ಭಾರತ ಈ ತನಕ ಕಂಡ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ಗೌತಮ್ ಅದಾನಿ ಅಥವಾ ರತನ್ ಟಾಟಾ ಆಗಿರಬಹುದು ಎಂದು ಭಾವಿಸಿದ್ದರೆ, ಅದು ಖಂಡಿತಾ ತಪ್ಪು. ಸ್ವಾತಂತ್ರ್ಯಪೂರ್ವದಲ್ಲೇ ಭಾರತದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬರು ನೆಲೆಸಿದ್ದರು. ಅವರ ಹೆಸರು ವಿರ್ಜಿ ವೋರಾ. ಸುಮಾರು 8 ಮಿಲಿಯನ್ ಡಾಲರ್ ಸಂಪತ್ತು ಹೊಂದಿದ್ದ ಅವರು, ಈಸ್ಟ್ ಇಂಡಿಯಾ ಕಂಪನಿಗೇ ಸಾಲ ನೀಡುತ್ತಿದ್ದರಂತೆ.
Business Desk: ಭಾರತೀಯರು ಐತಿಹಾಸದುದ್ದಕ್ಕೂ ಅನೇಕ ವಿಚಾರಗಳಿಗೆ ಸಂಬಂಧಿಸಿ ಜಗತ್ತಿನ ಗಮನ ಸೆಳೆದಿದ್ದರು. ಇಲ್ಲಿನ ಸಂಪತ್ತು, ಐಶ್ವರ್ಯ, ಕಲೆ ಮತ್ತು ಸಂಸ್ಕೃತಿ ಅನಾದಿ ಕಾಲದಿಂದಲೂ ಜಗತ್ತಿಗೆ ಬೆರಗು ಮೂಡಿಸುತ್ತ ಬಂದಿದೆ. ಅಷ್ಟೇ ಅಲ್ಲ, ಉದ್ಯಮ ರಂಗದಲ್ಲೂ ಭಾರತೀಯರುತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಜಗತ್ತಿಗೆ ಅನೇಕ ಉತ್ತಮ ಉದ್ಯಮಿಗಳನ್ನು ನೀಡಿದ ನಾಡು ಭಾರತ. ಅಂಥ ನಿಪುಣ, ಜಾಣ ಉದ್ಯಮಿಗಳಲ್ಲಿ ವಿರ್ಜಿ ವೋರಾ ಕೂಡ ಒಬ್ಬರು. ಭಾರತದಲ್ಲಿ ಮೊಘಲರ ಆಡಳಿತಾವಧಿಯಲ್ಲಿ ಬಹಳ ದೊಡ್ಡ ಉದ್ಯಮಿ ಎಂದು ಇವರನ್ನು ಗುರುತಿಸಲಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇವರನ್ನು ವಿಶ್ವದ ಅತೀದೊಡ್ಡ ಉದ್ಯಮಿ ಎಂದು ಕರೆದಿದೆ. ವೋರಾ ಬರೀ ಶ್ರೀಮಂತ ಉದ್ಯಮಿ ಮಾತ್ರ ಆಗಿರಲಿಲ್ಲ, 1617 ಹಾಗೂ 1670ರ ನಡುವೆ ಈಸ್ಟ್ ಇಂಡಿಯಾ ಕಂಪನಿಗೆ ಫೈನಾನ್ಷಿಯರ್ ಕೂಡ ಆಗಿದ್ದರು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಇನ್ನು ಆ ಕಾಲದಲ್ಲಿ ವೋರಾ ಕೈಹಾಕದ ಉದ್ಯಮವೇ ಇರಲಿಲ್ಲ. ಕಾಳುಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಮಸಾಲ ಪದಾರ್ಧಗಳ ಜೊತೆಗೆ ಚಿನ್ನ, ಹರಳುಗಳು ಸೇರಿದಂತೆ ಅನೇಕ ಸರಕುಗಳ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದರು.
1590ರಲ್ಲಿ ಜನಿಸಿದ ವಿರ್ಜಿ ವೋರಾ 1670ರಲ್ಲಿ ನಿಧನರಾದರು. ಇವರು ಸಗಟು ವ್ಯಾಪಾರಿಯಾಗಿದ್ದರು. ಮಸಾಲ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆ ಬಳಿಕ ಅದನ್ನು ಬ್ರಿಟಿಷರು ಸೇರಿದಂತೆ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದರು. ಹಾಗೆಯೇ ಬ್ರಿಟಿಷರು ಹಾಗೂ ಡಚ್ಚರಿಂದ ಕೂಡ ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದರು. ಸೂರತ್ ನಲ್ಲಿ ಅವರು ಅನೇಕ ವಸ್ತುಗಳ ವಹಿವಾಟಿನ ಮೇಲೆ ಏಕಸ್ವಾಮ್ಯ ಹೊಂದಿದ್ದರು.
ಆದಾಯದ ಬಹುಪಾಲು ದಾನ ಮಾಡುವ ನಿರ್ಧಾರ ಮಾಡಿದ ಜಿರೋಧಾ ಸಂಸ್ಥಾಪಕ ನಿಖಿಲ್ ಕಾಮತ್!
ಇನ್ನು ವೋರಾ ಅವರ ಉದ್ಯಮದ ಶಾಖೆಗಳು ಭಾರತದ ವಿವಿಧ ನಗರಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕೂಡ ಹರಡಿದ್ದವು. ಪರ್ಷಿಯನ್ ಕೊಲ್ಲಿ , ಕೆಂಪು ಸಮುದ್ರ ಮತ್ತು ಆಗ್ನೇಯ ಏಷ್ಯಾದ ಬಂದರು ನಗರಗಳಲ್ಲಿ ವೋರಾ ಅವರ ಉದ್ಯಮದ ಶಾಖೆಗಳಿದ್ದವು. ಇನ್ನು ಭಾರತದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ವಿರ್ಜಿ ಅವರ ಏಜೆಂಟ್ ಗಳಿದ್ದರು. ಗುಜರಾತ್ ನಲ್ಲೇ ಅವರ ಏಜೆಂಟ್‌ಗಳು ಅಹಮದಾಬಾದ್ , ವಡೋದರಾ ಮತ್ತು ಬ್ರೋಚ್ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಇದ್ದರು.
ಸಗಟು ವ್ಯಾಪಾರಿಯಾಗಿದ್ದ ವೋರಾ ಅವರ ವೈಯಕ್ತಿಕ ಸಂಪತ್ತು ಆ ಸಮಯದಲ್ಲಿ ಸುಮಾರು 8 ಮಿಲಿಯನ್ ಡಾಲರ್ ಆಗಿತ್ತು. ಅಂದರೆ ಇವರು ಭಾರತ ಈ ತನಕ ಕಂಡರಿಯದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 1629 ಹಾಗೂ 1668 ರ ನಡುವೆ ವೋರಾ ಬ್ರಿಟಿಷರ ಜೊತೆಗೆ ಅನೇಕ ಉದ್ಯಮ ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಇದರಿಂದಾಗಿ ವೋರಾ ಅವರಿಗೆ ತನ್ನ ಉದ್ಯಮ ಸಾಮ್ರಾಜ್ಯ ಸ್ಥಾಪಿಸಲು ಸಾಧ್ಯವಾಯಿತು.
ವಿರ್ಜಿ ವೋರಾ ಆ ಸಮಯದಲ್ಲಿ ಕೆಲವು ಸರಕುಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿದ್ದರು. ಕೆಲವೊಮ್ಮೆ ಯಾವುದೇ ಒಂದು ಉತ್ಪನ್ನದ ಸಂಪೂರ್ಣ ಸ್ಟಾಕ್ ಖರೀದಿಸುತ್ತಿದ್ದರು ಹಾಗೂ ಅದನ್ನು ದೊಡ್ಡ ಮಟ್ಟದ ಲಾಭಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ವೋರಾ ಹಣವನ್ನು ಸಾಲವಾಗಿ ನೀಡುತ್ತಿದ್ದರು ಕೂಡ. ಸ್ವಂತ ಉದ್ಯಮ ಸ್ಥಾಪಿಸೋರಿಗೆ ಹಣವನ್ನು ಸಾಲಕ್ಕೆ ನೀಡುತ್ತಿದ್ದ ವೋರಾ, ಬ್ರಿಟಿಷರು ಹಾಗೂ ಡಚ್ಚರಿಗೆ ಕೂಡ ಸಾಲ ಒದಗಿಸುತ್ತಿದ್ದರು.
ಅಬ್ಬಬ್ಬಾ.. ಅಂಬಾನಿ ಕುಟುಂಬ ಪುಟ್ಟ ಉತ್ತರಾಧಿಕಾರಿಣಿಯನ್ನು ಸ್ವಾಗತಿಸಿದ್ದು ಹೇಗೆ ನೋಡಿ..
ಭಾರತದ ದಖ್ಖನ್ ಪ್ರಸ್ಥಭೂಮಿ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಮೊಘಲ್ ದೊರೆ ಔರಂಗಜೇಬ್ ಗೆ ಹಣಕಾಸಿನ ಮುಗ್ಗಟ್ಟು ಎದುರಾಗಿತ್ತು. ಆಗ ಆತ ಹಣದ ಸಹಾಯ ಕೋರಿ ವಿರ್ಜಿ ವೋರಾ ಬಳಿ ತನ್ನ ಪ್ರತಿನಿಧಿಗಳನ್ನು ಕಳುಹಿಸಿದ್ದ. ಒಂದು ಬಾರಿ ವಿರ್ಜಿ ವೋರಾ ಮೊಘಲ್ ದೊರೆ ಷಹ ಜಹಾನ್ ಗೆ ನಾಲ್ಕು ಅರಬ್ ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದನು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.