ಅಂಚೆ ಇಲಾಖೆ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷಕ್ಕೆ 14ಲಕ್ಷ ರೂ. ರಿಟರ್ನ್ಸ್!

By Suvarna NewsFirst Published Nov 4, 2022, 2:08 PM IST
Highlights

ನೀವು 60 ವರ್ಷ ಮೇಲ್ಪಟ್ಟವರಾಗಿದ್ರೆ ಅಂಚೆ ಇಲಾಖೆಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಗಳಿಸಬಹುದು. ಈ ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಹಾಗಾದ್ರೆ ಈ ಯೋಜನೆ ಎಷ್ಟು ಅವಧಿಯದ್ದಾಗಿದೆ? ಎಷ್ಟು ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ. 

Business Desk:ನಾಳೆಗಾಗಿ ಒಂದಿಷ್ಟು ಕೂಡಿಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ, ಎಲ್ಲಿ ಹೂಡಿಕೆ ಮಾಡೋದು? ಯಾವ ಯೋಜನೆಯಲ್ಲಿ ಹಣ ಹಾಕಿದ್ರೆ ಉತ್ತಮ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹೂಡಿಕೆ ಮಾಡುವಾಗ ಸುರಕ್ಷತೆ ಹಾಗೂ ಉತ್ತಮ ರಿಟರ್ನ್ ಅನ್ನು ಮೊದಲು ನೋಡುತ್ತೇವೆ. ಬಹುತೇಕರ ಹೂಡಿಕೆ ನೆಮ್ಮದಿಯ ನಿವೃತ್ತಿ ಬದುಕಿಗಾಗಿಯೇ ಇರುವ ಕಾರಣ ದೀರ್ಘಕಾಲದ ಯೋಜನೆಯಲ್ಲಿ ತೊಡಗಿಸಿ ಉತ್ತಮ ರಿಟರ್ನ್ಸ್ ಪಡೆಯೋ ಯೋಚನೆಯಿರುತ್ತದೆ. ಭಾರತದಲ್ಲಿ ಹೂಡಿಕೆ ಅಥವಾ ಉಳಿತಾಯ ಎಂದ ತಕ್ಷಣ ಬಹುತೇಕರಿಗೆ ನೆನಪಾಗೋದು ಅಂಚೆ ಕಚೇರಿ ಉಳಿತಾಯ ಯೋಜನೆಗಳು. ಇದಕ್ಕೆ ಮುಖ್ಯ ಕಾರಣ ಅಂಚೆ ಕಚೇರಿಯ ಯೋಜನೆಗಳಲ್ಲಿ ಮಾಡಿದ ಹೂಡಿಕೆ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ನೀಡಬಲ್ಲದು. ಅಂಚೆ ಇಲಾಖೆ ಅನೇಕ ವಿಧದ ಉಳಿತಾಯ ಅಥವಾ ಹೂಡಿಕೆ ಯೋಜನೆಗಳನ್ನು ಹೊಂದಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೂಡ ಅದರಲ್ಲಿ ಒಂದು. ಈ ಯೋಜನೆ ವಿಶೇಷವಾಗಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗಾಗಿಯೇ ರೂಪಿಸಲಾಗಿದೆ. ಹಾಗಾದ್ರೆ ಈ ಯೋಜನೆಯ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

ಯಾರು ಹೂಡಿಕೆ ಮಾಡಹುದು?
ಅಂಚೆ ಇಲಾಖೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಹೂಡಿಕೆ ಮಾಡಬಹುದು. ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ಮಾತ್ರ ವಯೋಮಾನ ಸಡಿಲಿಕೆ ನೀಡಲಿದ್ದು, 55 ವರ್ಷದಿಂದ 60 ವರ್ಷಗಳ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

5 ವರ್ಷಗಳಲ್ಲಿ 14ಲಕ್ಷ ರೂ. ಗಳಿಸೋದು ಹೇಗೆ?
ಅಂಚೆ ಇಲಾಖೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಬರೀ 5 ವರ್ಷಗಳಲ್ಲಿ 14ಲಕ್ಷ ರೂ. ಗಳಿಸಲು ನೀವು 10ಲಕ್ಷ ರೂ. ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ.7.6ರಷ್ಟು ಬಡ್ಡಿದರ ನೀಡಲಾಗುತ್ತದೆ. ಹೀಗಾಗಿ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ ವ್ಯಕ್ತಿಗೆ 14,28,964 ಲಕ್ಷ ರೂ. ರಿಟರ್ನ್ಸ್ ಸಿಗಲಿದೆ. 

ಕನಿಷ್ಠ ಎಷ್ಟು ಹೂಡಿಕೆ ಮಾಡಬಹುದು?
ಈ ಯೋಜನೆಯಲ್ಲಿ ಕನಿಷ್ಠ  1000 ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದು. ಗರಿಷ್ಠ 15ಲಕ್ಷ ರೂ. ಹೂಡಿಕೆ ಮಾಡಬಹುದು. ಒಂದು ವೇಳೆ ನೀವು 1ಲಕ್ಷ ರೂ.ಗಿಂತ ಕಡಿಮೆ ಮೊತ್ತ ಹೂಡಿಕೆ ಮಾಡುತ್ತಿದ್ದರೆ ನೀವು ನಗದು ರೂಪದಲ್ಲೇ ಹಣ ನೀಡಬಹುದು. ಆದರೆ, 1ಲಕ್ಷ ರೂ. ಮೀರಿದ ಮೊತ್ತವಾಗಿದ್ರೆ ನೀವು ಖಾತೆ ತೆರೆಯಲು ಚೆಕ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ. 

ಮೆಚ್ಯುರಿಟಿ ಅವಧಿ ಎಷ್ಟು?
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು. ಹೂಡಿಕೆದಾರರು ಬಯಸಿದ್ರೆ ಮತ್ತೆ ಮೂರು ವರ್ಷ ವಿಸ್ತರಿಸಲು ಅವಕಾಶವಿದೆ. 

ಒಂದಕ್ಕಿಂತ ಹೆಚ್ಚು ಖಾತೆ ತೆರೆಯಲು ಅವಕಾಶ
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಠೇವಣಿದಾರ ಒಂದೇ ಖಾತೆ ಅಥವಾ ಸಂಗಾತಿಯ ಜೊತೆಗೆ ಜಂಟಿ ಖಾತೆ ತೆರೆಯಲು ಅವಕಾಶವಿದೆ. ಜಂಟಿ ಖಾತೆ ತೆರೆಯುವ ಸಂದರ್ಭದಲ್ಲಿ ಮೊದಲ ಖಾತೆದಾರ ಹಿರಿಯ ನಾಗರಿಕನಾಗಿದ್ರೆ ಸಾಕು, ಸಂಗಾತಿ ಹಿರಿಯ ನಾಗರಿಕರು ಆಗಿರಲೇಬೇಕಾದ ಅಗತ್ಯವಿಲ್ಲ. ಜಂಟಿ ಖಾತೆಯಲ್ಲಿ ಕೂಡ ಗರಿಷ್ಠ 15ಲಕ್ಷ ರೂ. ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ತೆರೆಯಲು ಈ ಯೋಜನೆಯಲ್ಲಿ ಅವಕಾಶ ನೀಡಿದ್ದರು ಕೂಡ ಎಲ್ಲ ಖಾತೆಗಳ ಒಟ್ಟು ಬ್ಯಾಲೆನ್ಸ್ 15ಲಕ್ಷ ರೂ. ಮೀರಬಾರದು. ಈ ಯೋಜನೆಯ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ಸುಲಭವಾಗಿ ವರ್ಗಾವಣೆ ಮಾಡಬಹುದು.

ಇನ್ಮುಂದೆ ಬ್ಯಾಂಕ್ ಖಾತೆ ತೆರೆಯೋದು, ಸಿಮ್ ಕಾರ್ಡ್ ಪಡೆಯೋದು ಅಷ್ಟು ಸುಲಭವಲ್ಲ!

ಅವಧಿಗೂ ಮುನ್ನ ಮುಚ್ಚಲು ಅವಕಾಶ
ಖಾತೆ ತೆರೆದು ಒಂದು ವರ್ಷದ ಬಳಿಕ ಠೇವಣಿ ಮೊತ್ತದ ಶೇ.1.5ರಷ್ಟನ್ನು ಕಡಿತ ಮಾಡಿ ಅವಧಿಗೂ ಮುನ್ನ ಯೋಜನೆಯನ್ನು ಕ್ಲೋಸ್ ಮಾಡಲು ಅವಕಾಶ ನೀಡಲಾಗಿದೆ. ಹಾಗೆಯೇ ಎರಡು ವರ್ಷ ಮೇಲ್ಪಟ್ಟಿದ್ರೆ ಖಾತೆ ಕ್ಲೋಸ್ ಮಾಡಿದ ಬಳಿಕ ಠೇವಣಿ ಮೊತ್ತದ ಶೇ.1ರಷ್ಟನ್ನು ಕಡಿತ ಮಾಡಲಾಗುತ್ತದೆ. 
ಈ ಯೋಜನೆಯಡಿ ಠೇವಣಿಯಿಟ್ಟ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆ ಕಾಯ್ದೆ ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಪ್ರಯೋಜನ ಕ್ಲೈಮ್ ಮಾಡಲು ಅವಕಾಶವಿದೆ. 
 

click me!