60ಕ್ಕೇ ಗೃಹೋದ್ಯಮದಲ್ಲಿ ಯಶಸ್ಸು ಕಂಡ ನಾಗಮಣಿ ಅವರಿಗೀಗ ವಯಸ್ಸು 88

By Gowthami K  |  First Published Nov 4, 2022, 4:52 PM IST

ತನ್ನ 60 ನೇ ವಯಸ್ಸಿಗೆ ಸಣ್ಣ ಉದ್ಯಮವೊಂದನ್ನು ಆರಂಭಿಸಿ ಯಶಸ್ಸು ಗಳಿಸಿದ್ದಾರೆ ಬೆಂಗಳೂರಿನ ನಾಗಮಣಿ. ಮಣಿ ಆಂಟಿ  ಎಂದು ಎಲ್ಲರಿಂದ ಪ್ರೀತಿಯಿಂದ ಕರೆಸಿಕೊಳ್ಳುವ  ನಾಗಮಣಿ ಕೂದಲಿನ  ಎಣ್ಣೆ ತಯಾರಿಕಾ ಉದ್ಯಮವಾದ  ರೂಟ್ಸ್ & ಶೂಟ್ಸ್ ನ  ಸಂಸ್ಥಾಪಕರು.  


ವರದಿ: ಜಗದೀಶ್ ಬಳಂಜ

ಬದುಕಿನ ಅರ್ಧ ಆಯಸ್ಸು ಪೂರೈಸದ ಅದೆಷ್ಟೋ ಯುವಕ ಯುವತಿಯರು ನನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ನಿರಾಸೆಯಿಂದ ಕೈಚೆಲ್ಲಿ ಕುಳಿತಿರುತ್ತಾರೆ, ಅದೆಷ್ಟೋ ಜನ ಉದ್ಯೋಗ ಸಿಗಲಿಲ್ಲವೆಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇವರೆಲ್ಲರು ನಾಚಿಕೊಳ್ಳುವಂತೆ ತನ್ನ 60 ನೇ ವಯಸ್ಸಿಗೆ ಸಣ್ಣ ಉದ್ಯಮವೊಂದನ್ನು ಆರಂಭಿಸಿ ಯಶಸ್ಸು ಗಳಿಸಿದ್ದಾರೆ ಬೆಂಗಳೂರಿನ ನಾಗಮಣಿ. ಮಣಿ ಆಂಟಿ  ಎಂದು ಎಲ್ಲರಿಂದ ಪ್ರೀತಿಯಿಂದ ಕರೆಸಿಕೊಳ್ಳುವ  ನಾಗಮಣಿ ಕೂದಲಿನ  ಎಣ್ಣೆ ತಯಾರಿಕಾ ಉದ್ಯಮವಾದ  ರೂಟ್ಸ್ & ಶೂಟ್ಸ್ ನ  ಸಂಸ್ಥಾಪಕರು.  ಇವರು ತಯಾರಿಸುವ ತೈಲವು ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ನಾಗಮಣಿ ಅವರು 24 ವರ್ಷದವಳಿದ್ದಾಗ, ವಿಪರೀತ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರು.  ಮೈಸೂರಿನ ಅವರ   ಪರಿಚಯಸ್ಥರೊಬ್ಬರು   ಹೇರ್ ಆಯಿಲ್ ತಯಾರಿಸುವ 150 ವರ್ಷಗಳ ಹಳೆಯ ವಿಧಾನವನ್ನು ತಿಳಿಸಿಕೊಟ್ಟರು. ಮಣಿ ಅವರು ಹಲವು  ಪದಾರ್ಥಗಳನ್ನು ಒಟ್ಟು ಸೇರಿಸಿ ಎಣ್ಣೆಯನ್ನು ಸಿದ್ಧಪಡಿಸಿದರು.  ಒಂದು ತಿಂಗಳೊಳಗೆ, ಅವರ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಯಿತು. ವರ್ಷಗಳಲ್ಲಿ ಕೂದಲಿನ ಎಣ್ಣೆಯನ್ನು ತಯಾರಿಸಿ  ತನ್ನ ಅನೇಕ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ನೀಡಿದರು.  ಕೆಲವರು ಇದನ್ನೇ ವ್ಯಾಪಾರವನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ನಾಗಮಣಿ ತನ್ನ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಆರೈಕೆಯತ್ತ ಗಮನ ಹರಿಸಿದರು.

Tap to resize

Latest Videos

ತನ್ನ 60 ನೇ ವಯಸ್ಸಿನಲ್ಲಿ,ಗಂಡನ ಮರಣದ ಮೂರು ವರ್ಷಗಳ ನಂತರ, ರೂಟ್ಸ್ ಮತ್ತು ಶೂಟ್ಸ್ ಹೆಸರಿನ ಮೂಲಕ ಉದ್ಯಮ ಜಗತ್ತಿನಲ್ಲಿ ಸಣ್ಣ ಹೆಜ್ಜೆಯನ್ನಿಟ್ಟರು.  ಆರಂಭದಲ್ಲಿ ಬೆಂಗಳೂರಿನ ಕೆಲವು ಸಲೂನ್ ಮಾಲೀಕರು.  ನಂತರ, ಹಲಸೂರಿನಲ್ಲಿ ಅಂಬಾರ ಬೊಟಿಕ್ ನಡೆಸುತ್ತಿರುವ ಮೇರಿ, ಎ ಹಂಡ್ರೆಡ್ ಹ್ಯಾಂಡ್ಸ್ ಎಂಬ ಟ್ರಸ್ಟ್‌ಗೆ ತಮ್ಮ ಬ್ರ್ಯಾಂಡ್ ಅನ್ನು ಪರಿಚಯಿಸಿದರು.  ಟ್ರಸ್ಟ್ ನಡೆಸುವ ವಸ್ತುಪ್ರದರ್ಶನದಲ್ಲಿ ಪ್ರತಿ ವರ್ಷವೂ ವ್ಯಾಪಾರ ಮಳಿಗೆ ಹಾಕುವ ಅವಕಾಶ ಸಿಕ್ಕಿತು. ಕಣ್ಣು ರೆಪ್ಪೆ ಮಿಟುಕಿಸುವುದರೊಳಗೆ ಹೇರ್ ಆಯಿಲ್ (Hair oil) ಬಾಟಲ್ಗಳು ಮಾರಾಟವಾಗ ತೊಡಗಿದವು.

ಈ ಎಣ್ಣೆ ತಯಾರಿಕೆ ಪ್ರಕ್ರೀಯೆಯು ತುಂಬಾ ಸಮಯ   ಮತ್ತು ಶ್ರಮವನ್ನು ಬಯಸುತ್ತದೆ.  ಎಣ್ಣೆ (Oil) ತಯಾರಿಸಲು ಬಿಸಿಲು ಅತ್ಯಗತ್ಯವಾಗಿದೆ. ಹಾಗಾಗಿ ವರ್ಷವಿಡಿ ಎಣ್ಣೆ ತಯಾರಿಸುವುದಿಲ್ಲ. ವಿವಿಧ ಪದಾರ್ಥಗಳನ್ನು ಸಂಗ್ರಹಿಸಿ, ಎಣ್ಣೆಯನ್ನು ಬಾಟಲಿಗೆ ತುಂಬಿಸುವವರೆಗೂ ಯಾವುದೇ ಯಂತ್ರವನ್ನು ಬಳಸದೇ, ಎಲ್ಲವು ಮಾನವ ಶ್ರಮದಿಂದ ಆಗುತ್ತಿದ್ದು, ಮಗಳು ಅಚಲ ಮಣಿಯವರ ಬೆಂಬಲಕ್ಕೆ ನಿಂತಿದ್ದಾರೆ. ಇದೊಂದು ಸಂಪೂರ್ಣ ಸ್ವದೇಶಿ ಉತ್ಪನ್ನವಾಗಿದೆ.

ಒಂದು ಬ್ಯಾಚ್‌ನ ಎಲ್ಲಾ ಬಾಟಲಿಗಳನ್ನು ಮಣಿ ಅವರು  ಸ್ವತಃ  ಪರಿಶೀಲಿಸುತ್ತಾರೆ. ಎಣ್ಣೆಯ ಬಣ್ಣದಲ್ಲಿ ಮಂದತೆ ಅಥವಾ ವಾಸನೆಯ ಬದಲಾವಣೆ ಕಂಡುಬಂದರೆ ಅದನ್ನು ತಿರಸ್ಕರಿಸುತ್ತಾರೆ. ಉತ್ಪನ್ನದ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. “ನಮ್ಮ ಗ್ರಾಹಕರೆಲ್ಲರೂ ಬೆಂಗಳೂರಿನ ಮತ್ತು ಇತರ ಭಾಗದ ಮಹಿಳೆಯರು.  ಅವರಲ್ಲಿ ಕೆಲವರು ಬಾಟಲಿಗಳನ್ನು ಮನೆಗೆ ಮತ್ತು ವಿದೇಶಗಳಿಗೆ ಕೊಂಡೊಯ್ಯುತ್ತಾರೆ.  ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತೈಲವನ್ನು ಶಿಫಾರಸು ಮಾಡುತ್ತಾರೆ, ”ಎಂದು ಅಚಲಾ ಹೇಳುತ್ತಾರೆ.

300 ಮಿ.ಲೀ  ಎಣ್ಣೆಯ ಬಾಟಲಿಗೆ 600 ರೂ.ವರೆಗೆ ಬೆಲೆ ಇದೆ. ಕಚ್ಚಾವಸ್ತುಗಳ ಸಂಗ್ರಹ ಪ್ರಕ್ರಿಯೆ ಮತ್ತು ಬೆಲೆ ಈ ದರಕ್ಕೆ ಕಾರಣವಾಗಿದೆ.  “ಆದಾಗ್ಯೂ, ನಾವು ಇದರಿಂದ ದೊಡ್ಡ ಲಾಭವನ್ನು ಗಳಿಸುವುದಿಲ್ಲ.  ನಾವು ಸಣ್ಣ ಪ್ರಮಾಣದಲ್ಲಿ ಮಾಡುತ್ತಿದ್ದೇವೆ.  ಇದು ನನ್ನ ತಾಯಿಗೆ ಹವ್ಯಾಸವಾಗಿ ಪ್ರಾರಂಭವಾಯಿತು. ಈ ಪ್ರಾಚೀನ ವಿಧಾನವನ್ನು ಸಂರಕ್ಷಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಆಸಕ್ತಿಯಿಂದಾಗಿ ಮಾಡುತ್ತಿದ್ದೇವೆ  ”ಎಂದು ಅವರು ಹೇಳುತ್ತಾರೆ.

ಮಣಿ ಅವರಿಗೆ ವಯಸ್ಸಾದ ಕಾರಣ ಉದ್ಯಮವನ್ನು  ಹೆಚ್ಚು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಮಗಳು ಅಚಲ ಬೇರೆ ಕೆಲಸದಲ್ಲಿ ನಿರತಳಾಗಿದ್ದಾಳೆ. ಕಚ್ಚಾವಸ್ತುಗಳ ಮೂಲ ಹುಡುಕಲು  ಮತ್ತು ಉತ್ಪನ್ನವನ್ನು ಲೇಬಲ್ ಮಾಡಲು ಅವರು  ಸಾಕಷ್ಟು ಶ್ರಮ ಪಟ್ಟಿದ್ದಾರೆ.  ಆದ್ದರಿಂದ  ಮುಂದುವರಿಯಲು ಇಷ್ಟಪಡುತ್ತಾರೆ. ವ್ಯಾಪಾರದ (Trade) ಹಿನ್ನೆಲೆಯ ಕುಟುಂಬದಿಂದ ಬಂದಿಲ್ಲದ ಕಾರಣ ಮಿತಿಗಳಿವೆ.  ಮುಂಬರುವ ಪೀಳಿಗೆಯೊಂದಿಗೆ ಈ ಪಾಕವಿಧಾನವನ್ನು ಹಂಚಿಕೊಳ್ಳುವುದು ಈಗ ಅವರ ಪ್ರಮುಖ ಉದ್ದೇಶವಾಗಿದೆ.  

ಮಾರ್ಕೆಟಿಂಗ್‌ಗೆ (Marketing) ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ ಎಂದು ಮಣಿ ಅವರು ಹೆಮ್ಮೆಯಿಂದ ಹೇಳುತ್ತಾರೆ.  ಎಲ್ಲಾ ಮಾರಾಟಗಳು ಬಾಯಿಮಾತಿನ ಮೂಲಕ ನಡೆದಿವೆ.  ಪ್ರತಿ ವರ್ಷ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.  ವರ್ಷಕ್ಕೊಮ್ಮೆ ಪ್ರಕ್ರಿಯೆ ನಡೆಯುವುದರಿಂದ ಸೀಮಿತ ಪ್ರಮಾಣದಲ್ಲಿ ಮಾತ್ರ ಉತ್ಪನ್ನವನ್ನು  ತಯಾರಿಸಲಾಗುತ್ತದೆ.

ಮಣಿ ಅವರು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗೀತ, ಕ್ರಿಕೆಟ್ ಮತ್ತು ಅಡುಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.  ಅವರು ಎರಡು ಕನ್ನಡ ಆಲ್ಬಂಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ.  “ಸಾಂಕ್ರಾಮಿಕ ರೋಗ ಹರಡುವವರೆಗೂ ನಾನು ಬೆಂಗಳೂರಿನ ಸಾಮಾಜಿಕ ಕ್ಲಬ್ ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಸಕ್ರಿಯ ಸದಸ್ಯರಾಗಿದ್ದರು.

ರಾತ್ರಿ ಮಹಿಳೆಯರು ಈ ಕಾರಣಕ್ಕೆ ಕೂದಲು ಕಟ್ಟಿ ಮಲಗ್ಬೇಕು

ಮಣಿ ಅವರಿಗೆ  ಜೀವನ ಗುಲಾಬಿಗಳ ಹಾಸಿಗೆಯಾಗಿರಲಿಲ್ಲ.  ಕೆಲವು ವರ್ಷಗಳ ಹಿಂದೆ ಹಿರಿಯ ಮಗಳನ್ನು ಕಳೆದುಕೊಂಡರು.    2003 ರಲ್ಲಿ, ಈ ಘಟನೆಯ ಮೊದಲು, ಮಣಿ  ಅವರು ಗೆಡ್ಡೆಸಮಸ್ಯೆಯ  ಕಾರಣ ಕಿಮೊಥೆರಪಿಗೆ ಒಳಗಾಗಿದ್ದರು. ತನ್ನ ಮನಸ್ಸಿನ ಮಾತನ್ನಷ್ಟೇ ಕೇಳುವ ಇವರು ಬದುಕಿನಲ್ಲಿ ಎಂದಿಗೂ ವಿಶ್ವಾಸವನ್ನು ಕಳೆದುಕೊಂಡವರಲ್ಲ.\

ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿ ಪೂರ್ತಿ ಹಾಗೇ ಬಿಡಬಹುದಾ ?

ತಾಯಿ ಮಗಳು  ತಮ್ಮ 'ಮ್ಯಾಜಿಕ್ ಆಯಿಲ್'ನ ಮುಂದಿನ ಬ್ಯಾಚ್ ಅನ್ನು ಸಿದ್ಧಪಡಿಸಲು ಸಿದ್ಧವಾಗಿದ್ದಾರೆ , ಮತ್ತೆ ಬಿಸಿಲಿನ ವಾತಾವರಣಕ್ಕಾಗಿ ಕಾಯುತ್ತಿದ್ದಾರೆ. ಏನಾನ್ನಾದರೂ ಮಾಡುವ ಛಲ ಮತ್ತು ವಿಶ್ವಾಸವಿದ್ದರೆ  ವಯಸ್ಸು ಅಡ್ಡಿಬರುವುದಿಲ್ಲ ಎಂಬುದಕ್ಕೆ ನಿದರ್ಶನವಾಗಿರುವ ನಾಗಮಣಿಯವರು (Nagamani) ಇಂದಿನ ಹೊಸ ಪೀಳಿಗೆಗೆ ಮಾದರಿಯಾಗಿದ್ದಾರೆ.

click me!