ಉಬರ್ ಟ್ಯಾಕ್ಸಿಗೆ ಕಾದ ಮುಖೇಶ್ ಅಂಬಾನಿ,ಆನಂದ್ ಮಹೀಂದ್ರಾ;ಆಗ ಸುನೀತಾ ವಿಲಿಯಮ್ಸ್ ಜೊತೆ ತೆಗೆದ ಸೆಲ್ಫಿ ವೈರಲ್

By Suvarna NewsFirst Published Jun 26, 2023, 12:10 PM IST
Highlights

ಸಾಮಾನ್ಯವಾಗಿ ಮಧ್ಯಮ ವರ್ಗದ ಜನರು ಉಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸೋದು ಸಾಮಾನ್ಯ.ಹೀಗಿರುವಾಗ ಭಾರತದ ಶ್ರೀಮಂತ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಆನಂದ್ ಮಹೀಂದ್ರಾ ಅವರನ್ನು ಉಬರ್ ನಲ್ಲಿ ಪ್ರಯಾಣಿಸುತ್ತಿರೋದನ್ನು ಊಹಿಸಿಕೊಳ್ಳಲು ಸಾಧ್ಯವೇ? ಆದರೆ, ಇವರಿಬ್ಬರೂ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದಾರೆ. ಉಬರ್ ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಉದ್ಯಮಿ ವೃಂದಾ ಕಪೂರ್ ಹಾಗೂ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಜೊತೆಗೆ ತೆಗೆದ ಸೆಲ್ಫಿಯನ್ನು ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು,ಇದರ ಹಿಂದಿನ ಕಥೆಯನ್ನು ಕೂಡ ವಿವರಿಸಿದ್ದಾರೆ. 
 

ಮುಂಬೈ (ಜೂ.26): ಭಾರತದ ಶ್ರೀಮಂತ ಉದ್ಯಮಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಸಾಮಾನ್ಯರಂತೆ ಉಬರ್ ನಲ್ಲಿ ಪ್ರಯಾಣ ಮಾಡೋದನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ, ಇವರಿಬ್ಬರ ಬಳಿ ಕೋಟಿಗಟ್ಟಲೆ ಮೌಲ್ಯದ ಐಷಾರಾಮಿ ಕಾರುಗಳಿರುವಾಗ ಇವರು ಉಬರ್ ಟ್ಯಾಕ್ಸಿ ಮೊರೆ ಹೋಗೋದನ್ನು ಊಹಿಸುವುದು ಕಷ್ಟವೇ ಸರಿ. ಆದರೆ, ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಇವರಿಬ್ಬರು ಮಾತ್ರ ಇದನ್ನೇ ಮಾಡಿದ್ದಾರೆ. ಹೌದು, ಇವರಿಬ್ಬರೂ ಉಬರ್ ಟ್ಯಾಕ್ಸಿಯಲ್ಲೇ ಪ್ರಯಾಣಿಸಿದ್ದಾರೆ. ಮುಖೇಶ್ ಅಂಬಾನಿ, ಥರ್ಡಿ ಟೆಕ್ ಸಹಸಂಸ್ಥಾಪಕಿ ವೃಂದಾ ಕಪೂರ್ ಹಾಗೂ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಜೊತೆಗೆ ಉಬರ್ ಗಾಗಿ ಕಾಯುತ್ತಿರುವ  ಸೆಲ್ಫಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಈ ಫೋಟೋದ ಹಿಂದಿರುವ ಕಥೆಯನ್ನು ವಿವರಿಸಿದ್ದಾರೆ ಕೂಡ. ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ವಾಷಿಂಗ್ಟನ್ ಡಿಸಿಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಲು ಈ ಇಬ್ಬರು ಉದ್ಯಮಿಗಳು ತೆರಳಿದ್ದರು. ಹಾಗಾದ್ರೆ ಮುಖೇಶ್ ಅಂಬಾನಿ ಹಾಗೂ ಆನಂದ್ ಮಹೀಂದ್ರಾ ಉಬರ್ ನಲ್ಲಿ ಪ್ರಯಾಣಿಸಲು ಕಾರಣವೇನು? 

ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಗುರುವಾರ (ಜೂ.22) ಏರ್ಪಡಿಸಿದ್ದ ಔತಣಕೂಟದಲ್ಲಿ ಆನಂದ್ ಮಹೀಂದ್ರಾ ಹಾಗೂ ಮುಖೇಶ್ ಅಂಬಾನಿ ಭಾಗವಹಿಸಿದ್ದರು.  ಒಪನ್ ಎಐ ಸಿಇಒ ಸ್ಯಾಮ್ ಅಲ್ಟಮನ್ , ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ ಆಪಲ್ ಸಿಇಒ ಟಿಮ್ ಕುಕ್ ಕೂಡ ಪಾಲ್ಗೊಂಡಿದ್ದರು. ಶುಕ್ರವಾರ ವೈಟ್ ಹೌಸ್  ಈಸ್ಟ್ ರೂಮ್ ನಲ್ಲಿಆಯೋಜಿಸಿದ್ದ ಭಾರತ ಹಾಗೂ ಅಮೆರಿಕದ ನಡುವಿನ ಹೈ-ಟೆಕ್ ಹ್ಯಾಂಡ್ ಶೇಕ್ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ಬಳಿಕ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನ ರೈಮೊಂಡೊ ಹಾಗೂ ಥರ್ಡಿಟೆಕ್ ಸಹಸಂಸ್ಥಾಪಕಿ ವೃಂದಾ ಕಪೂರ್ ಜೊತೆಗೆ ಮಾತುಕತೆಯಲ್ಲಿ ತೊಡಗಿದ ಕಾರಣ ಮುಂದಿನ ನಿಗದಿತ ಔತಣಕ್ಕೆ ಅವರನ್ನು ಕರೆದೊಯ್ಯ ಬೇಕಾಗಿದ್ದ ಶಟಲ್ ಬಸ್ ಮಿಸ್ ಆಗಿತ್ತು. ಇದೇ ಸಮಯದಲ್ಲಿ ಭಾರತ-ಅಮೆರಿಕ ಹೈ-ಟೆಕ್ ಹ್ಯಾಂಡ್ ಶೇಕ್ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಕೂಡ ಇವರಿಗೆ ಸಿಗುತ್ತಾರೆ. ಇದೇ ಸಮಯದಲ್ಲಿಇವರೆಲ್ಲ ಜೊತೆಯಾಗಿ ಉಬರ್ ಬುಕ್ ಮಾಡುತ್ತಾರೆ. ಆ ಸಂದರ್ಭದಲ್ಲಿ ತೆಗೆದ ಸೆಲ್ಫಿಯನ್ನು ಆನಂದ್ ಮಹೀಂದ್ರಾ ಈ ಮೇಲಿನ ಘಟನೆಯ ವಿವರಣೆ ಜೊತೆಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

I suppose this was what they would call a ‘Washington moment.’ After the tech handshake meeting yesterday, Mukesh Ambani, Vrinda Kapoor & I were continuing a conversation with the Secretary of Commerce & missed the group shuttle bus to the next lunch engagement. We were trying… pic.twitter.com/gP1pZl9VcI

— anand mahindra (@anandmahindra)

Latest Videos

ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಈ ಫೋಟೋ ಜೊತೆಗೆ ಆನಂದ್ ಮಹೀಂದ್ರಾ ಹೀಗೆ ಬರೆದುಕೊಂಡಿದ್ದಾರೆ, ''ನನ್ನ ಪ್ರಕಾರ ಅವರು ಕರೆಯುವ 'ವಾಷಿಂಗ್ಟನ್ ಮೂಮೆಂಟ್' ಇದೆ." 'ನಿನ್ನೆ ಹ್ಯಾಂಡ್ ಶೇಕ್ ಸಭೆ ಬಳಿಕ ನಾನು, ಮುಖೇಶ್ ಅಂಬಾನಿ ಹಾಗೂ ವೃಂದಾ ಕಪೂರ್ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಜೊತೆಗೆ ಮಾತುಕತೆಯಲ್ಲಿ ತೊಡಗಿದ ಕಾರಣ ನಮ್ಮನ್ನು ಮುಂದಿನ ಔತಣಕೂಟಕ್ಕೆ ಕರೆದುಕೊಂಡು ಹೋಗಬೇಕಿದ್ದ ಶಟಲ್ ಬಸ್ ಮಿಸ್ ಆಯಿತು. ಈ ಸಮಯದಲ್ಲಿ ನಾವು ಉಬರ್ ಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೆವು. ಈ ಸಮಯದಲ್ಲಿ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡೆವು. ಅಲ್ಲದೆ, ಉಬರ್ ಬದಲು ಆಕೆಯ ಸ್ಪೇಸ್ ಶಟಲ್ ನಲ್ಲಿ ನಾವು ಉಚಿತವಾಗಿ ಪ್ರಯಾಣಿಸಬಹುದೇ ಎಂದು ತಮಾಷೆ ಮಾಡಿದೆವು' ಎಮದು ಮಹೀಂದ್ರಾ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರ ಔತಣಕೂಟ; ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ ಭಾಗಿ

ಆನಂದ್ ಮಹೀಂದ್ರಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಈ ಸೆಲ್ಫಿಗೆ 700K ಲೈಕ್ಸ್ ಬಂದಿದೆ. ಅಲ್ಲದೆ, ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ ಕೂಡ. ಈ ಫೋಟೋಗೆ  'ಮಹಾನ್ ವ್ಯಕ್ತಿಗಳು ಹಾಗೂ ಭಾರತದ ಹೆಮ್ಮೆ ಒಂದು ಫ್ರೇಮ್ ನಲ್ಲಿ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು 'ನಿಜವಾದ ಭಾರತೀಯ ಆನಂದ್ ಮಹೀಂದ್ರಾ ಸರ್' ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು' ನೀವೆಲ್ಲ ಅಪರೂಪಕ್ಕೆ ಭೇಟಿಯಾದಾಗ ಯಾವ ವಿಷಯದ ಬಗ್ಗೆ ಮಾತನಾಡುತ್ತೀರಿ, ಅದು ಉದ್ಯಮ, ಪ್ರಯಾಣ, ನೀವು ಭಾಗವಹಿಸುವ ಕಾರ್ಯಕ್ರಮ..ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದೇನೆ. ನೀವು ಯಾವ ರೀತಿಯಲ್ಲಿ ತಮಾಷೆ ಮಾಡುತ್ತೀರಿ?' ಎಂದು ಪ್ರಶ್ನಿಸಿದ್ದಾರೆ. 
 

click me!