ಸಾಧಾರಣ ವಿದ್ಯಾರ್ಥಿಯೊಬ್ಬ ಐಐಟಿಯಲ್ಲಿ ಓದಿ, ದಿನಕ್ಕೆ ಒಂದು ಕೋಟಿ ರೂ. ಗಳಿಸುತ್ತಿರುವ ಕಥೆ ಎಂಥವರಿಗೂ ಸ್ಫೂರ್ತಿ ನೀಡಬಲ್ಲದು. ಹೌದು, ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರ ಕಥೆ ನಿಜಕ್ಕೂ ಸ್ಪೂರ್ತಿದಾಯಕ. ಝೊಮ್ಯಾಟೋ ಎಂಬ ಸಂಸ್ಥೆಯನ್ನು ಕಟ್ಟಿ ಇಂದು ದಿನಕ್ಕೆ ಒಂದು ಕೋಟಿ ರೂ. ಗಳಿಕೆ ಹೊಂದಿರುವ ಅವರ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ.
Business Desk: ಬದುಕು ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಬಿಡುತ್ತದೆ. ಒಂದು ಪುಟ್ಟ ಘಟನೆ ಬದುಕಿನ ದಿಕ್ಕನ್ನೇ ಬದಲಿಸಿ ಬಿಡಬಲ್ಲದು. ಶಾಲೆಯ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಳ್ಳುತ್ತಿದ್ದ ವಿದ್ಯಾರ್ಥಿ ಮುಂದೊಂದು ದಿನ ಸಮಾಜದಲ್ಲಿ ಉನ್ನತ ಸಾಧನೆ ಮಾಡಬಹುದು. ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದವ ಮುಂದೊಂದು ದಿನ ಕೋಟ್ಯಧೀಶನಾಗಿ ಐಷಾರಾಮಿ ಜೀವನ ನಡೆಸಬಹುದು. ಇದೇ ಕಾರಣಕ್ಕೆ ಇಂದಿನ ಸ್ಥಿತಿಯನ್ನು ನೋಡಿ ಆ ವ್ಯಕ್ತಿಯ ಮುಂದಿನ ಭವಿಷ್ಯ ಊಹಿಸೋದು ನಿಜಕ್ಕೂ ತಪ್ಪು. ಇದಕ್ಕೆ ಅತ್ಯುತ್ತಮ ನಿದರ್ಶನ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್. ಇವರು ಝೊಮ್ಯಾಟೋ ಸಿಇಒ ಮಾತ್ರವಲ್ಲ, ಸ್ಥಾಪಕರು ಕೂಡ ಹೌದು. ದೀಪಿಂದರ್ ಗೋಯಲ್ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ.ಯಶಸ್ಸು ಸಾಧಿಸಲು ಅವರು ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಎದುರಿಸಿದ ಸವಾಲುಗಳು ಅನೇಕ. ಝೊಮ್ಯಾಟೋ ಸಂಸ್ಥೆ ಪ್ರಾರಂಭದಲ್ಲಿ ನಷ್ಟದಲ್ಲಿದ್ದರೂ ಆ ಬಳಿಕ ಲಾಭದಾಯಕವಾಗಿ ನಡೆಯಲು ಪ್ರಾರಂಭಿಸಿತ್ತು. ಇಂದು ಝೊಮ್ಯಾಟೋ ದೇಶದ ಜನಪ್ರಿಯ ಫುಡ್ ಡೆಲಿವರಿ ಆ್ಯಪ್ ಆಗಿದೆ ಎಂದರೆ ಅದಕ್ಕೆ ಮುಖ್ಯಕಾರಣ ಗೋಯಲ್ ಅವರ ದೃಢಸಂಕಲ್ಪ ಹಾಗೂ ಪರಿಶ್ರಮ.
ಪಂಜಾಬ್ ಮುಕ್ತಸರ್ ಜಿಲ್ಲೆಯಲ್ಲಿ ಜನಿಸಿದ ದೀಪಿಂದರ್ ಗೋಯಲ್, ಬಾಲ್ಯದಲ್ಲಿ ಬುದ್ಧಿವಂತ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಎಂಟನೇ ತರಗತಿಯಲ್ಲಿರುವಾಗ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಗೋಯಲ್ ಗೆ ನೆರವು ನೀಡಲು ನಿರ್ಧರಿಸಿದರು. ಈ ಪರೀಕ್ಷೆಯಲ್ಲಿ ಗೋಯಲ್ ಅನುತ್ತೀರ್ಣರಾಗುತ್ತಿದ್ದರು, ಆದರೆ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇದು ಗೋಯಲ್ ಬದುಕಿಗೆ ಹೊಸ ತಿರುವು ನೀಡಿತು. ಈ ಘಟನೆ ಅವರ ಜೀವನವನ್ನೇ ಬದಲಾಯಿಸಿತು. ಈ ಘಟನೆ ಬಳಿಕ ಗೋಯಲ್, ಶಾಲೆಯ ಟಾಪರ್ ಗಳಲ್ಲಿ ಒಬ್ಬರಾದರು.
ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಐಐಟಿ ವಿದ್ಯಾರ್ಥಿನಿ ಪ್ಯಾಕೇಜ್ ಕೇಳಿದ್ರೆ ಶಾಕ್ ಆಗ್ತೀರಾ!
ಐಐಟಿ ಪ್ರವೇಶ ಪರೀಕ್ಷೆ ಸಿದ್ಧತೆಗಾಗಿ ಗೋಯಲ್ ಅವರನ್ನು ಅವರ ಕುಟುಂಬ ಚಂಡೀಗಢಗೆ ಕಳುಹಿಸಿತ್ತು. ಆದರೆ, ಗೋಯಲ್ ಸರಿಯಾಗಿ ಸಿದ್ಧತೆ ನಡೆಸಲಿಲ್ಲ. ಹೀಗಾಗಿ ಅವರು ಮನೆಗೆ ಹಿಂತಿರುಗಿದ್ದರು. ಆದರೆ, ನಂತರದ ದಿನಗಳಲ್ಲಿ ಅವರು ಐಐಟಿ ದೆಹಲಿ ಪರೀಕ್ಷೆ ಉತ್ತೀರ್ಣರಾದರು. ದೀಪಿಂದರ್ ಅವರು 2005 ರಲ್ಲಿ ಐಐಟಿ ದೆಹಲಿಯಿಂದ ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.
ಝೊಮ್ಯಾಟೋ 2021ರಲ್ಲಿ ಲಿಸ್ಟೆಡ್ ಆದ ಬಳಿಕ ದೀಪಿಂದರ್ ಗೋಯಲ್ ಅವರ ನಿವ್ವಳ ಸಂಪತ್ತು 5,345 ಕೋಟಿ ರೂ.ಗೆ ಏರಿಕೆಯಾಗಿದೆ. ಆ ಸಮಯದಲ್ಲಿ ಝೊಮ್ಯಾಟೋವಲ್ಲಿ ಅವರ ಪಾಲು ಶೇ.4.7ರಷ್ಟಿತ್ತು. ಕೊರೋನಾ ಪೆಂಡಾಮಿಕ್ ಸಂದರ್ಭದಲ್ಲಿ ದೀಪಿಂದರ್ ಗೋಯಲ್ ಝೊಮ್ಯಾಟೋ ಡೆಲಿವರಿ ಪಾರ್ಟನರ್ ಗಳ ಮಕ್ಕಳ ಶಿಕ್ಷಣಕ್ಕಾಗಿ 700 ಕೋಟಿ ರೂ. ಮೊತ್ತದ ಷೇರುಗಳನ್ನು ದಾನ ಮಾಡಿದ್ದರು. ಸ್ಟಾಕ್ ಓನರ್‌ಶಿಪ್ ಯೋಜನೆಯ ಅಂಗವಾಗಿ ತಮಗೆ ಲಭ್ಯವಾಗುವ ಸುಮಾರು 700 ಕೋಟಿ ರೂ.ಗಳನ್ನು ಗೋಯಲ್ ಅವರು ಝೊಮ್ಯಾಟೋ ಫ್ಯೂಚರ್ ಸಂಸ್ಥೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ. ಝೊಮ್ಯಾಟೋದಲ್ಲೇ 10 ವರ್ಷಕ್ಕೂ ಹೆಚ್ಚು ಅವಧಿ ಕಾರ್ಯನಿರ್ವಹಿಸಿದ ಡೆಲಿವರಿ ಬಾಯ್ ಅವರ ಮಕ್ಕಳಿಗೆ ತಲಾ 1 ಲಕ್ಷ ರೂ. ಶಿಕ್ಷಣಕ್ಕಾಗಿ ಒದಗಿಸಲಾಗುವುದು. ಈ ಸಂಸ್ಥೆಯು ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆ ಹೊಂದಿದ್ದು, 12 ನೇ ತರಗತಿ ಹಾಗೂ ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಗೋಯಲ್ ಆ ಸಂದರ್ಭದಲ್ಲಿ ತಿಳಿಸಿದ್ದರು.
ಲೂಟಿಗಿಳಿದ Swiggy-Zomato ವಿರುದ್ಧ ಹೋಟೆಲ್ ಮಾಲೀಕರ ಸಮರ, ಕೇಂದ್ರದ ONDC ಆ್ಯಪ್ ಜತೆ ಒಪ್ಪಂದಕ್ಕೆ ಚಿಂತನೆ!
ಗೋಯಲ್ ಝೊಮ್ಯಾಟೋ ಕಂಪನಿಯಿಂದ ಯಾವುದೇ ವೇತನ ಸ್ವೀಕರಿಸುತ್ತಿಲ್ಲ. ಆದರೂ ಇಎಸ್ ಒಪಿಎಸ್ ಆಗಿ ಅವರು 358 ಕೋಟಿ ರೂ. ಸ್ವೀಕರಿಸಿದ್ದಾರೆ. ಅಂದರೆ ದಿನಕ್ಕೆ ಇವರು 1 ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಇನ್ನು ಝೊಮ್ಯಾಟೋ ಕಂಪನಿಯ ಮಾರುಕಟ್ಟೆ ಬಂಡವಾಳ 66,874 ಕೋಟಿ ರೂ. ಇನ್ನು ಇನ್ ಸ್ಟಾಗ್ರಾಮ್ ನಲ್ಲಿ ಗೋಯಲ್ ತನ್ನನ್ನು ಝೊಮ್ಯಾಟೋ ಡೆಲಿವರಿ ಬಾಯ್ ಎಂದು ಕರೆದುಕೊಂಡಿದ್ದಾರೆ. ಆಗಾಗ ಇವರು ಕೂಡ ಗ್ರಾಹಕರಿಗೆ ಆಹಾರ ಡೆಲಿವರಿ ಮಾಡಲು ಹೋಗುತ್ತಾರೆ. ಆ ಮೂಲಕ ಕಂಪನಿಯ ಹೆಸರನ್ನು ಇನ್ನಷ್ಟು ಜಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ.