
ನವದೆಹಲಿ(ಆ.20): ಭಾರತ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಇತ್ತೀಚಿಗಷ್ಟೇ ಐಎಂಎಫ್ ಹೇಳಿದೆ. ಅದರಲ್ಲೂ ಭಾರತದ ಯುವ ವರ್ಗ ಈ ದೇಶದ ಆರ್ಥಿಕ ಚಕ್ರದ ಬೆನ್ನೆಲುಬು ಎಂಬುದರಲ್ಲಿ ಅನುಮಾನವೇ ಇಲ್ಲ.
ನಗರ ಭಾರತ ಮತ್ತು ಗ್ರಾಮ್ಯ ಭಾರತದಲ್ಲಿ ಬಹಳ ಅಂತರವಿದೆ ಹೌದಾದರೂ, ಆರ್ಥಿಕ ತೇರು ಎಳೆಯುತ್ತಿರುವವರಲ್ಲಿ ನಗರ ಪ್ರದೇಶದ ಜನರೇ ಮುಂದಿದ್ದಾರೆ. ಭಾರತದ ಹೊಸ ಪೀಳಿಗೆ ನಗರೀಕರಣಕ್ಕೆ ಒಗ್ಗಿಕೊಂಡಿದ್ದು, ಜೀವನ ಶೈಲಿಯಲ್ಲೂ ಭಾರೀ ಬದಲಾವಣೆ ಮಾಡಿಕೊಂಡಿದ್ದಾರೆ.
ಭಾರತದ ಮಾರುಕಟ್ಟೆಯಲ್ಲಿ ಹೊಸ ಗ್ರಾಹಕ ವರ್ಗವೊಂದರ ಉದಯವಾಗಿದ್ದು, ಯುವಕರೇ ಹೆಚ್ಚಿರುವ ಈ ವರ್ಗವನ್ನು ಡಿಐಎನ್ ಕೆ ಮತ್ತು ಡಬ್ಲ್ಯೂಸಿಯು ಎಂದು ಹೆಸರಿಸಲಾಗಿದೆ.
ಅಂದರೆ ವೇತನ ಅಧಿಕವಿದ್ದು ಮಕ್ಕಳನ್ನು ಹೊಂದಿರದ ಯುವ ವರ್ಗ ಮತ್ತು ಆರ್ಥಿಕವಾಗಿ ಸದೃಡವಾಗಿರುವ ಮದುವೆಯಾಗಿರದ ಯುವ ವರ್ಗ. ಇವರು ಭಾರತೀಯ ಮಾರುಕಟ್ಟೆಯ ಟಾರ್ಗೆಟ್ ಆಗಿದ್ದು, ಆಧುನಿಕ ಜೀವನ ಶೈಲಿಗಾಗಿ ಯೆಥೇಚ್ಛ ಹಣ ಖರ್ಚು ಮಾಡಲು ಈ ವರ್ಗ ಹಿಂದೆ ಮುಂದೆ ನೋಡುವುದಿಲ್ಲ.
28-40 ವರ್ಷದೊಳಗಿನ ಈ ಯುವ ವರ್ಗ ಭಾರತದ ಒಟ್ಟು ಜನಸಂಖ್ಯೆಯ ಶೇ. 1 ರಷ್ಟಿದ್ದು, 50 ಸಾವಿರಕ್ಕಿಂತಲೂ ಅಧಿಕ ತಿಂಗಳ ವೇತನ ಪಡೆಯುವ ವರ್ಗವಾಗಿದೆ. 2007 ರಿಂದ 2017ರ ವರೆಗೆ ಈ ಒಬ್ಬಂಟಿ ಯುವವರ್ಗದ ಸಂಖ್ಯೆ ಶೇ. ೩೫ ರಷ್ಟು ಹೆಚ್ಚಿದೆ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ.
ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಈ ವರ್ಗ, ಐಷಾರಾಮಿ ವಸ್ತುಗಳು, ದುಬಾರಿ ಬಂಗಲೆ, ಕಾರುಗಳ ಖರೀದಿಯಲ್ಲಿ ಮುಂಚೂಣಿಯಲ್ಲಿದೆ. ಇದೇ ಕಾರಣಕ್ಕೇ ಈ ವರ್ಗವನ್ನೇ ಮಾರುಕಟ್ಟೆ ಟಾರ್ಗೆಟ್ ಮಾಡಿಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.