎಫ್ ಸಿ ಸೇರಿದಂತೆ ಕೆಲವು ಬ್ಯಾಂಕ್ ಗಳು ನೀಡುತ್ತಿದ್ದ ವಿಶೇಷ ಗೃಹಸಾಲದ ಬಡ್ಡಿದರ ಕೊನೆಗೊಳ್ಳಲಿದೆ. ಇದರಿಂದ ಗೃಹಸಾಲದ ಬಡ್ಡಿದರ ಏರಿಕೆಯಾಗುವ ಸಾಧ್ಯತೆಯಿದೆ. ಇನ್ನು ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಮುಂದಿನ ವಾರ ನಡೆಯಲಿದ್ದು, ಇನ್ನೊಮ್ಮೆ ರೆಪೋ ದರ ಏರಿಕೆ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ. ಹೀಗಾದ್ರೆ ಗೃಹಸಾಲದ ಬಡ್ಡಿದರ ಇನ್ನೊಮ್ಮೆ ಏರಿಕೆ ಕಾಣಲಿದೆ.

ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ ಭಾರತೀಯ ಅಜಯ್ ಬಂಗಾ ಆಯ್ಕೆ ಪಕ್ಕಾ

ಹಿರಿಯ ನಾಗರಿಕರ ಎಫ್ ಡಿ
ಕೋವಿಡ್-19 ಸಂದರ್ಭದಲ್ಲಿ ಎಸ್ ಬಿಐ ಸೇರಿದಂತೆ ಕೆಲವು ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ನೆರವಾಗುವ ದೃಷ್ಟಿಯಿಂದ ಅಧಿಕ ಬಡ್ಡಿದರದ ಎಫ್ ಡಿಗಳನ್ನು ಪ್ರಾರಂಭಿಸಿದ್ದವು. ಈ ವಿಶೇಷ ಎಫ್ ಡಿ ಯೋಜನೆಗಳು ಮಾ.31ಕ್ಕೆ ಅಂತ್ಯವಾಗಲಿದ್ದು, ಏಪ್ರಿಲ್ ನಿಂದ ಲಭ್ಯವಿರೋದಿಲ್ಲ. ಎಸ್ ಬಿಐ ಬ್ಯಾಂಕಿನ 'ವಿ ಕೇರ್', ಎಚ್ ಡಿಎಫ್ ಸಿ ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ, ಐಡಿಬಿಐ ಬ್ಯಾಂಕ್ ಹಿರಿಯ ನಾಗರಿಕರ 'ನಮನ್' ಯೋಜನೆಗಳು ಮಾ.31ಕ್ಕೆ ಅಂತ್ಯವಾಗಲಿವೆ.

ದುಬಾರಿ ಕಾರು
ಏ.1ರಿಂದ ಕಾರುಗಳು ದುಬಾರಿಯಾಗಲಿವೆ. ಹೊಸ ವಾಹನಗಳು BS6 ಹೊಗೆ ಹೊರಸೂಸುವಿಕೆ ನಿಯಮಗಳ ಹಂತ-2 ಅನ್ನು ಅನುಸರಿಸಬೇಕು. ಇದರಿಂದ ವಾಹನಗಳ ಬೆಲೆಯಲ್ಲಿ ಏರಿಕೆಯಾಗಲಿದೆ. 

ಅಂಚೆ ಕಚೇರಿ ಯೋಜನೆಗಳ ಹೂಡಿಕೆ ಮಿತಿ ಹೆಚ್ಚಳ
2023ನೇ ಕೇಂದ್ರ ಬಜೆಟ್ ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಹೂಡಿಕೆ ಮಿತಿಯನ್ನು 15ಲಕ್ಷ ರೂ.ನಿಂದ 30 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಅಂಚೆ ಕಚೇರಿ ಮಾಸಿಕ  ಆದಾಯ ಯೋಜನೆ (ಪಿಒಎಂಐಎಸ್) ಒಂದೇ ಖಾತೆಗೆ ಹೂಡಿಕೆ ಮಿತಿಯನ್ನು 4ಲಕ್ಷ ರೂ.ನಿಂದ 9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆ ಹೂಡಿಕೆ ಮಿತಿಯನ್ನು 9ಲಕ್ಷ ರೂ.ನಿಂದ 15ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದು ಏ.1ರಿಂದಲೇ ಜಾರಿಗೆ ಬರಲಿದೆ.  

ರಜೆ ನಗದೀಕರಣ
ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರ ಉದ್ಯೋಗಿಗಳ ನಿವೃತ್ತಿ ಸಮಯದಲ್ಲಿನ ರಜೆ ನಗದೀಕರಣ ಮೊತ್ತ 3ಲಕ್ಷ ರೂ.ನಿಂದ 25ಲಕ್ಷ ರೂ.ಗೆ ಹೆಚ್ಚಳ. 

ವಿಮೆ ಹೂಡಿಕೆ
ಯುಎಲ್ ಐಪಿಎಸ್ ಹೊರತುಪಡಿಸಿ ಇತರ ವಿಮಾ ಪಾಲಿಸಿಗಳ ವಾರ್ಷಿಕ ಪ್ರೀಮಿಯಂ 5ಲಕ್ಷ ರೂ. ಮೀರಿದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. 

ತೆರಿಗೆದಾರರೇ ಗಮನಿಸಿ; ಆದಾಯ ತೆರಿಗೆಯ ಈ 4 ಕೆಲಸಗಳನ್ನು ಪೂರ್ಣಗೊಳಿಸಲು ಮಾ.31 ಅಂತಿಮ ಗಡುವು

ಡೆಟ್ ಮ್ಯೂಚುವಲ್ ಫಂಡ್ಸ್
ಈಕ್ವಿಟಿ ಷೇರುಗಳಲ್ಲಿ ಶೇ.35ಕ್ಕಿಂತ ಕಡಿಮೆ ಹೂಡಿಕೆ ಹೊಂದಿರುವ ಡೆಟ್ ಮ್ಯೂಚುವಲ್ ಫಂಡ್ ಗಳ ಮೇಲೆ ತೆರಿಗೆ ಸ್ಲ್ಯಾಬ್ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. 

click me!