ದೃಢಸಂಕಲ್ಪ ಹಾಗೂ ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಕ್ಕೇಸಿಗುತ್ತದೆ ಎಂಬುದಕ್ಕೆ ಇಂಟೆಕ್ಸ್ ಕಂಪನಿ ಸ್ಥಾಪಕ ನರೇಂದ್ರ ಬನ್ಸಾಲ್ ಉತ್ತಮ ನಿದರ್ಶನ. ಪ್ರವಾಸಿಗರ ಫೋಟೋ ತೆಗೆದು ಜೀವನ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ 6,500 ಕೋಟಿ ಮೌಲ್ಯದ ಕಂಪನಿ ಕಟ್ಟೋದು ನಿಜಕ್ಕೂ ಸುಲಭದ ಮಾತಲ್ಲ.
Business Desk: ಯಶಸ್ಸು ಸುಲಭವಾಗಿ ಸಿಗುವ ವಸ್ತುವಾಗಿದ್ರೆ ಎಲ್ಲರೂ ಕೂಡ ಅದರ ರುಚಿ ನೋಡಿರುತ್ತಿದ್ದರು. ಆದರೆ, ಯಶಸ್ಸು ಅನ್ನೋದು ಸುಲಭವಾಗಿ ಕೈಗೆಟುಕುವ ಸೊತ್ತಲ್ಲ. ಅದಕ್ಕೆ ದೃಢ ಸಂಕಲ್ಪ, ಕಠಿಣ ದುಡಿಮೆ ಹಾಗೂ ತಾಳ್ಮೆ ಅಗತ್ಯ. ಇದಕ್ಕೆ ಇಂಟೆಕ್ಸ್ ಕಂಪನಿ ಸ್ಥಾಪಕ ನರೇಂದ್ರ ಬನ್ಸಾಲ್ ಅತ್ಯುತ್ತಮ ನಿದರ್ಶನ. ಇಂಟೆಕ್ಸ್ ಟೆಕ್ನಾಲಜೀಸ್ ಭಾರತದ ಟಾಪ್ ಮೊಬೈಲ್ ಹಾಗೂ ಎಲೆಕ್ಟ್ರಿಕಲ್ ಉಪಕರಣಗಳ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಕಂಪನಿಯನ್ನು ಬನ್ಸಾಲ್ ಕೇವಲ 2 ಸಾವಿರ ರೂ. ಹೂಡಿಕೆಯೊಂದಿಗೆ ಪ್ರಾರಂಭಿಸಿದ್ದರು. ಇಂದು ಈ ಕಂಪನಿ ಮೌಲ್ಯ 6,500 ಕೋಟಿ ರೂ.ಗಿಂತ ಅಧಿಕವಿದೆ. ಇನ್ನು ಇಂಟೆಕ್ಸ್ ಭಾರತದ ಎರಡನೇ ಅತೀದೊಡ್ಡ ಮೊಬೈಲ್ ಫೋನ್ ಮಾರಾಟ ಕಂಪನಿಯಾಗಿದೆ. ಅತ್ಯಂತ ಸಣ್ಣ ಪ್ರಮಾಣದ ಹೂಡಿಕೆಯೊಂದಿಗೆ ಪ್ರಾರಂಭಿಸಿದ ಸಂಸ್ಥೆಯೊಂದು ಇಂದು ಬಹುಸಾವಿರ ಕೋಟಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತಿರೋದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಇವೆಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಸಾಮಾನ್ಯ ಫೋಟೋಗ್ರಾಫರ್ ಆಗಿದ್ದ ಬನ್ಸಾಲ್ ಬಹುಕೋಟಿ ಮೌಲ್ಯದ ಕಂಪನಿಯ ಒಡೆಯನಾಗಿ ಬೆಳೆದಿರೋದು ಉದ್ಯಮ ರಂಗದಲ್ಲಿರೋರಿಗೆ ಸ್ಫೂರ್ತಿದಾಯಕ.
ಫೋಟೋಗ್ರಾಫರ್ ನಿಂದ ಬಹುಕೋಟಿ ಉದ್ಯಮಿ
ನರೇಂದ್ರ ಬನ್ಸಾಲ್ ಉದ್ಯಮ ರಂಗಕ್ಕೆ ಕಾಲಿಡುವ ಮುನ್ನ ದೆಹಲಿಯ ಬಿರ್ಕಾ ಮಂದಿರದ ಮುಂದೆ ಪ್ರವಾಸಿಗರ ಫೋಟೋ ತೆಗೆದು ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿ ದೆಸೆಯಿಂದಲೂ ಬನ್ಸಾಲ್ ಜೀವನ ನಿರ್ವಹಣೆಗೆ ಅನೇಕ ವೃತ್ತಿಗಳನ್ನು ಮಾಡಿದ್ದರು. ಬನ್ಸಾಲ್ ಅವರು 1963ರಲ್ಲಿ ರಾಜಸ್ಥಾನದ ಹನುಮನ್ ಘರ್ ನಲ್ಲಿ ಜನಿಸಿದರು. ಅಲ್ಲೇ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಇವರು, ಆ ಬಳಿಕ ಅವರ ಕುಟುಂಬ ನೇಪಾಳಕ್ಕೆ ಸ್ಥಳಾಂತರಗೊಂಡ ಕಾರಣ ಅವರು ಅಲ್ಲಿ ಶಿಕ್ಷಣ ಮುಂದುವರಿಸಿದರು. ಅಲ್ಲಿನ ವಿಶ್ವನಿಕೇತನ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.
ತಂದೆಯಿಂದ ಸಾಲ ಪಡೆದು ಶೆಡ್‌ನಲ್ಲಿ ವ್ಯಾಪಾರ ಆರಂಭಿಸಿದ ವ್ಯಕ್ತಿ, ಈಗ ಮುಕೇಶ್ ಅಂಬಾನಿಯ ಜಿಯೋ ಪಾರ್ಟ್‌ನರ್!
ಶೈಕ್ಷಣಿಕ ವೆಚ್ಚ ಭರಿಸಲು ನಾನಾ ವೃತ್ತಿ
ಬನ್ಸಾಲ್ ಅವರ ಕುಟುಂಬ 1980ರಲ್ಲಿ ದೆಹಲಿಗೆ ಹಿಂತಿರುಗಿದ ಬಳಿಕ ಅವರು ದೆಹಲಿ ವಿಶ್ವವಿದ್ಯಾಲಯದ ಸ್ವಾಮಿ ಶ್ರದ್ಧಾನಂದ್ ಕಾಲೇಜಿನಲ್ಲಿ ಉದ್ಯಮದಲ್ಲಿ ಪದವಿ ಪೂರ್ಣಗೊಳಿಸಿದರು. ಶಿಕ್ಷಣ ವೆಚ್ಚದ ನಿರ್ವಹಣೆಗೆ ಬನ್ಸಾಲ್ ಆಡಿಯೋ-ವಿಡಿಯೋ ಕ್ಯಾಸೆಟ್ ಮಾರಾಟ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದರು. ಶಿಕ್ಷಣ ಪೂರ್ಣಗೊಳಿಸುವ ಹಂತಕ್ಕೆ ಬರುತ್ತಿದ್ದಂತೆ ಬನ್ಸಾಲ್ ಅವರ ಮನಸ್ಸಿನಲ್ಲಿ ಉದ್ಯಮಿಯಾಗುವ ಕನಸು ಮೊಳಕೆಯೊಡೆದಿತ್ತು. ಪರಿಣಾಮ ಅನೇಕ ಕ್ಷೇತ್ರಗಳಲ್ಲಿ ಇವರು ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ದೆಹಲಿ ಚಾಂದನಿ ಚೌಕ್ ನಲ್ಲಿ ನಯಾ ಬಜಾರ್ ಪ್ರದೇಶದಲ್ಲಿ ಕಾರ್ಡ್ ಲೆಸ್ ಫೋನ್ ಉದ್ಯಮ ಕೂಡ ನಡೆಸಿದರು.
ಉದ್ಯಮ ಪ್ರಾರಂಭಿಸಿದ್ದು ಹೇಗೆ?
ನರೇಂದ್ರ ಬನ್ಸಾಲ್ ಉದ್ಯಮಿ ಪ್ರಾರಂಭಿಸಲು ಯೋಚಿಸುತ್ತಿರುವ ಸಮಯದಲ್ಲಿ ಭಾರತದ ಐಟಿ ವಲಯ ಬೆಳವಣಿಗೆ ಹೊಂದಲು ಪ್ರಾರಂಭಿಸಿತ್ತು. ಅಲ್ಲದೆ, ಆ ಸಮಯದಲ್ಲಿ ಬನ್ಸಾಲ್ ದೆಹಲಿ ನೆಹರು ಪ್ಲೇಸ್ ಮಾರುಕಟ್ಟೆಯಲ್ಲಿ ಫ್ಲಾಪಿ ಡೆಸ್ಕ್ಸ್ ಸೇರಿದಂತೆ ವಿವಿಧ ಕಂಪ್ಯೂಟರ್ ಸಂಬಂಧಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಅವರು ಸಾಕಷ್ಟು ಹಣ ಗಳಿಸಿದ್ದರು. ಹೀಗಾಗಿ ಈ ಸಮಯದಲ್ಲಿ ಅಂದರೆ 1992ರಲ್ಲಿ ಅವರು ಕಂಪನಿ ಕಟ್ಟುವ ನಿರ್ಧಾರ ಕೈಗೊಂಡರು. ನೆಹರು ಪ್ಲೇಸ್ ಮಾರುಕಟ್ಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಂಪ್ಯೂಟರ್ ನಿರ್ಮಿಸಲು ಪ್ರಾರಂಭಿಸಿದರು. ಇದಕ್ಕೆ ಇಂಟರ್ ನ್ಯಾಷನಲ್ ಇಂಪೆಕ್ಸ್ ಎಂಬ ಹೆಸರಿಟ್ಟಿದ್ದರು.
1996ರಲ್ಲಿ ಬನ್ಸಾಲ್ ಇಂಟೆಕ್ಸ್ ಟೆಕ್ನಾಲಜೀಸ್ ಪ್ರಾರಂಭಿಸಿದರು. ಇವರು ಕೊರಿಯಾ ಹಾಗೂ ಚೀನಾದಿಂದ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಕಾರಣ ಇವರ ಕಂಪನಿಯ ಉತ್ಪನ್ನಗಳು ಇತರ ಕಂಪನಿಗಳಿಗಿಂತ ಅಗ್ಗದ ದರದಲ್ಲಿ ಲಭ್ಯವಾಗುತ್ತಿದ್ದವು. ಹೀಗಾಗಿ ಮೊದಲ ವರ್ಷವೇ ಇವರ ಕಂಪನಿ 30 ಲಕ್ಷ ರೂ. ಲಾಭ ಗಳಿಸಿತ್ತು. ಆ ಬಳಿಕ ಅವರು ಡಿವಿಡಿ ಪ್ಲಢಯರ್ಸ್, ಹೋಮ್ ಇಂಟರ್ ಟೈನ್ ಮೆಂಟ್ ಸಿಸ್ಟ್ಂ ಹಾಗೂ ಸ್ಪೀಕರ್ ಮಾರಾಟ ಮಾಡಲು ಪ್ರಾರಂಭಿಸಿದರು. ಆ ಬಳಿಕ ಇಂಟೆಕ್ಸ್ ವೆಬ್ ಕ್ಯಾಮ್ಸ್ ಹಾಗೂ ಕೀಬೋರ್ಡ್ ಗಳನ್ನು ಕೂಡ ಮಾರಾಟ ಮಾಡಲು ಪ್ರಾರಂಭಿಸಿತು.
ವಿದೇಶದಲ್ಲಿನ ಉನ್ನತ ಹುದ್ದೆ ತೊರೆದ ಐಐಟಿ ಪದವೀಧರ ಈಗ 3000 ಕೋಟಿ ಮೌಲ್ಯದ ಕಂಪನಿ ಒಡೆಯ
ಮೊಬೈಲ್ ಫೋನ್ ಗಳಿಗೆ ಬೇಡಿಕೆ ಹೆಚ್ಚಿದಂತೆ ಇಂಟೆಕ್ಸ್ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲು ಪ್ರಾರಂಭಿಸಿತು. ಇದು ಕೂಡ ಯಶಸ್ವಿಯಾಯಿತು. 2012ರಲ್ಲಿ ಈ ಕಂಪನಿ ಎಲ್ ಇಡಿ ಟಿವಿಗಳನ್ನು ಕೂಡ ಉತ್ಪಾದಿಸಲು ಪ್ರಾರಂಭಿಸಿತು. ಪ್ರಸ್ತುತ ಇಂಟೆಕ್ಸ್ ಟೆಕ್ನಾಲಜೀಸ್ ಮೌಲ್ಯ 6,500 ಕೋಟಿ ರೂ.ಗಿಂತಲೂ ಅಧಿಕವಿದೆ. ಇನ್ನು ಬನ್ಸಾಲ್ ಅವರ ನಿವ್ವಳ ಸಂಪತ್ತು 800 ಕೋಟಿ ರೂ.