ಭಾರತದ ಉದ್ಯಮ ರಂಗದಲ್ಲಿ ಎರಡನೇ ತಲೆಮಾರಿನ ಉದ್ಯಮಿಗಳ ಯುಗ ಪ್ರಾರಂಭವಾಗಿದೆ. ಈಗಾಗಲೇ ಅನೇಕರು ತಂದೆಯ ಉದ್ಯಮವನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಥವರು ವಿನತಿ ಸರಫ್ ಮುತ್ರೇಜಾ ಕೂಡ ಒಬ್ಬರು.
Business Desk: ಭಾರತದಲ್ಲಿ ಅಪ್ಪನ ಉದ್ಯಮ ಸಾಮ್ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಅನೇಕ ಯುವ ಉದ್ಯಮಿಗಳನ್ನು ಕಾಣಬಹುದು. ಉದ್ಯಮ ರಂಗದಲ್ಲಿ ಹೊಸ ತಲೆಮಾರಿನವರು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅದು ರಿಲಯನ್ಸ್ ಆಗಿರಬಹುದು ಇಲ್ಲವೇ ಟಾಟಾ ಸಮೂಹ ಸಂಸ್ಥೆಯೇ ಆಗಿರಬಹುದು, ಅಲ್ಲಿ ಹೊಸ ತಲೆಮಾರಿನವರು ಉದ್ಯಮಕ್ಕೆ ಹೊಸ ರೂಪ ನೀಡುತ್ತಿದ್ದಾರೆ. ಅನೇಕ ಜನಪ್ರಿಯ ಕಂಪನಿಗಳಲ್ಲಿ ಈಗ ಎರಡನೇ ತಲೆಮಾರಿನವರ ಆಡಳಿತ ಪ್ರಾರಂಭವಾಗಿದೆ. ಅಂಥ ಯುವ ಉದ್ಯಮಿಗಳಲ್ಲಿ ವಿನತಿ ಸರಫ್ ಮುತ್ರೇಜಾ ಕೂಡ ಒಬ್ಬರು. ವಿನತಿ ಆರ್ಗಾನಿಕ್ಸ್ ಲಿಮಿಟೆಡ್ ಸಿಇಒ ಹಾಗೂ ಎಂಡಿ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಂಪನಿಯನ್ನು ವಿನತಿ ಅವರ ತಂದೆ ವಿನೋದ್ ಸರಫ್ 1989ರಲ್ಲಿ ಸ್ಥಾಪಿಸಿದ್ದರು. ಈ ಕಂಪನಿ ಜನಪ್ರಿಯ ನೋವುನಿವಾರಕ ಔಷಧಿ ಐಬುಪ್ರೊಫೆನ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. 2018ರಿಂದ ವಿನತಿ ಈ ಕಂಪನಿಯ ಸಿಇಒ ಹಾಗೂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ವಿನತಿ, ಭಾರತದ ಜನಪ್ರಿಯ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ ಕೂಡ. ಇವರಿಗೆ ಇಟಿಪಿರೈಮ್ ವುಮೆನ್ ಲೀಡರ್‌ಶಿಪ್ ಅವಾರ್ಡ್ಸ್ (ಇಟಿಪಿಡಬ್ಲ್ಯೂಎಲ್‌ಎ) 2023ರಲ್ಲಿ ಭಾಗವಹಿಸಿದ್ದರು.
ವಿನತಿ ಆರ್ಗಾನಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು ವಿನೋದ್ ಸರಫ್ ಮಗಳ ಹೆಸರಿನಲ್ಲೇ ಪ್ರಾರಂಭಿಸಿದ್ದರು. ಪ್ರಸ್ತುತ ಈ ಕಂಪನಿಯ ಮಾರುಕಟ್ಟೆ ಬಂಡವಾಳ 18,032 ಕೋಟಿ ರೂ. ವಿನತಿ 2006ರಲ್ಲಿ ವಿಒಎಲ್ ಸೇರ್ಪಡೆಗೊಂಡಿದ್ದರು ಹಾಗೂ ಕಂಪನಿಯ ಕಾರ್ಯನಿರ್ವಾಹಣ ತಂಡದಲ್ಲಿ 16ವರ್ಷಗಳ ಕಾರ್ಯಾನುಭವ ಹೊಂದಿದ್ದಾರೆ. ದಿ ವಾರ್ಟನ್ ಸ್ಕೂಲ್ ನಿಂದ ಅರ್ಥಶಾಸ್ತ್ರದಲ್ಲಿ (ಹಣಕಾಸು) ಪದವಿ ಪಡೆದಿರುವ ವಿನತಿ, ಪೆನ್ನೆಸೆಲ್ವಿನಿಯಾ ಯುನಿವರ್ಸಿಟಿ ಸ್ಕೂಲ್ ಆಫ್ ಇಂಜಿನಿಯರಿಂಗ್ ನಿಂದ ಅಪ್ಲೈಡ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ವಿನತಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಹಳೆಯ ವಿದ್ಯಾರ್ಥಿ ಕೂಡ ಆಗಿದ್ದಾರೆ. ರಸಾಯನಶಾಸ್ತ್ರದಲ್ಲಿ ವಿನತಿ ತುಂಬಾ ಆಸಕ್ತಿ ಹೊಂದಿದ್ದರು. ಇದೇ ಆಸಕ್ತಿ ಅವರಿಗೆ ತಮ್ಮ ತಂದೆಯ ಉದ್ಯಮವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನೆರವು ನೀಡಿತು.
22.5 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ 2,24,811 ಕೋಟಿ ಮೌಲ್ಯದ ಕಂಪನಿಯ ಭಾರತದ ಮುಖ್ಯಸ್ಥೆ
ಫೋರ್ಬ್ಸ್ ಮಾಹಿತಿ ಅನ್ವಯ ವಿನತಿ ಅವರ ತಂದೆ ನಿವ್ವಳ ಆದಾಯ 14,160 ಕೋಟಿ ರೂ. ಇದೆ. ಇಸೊಬುಟೈಲ್ ಬೆಂಜಿನ್ ಉತ್ಪಾದಿಸಲು ಅವರು ಈ ಕಂಪನಿ ಸ್ಥಾಪಿಸಿದ್ದರು. ಇದನ್ನು ಇಬುಪ್ರೊಫೆನ್ ತಯಾರಿಯಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿ ಬಳಸುತ್ತಾರೆ. ಆದರೆ. ಅವರಿಗೆ ರಸಾಯನಶಾಸ್ತ್ರದಲ್ಲಿ ಅನುಭವ ಇರಲಿಲ್ಲ. ಔಷಧ ತಯಾರಿಕೆಗೆ ರಸಾಯನಶಾಸ್ತ್ರದ ಅನುಭವ ಅಗತ್ಯ. ಹೀಗಾಗಿ ವಿನತಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ಅಲ್ಲದೆ, ಅವರು ಅದರಲ್ಲಿ ಆಸಕ್ತಿ ಕೂಡ ಹೊಂದಿದ್ದರು. ಇದು ಕಂಪನಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನೆರವು ನೀಡಿತು.
ವಿನತಿ ಆರ್ಗಾನಿಕ್ಸ್ ಲಿಮಿಟೆಡ್ ಮುಂಬೈನಲ್ಲಿ ಮುಖ್ಯಕಚೇರಿ ಹೊಂದಿದೆ. ಇದು ಕೆಮಿಕಲ್ಸ್ ಹಾಗೂ ಆರ್ಗಾನಿಕ್ಸ್ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಜನಪ್ರಿಯತೆ ಗಳಿಸಿದೆ. ಇದು ಫಾರ್ಮಾ, ನೀರು ಶುದ್ಧೀಕರಣ, ನಿರ್ಮಾಣ, ಇಮುಲ್ಸನ ಪೇಯಿಂಟ್ ಇತ್ಯಾದಿ ಉತ್ಪಾದಿಸುತ್ತದೆ.
16ನೇ ವಯಸ್ಸಿಗೆ ಮಗು, ಎರಡು ಮದುವೆ, ಮಗನ ಸಾವು..ಆದ್ರೂ 250 ಕೋಟಿ ಮೌಲ್ಯದ ಸಂಸ್ಥೆ ಕಟ್ಟಿದ ಶಹನಾಜ್ ಹುಸೇನ್
ಉದ್ಯಮ ರಂಗದಲ್ಲಿ ವಿನತಿ ಮಾಡಿರುವ ಸಾಧನೆ ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಲಾಗಿದೆ. ಎಕನಾಮಿಕ್ ಟೈಮ್ಸ್‌ನಿಂದ ವರ್ಷದ ವ್ಯಾಪಾರ ನಾಯಕಿ ಮತ್ತು ಫೋರ್ಬ್ಸ್‌ನಿಂದ ಏಷ್ಯಾದ ಅತ್ಯಂತ ಶಕ್ತಿಶಾಲಿ ವ್ಯಾಪಾರ ಮಹಿಳೆ ಎಂದು ಹೆಸರಿಸಿರುವುದು ಸೇರಿದಂತೆ ವಿವಿಧ ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ವಿನತಿ ಪಡೆದಿದ್ದಾರೆ. ಇನ್ನು ವಿನತಿ ಅವರು ಮೇಕ್-ಎ-ವಿಶ್ ಇಂಡಿಯಾ ಮಂಡಳಿಯ ನಿರ್ದೇಶಕರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ ಕೂಡ. ಭಾರತದ ಜನಪ್ರಿಯ ಮಹಿಳಾ ಉದ್ಯಮಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ವಿನತಿ, ತಮ್ಮ ಕಂಪನಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಕೂಡ.