
ತಿರುವನಂತಪುರ (ಜೂನ್ 25, 2023): ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ತನ್ನ ‘ನಂದಿನಿ’ ಹಾಲಿನ ಮಾರಾಟ ಕೇಂದ್ರಗಳನ್ನು ಕೇರಳದಲ್ಲಿ ತೆರೆದಿರುವುದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ತನ್ನ ‘ಮಿಲ್ಮಾ’ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳ ಹಾಲು ಉತ್ಪಾದಕರ ಸಂಘ ಯೋಜಿಸಿದೆ. ಬೆಂಗಳೂರು, ಮೈಸೂರು ಮತ್ತು ಕೊಡಗಿನಲ್ಲಿ ಈ ಮಾರಾಟ ಕೇಂದ್ರಗಳು ಸ್ಥಾಪನೆ ಆಗಲಿವೆ.
ಈ ಕುರಿತಾಗಿ ಮಾತನಾಡಿರುವ ಕೇರಳ ಹಾಲು ಉತ್ಪಾದಕರ ಸಂಘ (ಕೆಸಿಎಂಎಂಎಫ್)ದ ಮುಖ್ಯಸ್ಥ ಕೆ.ಎಸ್.ಮಣಿ, ‘ನಾವು ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ನಮ್ಮ ಹಾಲಿನ ಮಾರಾಟ ಕೇಂದ್ರಗಳನ್ನು ತೆರೆಯಲು ನಿರ್ಧಾರ ಮಾಡಿದ್ದೇವೆ. ಇಲ್ಲಿ ಮಿಲ್ಮಾ ಹಾಲಿನಿಂದ ತಯಾರಿಸಲಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಹಾಲು ಮಾರಾಟ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ನೆರೆ ರಾಜ್ಯದಲ್ಲಿ ನಂದಿನಿಗೆ ವಿರೋಧ: ಕರ್ನಾಟಕದಲ್ಲಿ ಅಮುಲ್ ಪರ - ವಿರೋಧ ಚರ್ಚೆ ವೇಳೆ ಕೇರಳ ಕ್ಯಾತೆ
‘ಹಾಲಿನ ಕೇಂದ್ರಗಳನ್ನು ತೆರೆಯುವ ಬಗ್ಗೆ ಈ ಮೊದಲೇ ಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಇದನ್ನು ತಡೆ ಹಿಡಿಯಲಾಗಿತ್ತು. ಈಗ ಈ ಬಗ್ಗೆ ಮತ್ತೆ ಚಿಂತನೆ ನಡೆಸಲಾಗುತ್ತಿದೆ. ಕೇರಳದಲ್ಲಿ ನಂದಿನಿ ಹಾಲಿನ ಕೇಂದ್ರ ತೆರೆದಿರುವ ಕುರಿತಾಗಿ ವಿವಾದ ಸೃಷ್ಟಿಯಾಗಿರುವುದರ ಬೆನ್ನಲ್ಲೇ ಇದು ಆರಂಭವಾಗಿರುವುದು ಕೇವಲ ಕಾಕತಾಳೀಯ. ಬೆಂಗಳೂರು, ಮೈಸೂರು ಮತ್ತು ಕೊಡಗುಗಳಲ್ಲಿ ಮಿಲ್ಮಾ ಹಾಲಿನ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು.
ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ನಂದಿನಿ ಮಾರಾಟ ಕೇಂದ್ರಗಳನ್ನು ಕೇರಳದಲ್ಲಿ ತೆರೆಯುವುದಕ್ಕೆ ಕೆಸಿಎಂಎಂಎಫ್ ವಿರೋಧಿಸಿತ್ತು. ಈ ಕುರಿತಾಗಿ ಕೇಂದ್ರ ಡೈರಿ ಅಭಿವೃದ್ಧಿ ನಿಗಮ ಮಧ್ಯಪ್ರವೇಶಿಸಬೇಕು ಎಂದು ಸಹ ಕೋರಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇರಳ ಪಶು ಸಂಗೋಪನಾ ಸಚಿವೆ ಜೆ.ಚಿಂಚುರಾಣಿ, ಕೇಂದ್ರ ಡೈರಿ ನಿಗಮ ಮಧ್ಯಪ್ರವೇಶಿಸದಿದ್ದರೆ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದರು. ಅಲ್ಲದೆ, ನಂದಿನಿ ಗುಣಮಟ್ಟವು ಮಿಲ್ಮಾಗೆ ಹೋಲಿಸಿದರೆ ಕಳಪೆ ಎಂದು ಹೀಗಳೆದಿದ್ದರು.
ಇದನ್ನೂ ಓದಿ: ಅಮುಲ್ ಆದಾಯ 66 ಸಾವಿರ ಕೋಟಿ ರೂ. ಗೆ ಹೆಚ್ಚಳ: ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಸಂದೇಶ ನೀಡಿದ ಎಂಡಿ..!
ಹಾಲು ಮಾರಲ್ಲ
ನಾವು ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ನಮ್ಮ ಹಾಲಿನ ಮಾರಾಟ ಕೇಂದ್ರಗಳನ್ನು ತೆರೆಯಲು ನಿರ್ಧಾರ ಮಾಡಿದ್ದೇವೆ. ಇಲ್ಲಿ ಮಿಲ್ಮಾ ಹಾಲಿನಿಂದ ತಯಾರಿಸಲಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಹಾಲು ಮಾರಾಟ ಮಾಡುವುದಿಲ್ಲ.
- ಕೆ.ಎಸ್. ಮಣಿ, ಕೇರಳ ಹಾಲು ಒಕ್ಕೂಟ
ಇದನ್ನೂ ಓದಿ: ಕೆಎಂಎಫ್ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ: ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಕಿಡಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.