ಕೇಂದ್ರ ಸರ್ಕಾರದ 2024ನೇ ಸಾಲಿನ ಮಧ್ಯಂತರ ಬಜೆಟ್ ಫೆ.1ರಂದು ಮಂಡನೆಯಾಗಲಿದೆ. ಈ ಸಂದರ್ಭದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿ ಯಾವೆಲ್ಲ ಪ್ರಯೋಜನಗಳನ್ನು ತೆರಿಗೆದಾರ ನಿರೀಕ್ಷಿಸಬಹುದು.
ನವದೆಹಲಿ (ಜ.25):ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿರದ ಕಾರಣ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರದಿದ್ದರೂ ತೆರಿಗೆದಾರರಿಗೆ ಮಾತ್ರ ಒಂದಿಷ್ಟು ಅಪೇಕ್ಷೆಗಳು ಇದ್ದೇಇವೆ. ಈ ಬಾರಿ ಏನಾದರೂ ಆದಾಯ ತೆರಿಗೆ ಪ್ರಯೋಜನಗಳು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ದೇಶಾದ್ಯಂತ ತೆರಿಗೆದಾರರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಪ್ರಮುಖ ತೆರಿಗೆ ಪ್ರಯೋಜನಗಳ ಘೋಷಣೆಯನ್ನು 2024ನೇ ಸಾಲಿನ ಲೋಕಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ ಮಂಡಿಸುವ ಬಜೆಟ್ ನಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ ಎನ್ನೋದು ತೆರಿಗೆ ತಜ್ಞರ ಅಭಿಪ್ರಾಯ. ಅದರೆ, ಕೆಲವೊಂದು ಚಿಕ್ಕಪುಟ್ಟ ಬದಲಾವಣೆಗಳನ್ನು ಈ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿದರೂ ಅಚ್ಚರಿಯಿಲ್ಲ.
ಯಾವೆಲ್ಲ ತೆರಿಗೆ ಪ್ರಯೋಜನಗಳನ್ನು ನಿರೀಕ್ಷಿಸಬಹುದು?
80D ಕಡಿತ ಮಿತಿ
ವೈದ್ಯಕೀಯ ವೆಚ್ಚಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೆಕ್ಷನ್ 80D ಅಡಿಯಲ್ಲಿ ವೈದ್ಯಕೀಯ ವಿಮಾ ಪ್ರೀಮಿಯಂಗಳ ಮೊತ್ತದಲ್ಲಿ ಏರಿಕೆ ಮಾಡುವ ನಿರೀಕ್ಷೆಯಿದೆ. ಸಾಮಾನ್ಯ ಜನರಿಗೆ ಪ್ರೀಮಿಯಂ ಮಿತಿಯನ್ನು 25,000ರೂ.ನಿಂದ 50,000ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಹಿರಿಯ ನಾಗರಿಕರಿಗೆ ಈ ಮಿತಿಯನ್ನು 50,000ರೂ.ನಿಂದ 75,000ರೂ.ಗೆ ಏರಿಕೆ ಮಾಡುವ ನಿರೀಕ್ಷೆಯಿದೆ. ಇದರ ಜೊತೆಗೆ ಸೆಕ್ಷನ್ 80ಡಿ ಪ್ರಯೋಜನಗಳನ್ನು ಹೊಸ ತೆರಿಗೆ ವ್ಯವಸ್ಥೆಯಡಿ ತರುವ ಮೂಲಕ ಆರೋಗ್ಯಸೇವೆಗಳಿಗೆ ತೆರಿಗೆ ಕಡಿತದ ಸೌಲಭ್ಯ ಕಲ್ಪಿಸುವ ಸಾಧ್ಯತೆಯಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
undefined
Union Budget 2024: ಏನಿದು ಮಧ್ಯಂತರ ಬಜೆಟ್? ಪೂರ್ಣ ಆಯವ್ಯಯಕ್ಕಿಂತ ಇದು ಹೇಗೆ ಭಿನ್ನ?
ಎಚ್ ಆರ್ ಎ ವಿನಾಯ್ತಿಗೆ ಮೆಟ್ರೋ ಸಿಟಿ ಅಡಿಯಲ್ಲಿ ಬೆಂಗಳೂರು
ಬೆಂಗಳೂರನ್ನು ಭಾರತೀಯ ಸಂವಿಧಾನದಡಿಯಲ್ಲಿ ಮೆಟ್ರೋಪೊಲೀಸ್ ಎಂದು ನಾಮಕರಣ ಮಾಡಿದ್ದರೂ ಈ ನಗರವನ್ನು ಇನ್ನೂ ಆದಾಯ ತೆರಿಗೆ ಉದ್ದೇಶಗಳಿಗೆ ನಾನ್ ಮೆಟ್ರೋ ಎಂದೇ ಪರಿಗಣಿಸಲಾಗುತ್ತಿದೆ. ಇದರಿಂದ ಇತರ ಪ್ರಮುಖ ನಗರಗಳಲ್ಲಿ ಎಚ್ ಆರ್ ಎ ವಿನಾಯ್ತಿ ಮಿತಿ ಶೇ.50ರಷ್ಟಿದ್ದರೆ, ಬೆಂಗಳೂರಿನ ನಿವಾಸಿಗಳಿಗೆ ಮಾತ್ರ ಶೇ.40ರಷ್ಟಿದೆ. ಹೀಗಾಗಿ ಈ ಬಜೆಟ್ ನಲ್ಲಿ ಬೆಂಗಳೂರನ್ನು ಎಚ್ ಆರ್ ಎ ವಿನಾಯ್ತಿ ಮಿತಿ ಹೆಚ್ಚಳಕ್ಕೆ ಮೆಟ್ರೋ ನಗರಗಳಡಿಯಲ್ಲಿ ತರುವ ಸಾಧ್ಯತೆಯಿದೆ ಎನ್ನೋದು ತಜ್ಞರ ಅಭಿಪ್ರಾಯ.
ಬಂಡವಾಳ ಗಳಿಕೆ ಮೇಲಿನ ತೆರಿಗೆ ಸರಳೀಕರಣ
ಹೂಡಿಕೆ ಮೇಲಿನ ಗಳಿಕೆಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ತೆರಿಗೆ ವ್ಯವಸ್ಥೆ ಸಂಕೀರ್ಣವಾಗಿದೆ ಎನ್ನೋದು ತಜ್ಞರ ಅಭಿಪ್ರಾಯ. ಇದರಲ್ಲಿ ಆಸ್ತಿ ವರ್ಗಗಳು, ಮಾಲೀಕತ್ವದ ಅವಧಿ, ತೆರಿಗೆ ದರಗಳು ಹಾಗೂ ವಾಸ್ತವ್ಯದ ಸ್ಟೇಟಸ್ ಸೇರಿದಂತೆ ಅನೇಕ ವಿಚಾರಗಳು ಸೇರಿವೆ. ಹೀಗಾಗಿ ಕೇಂದ್ರೀಯ ಬ್ಯಾಂಕ್ ಸೂಚ್ಯಂಕದ ನಿಯಮಗಳನ್ನು ಸರಳೀಕರಿಸಬೇಕು, ಲಿಸ್ಟೆಡ್ ಹಾಗೂ ಅನ್ ಲಿಸ್ಟೆಡ್ ಸೆಕ್ಯುರಿಟಿಗಳಿಗೆ ತೆರಿಗೆ ವಿಧಿಸುವಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ.
ಮುಂದಿನ ಕೇಂದ್ರ ಬಜೆಟ್ ಲೇಖಾನುದಾನ ಮಾತ್ರ; ಅದ್ಭುತ ಘೋಷಣೆಗಳಿಗೆ ಜುಲೈವರೆಗೆ ಕಾಯಬೇಕು: ನಿರ್ಮಲಾ ಸೀತಾರಾಮನ್
ಮನೆ ಖರೀದಿದಾರರಿಗೆ ಟಿಡಿಎಸ್ ಕಡಿತ ಮಿತಿ
ಪ್ರಸ್ತುತ ಆಸ್ತಿ ಖರೀದಿ ಮೇಲಿನ ಟಿಡಿಎಸ್ ಕಡಿತಕ್ಕೆ 50ಲಕ್ಷ ರೂ. ಮಿತಿ ವಿಧಿಸಲಾಗಿದೆ. ಅಂದ್ರೆ ಒಂದು ವೇಳೆ ಆಸ್ತಿ ಮೌಲ್ಯ ಇದನ್ನು ಮೀರಿದರೆ, ಖರೀದಿದಾರರು ಒಟ್ಟು ಮೊತ್ತದ ಶೇ.1ರಷ್ಟನ್ನು ಟಿಡಿಎಸ್ ಕಡಿತ ಮಾಡಬೇಕು. ಈ ನಿಯಮ ವಾಣಿಜ್ಯ ಹಾಗೂ ವಾಸ್ತವ್ಯದ ಆಸ್ತಿ ಎರಡಕ್ಕೂ ಅನ್ವಯಿಸುತ್ತದೆ. ಈ ನಿಯಮಕ್ಕೆ ಸಂಬಂಧಿಸಿದ ಕ್ಲಾಸ್ ನಲ್ಲಿ ಎನ್ ಆರ್ ಐ ಮಾರಾಟಗಾರರಿಗೆ ಸಂಬಂಧಿಸಿ ಒಂದಿಷ್ಟು ಸ್ಪಷ್ಟನೆಯನ್ನು ಈ ಮಧ್ಯಂತರ ಬಜೆಟ್ ನಲ್ಲಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹೀಗಾಗಿ ಆಸ್ತಿ ಖರೀದಿ ಸಂದರ್ಭದಲ್ಲಿ ಟಿಡಿಎಸ್ ಕಡಿತಕ್ಕೆ ಸಂಬಂಧಿಸಿ ಇನ್ನಷ್ಟು ಸ್ಪಷ್ಟನೆ ಸಿಗುವ ಸಾಧ್ಯತೆಯಿದೆ.