ಆರೋಗ್ಯ ವಿಮೆಗೆ ಸಂಬಂಧಿಸಿ ಸಾಮಾನ್ಯ ವಿಮಾ ಮಂಡಳಿ ಮಹತ್ವದ ನಿಯಮವನ್ನು ಪ್ರಕಟಿಸಿದೆ. ಇದರ ಅನ್ವಯ ಇನ್ಮುಂದೆ ಎಲ್ಲ ಆಸ್ಪತ್ರೆಗಳಲ್ಲೂ ಪಾಲಿಸಿದಾರರ ನಗದುರಹಿತ ದಾಖಲಾತಿಗೆ ಅವಕಾಶ ನೀಡಲಾಗಿದೆ.
ನವದೆಹಲಿ (ಜ.25): ಸಾಮಾನ್ಯ ವಿಮಾ ಮಂಡಳಿ ಬುಧವಾರ ಹೊಸ ಉಪಕ್ರಮವೊಂದನ್ನು ಘೋಷಿಸಿದೆ. ನಗದುರಹಿತ ಆಸ್ಪತ್ರೆ ವಾಸದ ಸೌಲಭ್ಯವನ್ನು ಎಲ್ಲ ಆಸ್ಪತ್ರೆಗಳಿಗೆ ವಿಸ್ತರಿಸಿದೆ. ಇದರಲ್ಲಿ ಈ ಹಿಂದೆ ಪಟ್ಟಿಯಲ್ಲಿರದ ಆಸ್ಪತ್ರೆಗಳು ಕೂಡ ಸೇರಿವೆ. 'ಎಲ್ಲ ಕಡೆ ನಗದುರಹಿತ' ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವು ಪಾಲಿಸಿದಾರರು ವೈದ್ಯಕೀಯ ಚಿಕಿತ್ಸೆಯನ್ನು ಹೇಗೆ ಪಡೆಯುತ್ತಾರೆ ಎಂಬ ವಿಧಾನವನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದೆ. ಈ ಹೊಸ ಕಾರ್ಯಕ್ರಮದ ಅಡಿಯಲ್ಲಿ ಕನಿಷ್ಠ 15 ಹಾಸಿಗೆಗಳನ್ನು ಹೊಂದಿರುವ, ಕ್ಲಿನಿಕಲ್ ಎಸ್ಟ್ಯಾಬ್ಲಿಷ್ ಮೆಂಟ್ ಕಾಯ್ದೆ ಅಡಿಯಲ್ಲಿ ರಾಜ್ಯ ಆರೋಗ್ಯ ಪ್ರಾಧಿಕಾರದಲ್ಲಿ ನೋಂದಣಿಯಾಗಿರುವ ಯಾವುದೇ ಆಸ್ಪತ್ರೆ ನಗದುರಹಿತ ಆಸ್ಪತ್ರೆ ಸೇರ್ಪಡೆ ಸೌಲಭ್ಯ ಕಲ್ಪಿಸಲು ಅರ್ಹವಾಗಿದೆ. ಇದರಿಂದ ಪಾಲಿಸಿದಾರರು ನಗದು ನೀಡದೆ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು. ಆದರೆ, ಅವರು ಕ್ಲೇಮ್ ಮಾಡುವ ವೆಚ್ಚಗಳು ವಿಮಾ ಪಾಲಿಸಿಯಡಿಯಲ್ಲಿ ಬರಬೇಕು. ಆಗ ವಿಮಾ ಕಂಪನಿಗಳು ಆಸ್ಪತ್ರೆಗೆ ನೇರವಾಗಿ ವೆಚ್ಚದ ಹಣ ಪಾವತಿಸುತ್ತವೆ.
'ಎಲ್ಲ ಕಡೆ ನಗದುರಹಿತ' ಕಾರ್ಯಕ್ರಮ ಕೆಲವೊಂದು ಷರತ್ತುಗಳನ್ನು ಒಳಗೊಂಡಿದೆ. ಪಟ್ಟಿಯಲ್ಲಿರದ ಆಸ್ಪತ್ರೆಗಳಲ್ಲಿ ಈ ನಗದುರಹಿತ ಸೌಲಭ್ಯವನ್ನು ಪಡೆಯಲು ಪಾಲಿಸಿದಾರರು ಆಸ್ಪತ್ರೆಗೆ ಸೇರ್ಪಡೆಗೊಳ್ಳುವ 48 ಗಂಟೆಗಳ ಮುನ್ನ ಈ ಬಗ್ಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು. ಅಲ್ಲದೆ, ಆಸ್ಪತ್ರೆಗೆ ಸೇರ್ಪಡೆಗೊಂಡ 48 ಗಂಟೆಗಳೊಳಗೆ ವಿಮಾ ಕಂಪನಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಕೂಡ.
ಒಂದಕ್ಕಿಂತ ಹೆಚ್ಚು ಆರೋಗ್ಯ ವಿಮೆಯಿದ್ರೆ ಹೇಗೆ ಕ್ಲೈಮ್ ಮಾಡೋದು?
ಸಾಮಾನ್ಯ ವಿಮಾ ಮಂಡಳಿ ಅಧ್ಯಕ್ಷರಾದ ಬಜಾಜ್ ಅಲೆಯನ್ಸ್ ಜನರಲ್ ಇನ್ಯುರೆನ್ಸ್ ಸಿಇಒ ತಪನ್ ಸಿಂಘಾಲ್, ಈ ನಿರ್ಧಾರದ ಪರಿವರ್ತನೆ ಗುಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದಿನ ವ್ಯವಸ್ಥೆಯಲ್ಲಿ ಪಟ್ಟಿಯಲ್ಲಿರುವ 40 ಸಾವಿರ ಆಸ್ಪತ್ರೆಗಳಲ್ಲಿ ಮಾತ್ರ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶವಿತ್ತು. ಇದರಿಂದ ಪಾಲಿಸಿದಾರರು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಈ ಪಟ್ಟಿಯಲ್ಲಿರುವ ಆಸ್ಪತ್ರೆ ಸಿಗದೆ ನಗದುರಹಿತ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಲಿಲ್ಲ. ಅಲ್ಲದೆ, ಕೆಲವೊಮ್ಮೆ ಅವರೇ ನಗದು ಪಾವತಿಸಿ ವಿಮಾ ಕಂಪನಿಯಿಂದ ಮರುಪಾವತಿ ಪಡೆಯುವಾಗ ವಿಳಂಬವಾಗುತ್ತಿತ್ತು. ಈ ಹೊಸ ಪಾಲಿಸಿ ಇಂಥ ಸಮಸ್ಯೆಗಳನ್ನು ಹೊಗಲಾಡಿಸುವ ಗುರಿ ಹೊಂದಿದೆ. ಆ ಮೂಲಕ ಹಣಕಾಸಿನ ಪರಿಣಾಮಗಳ ಬಗ್ಗೆ ಯೋಚಿಸದೆ ಚಿಕಿತ್ಸೆಗೆ ಯಾವುದೇ ಆಸ್ಪತ್ರೆಯನ್ನಾದರೂ ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಿದೆ ಎಂದು ವರದಿ ತಿಳಿಸಿದೆ.
ಪಾಲಿಸಿದಾರರಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸೋದು ಮಂಡಳಿಯ ನಿರಂತರ ಗುರಿಯಾಗಿದೆ ಎಂದು ಸಿಂಘಾಲ್ ತಿಳಿಸಿದ್ದಾರೆ. ಈ ಹೊಸ ಕಾರ್ಯಕ್ರಮ ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಗಮನಾರ್ಹ ಹಜ್ಜೆಯಾಗಿದೆ. ಈ ಮೂಲಕ ಆರೋಗ್ಯಸೇವಾ ಸೌಲಭ್ಯಗಳನ್ನು ಹೆಚ್ಚು ಜನರಿಗೆ ಸಿಗುವಂತೆ ಮಾಡಿದೆ. ಅಲ್ಲದೆ, ವೈದ್ಯಕೀಯ ಚಿಕಿತ್ಸೆ ಪಡೆಯಲು ಬಯಸೋರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಿದೆ.
ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ: ನೀವು ವಿಮೆ ಕ್ಲೈಮ್ ಪಡೆಯುವ ಮೊದಲು ದಾಖಲೆಗಳನ್ನು ಸರಿಯಾಗಿ ಓದಿರಬೇಕು. ನಿಮಗೆ ಅದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಹೋದ್ರೆ ಕ್ಲೈಮ್ ಮಾಡಲು ಅನಗತ್ಯ ಸಮಯ ಹಿಡಿಯುತ್ತದೆ. ಪಾವತಿ ರಸೀದಿ, ವೈದ್ಯಕೀಯ ವರದಿ, ವೈದ್ಯರ ಮೊದಲ ಸಮಾಲೋಚನೆ ಪತ್ರ, ಡಿಸ್ಚಾರ್ಜ್ ಸಾರಾಂಶ, ಬ್ಯಾಂಕ್ ವಿವರ, ರದ್ದುಪಡಿಸಿದ ಚೆಕ್, ಫೋಟೋ ಐಡಿ ಫೋಟೋ ಪ್ರತಿಗಳು ಪ್ರಮುಖ ದಾಖಲೆಗಳಲ್ಲಿ ಬರುತ್ತವೆ.
ಕೆಲಸ ಬಿಟ್ಮೇಲೂ ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರಿಸ್ಬಹುದಾ?
ಆರೋಗ್ಯ ವಿಮೆ ಪ್ರಯೋಜನಗಳು : ಪ್ರತಿಯೊಬ್ಬರೂ ಆರೋಗ್ಯ ವಿಮೆ ಪಡೆಯುವ ಅಗತ್ಯ ಈಗಿದೆ. ಕೆಲ ಆರೋಗ್ಯ ವಿಮೆಯಲ್ಲಿ ನಿಯಮಿತ ತಪಾಸಣೆ, ಸ್ಕ್ರೀನಿಂಗ್ (Screening) ಒಳಗೊಂಡಿರುತ್ತದೆ. ನಿಮಗೆ ಆರಂಭದಲ್ಲಿಯೇ ರೋಗಗಳನ್ನು ಪತ್ತೆ ಮಾಡಲು ಇದು ನೆರವಾಗುತ್ತದೆ. ಇನ್ನು ಕೆಲ ಆರೋಗ್ಯ ಪಾಲಿಸಿಗಳು ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಗಂಭೀರ ಖಾಯಿಲೆಗಳಿಗೆ ಸಹಾಯ ಮಾಡುವುದ್ರಿಂದ ನಿಮ್ಮ ಖರ್ಚು ಕಡಿಮೆ ಆಗುತ್ತದೆ. ಇನ್ನು ಕೆಲ ಆರೋಗ್ಯ ವಿಮೆಯಲ್ಲಿ ಹೆರಿಗೆಗೆ ಮುನ್ನ ಹಾಗೂ ಹೆರಿಗೆ ನಂತ್ರದ ಕವರ್ ಇರುತ್ತದೆ. ಹಾಗಾಗಿ ಮಹಿಳೆ ತನ್ನ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬಹುದಾಗಿದೆ.