ಮರಳಿ ಟಾಟಾ ಕುಟುಂಬಕ್ಕೆ ಏರ್‌ ಇಂಡಿಯಾ ಸೇರ್ಪಡೆ, ಇದಕ್ಕಿದೆ 90 ವರ್ಷಗಳ ಇತಿಹಾಸ!

By Suvarna NewsFirst Published Oct 10, 2021, 1:31 PM IST
Highlights

90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. 

‘ಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡ 90 ವರ್ಷಗಳ ಇತಿಹಾಸ ಹೊಂದಿದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇಂದು 60000 ಕೋಟಿ ನಷ್ಟದಲ್ಲಿದೆ. ಸಂಸ್ಥೆಯನ್ನು ಮೇಲೆತ್ತಲು ಮಾಡಿರುವ ಎಲ್ಲಾ ಪ್ರಯತ್ನಗಳು ವಿಫಲಗೊಂಡಿರುವುದರಿಂದ ಸರ್ಕಾರ ಅದನ್ನು ಖಾಸಗೀಕರಣ ಮಾಡಿದೆ.

ಸರ್ಕಾರ ಆಹ್ವಾನಿಸಿದ್ದ ಬಿಡ್‌ನಲ್ಲಿ ಅತಿ ಹೆಚ್ಚು ನಮೂದಿಸಿದ್ದ ಟಾಟಾ ಸಮೂಹ, ಕಂಪನಿಯನ್ನು ಮರಳಿ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಏರ್‌ ಇಂಡಿಯಾ ಕಂಪನಿ ತನ್ನ ಕುಟುಂಬಕ್ಕೆ ಮರಳಿದೆ. ಈ ಹಿನ್ನೆಲೆಯಲ್ಲಿ ಆಗಸದ ರಾಜನಾಗಿ ಮೆರೆದ ಏರ್‌ ಇಂಡಿಯಾ ಇಂದು ಈ ಪರಿಯ ದುಸ್ಥಿತಿಗೆ ತಲುಪಿದ್ದು ಹೇಗೆ? ಟಾಟಾ ಸಮೂಹದಿಂದ ಅದು ಸರ್ಕಾರದ ಪಾಲಾಗಿದ್ದು ಹೇಗೆ, ಮತ್ತೆ ಟಾಟಾ ಸಮೂಹದ ಪಾಲಾಗಬಹುದೇ ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ಟಾಟಾ ಸ್ಥಾಪಿಸಿದ ಏರ್‌ಲೈನ್ಸ್‌

1932 ಅ.15ರಂದು ಟಾಟಾ ಸನ್ಸ್‌ ಉದ್ಯಮಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸ್ಥಾಪಿಸಿದ್ದರು. ಭಾರತದ ಮೊಟ್ಟಮೊದಲ ವಿಮಾನಯಾನ ಕಂಪನಿಯದು. ಟಾಟಾ ಅವರು ಸ್ವತಃ ಕರಾಚಿಯಿಂದ ಮುಂಬೈವರೆಗೆ ವಿಮಾನ ಹಾರಾಟ ನಡೆಸಿ ದೇಶದ ಮೊಟ್ಟಮೊದಲ ಪೈಲಟ್‌ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದರು. ನಂತರ ಮದ್ರಾಸ್‌ಗೆ ವಿಮಾನಯಾನ ಆರಂಭಿಸಲಾಯಿತು.

ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ ವಿಮಾನ ಸಂಸ್ಥೆ, ಭಾವುಕರಾದ ಟಾಟಾ!

ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್‌ನ ಸೇವೆಯನ್ನು ಬ್ರಿಟಿಷ್‌ ಸರ್ಕಾರ ಯುದ್ಧ ಸಂಬಂಧಿ ಚಟುವಟಿಕೆಗಳಿಗೆ ಬಳಸಿಕೊಂಡಿತು. ನಂತರ ಮಹಾಯುದ್ಧ ಮುಗಿದ ಮೇಲೆ ಟಾಟಾ ಏರ್‌ಲೈನ್ಸ್‌ ಮತ್ತೆ ವಾಣಿಜ್ಯ ಸೇವೆ ಆರಂಭಿಸಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತ ಸರ್ಕಾರ ತನ್ನದೇ ವಿಮಾನಯಾನ ಕಂಪನಿಯೊಂದು ಇರಬೇಕು ಎಂಬ ದೃಷ್ಟಿಯಿಂದ ಟಾಟಾ ಏರ್‌ಲೈನ್ಸ್‌ನ ಶೇ.49ರಷ್ಟುಷೇರುಗಳನ್ನು ಖರೀದಿಸಿತು. ಆಗ ಅದಕ್ಕೆ ‘ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌’ ಎಂದು ನಾಮಕರಣ ಮಾಡಲಾಯಿತು.

1953ರಲ್ಲಿ ಏಕಾಏಕಿ ರಾಷ್ಟ್ರೀಕರಣ

ನಂತರ 1953ರಲ್ಲಿ ಭಾರತ ಸರ್ಕಾರವು ಏರ್‌ ಕಾರ್ಪೊರೇಷನ್ಸ್‌ ಕಾಯ್ದೆ ಜಾರಿಗೆ ತಂದು ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಕಂಪನಿಯನ್ನು ರಾಷ್ಟ್ರೀಕರಣಗೊಳಿಸಿತು. ಅಂದಿನ ಪ್ರಧಾನಿ ಜವಾಹರ ಲಾಲ್‌ ನೆಹರೂ ಟಾಟಾ ಸಮೂಹಕ್ಕೆ ನೋಟಿಸ್‌ ನೀಡದೆ, ಅವರ ಜೊತೆ ಮಾತುಕತೆಯನ್ನೂ ನಡೆಸದೆ ಅವರ ಒಡೆತನದಲ್ಲಿದ್ದ ಏರ್‌ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲು ಮುಂದಾದರು. ಅಂದರೆ, ಟಾಟಾ ಕಂಪನಿಯಿಂದ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯಿತು. ಆಗ ಅದಕ್ಕೆ ‘ಏರ್‌ ಇಂಡಿಯಾ’ ಎಂದು ನಾಮಕರಣ ಮಾಡಲಾಯಿತು.

ಇದರಿಂದ ಟಾಟಾಗೆ ನಿಜಕ್ಕೂ ಆಘಾತವಾಗಿತ್ತು. ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್‌ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1978ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್‌ ಸ್ಥಾನದಿಂದ ಕೆಳಗಿಸಿದರು. ಅಲ್ಲಿಂದ ಇಲ್ಲಿಯವರೆಗೂ ಅದು ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿಯಾಗಿಯೇ ಮುಂದುವರೆದಿತ್ತು.

Air India Sale | ಏರ್ ಇಂಡಿಯಾ ಗೆದ್ದ ಟಾಟಾಗೆ ಹೊಸ ಸವಾಲು!

ಮರಳಿ ಟಾಟಾ ಕುಟುಂಬಕ್ಕೆ ಏರ್‌ ಇಂಡಿಯಾ ಸೇರ್ಪಡೆ

90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. ಇದೆ. ಇದೀಗ ಖರೀದಿಸಿದ ಏರ್‌ ಇಂಡಿಯಾ ಜೊತೆಗೆ, ಟಾಟಾ ಸಮೂಹವು ಈಗಾಗಲೇ ಇತರೆ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ. ಏರ್‌ ಏಷ್ಯಾ ಮತ್ತು ವಿಸ್ತಾರಾ ಆ ಎರಡು ಕಂಪನಿಗಳು. ಸದ್ಯಕ್ಕೆ ಇವೂ ಲಾಭ ಗಳಿಸುತ್ತಿಲ್ಲ. ಈ ಎರಡು ಕಂಪನಿಗಳ ಪಾಲುದಾರಿಕೆಯಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಏರ್‌ ಇಂಡಿಯಾವನ್ನೂ ಖರೀದಿಸಿ ಮೂರನ್ನೂ ವಿಲೀನ ಮಾಡುವ ಸಾಧ್ಯತೆ ಇದೆ.

94 ಸ್ಥಳಕ್ಕೆ ವಿಮಾನ ಸೇವೆ

‘ಏರ್‌ ಇಂಡಿಯಾ’ ಭಾರತದ ಸರ್ಕಾರಿ ಸ್ವಾಮ್ಯದ ಏಕೈಕ ವಿಮಾನಯಾನ ಕಂಪನಿ. ನಾಲ್ಕು ಖಂಡಗಳಾದ್ಯಂತ ಏರ್‌ ಇಂಡಿಯಾವು ಸುಮಾರು 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳನ್ನೂ ಸೇರಿದಂತೆ ಒಟ್ಟಾರೆ 94 ಸ್ಥಳಗಳಿಗೆ ವಿಮಾನ ಸೇವೆ ನೀಡುತ್ತಿದೆ. ಈ ಮೂಲಕ ಏರ್‌ ಇಂಡಿಯಾ ಜಗತ್ತಿನ ಮೂರನೇ ಅತಿ ದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.

ಜಗತ್ತಿನ ಅತಿ ಅಗ್ಗದ ಏರ್‌ಲೈನ್ಸ್‌ಗಳಲ್ಲೊಂದು!

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹಾಗೂ ಭಾರತದ್ದೇ ಇನ್ನೊಂದು ಖಾಸಗಿ ಕಂಪನಿ ಇಂಡಿಗೋ ಜಾಗತಿಕವಾಗಿ ಅತಿ ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಸಂಪರ್ಕ ಒದಗಿಸುವ ಐದು ಅಗ್ಗದ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿವೆ. ಏರ್‌ ಇಂಡಿಯಾ ಸ್ವಾಮ್ಯದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ 2ನೇ ಸ್ಥಾನದಲ್ಲಿದ್ದರೆ, ಇಂಡಿಗೋ 5ನೇ ಸ್ಥಾನದಲ್ಲಿದೆ.

ಏರ್ ಇಂಡಿಯಾ ಖಾಸಗೀಕರಣ; ಪ್ರಧಾನಿ, VVIP ಪ್ರಯಾಣ, ಹಜ್ ಯಾತ್ರೆ ಹೇಗೆ? ಹಲವು ಪ್ರಶ್ನೆಗೆ ಇಲ್ಲಿದೆ ಉತ್ತರ!

ಮೊದಲ ವರ್ಷ . 60000 ಲಾಭ ಮಾಡಿತ್ತು!

ಏರ್‌ ಇಂಡಿಯಾ ತನ್ನ ಹಾರಾಟ ಪ್ರಾರಂಭಿಸಿದ ಮೊದಲ ವರ್ಷ ಕರಾಚಿ-ಮದ್ರಾಸ್‌ ಮತ್ತು ಬಾಂಬೆಗೆ ವಿಮಾನಯಾನ ಸೇವೆ ನೀಡುತ್ತಿತ್ತು. ಇದರ ಮೊದಲ ವರ್ಷದ ಹಾರಾಟದಲ್ಲಿ 2,60,000 ಕಿ.ಮೀ ಪ್ರಯಾಣದಲ್ಲಿ ಒಟ್ಟಾರೆ 155 ಪ್ರಯಾಣಿಕರು, 10.71 ಟನ್‌ ಪತ್ರ ಹಾಗೂ ಸರಕುಗಳನ್ನು ಹೊತ್ತೊಯ್ದಿತ್ತು. ಒಟ್ಟಾರೆ ಆ ವರ್ಷ 60,000 ರು. ಲಾಭ ಗಳಿಸಿತ್ತು. ಆ ಕಾಲಕ್ಕೆ ಅದು ಬಹಳ ದೊಡ್ಡ ಮೊತ್ತ. 2ನೇ ಮಹಾಯದ್ಧ ಸಂದರ್ಭದಲ್ಲಿ ಟಾಟಾ ಸಮೂಹದ ಒಡೆತನದಲ್ಲಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಬ್ರಿಟನ್ನಿನ ರಾಯಲ್‌ ಏರ್‌ಫೋರ್ಸ್‌ಗೆ ನೆರವು ನೀಡಿತ್ತು. ಸೈನಿಕರ ಸ್ಥಳಾಂತರ, ಸರಕು ಸಾಗಣೆ, ನಿರಾಶ್ರಿತರಿಗೆ ನೆರವು ಮತ್ತು ವಿಮಾನಗಳ ನಿರ್ವಹಣೆಗೆ ನೆರವಾಗಿತ್ತು.

ಏರ್‌ಇಂಡಿಯಾ ನಷ್ಟಎಷ್ಟು?

ಸುಮಾರು 60 ಸಾವಿರ ಕೋಟಿಗಳಷ್ಟುನಷ್ಟದಲ್ಲಿ ಇರುವ ಸಂಸ್ಥೆ ಆರ್ಥಿಕ ಸ್ಥಿತಿ ಸುಧಾರಿಸಲಾಗದ ಮಟ್ಟತಲುಪಿದ ನಂತರದಲ್ಲಿ ಖಾಸಗೀಕರಣ ಮಾಡುವಂತೆ ನೀತಿ ಆಯೋಗವು ಶಿಫಾರಸು ಮಾಡಿತ್ತು. ಅಲ್ಲದೆ ನಿರಂತರ ನಷ್ಟದಿಂದ ದಿವಾಳಿಯತ್ತ ಸಾಗುತ್ತಿರುವ ಸಂಸ್ಥೆಗೆ ಸರ್ಕಾರದ ನೆರವು ಮಂದುವರೆಸುವುದು ಲಾಭದಾಯಕವಲ್ಲ ಎಂದು ಸಲಹೆ ನೀಡಿತ್ತು. ಅನಂತರದಲ್ಲಿ ನೀತಿ ಆಯೋಗದ ಸಲಹೆಗೆ ಮಣಿದ ಕೇಂದ್ರ ಸರ್ಕಾರ 2017 ಜು.28ರಂದು ಖಾಸಗೀಕರಣಕ್ಕೆ ಸಮ್ಮತಿಸಿತ್ತು. 2007ರಿಂದಲೂ ಏರ್‌ ಇಂಡಿಯಾ ನಷ್ಟದಲ್ಲಿದೆ. ಅದರ ಪುನಶ್ಚೇತನಕ್ಕೆ 2012ರಲ್ಲಿ ಅಂದಿನ ಯುಪಿಎ ಸರ್ಕಾರ 32 ಸಾವಿರ ರು.ಕೋಟಿ ನೆರವು ನೀಡಿತ್ತು. ಆದರೂ ಕಂಪನಿಯ ವ್ಯವಹಾರ ಸುಧಾರಿಸಿರಲಿಲ್ಲ.

ದಿವಾಳಿಗೆ ಏನು ಕಾರಣ?

ಖಾಸಗಿ ಕಂಪನಿಗಳಂತೆ ಏರ್‌ ಇಂಡಿಯಾದಲ್ಲಿ ವ್ಯವಸ್ಥಿತ ಕಾರ್ಯನಿರ್ವಹಣೆ ಆರಂಭದಿಂದಲೂ ಇರಲಿಲ್ಲ. ವಿದೇಶಿ ದ್ವಿಪಕ್ಷೀಯ ಒಪ್ಪಂದದ ಕೆಟ್ಟನಿರ್ವಹಣೆ, ಖಾಸಗಿ ಸಂಸ್ಥೆಗಳ ಪೈಪೋಟಿ, ಸಿಬ್ಬಂದಿಯಲ್ಲಿನ ವೃತ್ತಿಪರತೆಯ ಕೊರತೆ, ಸರ್ಕಾರದ ಹಸ್ತಕ್ಷೇಪ, ವಿಮಾನ ಹಾರಾಟದ ವಿಳಂಬ, ಅದಕ್ಷ ಆಡಳಿತ ಏರ್‌ ಇಂಡಿಯಾವನ್ನು ನಷ್ಟದ ಸುಳಿಯಲ್ಲಿ ಸಿಲುಕಿಸಿತು. ಜೊತೆಗೆ ಏರ್‌ ಇಂಡಿಯಾ ಸರಿಯಾದ ಲಾಭದ ಲೆಕ್ಕ ಹಾಕದೆ ಹೆಚ್ಚು ಹೆಚ್ಚು ವಿದೇಶಗಳಿಗೆ ವಿಮಾನಯಾನ ಸೇವೆ ಆರಂಭಿಸಿದೆ.

ಇದು ನಷ್ಟದ ಸುಳಿಗೆ ಸಿಲುಕಲು ಪ್ರಮುಖ ಕಾರಣ. ಉದಾಹರಣೆಗೆ 2015-16ರಲ್ಲಿ ಉತ್ತರ ಕೊರಿಯಾ ಮತ್ತು ಯುರೋಪ್‌ ದೇಶಗಳಿಗೆ ವಿಮಾನಯಾನ ಆರಂಭಿಸಿದ್ದರಿಂದ 2300 ಕೋಟಿ ನಷ್ಟವಾಗಿದೆ. ಅಲ್ಲದೆ ಏರ್‌ ಇಂಡಿಯಾ ಸಂಸ್ಥೆಯಲ್ಲಿ 11,433 ಉದ್ಯೋಗಿಗಳಿದ್ದಾರೆ. ಆದರೆ, ಇದಕ್ಕೆ ಅಗತ್ಯವಿರುವುದು ಕೇವಲ 7,245 ಉದ್ಯೋಗಿಗಳು. ಹಾಗೆಯೇ ವಿಮಾನ ಚಾಲನೆಗೆ ಒಟ್ಟು 291 ಪೈಲಟ್‌ಗಳ ಅಗತ್ಯವಿದೆ. ಆದರೆ ಕಂಪನಿಯಲ್ಲಿ ಒಟ್ಟು 554 ಪೈಲಟ್‌ಗಳಿದ್ದಾರೆ. ಈ ಸಿಬ್ಬಂದಿಯೇ ಏರ್‌ ಇಂಡಿಯಾದ ಆದಾಯವನ್ನು ನುಂಗಿಹಾಕುತ್ತಿದ್ದಾರೆ. ಹೀಗಾಗಿ ಮಾನವ ಸಂಪನ್ಮೂಲದ ಅಸಮರ್ಥ ಬಳಕೆಯು ಸಂಸ್ಥೆಯನ್ನು ಅವನತಿಯ ಹಾದಿಗೆ ತಳ್ಳಿತ್ತು.

ಹಾರಾಟದ ಹಾದಿ

1932: ಜೆಹಾಂಗೀರ್‌ ರತನ್‌ಜೀ ದಾದಾಭಾಯ್‌(ಜೆಆರ್‌ಡಿ) ಟಾಟಾ ಅವರಿಂದ ಟಾಟಾ ಏರ್‌ಲೈನ್ಸ್‌ ಆರಂಭ

1946: ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿ ಪರಿವರ್ತನೆ

1948: ಯುರೋಪ್‌ಗೂ ಹಾರಾಟ ಆರಂಭಿಸಿದ ಏರಿಂಡಿಯಾ ಅಂತಾರಾಷ್ಟ್ರೀಯ ವಿಮಾನ

1953: ಏರ್‌ ಇಂಡಿಯಾ ವಿಮಾನ ಸಂಸ್ಥೆಯ ರಾಷ್ಟ್ರೀಕರಣ. ನಾಲ್ಕು ದಶಕಗಳ ಕಾಲ ಸಾರ್ವಜನಿಕ ಸಂಸ್ಥೆಯಾಗಿ ಅಚ್ಚುಮೆಚ್ಚು.

1994-95: ವಿಮಾನಯಾನ ಸೇವೆ ಆರಂಭಿಸಲು ಖಾಸಗಿ ಸಂಸ್ಥೆಗಳಿಗೂ ಅವಕಾಶ. ಆ ಬಳಿಕ ಖಾಸಗಿ ಸಂಸ್ಥೆಗಳಿಂದ ಕಡಿಮೆ ದರದ ಟಿಕೆಟ್‌. ಇದರಿಂದ ಏರ್‌ ಇಂಡಿಯಾ ಮಾರುಕಟ್ಟೆಗೆ ಹೊಡೆತ.

2000: ಏರ್‌ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಯತ್ನ. ಆದರೆ ಕಾರ್ಮಿಕರ ಸಂಘಟನೆಗಳಿಂದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಖಾಸಗೀಕರಣದ ಯತ್ನ ವಿಫಲ.

2007-08: ಇಂಡಿಯನ್‌ ಏರ್‌ಲೈನ್ಸ್‌ ಜತೆಗಿನ ಸಂಯೋಜನೆ ಬಳಿಕ ಪ್ರತೀ ವರ್ಷವೂ ಏರ್‌ ಇಂಡಿಯಾಕ್ಕೆ ಭಾರೀ ನಷ್ಟ

2017: ಏರ್‌ ಇಂಡಿಯಾದ ಖಾಸಗಿಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ನಿರಂತರ ಯತ್ನ.

2018: ಏರ್‌ ಇಂಡಿಯಾದ ಶೇ.76ರಷ್ಟುಷೇರುಗಳ ಮಾರಾಟಕ್ಕೆ ಸರ್ಕಾರದಿಂದ ಆಸಕ್ತ ಕಂಪನಿಗಳಿಗೆ ಆಹ್ವಾನ.

2018 ಮೇ: ಏರ್‌ ಇಂಡಿಯಾ ಖರೀದಿಗೆ ಸಲ್ಲಿಕೆಯಾಗದ ಬಿಡ್‌

2020 ಜನವರಿ: .100 ಷೇರು ಮಾರಾಟಕ್ಕೆ ಸರ್ಕಾರ ಮತ್ತೆ ಬಿಡ್‌ ಆಹ್ವಾನ. ಈ ಒಪ್ಪಂದದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಶೇ.100ರಷ್ಟುಷೇರು ಮಾರಾಟ ಮಾಡುವ ಪ್ರಸ್ತಾಪ

2020ರ ಅಕ್ಟೋಬರ್‌: ಏರ್‌ ಇಂಡಿಯಾದ ಸಾಲದ ಮೊತ್ತವನ್ನು ವಹಿಸಿಕೊಳ್ಳುವ ಅವಕಾಶ ಹೂಡಿಕೆದಾರರಿಗೆ ಬಿಟ್ಟುಕೊಡುವುದು ಸೇರಿದಂತೆ ಮಾರಾಟ ಒಪ್ಪಂದವನ್ನು ಸರಳಗೊಳಿಸಲಾಯಿತು.

2021ರ ಸೆಪ್ಟೆಂಬರ್‌: ಟಾಟಾ ಗ್ರೂಪ್‌, ಸ್ಪೈಸ್‌ಜೆಟ್‌ ಬಿಡ್‌ ಸಲ್ಲಿಕೆ

2021ರ ಅಕ್ಟೋಬರ್‌: ಅತಿಹೆಚ್ಚು 18,000 ಕೋಟಿ ರು. ಬಿಡ್‌ ಸಲ್ಲಿಕೆ ಮಾಡಿದ ಟಾಟಾ ಗ್ರೂಪ್‌ ಏರ್‌ ಇಂಡಿಯಾ ಬಿಡ್‌ನಲ್ಲಿ ಜಯಿಸಿದೆ ಎಂದು ಕೇಂದ್ರ ಸರ್ಕಾರ ಘೋಷಣೆ

click me!