ಡಿಜಿಟಲ್ ಯುಗದಲ್ಲಿ ಜನರು ಬ್ಯಾಂಕ್ ಗೆ ಹೋಗೋದು ಕಡಿಮೆಯಾಗಿದೆ. ಅದಾಗ್ಯೂ ನಗದು ಜಮಾ ಮಾಡಲು ಬ್ಯಾಂಕ್ ಗೆ ಹೋಗೋದು ಅನೇಕರಿಗೆ ಅನಿವಾರ್ಯ. ನಿಮ್ಮ ಖಾತೆಯಲ್ಲಿ ಎಷ್ಟು ಹಣವಿರಬೇಕು, ಒಮ್ಮೆ ಎಷ್ಟು ಠೇವಣಿ ಮಾಡ್ಬಹುದು ಎಂಬೆಲ್ಲ ಮಾಹಿತಿ ಗೊತ್ತಿದ್ರೆ ಬ್ಯಾಂಕ್ ಕೆಲಸ ಸುಲಭವಾಗುತ್ತದೆ.
ಈಗಿನ ದಿನಗಳಲ್ಲಿ ಬಹುತೇಕ ಎಲ್ಲರೂ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಅನೇಕರ ಖಾತೆ, ಉಳಿತಾಯ ಖಾತೆ ರೂಪದಲ್ಲಿರುತ್ತದೆ. ವಿವಿಧ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡಲು ಮಿತಿ ಇದೆ. ಅದೇ ರೀತಿ ಕೆಲ ಬ್ಯಾಂಕ್ ಗಳಲ್ಲಿ ಗರಿಷ್ಠ ಠೇವಣಿ ಮಿತಿ ಇದೆ. ನಾವಿಂದು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಒಂದು ಬಾರಿ ಠೇವಣಿ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ.
ಉಳಿತಾಯ (Saving) ಖಾತೆಯಲ್ಲಿ ಎಷ್ಟು ಹಣ ಇಡಬಹುದು? : ಸಾಮಾನ್ಯ ಉಳಿತಾಯ ಖಾತೆಯಲ್ಲಿ ಗರಿಷ್ಠ ಠೇವಣಿ (Deposit) ಗೆ ಯಾವುದೇ ಮಿತಿಯಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಳಿತಾಯ ಖಾತೆ (accounts) ಯಲ್ಲಿ ನೀವು ಎಷ್ಟು ಹಣವನ್ನಾದ್ರೂ ಇಡಬಹುದು. ಸಾವಿರ, ಲಕ್ಷ, ಕೋಟಿ ಠೇವಣಿ ಇಡಬಹುದು. ಬೇಕಾದಾಗ ಎಷ್ಟು ಹಣವನ್ನಾದ್ರೂ ಹಿಂಪಡೆಯಬಹುದು.
Investment Plans: ಹೂಡಿಕೆ ಮುನ್ನ ಈ ಯೋಜನೆ ಬಗ್ಗೆ ತಿಳಿದಿರಿ
ನಗದು ಠೇವಣಿ 1 ಲಕ್ಷಕ್ಕಿಂತ ಹೆಚ್ಚಿರಬಾರದು : ರಿಸರ್ವ್ ಬ್ಯಾಂಕ್ ಉಳಿತಾಯ ಖಾತೆಗೆ ಸಂಬಂಧಿಸಿದಂತೆ ನಿಯಮ ರೂಪಿಸಿದೆ. ಯಾವುದೇ ವ್ಯಕ್ತಿ ಒಂದು ಬಾರಿಗೆ 1 ಲಕ್ಷದವರೆಗಿನ ಮಾತ್ರ ನಗದು ಠೇವಣಿ ಇಡಬಹುದು. ಪೂರ್ಣ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ನಗದು ಠೇವಣಿ ಮಾಡಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವುದಾದಲ್ಲಿ ಆನ್‌ಲೈನ್ ವರ್ಗಾವಣೆ ಅಥವಾ ಎಟಿಎಂ ವರ್ಗಾವಣೆ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ವರ್ಗಾವಣೆ ಮಾಡಬೇಕಾಗುತ್ತದೆ.
ಇದೇ ರೀತಿ ಹಣ ಜಮಾವಣೆಗೆ ಕನಿಷ್ಠ ಮಿತಿ ಕೂಡ ಇದೆ. ನೀವು ಎಸ್ ಬಿಐ ಬ್ಯಾಂಕ್ ಗೆ ಹೋಗಿ 10 ರೂಪಾಯಿ ಜಮಾ ಮಾಡಲು ಸಾಧ್ಯವಿಲ್ಲ. ಆದ್ರೆ ಆನ್ಲೈನ್ ಸೇವೆಯಲ್ಲಿ ಕನಿಷ್ಠ ಮಿತಿ ಇಲ್ಲ. ನೀವು ಒಂದು ರೂಪಾಯಿಯನ್ನೂ ಠೇವಣಿ ಮಾಡಬಹುದು.
ಸಣ್ಣ ಉಳಿತಾಯ ಖಾತೆಯ ನಿಯಮ : ಗ್ರಾಹಕರಿಗೆ ಸುಲಭವಾಗಿ ತೆರೆಯಲು ಸಾಧ್ಯವಾಗುವ ಸಣ್ಣ ಉಳಿತಾಯ ಖಾತೆಯನ್ನು ಅನೇಕ ಬ್ಯಾಂಕ್ ಹೊಂದಿದೆ. ಕೆವೈಸಿ ಇಲ್ಲದ ಈ ಖಾತೆಗೆ ಗರಿಷ್ಠ ಠೇವಣಿ ಮತ್ತು ಗರಿಷ್ಠ ಬ್ಯಾಲೆನ್ಸ್ ಸೇರಿದಂತೆ ಅನೇಕ ನಿಯಮಗಳನ್ನು ವಿಧಿಸಲಾಗುತ್ತದೆ.
Personal Finance: ಮಹಿಳೆ ಭವಿಷ್ಯ ಸುರಕ್ಷಿತವಾಗಿರಬೇಕೆಂದ್ರೆ ಈ ವಿಮೆ ಬೆಸ್ಟ್
• ಒಂದು ವರ್ಷದಲ್ಲಿ ನೀವು ಸಣ್ಣ ಉಳಿತಾಯ ಖಾತೆಯಲ್ಲಿ ಒಟ್ಟು 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡಲು ಸಾಧ್ಯವಿಲ್ಲ.
• ಒಂದು ತಿಂಗಳಲ್ಲಿ 10,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶವಿಲ್ಲ.
• ಹಾಗೆಯೇ ಒಂದು ತಿಂಗಳಲ್ಲಿ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ನೀವು ವರ್ಗಾವಣೆ ಮಾಡುವಂತಿಲ್ಲ.
• ವಿದೇಶದಿಂದ ಬಂದ ಯಾವುದೇ ಹಣವನ್ನು ಸಣ್ಣ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಲಾಗುವುದಿಲ್ಲ.
• ಕೆವೈಸಿ ಇಲ್ಲದೆ ತೆಗೆದ ಈ ಸಣ್ಣ ಉಳಿತಾಯ ಖಾತೆ ಕೇವಲ ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ. ಅದರ ನಂತ್ರ ದಾಖಲೆಗಳನ್ನು ನೀಡಿ ಖಾತೆಯ ಅವದಿ ವಿಸ್ತರಿಸಬಹುದು.
ತಿಂಗಳ ನಗದು ಠೇವಣಿಗೂ ಇದೆ ಮಿತಿ : ಎಸ್ ಬಿಐ ಉಳಿತಾಯ ಖಾತೆ ಹೊಂದಿದ್ದರೆ ನೀವು ತಿಂಗಳ ನಗದು ಠೇವಣಿ ಮಿತಿ ಬಗ್ಗೆ ತಿಳಿದಿರಬೇಕು. ಎಸ್ ಬಿಐನಲ್ಲಿ ತಿಂಗಳಿಗೆ ಮೂರು ಬಾರಿ ನೀವು ಹಣವನ್ನು ಠೇವಣಿ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣವನ್ನು ಠೇವಣಿ ಮಾಡಿದ್ರೆ ಠೇವಣಿ ಶುಲ್ಕ ಪಾವತಿಸಬೇಕಾಗುತ್ತದೆ. ಈ ಉಚಿತ ಠೇವಣಿ ಮಿತಿ ಬೇರೆ ಬೇರೆ ಬ್ಯಾಂಕ್ ನಲ್ಲಿ ಭಿನ್ನವಾಗಿದೆ. ಐಸಿಐಸಿಐ ಬ್ಯಾಂಕ್ ನಲ್ಲಿ ನೀವು ನಾಲ್ಕು ಬಾರಿ ಉಚಿತವಾಗಿ ಠೇವಣಿ ಮಾಡಲು ಅವಕಾಶವಿದೆ. ಪ್ರತಿ ಬ್ಯಾಂಕ್ ನ ವೆಬ್ ಸೈಟ್ ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿ ನಿಮಗೆ ಲಭ್ಯವಾಗುತ್ತದೆ.