ಬ್ಯಾಂಕ್ ಎಫ್ ಡಿಗಳು ನಿಗದಿತ ಅವಧಿಯದಾಗಿರುತ್ತವೆ. ಹೀಗಾಗಿ ಅವಧಿಗೂ ಮುನ್ನ ಎಫ್ ಡಿಯಲ್ಲಿನ ಹಣ ವಿತ್ ಡ್ರಾ ಮಾಡಲು ಅವಕಾಶವಿರೋದಿಲ್ಲ. ಆದರೆ, ಈಗ ಈ ನಿಯಮದಲ್ಲಿ ಆರ್ ಬಿಐ ಬದಲಾವಣೆ ಮಾಡಿದೆ.
ನವದೆಹಲಿ (ಅ.27): ನೀವು ಬ್ಯಾಂಕ್ ಸ್ಥಿರ ಠೇವಣಿ (ಎಫ್ ಡಿ) ಹೊಂದಿದ್ದೀರಾ? ಹಾಗಾದ್ರೆ 1 ಕೋಟಿ ರೂ. ತನಕದ ಮೊತ್ತವನ್ನು ಸ್ಥಿರ ಠೇವಣಿಯಿಂದ (ಎಫ್ ಡಿ) ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಈಗ ಅವಕಾಶ ನೀಡಲಾಗಿದೆ. ಬ್ಯಾಂಕ್ ಗಳಲ್ಲಿ ನಾನ್ ಕಾಲೇಬಲ್ ಟರ್ಮ್ ಡೆಫಾಸಿಟ್ ಗಳ ಕನಿಷ್ಠ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಸಕ್ತವಿರುವ 15ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಏರಿಕೆ ಮಾಡಿದೆ. ಈ ಬದಲಾವಣೆಯಿಂದ ಎಫ್ ಡಿಯಲ್ಲಿನ ಒಂದು ಕೋಟಿ ರೂ. ಮೊತ್ತದ ತನಕದ ಹಣವನ್ನು ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಎಲ್ಲ ಗ್ರಾಹಕರಿಗೂ ಅವಕಾಶ ನೀಡಲಾಗಿದೆ. ನಾನ್ ಕಾಲೇಬಲ್ ಎಫ್ ಡಿಗಳು ಟರ್ಮ್ ಡೆಫಾಸಿಟ್ ಆಗಿದ್ದು, ಇವುಗಳ ಅವಧಿ ಪೂರ್ಣಗೊಳ್ಳದೆ ಹಣ ವಿತ್ ಡ್ರಾ ಮಾಡಲು ಅವಕಾಶವಿರಲಿಲ್ಲ. ಇಂಥ ಎಫ್ ಡಿಗಳಲ್ಲಿ ನೀವು ಒಮ್ಮೆ ಹಣ ಹೂಡಿಕೆ ಮಾಡಿದರೆ ಎಫ್ ಡಿ ಮೆಚ್ಯೂರ್ ಆಗುವ ತನಕ ಆ ಹಣವನ್ನು ಮುಟ್ಟುವಂತಿಲ್ಲ. ಆದರೆ, ಆರ್ ಬಿಐ ಇತ್ತೀಚಿನ ಸುತ್ತೋಲೆಯಲ್ಲಿ ಅವಧಿಗೂ ಮುನ್ನ ವಿತ್ ಡ್ರಾಗೆ ಅವಕಾಶ ನೀಡಲಾಗಿದೆ.
ಈ ಬದಲಾವಣೆ ಅನಿವಾಸಿ ರುಪಿ ಠೇವಣಿ (ಎನ್ ಆರ್ ಇ) ಹಾಗೂ ಸಾಮಾನ್ಯ ಅನಿವಾಸಿ (ಎನ್ ಆರ್ ಒ) ಠೇವಣಿಗಳಿಗೂ ಅನ್ವಯಿಸುತ್ತದೆ. ಬ್ಯಾಂಕ್ ಗಳಿಗೆ ಆರ್ ಬಿಐ ನೀಡಿರುವ ಈ ಸೂಚನೆ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಸಾಲ ಪಡೆದವರಿಗೆ ಬೆಳಗೆ 8ಕ್ಕೆ ಮೊದಲ ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್‌ಬಿಐ
1 ಕೋಟಿ ರೂ. ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ಎಲ್ಲ ದೇಶೀಯ ಟರ್ಮ್ ಡೆಫಾಸಿಟ್ ಗಳಿಗೆ ಅವಧಿಪೂರ್ವ ವಿತ್ ಡ್ರಾ ಸೌಲಭ್ಯವನ್ನು ಆರ್ ಬಿಐ ಕಲ್ಪಿಸಿದೆ. ಇನ್ನು ಈ ಸುತ್ತೋಲೆ ಎಲ್ಲ ವಾಣಿಜ್ಯ ಬ್ಯಾಂಕ್ ಗಳು ಹಾಗೂ ಸಹಕಾರಿ ಬ್ಯಾಂಕ್ ಗಳಿಗೆ ಅನ್ವಯಿಸಲಿವೆ.
ಸಾಮಾನ್ಯವಾಗಿ ನಿರ್ದಿಷ್ಟ ಸಮಯಾವಧಿಗೆ ಎಫ್ ಡಿಗೆ ಹೋಲಿಸಿದರೆ ನಾನ್ ಕಾಲೇಬಲ್ ಎಫ್ ಡಿಗಳಿಗೆ ಬ್ಯಾಂಕ್ ಗಳು ಸ್ವಲ್ಪ ಅಧಿಕ ಬಡ್ಡಿದರ ನೀಡುತ್ತವೆ. ಏಕೆಂದರೆ ನಾನ್ ಕಾಲೇಬಲ್ ಎಫ್ ಡಿಗಳು ನಿಗದಿತ ಅವಧಿಗೆ ಲಾಕ್ ಆಗಿರುವ ಕಾರಣ ಅಧಿಕ ಬಡ್ಡಿ ನೀಡಲಾಗುತ್ತದೆ. ಉದಾಹರಣೆಗೆ ಎಸ್ ಬಿಐ ಒಂದು ವರ್ಷಗಳ ಅವಧಿಯ ನಾನ್ ಕಾಲೇಬಲ್ ಸರ್ವೋತ್ತಮ್ ಎಫ್ ಡಿಗೆ ಶೇ.7.10ರಷ್ಟು ಬಡ್ಡಿ ನೀಡುತ್ತದೆ. ಇನ್ನು ಎರಡು ವರ್ಷಗಳ ಅವಧಿಯ ನಾನ್ ಕಾಲೇಬಲ್ ಎಫ್ ಡಿಗೆ ಶೇ.7.40ರಷ್ಟು ಬಡ್ಡಿದರವಿದೆ. ಹಾಗೆಯೇ ಒಂದು ವರ್ಷದ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್ ಡಿಗಳಿಗೆ ಶೇ.6.8 ಬಡ್ಡಿದರ ನೀಡಲಾಗುತ್ತಿದೆ. ಇನ್ನೊಂದೆಡೆ ಪ್ರೀಮೆಚ್ಯೂರ್ ವಿತ್ ಡ್ರಾ ಆಯ್ಕೆ ಹೊಂದಿರುವ ಎಫ್ ಡಿಗಳಿಗೆ ಶೇ.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು ಬ್ಯಾಂಕ್ ಆಫ್ ಬರೋಡಾ 2 ಕೋಟಿ ರೂ. ಕೆಳಗಿನ ನಾನ್ ಕಾಲೇಬಲ್ ಎಫ್ ಡಿಗೆ ಶೇ. 0.25 ಹೆಚ್ಚುವರಿ ಬಡ್ಡಿದರ ನೀಡುತ್ತಿದೆ. 2 ಕೋಟಿ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಎಫ್ ಡಿಗಳಿಗೆ ಶೇ.0.10ರಷ್ಟು ಹೆಚ್ಚುವರಿ ಬಡ್ಡಿ ನೀಡುತ್ತಿದೆ.
Financial Tips: ಆರ್ಥಿಕ ಸ್ವಾತಂತ್ರ್ಯ ನಿಮ್ಮದಾಗಬೇಕೆ? ಹಾಗಿದ್ರೆ ಈ ಅಭ್ಯಾಸಕ್ಕೆ ಬೈ ಹೇಳ್ಬಿಡಿ
ಈ ಬದಲಾವಣೆ ವೈಯಕ್ತಿಕ ಹೂಡಿಕೆದಾರರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಏಕೆಂದರೆ ಈಗ ಅವರು ನಾನ್ ಕಾಲೇಬಲ್ ಎಫ್ ಡಿಯಿಂದ ಒಂದು ಕೋಟಿ ರೂ. ತನಕದ ಮೊತ್ತವನ್ನು ಅವಧಿಗೂ ಮುನ್ನ ವಿತ್ ಡ್ರಾ ಮಾಡಬಹುದು. ಇದು ಎನ್ ಆರ್ ಇ/ಎನ್ ಆರ್ ಒ ಠೇವಣಿಗಳಿಗೂ ಅನ್ವಯಿಸುತ್ತದೆ. ಹಾಗೆಯೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಕೂಡ ದೊಡ್ಡ ಮೊತ್ತದ ಠೇವಣಿ ಮಿತಿಯನ್ನು ಆರ್ ಬಿಐ 15ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಳ ಮಾಡಿದೆ.