ವಿಮಾನದಲ್ಲಿ ಸಹಪ್ರಯಾಣಿಕನಿಗೆ ನಾರಾಯಣ ಮೂರ್ತಿ ನೀಡಿದ್ರು ಅತ್ಯಮೂಲ್ಯ ಟಿಪ್ಸ್;ವೈರಲ್ ಆಯ್ತು ಲಿಂಕ್ಡ್ಇನ್ ಪೋಸ್ಟ್

By Suvarna NewsFirst Published Jan 23, 2024, 5:31 PM IST
Highlights

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ತನ್ನ ಪಕ್ಕದ ಸೀಟ್ ನಲ್ಲಿ ಕುಳಿತಿರೋದು ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಅನ್ನೋದು ತಿಳಿಯುತ್ತಿದ್ದಂತೆ ಅಚ್ಚರಿ ಮೂಡಿತು. ಅವರ ಜೊತೆಗೆ ಮಾತಿಗಳಿದಾಗ ಅತ್ಯಮೂಲ್ಯ ವಿಚಾರಗಳನ್ನು ಮೂರ್ತಿ ಹಂಚಿಕೊಂಡಿದ್ದು, ಆ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಬೆಂಗಳೂರು (ಜ.23):ವಿಮಾನದಲ್ಲಿ ಪ್ರಯಾಣಿಸುವಾಗ ಬಹುತೇಕರು ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯನ್ನು ಗಮನಿಸೋದು ಅಷ್ಟಕಷ್ಟೆ. ಗಮನಿಸಿದರೂ ಮಾತುಕತೆ ನಡೆಯೋದು ವಿರಳ. ಆದರೆ, ನಿನ್ನೆ (ಜ.22)  ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಅಚ್ಚರಿ ಎದುರಾಗಿತ್ತು. ತನ್ನ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಇನ್ಫೋಸಿಸ್ ಸಹಸ್ಥಾಪಕ ನಾರಾಯಣಮೂರ್ತಿ ಅನ್ನೋದು ತಿಳಿಯುತ್ತಿದ್ದಂತೆ ಆತನಿಗೆ ಒಂದು ಕ್ಷಣ ನಂಬಲಾಸಾಧ್ಯವಾಗಿತ್ತು. ಇಂಥದೊಂದು ಅನುಭವ ಆಗಿರೋದು ಇಂಡಿಗೋ ಪ್ರಯಾಣಿಕ ನರೇನ್ ಕೃಷ್ಣ ಅವರಿಗೆ. ಈ ವಿಶೇಷ ಅನುಭವವನ್ನು ಅವರು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಭಾರತದ ಯಶಸ್ವಿ ಉದ್ಯಮಿಯಿಂದ ತಾನು ಯಾವೆಲ್ಲ ವಿಚಾರಗಳನ್ನು ಕಲಿತುಕೊಂಡೆ ಎಂಬ ಮಾಹಿತಿಯನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 

ಕೆಲವೇ ಗಂಟೆಗಳಲ್ಲಿ ತಾನು ಮೂರ್ತಿ ಅವರೊಂದಿಗೆ ಹಲವು ವಿಚಾರಗಳ ಕುರಿತು ಮಾತನಾಡಿರೋದಾಗಿ ನರೇನ್ ಕೃಷ್ಣ ತಿಳಿಸಿದ್ದಾರೆ. ಇಬ್ಬರೂ ಭವಿಷ್ಯದಲ್ಲಿ ಎಐ ವಿಸ್ತಾರ, ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯಲ್ಲಿ ಯುವಕರ ಪಾತ್ರ, ಭವಿಷ್ಯದಲ್ಲಿ ಚೀನಾವನ್ನು ಭಾರತ ಮೀರಿಸೋದು, ಒತ್ತಡ ನಿರ್ವಹಣೆ ಹಾಗೂ ಒಂದು ಕಂಪನಿ ಸ್ಥಾಪಿಸುವಾಗ ಸೋಲುಗಳ ನಡುವೆ ಮುಂದೆ ಸಾಗೋದು ಹೇಗೆ ಎಂಬ ಬಗ್ಗೆ ನಾರಾಯಣ ಮೂರ್ತಿ ಹಾಗೂ ತಾನು ಅಭಿಪ್ರಾಯಗಳನ್ನು ಹಂಚಿಕೊಂಡಿರೋದಾಗಿ ನರೇನ್ ಕೃಷ್ಣ ತಿಳಿಸಿದ್ದಾರೆ. 

ಇನ್ಫೋಸಿಸ್‌ ನಾರಾಯಣಮೂರ್ತಿ ಗುಟ್ಟು ರಟ್ಟು; ಬೆಳಗ್ಗೆ 6ಕ್ಕೆ ಆಫೀಸು, ರಾತ್ರಿ 9ಕ್ಕೆ ಮನೆಗೆ ವಾಪಸು!

ಇನ್ನು ನಾರಾಯಣ ಮೂರ್ತಿ ಅವರಿಂದ ಪಡೆದಿರುವ ಒಂದು ಅತ್ಯಮೂಲ್ಯ ಸಲಹೆಯನ್ನು ಕೂಡ ನರೇನ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ನರೇನ್ ಹೀಗೆ ಬರೆದಿದ್ದಾರೆ: ''ಫಲಿತಾಂಶಗಳ ಬಗ್ಗೆ ನಿರ್ಲಿಪ್ತತೆ ಹೊಂದುವುದು ಮುಖ್ಯ ಎಂಬ  ಒಂದು ಅತ್ಯಮೂಲ್ಯ ಸಲಹೆಯನ್ನು ಅವರು ನೀಡಿದ್ದಾರೆ. ಇದಕ್ಕೆ ಅವರು ತಮ್ಮ ಇನ್ಫೋಸಿಸ್ ಪ್ರಯಾಣದಲ್ಲಿನ ಹಲವು ಘಟನೆಗಳನ್ನು ನಿದರ್ಶನವಾಗಿ ನೀಡಿದ್ದಾರೆ. ಅವಿರತವಾಗಿ ಪರಿಶ್ರಮಪಟ್ಟರೂ ದೊಡ್ಡ ಒಪ್ಪಂದಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಕೆಲವೊಮ್ಮೆ ಅನಿರೀಕ್ಷಿತವಾಗಿ ದೊಡ್ಡ ಒಪ್ಪಂದಗಳನ್ನು ಕುದುರುವ ಮೂಲಕ ಅಚ್ಚರಿ ಮೂಡಿಸುತ್ತಿದ್ದವು. ಈ ಚರ್ಚೆಯಲ್ಲಿ ನಾನು ತೆಗೆದುಕೊಳ್ಳಲು ಬಯಸುವ ಮುಖ್ಯವಾದ ವಿಚಾರವೆಂದರೆ ಅವರು ಉಲ್ಲೇಖಿಸಿರುವ ಲೂಯಿಸ್ ಪಶ್ಚರ್ ಅವರ ಕೋಟ್ 'ಸಿದ್ಧತೆ ನಡೆಸಿರುವ ಮಿದುಳಿಗೆ ಅವಕಾಶ ನೆರವು ನೀಡುತ್ತದೆ.''

ಈ ಪೋಸ್ಟ್ ಕೊನೆಯಲ್ಲಿ ಮೂರ್ತಿ ಅವರು ಎಐ ವಿವಿಧ ಕೈಗಾರಿಕೆಗಳಲ್ಲಿ ಪರಿವರ್ತನೆ ತರುತ್ತದೆ ಹಾಗೂ ಮಾನವನ ಉತ್ಪಾದನೆ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಿದ್ದಾರೆ ಎಂಬ ಬಗ್ಗೆ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

ಯಶಸ್ಸು ಬೇಕಂದ್ರೆ ವಾರಕ್ಕೆ 70 ಗಂಟೆ ಕೆಲಸ ಮಾಡಿ; ಮೂರ್ತಿ ಹೇಳಿಕೆ ಬೆಂಬಲಿಸಿದ ನೌಕ್ರಿ ಡಾಟ್ ಕಾಮ್ ಬಾಸ್!

ನರೇನ್ ಕೃಷ್ಣ ಅವರು ಈ ಪೋಸ್ಟ್ ಅನ್ನು ಜನವರಿ 22ರಂದು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು  4,000 ಮಂದಿ ವೀಕ್ಷಿಸಿದ್ದಾರೆ ಹಾಗೂ ಹಲವಾರು ಕಾಮೆಂಟ್ ಗಳು ಬಂದಿವೆ. ಅನೇಕರು ಮೂರ್ತಿ ಅವರನ್ನು ಭೇಟಿಯಾಗಿ ಅವರಿಂದ ಅನೇಕ ವಿಚಾರಗಳನ್ನು ಕಲಿತ ಕೃಷ್ಣ ಅವರು 'ತುಂಬಾ ಅದೃಷ್ಟವಂತರು' ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಕೃಷ್ಣ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಒಬ್ಬರು, 'ಅಂಥ ಮಹಾನ್ ವ್ಯಕ್ತಿ ಜೊತೆಗೆ ಸೀಟು ಸಿಕ್ಕಿರೋದು ಎಂಥ ಹೆಮ್ಮೆ' ಎಂದಿದ್ದಾರೆ. ಇನ್ನೊಬ್ಬರು 'ಕೆಲವೇ ಗಂಟೆಗಳಾದ್ರೂ ಇದು ನಿಮಗೆ ಸಿಕ್ಕಿರುವ ಅತ್ಯಂತ ಉತ್ತಮವಾದ ಕಲಿಕೆ ಅನ್ನೋದು ನನಗೆ ಗೊತ್ತಿದೆ. ಈ ಕಲಿಕೆ ಕೆಲವೊಮ್ಮೆ ನಾಲ್ಕು ವರ್ಷಗಳ ಪದವಿಯುದ್ದಕ್ಕೂ ಸಿಗಲು ಸಾಧ್ಯವಿಲ್ಲ. ನಿಮ್ಮ ಅನುಭವಗಳನ್ನು ತಿಳಿಯೋದು ನಿಜಕ್ಕೂ ಖುಷಿ ಅನಿಸುತ್ತದೆ. ನೀವು ನಿಜಕ್ಕೂ ಅದೃಷ್ಟವಂತರು ನರೇನ್ ಕೃಷ್ಣ' ಎಂದು ಪ್ರತಿಕ್ರಿಯಿಸಿದ್ದಾರೆ. 'ಹಂಚಿಕೊಂಡಿರುವ ಪಾಠಗಳು ನಿಜಕ್ಕೂ ಬಂಗಾರ. ಅಂಥ ಒಬ್ಬರು ದಾರ್ಶನಿಕರಿಂದ ಕಲಿಯಲು ಸಿಗೋದು ತುಂಬಾ ವಿರಳ' ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 

click me!