ABG Shipyard Fraud Case: SBI ಸೇರಿದಂತೆ 28 ಬ್ಯಾಂಕ್‌ಗಳಿಗೆ ₹23000 ಕೋಟಿ ಮಹಾವಂಚನೆ!

Published : Feb 13, 2022, 02:10 PM IST
ABG Shipyard Fraud Case: SBI ಸೇರಿದಂತೆ 28 ಬ್ಯಾಂಕ್‌ಗಳಿಗೆ ₹23000 ಕೋಟಿ ಮಹಾವಂಚನೆ!

ಸಾರಾಂಶ

*ಎಸ್‌ಬಿಐ ಸೇರಿದಂತೆ 28 ಬ್ಯಾಂಕ್‌ಗಳಿಗೆ ಮೋಸ *ಎಬಿಜಿ ಶಿಪ್‌ಯಾರ್ಡ್‌ ವಿರುದ್ಧ ಸಿಬಿಐ ಪ್ರಕರಣ *ದೇಶದ 13 ನಗರಗಳ ಕಚೇರಿ, ಮನೆಗಳ ಮೇಲೆ ದಾಳಿ

ನವದೆಹಲಿ (ಫೆ. 13) : ದೇಶದ ಇತಿಹಾಸದಲ್ಲಿ ಅತ್ಯಂತ ಬೃಹತ್‌ ಪ್ರಮಾಣದ ಬ್ಯಾಂಕ್‌ ವಂಚನೆಯನ್ನು ಪ್ರಕರಣವನ್ನು ಬಯಲಿಗೆಳೆದಿರುವ ಸಿಬಿಐ (CBI), ಮುಂಬೈ ಮೂಲದ ಎಬಿಜಿ ಶಿಪ್‌ಯಾರ್ಡ್‌ ಲಿ. (ABG Shipyard) ವಿರುದ್ಧ 22842 ಕೋಟಿ ರು. ವಂಚನೆ ಪ್ರಕರಣ ದಾಖಲಿಸಿಕೊಂಡಿದೆ. ಎಸ್‌ಬಿಐ, ಐಸಿಐಸಿಐ ಸೇರಿದಂತೆ 28 ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪದ ಮೇಲೆ ಎಬಿಜಿ ಶಿಪ್‌ಯಾರ್ಡ್‌ ಲಿ. ಮತ್ತು ಅದರ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಿಶಿ ಕಮಲೇಶ್‌ ಅಗರ್‌ವಾಲ್‌ ಸೇರಿದಂತೆ ಇತರರ ವಿರುದ್ಧ ಸಿಬಿಐ ಕೇಸ್‌ ದಾಖಲಿಸಿಕೊಂಡಿದೆ.

ಜೊತೆಗೆ ಸಂಸ್ಥೆಯ ಹಿಂದಿನ ಸಿಇಒ ಸಂತಾನಂ ಮುತ್ತುಸ್ವಾಮಿ, ನಿರ್ದೇಶಕರಾದ ಅಶ್ವಿನಿ ಕುಮಾರ್‌, ಸುಶೀಲ್‌ ಕುಮಾರ್‌ ಅಗರ್‌ವಾಲ್‌, ರವಿ ವಿಮಲ್‌ ನೆವೇಟಿಯಾ, ಎಬಿಜಿ ಅಂತಾರಾಷ್ಟ್ರೀಯ ಪಿವಿಟಿ ಲಿ. ವಿರುದ್ಧ ನಂಬಿಕೆ ದ್ರೋಹ, ಪಿತೂರಿ, ವಂಚನೆ ಮತ್ತು ತಮ್ಮ ಅಧಿಕೃತ ಸ್ಥಾನಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. 

ಇದನ್ನೂ ಓದಿ: Cricket Match-Fixing ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಶನಿವಾರ ದೆಹಲಿ, ಮುಂಬೈ, ಪುಣೆ ಸೇರಿ ದೇಶದ 13 ನಗರಗಳ ವಿವಿಧ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಎಬಿಜಿ ಶಿಪ್‌ಯಾರ್ಡ್‌ ಲಿ. ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಅದು ಹಡಗು ನಿರ್ಮಾಣ ಮತ್ತು ದುರಸ್ತಿ ಮಾಡುತ್ತದೆ. ಗುಜರಾತ್‌ನ ದಹೇಜ್‌ ಮತ್ತು ಸೂರತ್‌ನಲ್ಲಿ ಈ ಸಂಸ್ಥೆಯ ಹಡಗು ನಿರ್ಮಾಣ ಘಟಕಗಳಿವೆ. ಸಂಸ್ಥೆ ಇದುವರೆಗೂ 165ಕ್ಕೂ ಹೆಚ್ಚು ಹಡಗು, ಬೋಟ್‌ಗಳನ್ನು ನಿರ್ಮಿಸಿದೆ.

ಏನಿದು ಪ್ರಕರಣ?: ಎಬಿಜಿ ಶಿಪ್‌ಯಾರ್ಡ್‌ ಸಂಸ್ಥೆ 28 ಬ್ಯಾಂಕ್‌ಗಳಿಂದ ನಾನಾ ಯೋಜನೆಗಳ ಹೆಸರಿನಲ್ಲಿ 22842 ಕೋಟಿ ರು. ಸಾಲ ಪಡೆದುಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಸಾಲ, ಬಡ್ಡಿ ಮರು ಪಾವತಿ ಮಾಡದೇ ವಂಚಿಸಿತ್ತು. ಈ ಹಿನ್ನೆಲೆಯಲ್ಲಿ 2016ರಲ್ಲಿ ಈ ಬ್ಯಾಂಕ್‌ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಮತ್ತು 2019ರಲ್ಲಿ ಇದೊಂದು ವಂಚನೆ ಪ್ರಕರಣ ಎಂದು ಬ್ಯಾಂಕ್‌ಗಳು ಘೋಷಿಸಿದ್ದವು. 

ಇಂಥ ಘೋಷಣೆ ಬೆನ್ನಲ್ಲೇ 2019ರಲ್ಲಿ ಎಬಿಜಿ ವಿರುದ್ಧ ಎಸ್‌ಬಿಐ, ಸಿಬಿಐ ಬಳಿ ವಂಚನೆಯ ದೂರು ದಾಖಲಿಸಿತ್ತು. ಈ ದೂರನ್ನು ಆಧರಿಸಿ ಸಿಬಿಐ, ಅರ್ನೆಸ್ಟ್‌ ಆ್ಯಂಡ್‌ ಯಂಗ್‌ ಸಂಸ್ಥೆಯ ಮೂಲಕ ಎಬಿಜಿ ಕಂಪನಿಯ 2012-17ರ ಅವಧಿ ಲೆಕ್ಕಪತ್ರಗಳನ್ನು ಪರಿಶೋಧನೆಗೆ ಒಳಪಡಿಸಿತ್ತು.

ಇದನ್ನೂ ಓದಿ: Bengaluru Crime: ಮಿಲಿಟರಿಯಲ್ಲಿ ಕೆಲಸದಾಸೆ ತೋರಿಸಿ ವಂಚನೆ: ನಕಲಿ ಸೇನಾಧಿಕಾರಿ ಬಂಧನ

ಈ ವೇಳೆ ಎಬಿಜಿ ಕಂಪನಿಯ ಹಲವು ಹಿರಿಯ ಅಧಿಕಾರಿಗಳು, ಬ್ಯಾಂಕ್‌ನಿಂದ ಪಡೆದ ಸಾಲವನ್ನು ಉದ್ದೇಶಿತ ಕೆಲಸದ ಬದಲು ಅನ್ಯ ಕಾರಣಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದು, ಅಕ್ರಮ ಎಸಗಿರುವುದು, ವಿಶ್ವಾಸ ದ್ರೋಹ ಎಸಗಿರುವುದು ಪತ್ತೆಯಾಗಿದೆ. ಈ ಮಾಹಿತಿಯನ್ನು ಆಧರಿಸಿ ಇದೀಗ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಯಾವ ಬ್ಯಾಂಕ್‌ಗೆ ಎಷ್ಟುವಂಚನೆ?: ಎಸ್‌ಬಿಐಗೆ 2925 ಕೋಟಿ ರು., 7089 ಕೋಟಿ ರು. ಐಸಿಐಸಿಐ ಬ್ಯಾಂಕ್‌ಗೆ, ಐಡಿಬಿಐ ಬ್ಯಾಂಕ್‌ಗೆ 3634 ಕೋಟಿ ರು., ಬ್ಯಾಂಕ್‌ ಆಫ್‌ ಬರೋಡಾಕ್ಕೆ 1614 ಕೋಟಿ ರು., ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗೆ 1228 ಕೋಟಿ ರು. ಸೇರಿದಂತೆ ಒಟ್ಟಾರೆ 28 ಬ್ಯಾಂಕ್‌ಗಳಿಗೆ ಎಬಿಜಿ ಶಿಪ್‌ಯಾರ್ಡ್‌ ಸಂಸ್ಥೆ 22,842 ಕೋಟಿ ರು. ವಂಚನೆ ಮಾಡಿದೆ ಎಂಬುದು ಆರೋಪ.

ಬ್ಯಾಂಕಿಂಗ್‌ ವಂಚನೆಗಳ ಪಟ್ಟಿ

2016​= ಎಸ್‌ಬಿಐ ಸೇರಿದಂತೆ 13 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಮದ್ಯ ದೊರೆ ವಿಜಯ್‌ ಮಲ್ಯರಿಂದ 9432 ಕೋಟಿ ರು. ವಂಚನೆ

2018= ವಜ್ರೋದ್ಯಮಿಗಳಾದ ನೀರವ್‌ ಮೋದಿ, ಅವರ ಸಂಬಂಧಿ ಮೆಹುಲ್‌ ಚೋಕ್ಸಿಯಿಂದ ಪಿಎನ್‌ಬಿಗೆ 13,800 ಕೋಟಿ ರು.

2018= ರೋಟೊಮ್ಯಾಕ್‌ ಕಂಪನಿಯ ಪ್ರವರ್ತಕ ವಿಕ್ರಂ ಕೊಠಾರಿ ಮತ್ತು ಆತನ ಪುತ್ರ ರಾಹುಲ್‌ ಕೊಠಾರಿಯಿಂದ 7 ಬ್ಯಾಂಕ್‌ಗಳಿಗೆ 3700 ಕೋಟಿ ರು.

2018= ಚೆನ್ನೈ ಮೂಲದ ಕಾನಿಷ್‌್ಕ ಗೋಲ್ಡ್‌ ಪ್ರೈ.ಲಿ.ನಿಂದ ಎಸ್‌ಬಿಐ ಸೇರಿ 14 ಬ್ಯಾಂಕ್‌ಗಳಿಗೆ 825 ಕೋಟಿ ರು. ವಂಚನೆ

2019= ಕೋಲ್ಕತಾದ ಆರ್‌.ಪಿ ಇಸ್ಫೋ ಸಿಸ್ಟಮ್‌ನಿಂದ 17 ಬ್ಯಾಂಕ್‌ಗಳಿಗೆ 515 ಕೋಟಿ ರು. ಸಾಲದ ವಂಚನೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!