ಇ-ಕಾಮರ್ಸ್ ಕಂಪನಿಗಳ ಇ-ಹೆಲ್ಪ್: ನೀವೂ ಸಹಾಯ ಮಾಡ್ತಿರಾ?

By Web DeskFirst Published Aug 20, 2018, 1:13 PM IST
Highlights

ಕೇರಳ ನೆರೆ ಸಂತ್ರಸ್ತರ ನೆರವಿಗೆ ಇ-ಕಾಮರ್ಸ್ ಕಂಪನಿಗಳು! ಸಂತ್ರಸ್ತರ ಕೂಗಿಗೆ ಸ್ಪಂದಿಸಿದ ಆನ್‌ಲೈನ್‌ ಸಮುದಾಯ! ನೆರವಿಗೆ ಧಾವಿಸಿದ ಫ್ಲಿಪ್‌ಕಾರ್ಟ್‌, ಅಮೆಜಾನ್, ಪೇಟಿಎಂ! ಅಗತ್ಯ ವಸ್ತುಗಳನ್ನು ಕಳುಹಿಸಲು ಸಹಾಯಕ್ಕಾಗಿ ಮನವಿ
 

ನವದೆಹಲಿ(ಆ.20): ಕೇರಳ ಮಳೆ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿಸುವಲ್ಲಿ ದೇಶ ಹಿಂದೆ ಬಿದ್ದಿಲ್ಲ. ಈ ಮಹಾನ್ ಕಾರ್ಯಕ್ಕೆ ಆನ್‌ಲೈನ್‌ ಸಮುದಾಯ ಕೂಡ ಇದೀಗ ಕೈಜೋಡಿಸಿದ್ದು, ನೆರವುದಾತರು ಮತ್ತು ಸಂತ್ರಸ್ತರನ್ನು ಬೆಸೆಯುವಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಪೇಟಿಎಂ ಕಂಪನಿಗಳು ಮುಂದಾಗಿವೆ.

ಗೂಗಲ್‌, ಫೇಸ್‌ಬುಕ್‌ ಮೂಲಕವೂ ಜನರು ಸಂತ್ರಸ್ತರ ಸಂಕಷ್ಟಕ್ಕೆ ಕೈಜೋಡಿಸಿದ್ದಾರೆ. ಸಂತ್ರಸ್ತರಿಗೆ ಆನ್‌ಲೈನ್‌ ಮೂಲಕ ನೆರವಾಗಲು ನಾನಾ ಆಯ್ಕೆಗಳನ್ನು ಇ-ಕಾಮರ್ಸ್‌ ಪೋರ್ಟಲ್‌ಗಳು ಒದಗಿಸಿವೆ. 

ಅಮೆಜಾನ್‌ ಇಂಡಿಯಾ: ಗೂಂಜ್‌ ಅಲ್ಲದೇ ಇನ್ನೂ ಎರಡು ಸಂಸ್ಥೆಗಳ ಜೊತೆ ಅಮೆಜಾನ್‌ ಒಪ್ಪಂದ ಮಾಡಿಕೊಂಡಿದೆ. ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ನಲ್ಲಿನ ಡೊನೇಷನ್‌ ಬ್ಯಾನರ್‌ ಕ್ಲಿಕ್‌ ಮಾಡಿ ನೆರವು ನೀಡಬಹುದು. ಅಲ್ಲಿರುವ ಎನ್‌ಜಿಒ ಪುಟ ಕ್ಲಿಕ್‌ ಮಾಡಿ ಬಟ್ಟೆಗಳು ಸೇರಿದಂತೆ ನೀವು ನೆರವು ನೀಡುವ ಉತ್ಪನ್ನಗಳನ್ನು ಕ್ಲಿಕ್‌ ಮಾಡಿ ಹಣ ಪಾವತಿ ಮಾಡಬೇಕು.

ಪೇಟಿಎಂ: ಇನ್ನು ಪೇಟಿಎಂ ಕೂಡ ಕೇರಳ ಮತ್ತು ಕೊಡಗು ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ತನ್ನ ಆ್ಯಪ್ ಮೂಲಕ ನೆರೆ ಸಂತ್ರಸ್ತರಿಗೆ ಸಹಾಯ ನೀಡುವಂತೆ ಜನರಲ್ಲಿ ಮನವಿ ಮಾಡಿದೆ.

ಫ್ಲಿಪ್‌ಕಾರ್ಟ್‌: ಗೂಂಜ್‌ ಎನ್ನುವ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದೆ. ರಗ್ಗುಗಳು, ಟಾರ್ಪಲ್‌ಗಳು, ಸೊಳ್ಳೆ ಪರದೆಗಳು, ಧವಸ ಧಾನ್ಯಗಳನ್ನು ಸಂತ್ರಸ್ತರಿಗೆ ಮುಟ್ಟಿಸಲು ಫ್ಲಿಪ್‌ಕಾರ್ಟ್‌ ಆ್ಯಪ್‌ನಲ್ಲಿ ಅವಕಾಶವಿದೆ. ಕೇರಳ ಡೊನೇಷನ್‌ ಎನ್ನುವ ಬ್ಯಾನರ್‌ ಜಾಹೀರಾತನ್ನು ಕ್ಲಿಕ್‌ ಮಾಡಿ, ನೆರವು ನೀಡಬಹುದಾಗಿದೆ. ದೇಣಿಗೆಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ಕೆಲವು ದಿನಗಳ ಬಳಿಕ ದಾನಿಗಳಿಗೆ ಪ್ರಮಾಣ ಪತ್ರವನ್ನೂ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

click me!