ಒಪನ್ ಎಐ ನೂತನ ಸಿಇಒ ಎಮ್ಮೆಟ್ ಶಿಯರ್ ಟ್ವಿಚ್ ನಲ್ಲಿ ಅಂದಾಜು 210,000 ಡಾಲರ್ ಆದಾಯ ಗಳಿಸುತ್ತಿದ್ದರು.ಅವರ ಒಟ್ಟು ಸಂಪತ್ತು ಎಷ್ಟು ಮಿಲಿಯನ್ ಡಾಲರ್ ಗೊತ್ತಾ? ಇಲ್ಲಿದೆ ಮಾಹಿತಿ.
Business Desk: ಚಾಟ್ ಜಿಪಿಟಿ ಸೃಷ್ಟಿಕರ್ತ ಎಂದೇ ಜನಪ್ರಿಯತೆ ಗಳಿಸಿದ್ದ ಸ್ಯಾಮ್ ಆಲ್ಟ್ ಮನ್ ಅವರನ್ನು ಒಪನ್ ಎಐ ಸಂಸ್ಥೆ ಸಿಇಒ ಸ್ಥಾನದಿಂದ ವಜಾಗೊಳಿಸಿದ ಬೆನ್ನಲ್ಲೇ ಕಂಪನಿ ಆಡಳಿತ ಮಂಡಳಿ ಟ್ವಿಚ್ ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಿದೆ. ಒಪನ್ ಎಐ ಮೌಲ್ಯ ಅಂದಾಜು 2,40,000 ಕೋಟಿ ರೂ. ಇದೆ. ಸ್ಯಾಮ್ ಆಲ್ಟ್‌ಮನ್ ಅವರನ್ನು ಶುಕ್ರವಾರ ತಡರಾತ್ರಿ ಇದ್ದಕ್ಕಿದ್ದಂತೆ ಹುದ್ದೆಯಿಂದ ವಜಾ ಮಾಡಲಾಗಿತ್ತು. ಆ ಬಳಿಕ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಮೀರಾ ಮುರತಿ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿತ್ತು. ಆದರೆ, ಅವರು ಸ್ಯಾಮ್ ಆಲ್ಟ್‌ಮನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋ ಕಾರಣ ಅವರ ಸ್ಥಾನಕ್ಕೆ ಎಮ್ಮೆಟ್ ಶಿಯರ್ ಅವರನ್ನು ಕರೆ ತರಲಾಗಿದೆ. ಒಪನ್ ಎಐ ಅಧಿಕಾರಿಗಳನ್ನು ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಮುಖ್ಯಕಚೇರಿಯಲ್ಲಿ ಭಾನುವಾರ ಭೇಟಿ ಮಾಡುವಂತೆ ಸ್ಯಾಮ್ ಆಲ್ಟ್ ಮನ್ ಅವರಿಗೆ ಮೀರಾ ಮೂರತಿ ಆಹ್ವಾನ ನೀಡಿದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ಹಂಗಾಮಿ ಸಿಇಒ ಹುದ್ದೆಯಿಂದ ಕೆಳಗಿಳಿಸಲಾಗಿದೆ.
ಎಮ್ಮೆಟ್ ಶಿಯರ್ ಟ್ವಿಚ್ (Twitch) ಹಾಗೂ ಜಸ್ಟಿನ್ .ಟಿವಿ (Justin.tv) ಸಹಸಂಸ್ಥಾಪಕರಾಗಿದ್ದಾರೆ. ಈ ವರ್ಷದ ಮಾರ್ಚ್ ಕೊನೆಯ ತನಕ ಅವರು ಟ್ವಿಚ್ ಸಿಇಒ ಆಗಿದ್ದರು. 2005ರಲ್ಲಿ ಶಿಯರ್ ಯೇಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ವಿಜ್ಞಾನ ಪದವಿ ಪಡೆದಿದ್ದಾರೆ. 40 ವರ್ಷದ ಶಿಯರ್ ಅವಿವಾಹಿತರು. ಇನ್ನು ಶಿಯರ್ 2011ರ ಜೂನ್ ನಲ್ಲಿ ವೈ ಕಾಂಬಿನೇಟರ್ ಸಂಸ್ಥೆಯನ್ನು ಅರೆಕಾಲಿಕ ಪಾಲುದಾರರಾಗಿ ಸೇರಿದ್ದಾರೆ. ಅಲ್ಲಿ ಅವರು ಹೊಸ ಸ್ಟಾರ್ಟ್ ಅಪ್ ಗಳಿಗೆ ಪ್ರತಿ ಬ್ಯಾಚ್ ನಲ್ಲಿ ಸಲಹೆಗಳನ್ನು ನೀಡುತ್ತಿದ್ದರು. 2012ರಲ್ಲಿ ಶಿಯರ್ ಅವರನ್ನು ಫೋರ್ಬ್ಸ್ ಮ್ಯಾಗಜಿನ್ 30 ಅಂಡರ್ 30 ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದ್ದರು.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬೆಂಬಲ: ವಜಾ ಆಗಿದ್ದ ಆಲ್ಟ್‌ಮನ್‌ಗೆ ಮತ್ತೆ ಓಪನ್ ಎಐ ಸಿಇಒ ಸ್ಥಾನ?
2005ರಲ್ಲಿ ಶಿಯರ್ ಜಸ್ಟಿನ್ ಕ್ಯಾನ್ ಜೊತೆಗೆ ಸೇರಿ ಕಿಕೊ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಇದು ಆನ್ ಲೈನ್ ಅಜ್ಯಾಕ್ಸ್ ಆಧಾರಿತ ಕ್ಯಾಲೆಂಡರ್ ಅಪ್ಲಿಕೇಷನ್ ಆಗಿದೆ. ಆದರೆ, ಆ ಬಳಿಕ ಈ ಕಂಪನಿಯನ್ನು ಇಬೇಯಲ್ಲಿ (eBay) ಮಾರಾಟ ಮಾಡಲಾಗಿತ್ತು. ಗೂಗಲ್ ಕ್ಯಾಲೆಂಡರ್ ನಿಂದ ಸ್ಪರ್ಧೆ ಎದುರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
500 ಮಿಲಿಯನ್ ಡಾಲರ್ ಸಂಪತ್ತು
ಎಮ್ಮೆಟ್ ಶಿಯರ್ ನಿವ್ವಳ ಸಂಪತ್ತು 500 ಮಿಲಿಯನ್ ಡಾಲರ್. ಅವರು ಉದ್ಯೋಗದಿಂದ ಗಳಿಸಿದ ವೇತನವೇ ಅವರ ಸಂಪತ್ತಿನ ಮುಖ್ಯ ಮೂಲ. ಟ್ವಿಚ್ ಸಿಇಒ ಆಗಿರುವಾಗ ಶಿಯರ್ ಅಂದಾಜು 210,000 ಡಾಲರ್ ಆದಾಯ ಗಳಿಸುತ್ತಿದ್ದರು.
ಸ್ಯಾಮ್ ಆಲ್ಟ್ ಮನ್ ವಜಾಕ್ಕೆ ಸಂಬಂಧಿಸಿ ತನಿಖೆ
ಒಪನ್ ಎಐ ಸಂಸ್ಥೆ ಸಿಇಒ ಆಗಿ ಅಧಿಕಾರ ಸ್ವೀಕರಿಸಿರುವ ಶಿಯರ್ ಸಂಸ್ಥೆ ಸಹಸಂಸ್ಥಾಪಕ ಹಾಗೂ ಮಾಜಿ ಸಿಇಒ ಆಲ್ಟ್ ಮನ್ ವಜಾಕ್ಕೆ ಸಂಬಂಧಿಸಿ ತನಿಖೆ ಕೈಗೊಂಡಿರೋದಾಗಿ ತಿಳಿಸಿದ್ದಾರೆ. ಹಾಗೆಯೇ ಕಂಪನಿಯ ಆಡಳಿತ ಮಂಡಳಿಯಲ್ಲಿ ಸುಧಾರಣೆ ತರಲು ಪ್ರಯತ್ನಿಸೋದಾಗಿ ತಿಳಿಸಿದ್ದಾರೆ. ಇನ್ನು ಆಲ್ಟ್ ಮನ್ ವಜಾಕ್ಕೆ ಸಂಬಂಧಿಸಿದ ಕಾರಣವನ್ನು ಹುಡುಕಿ 30 ದಿನಗಳಲ್ಲಿ ವರದಿ ನೀಡುವುದಾಗಿಯೂ ಶಿಯರ್ ತಿಳಿಸಿದ್ದಾರೆ.
Twitch ಮಾಜಿ ಸಿಇಒ ಎಮ್ಮೆಟ್ ಶಿಯರ್ ಒಪನ್ ಎಐ ನೂತನ ಸಾರಥಿ; ಮೈಕ್ರೋಸಾಫ್ಟ್ ಸೇರಿದ ಸ್ಯಾಮ್ ಆಲ್ಟ್‌ಮನ್
ಮೈಕ್ರೋಸಾಫ್ಟ್ ಓಪನ್ ಎಐ ಸಂಸ್ಥೆಯಲ್ಲಿ ಶೇ.49ರಷ್ಟು ಷೇರು ಹೊಂದಿದ್ದು, ಮೈಕ್ರೋಸಾಫ್ಟ್ ಸೇರಿದಂತೆ ಎಲ್ಲ ಷೇರುದಾರರು ಆಲ್ಟ್‌ಮನ್‌ರನ್ನು ಮರು ನೇಮಕ ಮಾಡುವಂತೆ ನಿರ್ದೇಶಕ ಮಂಡಳಿಯ ಮೇಲೆ ಒತ್ತಡ ಹಾಕಿದ್ದರು. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಓಪನ್ ಎಐ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಖಾಸಗಿ ಸಂಶೋಧನಾ ಪ್ರಯೋಗಾಲಯವಾಗಿದೆ. ಇದನ್ನು 2015 ರಲ್ಲಿ ಆಲ್ಟ್‌ಮನ್, ಎಲಾನ್ ಮಸ್ಕ್ (ಇವರು ಓಪನ್ ಎಐ ಮಂಡಳಿಯಲ್ಲಿಲ್ಲ) ಮತ್ತು ಇತರರು ಲಾಭರಹಿತ ಸಂಸ್ಥೆಯಾಗಿ ಸ್ಥಾಪಿಸಿದರು. ಕಳೆದ ವರ್ಷ ಚಾಟ್‌ಜಿಪಿಟಿ ಬಿಡುಗಡೆ ಮೂಲಕ ವಿಶ್ವಾದ್ಯಂತ ಓಪನ್ ಎಐ ಕಂಪನಿ ಗಮನಸೆಳೆದಿತ್ತು.