ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ನಿರ್ವಹಣೆ ಮಾಡೋದು ಕಷ್ಟ. ಪ್ರತಿ ಬ್ಯಾಂಕಿನ ಖಾತೆಗೂ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಬಳಸಬೇಕಾಗುತ್ತದೆ. ಆದರೆ, ಈಗ ಗ್ರಾಹಕರಿಗೆ ಅಂಥ ತಲೆನೋವು ಇಲ್ಲ. ಒಂದೇ ಅಪ್ಲಿಕೇಷನ್ ನಲ್ಲಿ ಎಲ್ಲ ಬ್ಯಾಂಕ್ ಖಾತೆಗಳ ವಹಿವಾಟುಗಳ ಮಾಹಿತಿ ಪಡೆಯಬಹುದು.
ನವದೆಹಲಿ (ನ.23): ಬಹುತೇಕರು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಯಾವ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ತಿಳಿಯಲು ವಿವಿಧ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಬೇಕಾಗುತ್ತದೆ ಇಲ್ಲವೇ ಬೇರೆ ಬ್ಯಾಂಕಿಂಗ್ ಅಪ್ಲಿಕೇಷನ್ ಗಳ ಮೂಲಕ ಈ ಖಾತೆಗಳಲ್ಲಿರುವ ಬ್ಯಾಲೆನ್ಸ್ ಹಾಗೂ ವೆಚ್ಚಗಳನ್ನು ಪತ್ತೆ ಹಚ್ಚಬೇಕಾಗುತ್ತದೆ. ಇದು ನಿಜಕ್ಕೂ ಕಷ್ಟದ ಕೆಲಸ. ಅಲ್ಲದೆ, ಕೆಲವೊಮ್ಮೆ ಕೆಲವು ಬ್ಯಾಂಕ್ ಗಳಲ್ಲಿ ನಮ್ಮ ಖಾತೆಯಿದೆ ಎಂಬುದನ್ನೇ ಮರೆತು ಬಿಟ್ಟಿರುತ್ತೇವೆ. ಇಂಥ ಸಂದರ್ಭಗಳಲ್ಲಿ ಗ್ರಾಹಕರಿಗೆ ತಮ್ಮ ಹಣಕಾಸು ನಿರ್ವಹಣೆಯನ್ನು ಸರಳೀಕರಿಸಲು ಆಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ 'ಸಿಂಗಲ್ ವಿವ್ಯೂ ಡ್ಯಾಶ್ ಬೋರ್ಡ್ಸ್' ಬಿಡುಗಡೆ ಮಾಡಿವೆ. ಇದು ಬ್ಯಾಂಕ್ ಖಾತೆಗಳ ಮಾಹಿತಿಗಳನ್ನು ಮೊಬೈಲ್ ಅಪ್ಲಿಕೇಷನ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಪಡೆಯಲು ನೆರವು ನೀಡುತ್ತವೆ. ಆಕ್ಸಿಸ್ ಬ್ಯಾಂಕ್ 'ಸಿಂಗಲ್ ವಿವ್ಯೂ ಡ್ಯಾಶ್ ಬೋರ್ಡ್' ಅನ್ನು 'ಒನ್ ವಿವ್ಯೂ' ಎಂದು ಕರೆಯಲಾಗುತ್ತದೆ. ಹಾಗೆಯೇ ಐಸಿಐಸಿಐ ಬ್ಯಾಂಕ್ ಡ್ಯಾಶ್ ಬೋರ್ಡ್ ಅನ್ನು 'ಐ ಫೈನಾನ್ಸ್ ' ಎಂದು ಕರೆಯಲಾಗುತ್ತದೆ.
ಅಕೌಂಟ್ ಅಗ್ರಿಗೇಟರ್ ಇಕೋಸಿಸ್ಟ್ಂ ಮೂಲಕ ಒಂದು ಬ್ಯಾಂಕ್ ಖಾತೆದಾರರು ಇನ್ನೊಂದು ಬ್ಯಾಂಕಿನಲ್ಲಿ ಹೊಂದಿರುವ ಖಾತೆಗಳ ಮಾಹಿತಿ ಪಡೆಯಬಹುದು. ಈ ವ್ಯವಸ್ಥೆಯಿಂದ ಗ್ರಾಹಕರು ಖಾತೆ ಹೊಂದಿರುವ ಎಲ್ಲ ಬ್ಯಾಂಕುಗಳ ಅಪ್ಲಿಕೇಷನ್ ಗಳನ್ನು ಮೊಬೈಲ್ ನಲ್ಲಿ ಹೊಂದಿರಬೇಕಾದ ಅಗತ್ಯವಿಲ್ಲ. ಒಂದೇ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ತಮ್ಮ ಎಲ್ಲ ಬ್ಯಾಂಕ್ ವಹಿವಾಟುಗಳ ಮಾಹಿತಿಯನ್ನು ಪಡೆಯಲು ಈ ವ್ಯವಸ್ಥೆ ಅನುಕೂಲ ಕಲ್ಪಿಸುತ್ತದೆ.
ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಸಿಗುತ್ತೆ 9%ಕ್ಕಿಂತ ಹೆಚ್ಚಿನ ಬಡ್ಡಿ
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಐ ಫೈನಾನ್ಷ ಬಳಸಲು ಅವಕಾಶವಿದೆ. ಈ ಪ್ರಕ್ರಿಯೆ ಪ್ರಾರಂಭಿಸಲು ಐಸಿಐಸಿಐ ಬ್ಯಾಂಕ್ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಷನ್ ಗೆ ಲಾಗಿನ್ ಆಗಬೇಕು. ಆ ಬಳಿಕ ಐ ಫೈನಾನ್ಸ್ ಆಯ್ಕೆ ಮಾಡಿ ಹಾಗೂ ಮೊಬೈಲ್ ಒಟಿಪಿ ಪರಿಶೀಲನೆ ನಡೆಸಿ. ಒಟಿಪಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ನಿಯಂತ್ರಿತ ಅಕೌಂಟ್ ಅಗ್ರೆಗೇಟರ್ 'ಸೇತುವಿನಿಂದ' ಕಳುಹಿಸಲಾಗುತ್ತದೆ.
ಒಟಿಪಿ ಮೊಬೈಲ್ ಗೆ ಬಂದ ತಕ್ಷಣ ನೀವು ಲಿಂಕ್ ಮಾಡಲು ಬಯಸುವ ಬ್ಯಾಂಕ್ ಖಾತೆಗಳನ್ನು ಆಯ್ಕೆ ಮಾಡಿ. ಆ ನಂತರ ಒಟಿಪಿಮೂಲಕ ಖಾತೆಗಳನ್ನು ಪರಿಶೀಲಿಸಿ ಹಾಗೂ iFinance ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಗಳನ್ನು ಟ್ರ್ಯಾಕ್ ಮಾಡಿ.
ಆಕ್ಸಿಸ್ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಗೆ ನಿಮ್ಮ ಖಾತೆಗಳನ್ನು ಒನ್-ವಿವ್ಯೂ ಫೀಚರ್ ಬಳಸಿಕೊಂಡು ಲಿಂಕ್ ಮಾಡಿ. ಈ ಪ್ರಕ್ರಿಯೆ ಕೂಡ ಐಸಿಐಸಿಐ ಬ್ಯಾಂಕ್ ಮಾದರಿಯಲ್ಲೇ ಇರಲಿದೆ. ಇಲ್ಲಿ ಮೊಬೈಲ್ ಪರಿಶೀಲನೆಗೆ Finvuನಿಂದ ಒಟಿಪಿ ಕಳುಹಿಸಲಾಗುತ್ತದೆ. Finvu ಆರ್ ಬಿಐ ನಿಯಂತ್ರಿತ ಇನ್ನೊಂದು ಅಕೌಂಟ್ ಅಗ್ರೆಗೇಟರ್.ಈ ವ್ಯವಸ್ಥೆ ಬಳಸಿಕೊಳ್ಳಲು ಗ್ರಾಹಕರು ಯಾವುದೇ ಶುಲ್ಕ ನೀಡಬೇಕಾಗಿಲ್ಲ.
ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌ಗಳಿಗೆ ಆರ್‌ಬಿಐ ನಿಯಮ ಇನ್ನಷ್ಟು ಬಿಗಿ!
ಡೇಟಾ ಡಿಸ್ ಪ್ಲೇ ಎಷ್ಟು ನಿಖರವಾಗಿದೆ?
ಈ ವ್ಯವಸ್ಥೆಯಲ್ಲಿ ನಿಮಗೆ ಲಭಿಸುವ ಮಾಹಿತಿ ಇತರ ಬ್ಯಾಂಕುಗಳು ಹಂಚಿಕೊಂಡಿರುವ ಮಾಹಿತಿಗಳ ನಿಖರತೆಯನ್ನು ಆಧರಿಸಿದೆ. ಬ್ಯಾಂಕುಗಳು ಹಣಕಾಸು ಮಾಹಿತಿ ಪೂರೈಕೆದಾರರು (ಎಫ್ ಐಪಿಎಸ್) ನೀಡುವ ಮಾಹಿತಿಗಳನ್ನು ಅವಲಂಬಿಸಿರುತ್ತಾರೆ. ಅಲ್ಲದೆ, ಈ ಮಾಹಿತಿಗಳಲ್ಲಿ ಯಾವುದೇ ಬದಲಾವಣೆಯನ್ನು ಕೂಡ ಮಾಡುವುದಿಲ್ಲ.ಈ ಮಾಹಿತಿ ಬಳಸಿ ನೀವು ನಿಮ್ಮ ವೆಚ್ಚಗಳನ್ನು ಕಡಿತಗೊಳಿಸೋದು ಹಾಗೂ ಉಳಿತಾಯವನ್ನು ಉತ್ತಮ ರೀತಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು.