ಇದು ದೇಶದ ದುಬಾರಿ ಅಪಾರ್ಟ್ ಮೆಂಟ್ ಡೀಲ್; ಮುಂಬೈಯಲ್ಲಿ 240 ಕೋಟಿ ರೂ.ಗೆ ಪೆಂಟ್ ಹೌಸ್ ಖರೀದಿಸಿದ ಉದ್ಯಮಿ

By Suvarna News  |  First Published Feb 10, 2023, 12:36 PM IST

ಮುಂಬೈ ಅಂದ್ರೆ ಉದ್ಯಮಿಗಳು, ಸೆಲೆಬ್ರಿಟಿಗಳ ನೆಚ್ಚಿನ ತಾಣ. ಇಲ್ಲಿ ಆಸ್ತಿ ಬೆಲೆ ಗಗನಕ್ಕೇರಿದ್ರು ಕೋಟ್ಯಂತರ ರೂಪಾಯಿ ನೀಡಿ ಮನೆ ಖರೀದಿಸಲು ಶ್ರೀಮಂತರು ಹಿಂದೆಮುಂದೆ ನೋಡಲ್ಲ. ಅನೇಕ ದೊಡ್ಡ ಮೊತ್ತದ ರಿಯಲ್ ಎಸ್ಟೇಟ್ ಒಪ್ಪಂದಗಳಿಗೆ ಸಾಕ್ಷಿಯಾದ ಮುಂಬೈನಲ್ಲಿ ಇತ್ತೀಚೆಗೆ ಭಾರತದಲ್ಲೇ ಅತ್ಯಂತ ದುಬಾರಿ ಬೆಲೆಯ ಅಪಾರ್ಟ್ ಮೆಂಟ್ ಡೀಲ್ ನಡೆದಿದೆ. ಉದ್ಯಮಿಯೊಬ್ಬರು 240 ಕೋಟಿ ರೂ. ನೀಡಿ ಪೆಂಟ್ ಹೌಸ್ ಖರೀದಿಸಿದ್ದಾರೆ. 


ಮುಂಬೈ (ಫೆ.10): ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಗಾಗ ದೊಡ್ಡ ಮೊತ್ತದ ಡೀಲ್ ಗಳು ಸದ್ದು ಮಾಡುತ್ತಲಿರುತ್ತವೆ. ಅಂಥದ್ದೇ ಒಂದು ದೊಡ್ಡ ಮಾರಾಟ ಮಂಬೈಯಲ್ಲಿ ಆಗಿದೆ. ಇಲ್ಲಿನ ವರ್ಲಿಯ ಐಷಾರಾಮಿ ಟವರ್ ತ್ರಿ ಸಿಕ್ಸಟಿ ವೆಸ್ಟ್ ನಲ್ಲಿ  ಪೆಂಟ್ ಹೌಸ್ ಅನ್ನು ಉದ್ಯಮಿಯೊಬ್ಬರು 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಅಪಾರ್ಟ್ ಮೆಂಟ್ ಮಾರಾಟ ಎಂದು ಕೂಡ ಹೇಳಲಾಗಿದೆ. ವೆಲ್ ಸ್ಪುನ್ ಗ್ರೂಪ್ ಮುಖ್ಯಸ್ಥ ಬಿ.ಕೆ. ಗೋಯೆಂಕ ವರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಟ್ರಿಪ್ಲೆಕ್ಸ್ ಖರೀದಿಸಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ ಈ ಪೆಂಟ್ ಹೌಸ್  ಗಂಗನಚುಂಬಿ ಕಟ್ಟಡದ ಬಿ ಟವರ್ ನ  63, 64  ಹಾಗೂ 65ನೇ ಮಹಡಿಗಳಲ್ಲಿದೆ. ಈ ಪೆಂಟ್ ಹೌಸ್ ಸುಮಾರು 30,000 ಚದರ ಅಡಿಗಳಲ್ಲಿ ಹರಡಿದೆ. ಸರ್ಕಾರದ ಸ್ಲಂ ಪುನರ್ವಸತಿ ಯೋಜನೆ ಅಡಿಯಲ್ಲಿ ಸ್ಲಂ ಕುಟುಂಬಗಳಿಗೆ ನೀಡುವ 300 ಚದರ ಅಡಿ ಉಚಿತ ಬಾಡಿಗೆ ಮನೆಯ ಗಾತ್ರಕ್ಕಿಂತ ಈ ಪೆಂಟ್ ಹೌಸ್ 100 ಪಟ್ಟು ದೊಡ್ಡದಿದೆ. ಆಸ್ತಿ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಬುಧವಾರ ನೋಂದಣಿ ನಡೆದಿದ್ದು, ಖರೀದಿದಾರರು ಪೆಂಟ್ ಹೌಸ್ ನಲ್ಲಿ ನೆಲೆಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಇದು ಭಾರತದಲ್ಲಿ ಈ ತನಕ ಮಾರಾಟವಾದ ಅತ್ಯಂತ ದುಬಾರಿ ಅಪಾರ್ಟ್ಮೆಂಟ್ ಆಗಿದೆ. ಮುಂದಿನ ಎರಡು ತಿಂಗಳಲ್ಲಿ ಅಲ್ಟ್ರಾ -ಲಕ್ಸುರಿ ವಲಯದಲ್ಲಿ ಇನ್ನೂ ಹೆಚ್ಚಿನ ಮಾರಾಟವನ್ನು ನಾವು ನಿರೀಕ್ಷಿಸಿದ್ದೇವೆ. ಏಕೆಂದರೆ 2023ರ ಏಪ್ರಿಲ್ ಬಳಿಕ ಸೆಕ್ಷನ್ 54ರ ಅಡಿಯಲ್ಲಿ ಬಂಡವಾಳ ಗಳಿಕೆ (capital gains) ಹೂಡಿಕೆ ಮಿತಿಯನ್ನು 10 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಹೀಗಾಗಿ 10 ಕೋಟಿ ರೂ. ಮೇಲ್ಪಟ್ಟ ಯಾವುದೇ ಬಂಡವಾಳ ಗಳಿಕೆಗೆ ತೆರಿಗೆ ವಿಧಿಸಲಾಗುತ್ತದೆ' ಎಂದು ರಿಯಲ್ ಎಸ್ಟೇಟ್ ರೇಟಿಂಗ್ ಹಾಗೂ ರಿಸರ್ಚ್ ಸಂಸ್ಥೆ ಲಿಯಾಸೆಸ್ ಫೋರಸ್ ಸಂಸ್ಥಾಪಕ ಹಾಗೂ ಎಂಡಿ ಪಂಕಜ್ ಕಪೂರ್ ತಿಳಿಸಿದ್ದಾರೆ. 

Tap to resize

Latest Videos

ಜನಪ್ರಿಯ ನಟಿಗೆ 263 ಕೋಟಿ ರೂ. ಮೊತ್ತದ ಅಕ್ರಮ ಹಣ ವರ್ಗಾವಣೆ ಕೇಸ್ ತನಿಖೆಯ ಬಿಸಿ

ಇನ್ನು ಇದೇ ಟವರ್ ಗೆ ಹೊಂದಿಕೊಂಡಿರುವ ವಿಂಗ್ ನ ಇನ್ನೊಂದು ಪೆಂಟ್ ಹೌಸ್ ಕೂಡ 240 ಕೋಟಿ ರೂ.ಗೆ ಮಾರಾಟವಾಗಿದೆ. ಇದನ್ನು ಬಿಲ್ಡರ್ ವಿಕಾಸ್ ಒಬೆರಾಯ್ ಖರೀದಿಸಿದ್ದಾರೆ. ಈ ಐಷರಾಮಿ ಆಸ್ತಿಯನ್ನು ಸ್ವತಃ  ಒಬೆರಾಯ್ ಅವರೇ ಉದ್ಯಮಿ/ಬಿಲ್ಡರ್ ಸುಧಾಕರ್ ಶೆಟ್ಟಿ ಜೊತೆಗೂಡಿ ಅಭಿವೃದ್ಧಿಪಡಿಸಿದ್ದಾರೆ. ಒಬೆರಾಯ್ ತನ್ನ ಸ್ವಂತ ಪ್ರಾಜೆಕ್ಟ್ ನಲ್ಲಿ ಅಭಿವೃದ್ಧಿಪಡಿಸಿದ ಪೆಂಟ್ ಹೌಸ್ ಖರೀದಿಸಿದ್ದಾರೆ. ಇದನ್ನು ಅವರು ತಮ್ಮ ಕಂಪನಿ ಆರ್ ಎಸ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ನಿಂದ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಒಬೆರಾಯ್ ಅವರ ಒಬೆರಾಯ್ ರಿಯಲ್ಟಿ ತನ್ನ ಸಹಭಾಗಿತ್ವದ ಸಂಸ್ಥೆ ಒಯಸಿಸ್ ರಿಯಲ್ಟಿ ಅನ್ನು ಖರೀದಿಸಿದೆ. ಈ ಪೆಂಟ್ ಹೌಸ್ ಪ್ರಾಜೆಕ್ಟ್ ಅನ್ನು ಓಯಸಿಸ್ ರಿಯಲ್ಟಿ ಅಭಿವೃದ್ಧಿಪಡಿಸಿತ್ತು. ಓಯಸಿಸ್ ರಿಯಲ್ಟಿ ಒಬೆರಾಯ್ ರಿಯಾಲ್ಟಿ ಹಾಗೂ ಸುಧಾಕರ್ ಶೆಟ್ಟಿ ಅವರ ಸಹನಾ ಸಂಸ್ಥೆಯ ಜಂಟಿ ಸಹಭಾಗಿತ್ವದ ಸಂಸ್ಥೆಯಾಗಿದೆ. ತ್ರಿ ಸಿಕ್ಸಟಿ ವೆಸ್ಟ್ ಅನ್ನು 4,000 ಕೋಟಿ ರೂ.ಗೆ ಖರೀದಿಸಿರೋದಾಗಿ ಒಬೆರಾಯ್ ರಿಯಲ್ಟಿ ಕಳೆದ ವಾರ  ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ (BSE and NSE) ನೀಡಿದ ಮಾಹಿತಿಯಲ್ಲಿ ತಿಳಿಸಿದೆ. 63 ಅಪಾರ್ಟ್ ಮೆಂಟ್ ಗಳನ್ನು ಹೊಂದಿರುವ ಒಟ್ಟು 5.25 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗವನ್ನು ಖರೀದಿಸಿರೋದಾಗಿ ಒಬೆರಾಯ್ ರಿಯಲ್ಟಿ ತಿಳಿಸಿದೆ. 

ಏರೋ ಇಂಡಿಯಾ: ರಕ್ಷಣಾ ಕಂಪನಿ ಸಿಇಒಗಳ ಜೊತೆ 13ಕ್ಕೆ ಸಚಿವರ ಸಭೆ

ಮುಂಬೈಯ ದುಬಾರಿ ರಿಯಲ್ ಎಸ್ಟೇಟ್ ಮಾರಾಟಗಳು 
ಮುಂಬೈನಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದ ಅತೀದೊಡ್ಡ ಮೊತ್ತದ ಅಪಾರ್ಟ್ ಮೆಂಟ್ ಡೀಲ್ ಗಳ ಮಾಹಿತಿ ಇಲ್ಲಿದೆ.
*2015ರಲ್ಲಿ ಲೋಧ ಅಲ್ಟಮೌಂಟ್ ನಲ್ಲಿ 10,000 ಚದರ ಅಡಿ ವಿಸ್ತೀರ್ಣದ 160 ಕೋಟಿ ರೂ. ಮೌಲ್ಯದ ಅಪಾರ್ಟ್ ಮೆಂಟ್ ಅನ್ನು ಜಿಂದಾಲ್ ಡ್ರಗ್ಸ್ ಸಂಸ್ಥೆಯಮಾಲೀಕತ್ವ ಹೊಂದಿರುವ ಜಿಂದಾಲ್ ಕುಟುಂಬ ಖರೀದಿಸಿತ್ತು.
*ಬಾಂದ್ರಾದ ಸಾಗರ್ ಸಂಗಮ್ ಕಟ್ಟಡದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಅನ್ನು 2022ರಲ್ಲಿ ನಟ ರಣ್ ವೀರ್ ಸಿಂಗ್ ಖರೀದಿಸಿದ್ದರು.
*ಪ್ರಭಾದೇವಿಯಲ್ಲಿ  ಐದು ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು 113 ಕೋಟಿ ರೂ.ಗೆ 2022ರ ಡಿಸೆಂಬರ್ ನಲ್ಲಿ ದೇವವ್ರತ ಡೆವಲಪರ್ಸ್ ಖರೀದಿಸಿತ್ತು. 
 

click me!