
Business Desk: ಶಿವ ನಡಾರ್ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. 2023ನೇ ಸಾಲಿನ ಫೋರ್ಬ್ಸ್ ಪಟ್ಟಿ ಪ್ರಕಾರ ನಡಾರ್ ಭಾರತದ ನಾಲ್ಕನೇ ಶ್ರೀಮಂತ ವ್ಯಕ್ತಿ. ಮುಖೇಶ್ ಅಂಬಾನಿ, ಗೌತಮ್ ಅದಾನಿ ಹಾಗೂ ಸೈರಸ್ ಪೂನಾವಾಲಾ ಅವರ ನಂತರದ ಸ್ಥಾನಗಳಲ್ಲಿದ್ದಾರೆ. ನಡಾರ್ ಬರೀ ಶ್ರೀಮಂತಿಕೆಯಿಂದ ಮಾತ್ರವಲ್ಲ, ಗಳಿಸಿದ ಸಂಪತ್ತನ್ನು ದಾನ ಮಾಡುವುದರಲ್ಲಿ ಕೂಡ ಮುಂದಿದ್ದಾರೆ. ಗಳಿಸಿದ್ದನ್ನು ಸಮಾಜಕ್ಕೆ ಹಿಂತಿರುಗಿಸಿ ನೀಡುವುದರಲ್ಲಿ ನಂಬಿಕೆ ಹೊಂದಿರುವ ನಡಾರ್ , 2022ನೇ ಸಾಲಿನಲ್ಲಿ ಭಾರತದ ಅತ್ಯಂತ ಶ್ರೀಮಂತ ದಾನಿ ಎಂದು ಗುರುತಿಸಿಕೊಂಡಿದ್ದಾರೆ. ಕೇವಲ 12 ತಿಂಗಳಲ್ಲಿ ಅವರು 1000 ಕೋಟಿ ರೂ. ದಾನ ಮಾಡಿದ್ದಾರೆ. ಈ ಮೊತ್ತ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರಿಗಿಂತ ಹೆಚ್ಚು. ನಡಾರ್ ಕುಟುಂಬ ಶಿವ ನಡಾರ್ ಫೌಂಡೇಷನ್ ಎಂಬ ಚಾರಿಟೇಬಲ್ ಫೌಂಡೇಷನ್ ನಡೆಸುತ್ತಿದ್ದು, ಅದರ ಮೂಲಕ ಶಿಕ್ಷಣ ಕ್ಷೇತ್ರಕ್ಕ ಸಾಕಷ್ಟು ಕೊಡುಗೆ ನೀಡಿದೆ. ಇನ್ನು ಶಿವ ನಡಾರ್ ಎಚ್ ಸಿಎಲ್ ಕಂಪನಿಯ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಮಗಳು ರೋಶ್ನಿ ನಡಾರ್ ಈಗ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅಂದ ಹಾಗೇ 2014ರಲ್ಲಿ ನಡಾರ್ ನವದೆಹಲಿಯಲ್ಲಿ115 ಕೋಟಿ ರೂ. ಬಂಗಲೆ ಖರೀದಿಸಿದ್ದು, ಅದನ್ನು ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.
ದಾನ ಮಾಡೋದರಲ್ಲಿ ಮುಖೇಶ್ ಅಂಬಾನಿಗಿಂತ ಮುಂದೆ
ಭಾರತದ ಸಿರಿವಂತರು ವಾರ್ಷಿಕವಾಗಿ ನೀಡುವ ದೇಣಿಗೆಗೆ ಸಂಬಂಧಿಸಿ 'ಎಡೆಲ್‌ಗೀವ್-ಹುರುನ್ ಇಂಡಿಯಾ' ಉದಾರ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 2022ನೇ ಸಾಲಿನ ಈ ಪಟ್ಟಿಯಲ್ಲಿ 77 ವರ್ಷದ ಶಿವ ನಡಾರ್ ಮೊದಲ ಸ್ಥಾನ ಗಳಿಸಿದ್ದಾರೆ. ದಿನಕ್ಕೆ 3 ಕೋಟಿ ರೂ. ಅಂದರೆ ಒಟ್ಟು 1,161 ಕೋಟಿ ರೂ. ದಾನ ಮಾಡುವ ಮೂಲಕ 'ಭಾರತದ ಅತ್ಯಂತ ಉದಾರಿ ದಾನಿ' ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಈ ಮೂಲಕ ಸತತ ಎರಡು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ವಿಪ್ರೋ ಸಂಸ್ಥೆ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರನ್ನು ಹಿಂದಿಕ್ಕಿದ್ದಾರೆ. ಅಜೀಂ ಪ್ರೇಮ್ ಜೀ 2022ನೇ ಸಾಲಿನಲ್ಲಿ 484 ಕೋಟಿ ರೂ. ದಾನ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಕಳೆದ ವರ್ಷ 411 ಕೋಟಿ ರೂ. ದಾನ ಮಾಡುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಮುಕೇಶ್ ಅಂಬಾನಿ ನಂಬಿಕಸ್ಥ ರಿಲಯನ್ಸ್ ಗ್ರೂಪ್‌ನ ಹೈಯೆಸ್ಟ್ ಪೇಯ್ಡ್ ಉದ್ಯೋಗಿ, ಸ್ಯಾಲರಿ ಎಷ್ಟ್ ಗೊತ್ತಾ?
ನಡಾರ್ ಹಿನ್ನೆಲೆ
ಶಿವ ನಡಾರ್ ತಮಿಳುನಾಡಿನ ಮೂಲೈಪೋಝಿಯಲ್ಲಿ 1945ರಲ್ಲಿ ಜನಿಸಿದ್ದರು. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಅವರು, ಉತ್ತಮ ವಿದ್ಯಾರ್ಥಿಯಾಗಿದ್ದರು. ಕೊಯಮತ್ತೂರಿನ ಪಿಎಸ್ ಜಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಅವರು, 1967ರಲ್ಲಿ ಪುಣೆಯ ಕೂಪರ್ ಇಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯಲ್ಲಿ ವೃತ್ತಿ ಪ್ರಾರಂಭಿಸಿದರು. 1970ರ ಮಧ್ಯಭಾಗದಲ್ಲಿ ಅವರು ಎಚ್ ಸಿಎಲ್ ಟೆಕ್ನಾಲಜೀಸ್ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಈ ಸಂಸ್ಥೆ ಹಾರ್ಡ್ ವೇರ್ ಉದ್ಯಮ ನಡೆಸುತ್ತಿತ್ತು. ನವದೆಹಲಿಯ ಗ್ಯಾರೇಜ್ ವೊಂದರಲ್ಲಿ ಈ ಸಂಸ್ಥೆ ಆರಂಭವಾಗಿತ್ತು. 1991ರ ನಂತರದಲ್ಲಿ ಅವರು ಎಚ್ ಸಿಎಲ್ ಐಟಿ ಸಂಸ್ಥೆ ಪ್ರಾರಂಭಿಸಿದರು. ಫೋರ್ಬ್ಸ್ ಪ್ರಕಾರ ಶಿವ ನಡಾರ್ ಅವರ ಪ್ರಸಕ್ತ ನಿವ್ವಳ ಸಂಪತ್ತು 2,07,700 ಕೋಟಿ ರೂ. ಈ ತನಕ ನಡಾರ್ ಶಿವ ನಡಾರ್ ಫೌಂಡೇಷನ್ ಗೆ
ಒಟ್ಟು 9000 ಕೋಟಿ ರೂ. ದಾನ ಮಾಡಿದ್ದಾರೆ.
ಶ್ರೀಮಂತ ಉದ್ಯಮಿಗಳೆಲ್ಲರೂ ಯಶಸ್ವಿ ವಿದ್ಯಾರ್ಥಿಗಳಲ್ಲ;ದೇಶದ ಟಾಪ್ 10 ಸಿರಿವಂತರ ವಿದ್ಯಾರ್ಹತೆ ಏನ್ ಗೊತ್ತಾ
ಮಗಳಿಗೆ ಅಧಿಕಾರ ಹಸ್ತಾಂತರ
2020ರಲ್ಲಿ ಶಿವ ನಡಾರ್ ಕಂಪನಿಯ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿದಿದ್ದರು. ಇವರ ಮಗಳು ರೋಶ್ನಿ ನಡಾರ್ ಎಚ್ ಸಿಎಲ್ ಐಟಿ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಈಕೆ ನಿವ್ವಳ ಸಂಪತ್ತು 80,000 ಕೋಟಿ ರೂ. ಆಗಿದ್ದು, ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
115 ಕೋಟಿ ರೂ. ಬಂಗಲೆ ಉಡುಗೊರೆ
ನವದೆಹಲಿಯ ಫ್ರೆಂಡ್ಸ್ ಕಾಲೋನಿ ಈಸ್ಟ್ ನಲ್ಲಿ ಶಿವ ನಡಾರ್, 2014ರಲ್ಲಿ 115 ಕೋಟಿ ರೂ. ಬೆಲೆಬಾಳುವ ಬಂಗಲೆ ಖರೀದಿಸಿದ್ದರು. 1,930 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಬಂಗಲೆಯನ್ನು ಮಗಳಿಗೆ ಉಡುಗೊರೆಯಾಗಿ ನೀಡಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.