
ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರಿ ಬಹಳ ದುಬಾರಿ, ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಕಾಶ್ಮೀರ ಕೇಸರಿಯನ್ನು ಇದುವರೆಗೆ ಬರೀ ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಿದ್ದರು. ಇದಕ್ಕೆ ಅಲ್ಲಿನ ತಣ್ಣನೆಯ ಹವೆಯೂ ಕಾರಣ. ಆದರೆ ಇಲ್ಲೊಂದು ಜೋಡಿ ಈ ಮನೆಯ ಕೋಣೆಯ ವಾತಾವರಣವನ್ನು ಕಾಶ್ಮೀರದ ಕೇಸರಿ ಬೆಳೆಯುವಂತಹ ವಾತಾವರಣಕ್ಕೆ ಸೂಟ್ ಆಗುವಂತೆ ಕೃತತ ತಾಪಮಾನ ಸೃಷ್ಟಿ ಮಾಡಿ, ಮನೆಯಲ್ಲೇ ಬೆಳೆಯುವ ಮೂಲಕ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ ಇವರ ಈ ಸಣ್ಣ ಪ್ರಯೋಗವೊಂದು ಯಶಸ್ವಿ ಉದ್ಯಮವಾಗಿ ಬದಲಾಗಿದ್ದು, ವರ್ಷಕ್ಕೆ ಲಕ್ಷಾಂತರ ರೂ ಗಳಿಕೆ ಮಾಡುತ್ತಿದ್ದಾರೆ.
ಬಿಸಿಲ ನಾಡಲ್ಲಿ ಕೇಸರಿಯ ಫಸಲು
ಮಹಾರಾಷ್ಟ್ರದ ನಾಗಪುರ ಮೂಲಕ ಅಕ್ಷಯ್ ಹೋಲೆ ಹಾಗೂ ದಿವ್ಯಾ ಲೊಹ್ಕರೆ ಹೋಲೆ ಎಂಬ ಯುವ ದಂಪತಿಯೇ ಈ ಹೊಸ ಪ್ರಯೋಗ ಮಾಡಿ ಯಶಸ್ವಿಯಾದ ಜೋಡಿ. ಬಿಸಿಲಿನ ಬೇಗೆಗೆ ಹೆಸರುವಾಸಿಯಾದ ನಾಗಪುರ ನಗರದಲ್ಲಿ ಕೇಸರಿ ಬೆಳೆಯುವುದು ಅಸಾಧ್ಯವೆನಿಸಿದರು ಈ ದಂಪತಿ ಅದನ್ನೇ ಸವಾಲಾಗಿ ಸ್ವೀಕರಿಸಿ ಯಶಸ್ವಿ ಉದ್ಯಮವನ್ನಾಗಿ ಪರಿವರ್ತಿಸಿದ್ದಾರೆ. ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಅಕ್ಷಯ್ ಹೋಲೆ ಮತ್ತು ದಿವ್ಯಾ ಲೋಹಕರೆ ಹೋಲೆ ಅವರು ತಮ್ಮ ಮನೆಯ 400 ಚದರ ಅಡಿ ವಿಸ್ತೀರ್ಣದ ಒಂದು ಸಣ್ಣ ಕೋಣೆಯಲ್ಲಿ ಮಣ್ಣು ಅಥವಾ ನೀರನ್ನು ಬಳಸದೆ ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಎನಿಸಿರುವ ಕಾಶ್ಮೀರದ ಕೇಸರಿಯನ್ನು ಬೆಳೆಸುತ್ತಿದ್ದಾರೆ.
ಇದಕ್ಕಾಗಿ ಅವರು ಕೈಗೊಂಡ ಏರೋಪೋನಿಕ್ ತಂತ್ರವು ಕಾಶ್ಮೀರದ ತಂಪಾದ, ಮಂಜಿನ ವಾತಾವರಣವನ್ನು ಈ ಕೋಣೆಯಲ್ಲಿ ಯಶಸ್ವಿಯಾಗಿ ಮರುಸೃಷ್ಟಿಸಿದ್ದು, ಒಳ್ಳೆಯ ಫಲಿತಾಂಶವನ್ನು ನೀಡಿದೆ. ಇವರ ಈ ಹೊಸತಂತ್ರಜ್ಞಾನವೂ ವಾರ್ಷಿಕವಾಗಿ 50 ಲಕ್ಷ ರೂ. ಆದಾಯವನ್ನು ತಂದು ಕೊಟ್ಟಿದೆ.
ಸಣ್ಣದಾಗಿ ಆರಂಭಿಸಿದ ಉದ್ಯಮ
ಬಿಬಿಎ ಪದವೀಧರರಾದ ಅಕ್ಷಯ್ ಮತ್ತು ಬ್ಯಾಂಕರ್ ಆಗಿರುವ ದಿವ್ಯಾ 2020 ರಲ್ಲಿ ತಮ್ಮ ಈ ಹೊಸ ಕೇಸರಿ ಉದ್ಯಮವನ್ನು ಆರಂಭಿಸಿದರು.. ಭಾರತದಲ್ಲಿ ತುಂಬಾ ಕಡಿಮೆ ಉತ್ಪಾದನೆಯಾಗುತ್ತಿರುವ ಕೇಸರಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿದ ಅವರು, ಉದ್ಯಮ ಯಶಸ್ವಿಯಾಗಬೇಕಾದರೆ ಇಂತಹದನ್ನೇ ಮಾಡಬೇಕು ಎಂದು ನಿರ್ಧರಿಸಿದರು ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಕೇಸರಿ ಕೃಷಿಯ ಸೂಕ್ಷ್ಮತೆಯನ್ನು ಕಲಿತುಕೊಳ್ಳಲು ದಂಪತಿಗಳು ಕಾಶ್ಮೀರದಲ್ಲಿ ಮೂರುವರೆ ತಿಂಗಳುಗಳನ್ನು ಕಳೆದರು. ಅಲ್ಲಿನ ಅನುಭವಿ ಕೃಷಿಕರಿಂದ ನೇರವಾಗಿ ಇದರ ಬಗ್ಗೆ ಕಲಿತ ಇವರು ಕೇವಲ 1 ಕೇಜಿಯ ಕೇಸರಿಯೊಂದಿಗೆ ಸಣ್ಣದಾಗಿ ಕೃಷಿ ಆರಂಭಿಸಿದರು. ಇವರಿಗೆ ಮೊದಲ ಅವಧಿಯಲ್ಲಿ ಕೇವಲ ಕೆಲವೇ ಕೆಲವು ಗ್ರಾಂಗಳಷ್ಟು ಇಳುವರಿ ಸಿಕ್ಕಿತ್ತು. ಆದರೆ ನಿರಾಶೆ ಪಡುವ ಬದಲು ಅವರು ನಂತರದಲ್ಲಿ 350 ಕೇಜಿ ಕೇಸರಿ ಬೀಜವನ್ನು ಇಳುವರಿ ಮಾಡಲು ನೋಡಿದರು. ಹೀಗಾಗಿ ಮುಂದಿನ ಕೊಯ್ಲಿನಲ್ಲಿ ಅವರಿಗೆ ಸುಮಾರು 1,600 ಗ್ರಾಂ ಕೇಸರಿ ಉತ್ಪಾದನೆ ಆಯ್ತು.
ಸಮಾಜದ ಇತರ ಆಸಕ್ತರಿಗೂ ತರಬೇತಿ
ಇದರ ಯಶಸ್ಸಿನಿಂದ ಹೆಚ್ಚಿದ ಆತ್ಮವಿಶ್ವಾಸದೊಂದಿಗೆ, ಅವರು ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದರು, ಹಿಂಗ್ನಾದಲ್ಲಿ 400 ಚದರ ಅಡಿ ಇದ್ದ ಕೇಸರಿ ಘಟಕದ ಜೊತೆ ಮತತೂ ಹೆಚ್ಚುವರಿಯಾಗಿ 480 ಚದರ ಮೀಟರ್‌ನ ಮತ್ತೊಂದು ಘಟಕವನ್ನು ಆರಂಭಿಸಿದರು. ಪರಿಣಾಮ ಈಗ ಅವರ ಆದಾಯವು ನಿರಂತರವಾಗಿ 40 ರಿಂದ 50 ಲಕ್ಷ ರೂ.ಗಳ ನಡುವೆ ಇದೆ. ಆದರೆ ಅವರ ಯಶಸ್ಸನ್ನು ಅವರು ಈಗ ಒಬ್ಬರೇ ಅನುಭವಿಸುತ್ತಿಲ್ಲ, ಬದಲಾಗಿ ಈ ರೀತಿ ಕೇಸರಿ ಉದ್ಯಮವನ್ನು ಆರಂಭಿಸುವಂತೆ ಅವರು ಇತರರನ್ನು ಪ್ರೇರೆಪಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು 150 ಜನರಿಗೆ ತರಬೇತಿ ನೀಡಿದ್ದಾರೆ.
ಇದುವರೆಗೆ ನಾವು 150 ಜನರಿಗೆ ತರಬೇತಿ ನೀಡಿದ್ದೇವೆ, ಅವರಲ್ಲಿ 29 ಜನರು ರಾಜ್ಯಾದ್ಯಂತ ತಮ್ಮದೇ ಆದ ಘಟಕಗಳನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಾರೆ ಎಂದು ಅಕ್ಷಯ್ ಹೇಳಿಕೊಂಡಿದ್ದಾರೆ. ಪ್ರತಿ ಭಾಗವಹಿಸುವವರಿಗೆ 15,000 ರೂ. ಶುಲ್ಕ ಪಡೆದು ಮಹತ್ವಾಕಾಂಕ್ಷಿ ಕೇಸರಿ ಬೆಳೆಗಾರರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾರೆ. ಇದಲ್ಲದೆ, ಅವರು ಈ ಬೆಳೆಗಾರರಿಂದ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್‌ಗಾಗಿ ಕೇಸರಿಯನ್ನು ಖರೀದಿಸುತ್ತಾರೆ, ಇದು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ಅದ್ಭುತ ಇಳುವರಿ, ಕೆಲಸಗಾರರ ಅಗತ್ಯವಿಲ್ಲ:
ಅವರ ನವೀನ ವಿಧಾನವು ಅದ್ಭುತ ಫಲಿತಾಂಶಗಳನ್ನು ನೀಡಿದೆ. ಕಳೆದ ವರ್ಷ, ಪಾಲುದಾರ ಘಟಕಗಳನ್ನು ಒಳಗೊಂಡಂತೆ ನಮ್ಮ ಉತ್ಪಾದನೆಯು 45 ಕೆಜಿ ತಲುಪಿದೆ ಎಂದು ಅಕ್ಷಯ್ ಬಹಿರಂಗಪಡಿಸಿದರು. 100 ಚದರ ಅಡಿ ವಿಸ್ತೀರ್ಣದ ಘಟಕವನ್ನು ಸ್ಥಾಪಿಸಲು ಅಗತ್ಯವಿರುವ ಹೂಡಿಕೆ ಸುಮಾರು 10 ಲಕ್ಷ ರೂ.ಗಳಾಗಿದ್ದು, ಇದು ವಾರ್ಷಿಕವಾಗಿ 5 ಲಕ್ಷ ರೂ. ಮೌಲ್ಯದ ಕೇಸರಿಯನ್ನು ನೀಡುತ್ತದೆ. ಇದು ಒಂದು ಬಾರಿಯ ಹೂಡಿಕೆ. ಬೀಜಗಳನ್ನು ಒಮ್ಮೆ ಮಾತ್ರ ಖರೀದಿಸಲಾಗುತ್ತದೆ, ಮತ್ತು ಪ್ರತಿ ಬೀಜವು ಮೂರರಿಂದ ಐದು ಹೂವುಗಳನ್ನು ಉತ್ಪಾದಿಸುತ್ತದೆ, ಪ್ರತಿ ಹೂವಿಗೆ ಮೂರು ಕೇಸರಿ ಎಳೆಗಳು ಇರುತ್ತವೆ ಎಂದು ಅವರು ಹೇಳಿದರು. ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಕೇಸರಿಯನ್ನು ಕೊಯ್ಲು ಮಾಡಲಾಗುತ್ತದೆ, ಆದರೆ ವರ್ಷದ ಉಳಿದ ಸಮಯವನ್ನು ಬೀಜ ಕೃಷಿಗೆ ಮೀಸಲಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರತಿ ಗ್ರಾಂಗೆ 630 ರೂಪಾಯಿ
ಹೆಚ್ಚುವರಿಯಾಗಿ, ಅವರ ನಿರ್ವಹಣಾ ವೆಚ್ಚಗಳು ಕೂಡ ಬಹಳ ಕಡಿಮೆ. ನಮ್ಮ ಲಾಭದ ಪ್ರಮಾಣ ಸುಮಾರು 80 ಪ್ರತಿಶತದಷ್ಟಿದೆ ಏಕೆಂದರೆ ಯಾವುದೇ ನಿರಂತರ ವೆಚ್ಚಗಳಿಲ್ಲ, ಸೌರಶಕ್ತಿಯ ಬಳಕೆಯು ವಿದ್ಯುತ್ ವೆಚ್ಚವನ್ನು ನಿವಾರಿಸುತ್ತದೆ ಮತ್ತು ರಸಗೊಬ್ಬರಗಳು ಅಥವಾ ಕೂಲಿ ಕಾರ್ಮಿಕರ ಅಗತ್ಯವಿಲ್ಲದ ಕಾರಣ, ಅವರು ಸಂಪೂರ್ಣ ಪ್ರಕ್ರಿಯೆಯನ್ನು ಅವರೇ ಸ್ವತಃ ನಿರ್ವಹಿಸುತ್ತಾರೆ. ಆರಂಭದಲ್ಲಿ 55 ಲಕ್ಷ ರೂ. ಹೂಡಿಕೆ ಮಾಡಿದ ಈ ದಂಪತಿಗಳು ಐದು ವರ್ಷಗಳಲ್ಲಿ 1.3 ಕೋಟಿ ರೂ. ಗಳಿಸಿದ್ದಾರೆ, ಅವರ ಲಾಭದ ಬಹುಪಾಲು ಕಳೆದ ಎರಡು ವರ್ಷಗಳಲ್ಲಿ ಬಂದಿದೆ. ಕಾಶ್ಮೀರದ ಕೇಸರಿ ಸಂಸ್ಥೆಯಿಂದ ಶ್ರೇಣೀಕರಿಸಲ್ಪಟ್ಟ ಈ ಕೇಸರಿಯನ್ನು ಪ್ರತಿ ಗ್ರಾಂಗೆ 630 ರೂ.ಗೆ ಮಾರಾಟ ಮಾರಲಾಗುತ್ತದೆ. ನಾವು ಸಾಂಪ್ರದಾಯಿಕ ಕೃಷಿಯನ್ನು ತಂತ್ರಜ್ಞಾನದೊಂದಿಗೆ ವಿಲೀನಗೊಳಿಸಿದ್ದೇವೆ. ಮಣ್ಣು ಅಥವಾ ನೀರು ಇಲ್ಲದೆ ಗಾಳಿ ಮತ್ತು ಮಂಜನ್ನು ಬಳಸಿ ನಾವು ಕೇಸರಿಯನ್ನು ಬೆಳೆಯುತ್ತಿದ್ದೇವೆ. ಮತ್ತು ಅದು ನಮ್ಮ ಜೀವನವನ್ನು ಬದಲಾಯಿಸಿದೆ ಎಂದು ಅಕ್ಷಯ್ ಹೇಳಿದ್ದಾರೆ. ನೋಡಿದ್ರಲ್ಲ, ಒಂದು ಅದ್ಭುತವಾದ ಯೋಚನೆಯೊಂದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದ್ರೆ ಯಾವ ರೀತಿ ಲಾಭ ಪಡಿಬಹುದು ಅಂತ. ಈ ಯುವ ಜೋಡಿಯ ಸಾಧನೆ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.