ಎಲ್‌ಪಿಜಿ ಬಲು ದುಬಾರಿ| 9 ತಿಂಗಳಿಂದ ಇಲ್ಲ ಸಬ್ಸಿಡಿ| ಒಂದೇ ತಿಂಗಳಲ್ಲಿ ಎಲ್‌ಪಿಜಿ ದರ 100 ರು. ಹೆಚ್ಚಳ| 1.5 ವರ್ಷದಲ್ಲಿ 250 ಏರಿಕೆ
ನವದೆಹಲಿ/ಬೆಂಗಳೂರು(ಡಿ.24): ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗೆ 697 ರು. ಪಾವತಿಸಿ, ಇನ್ನೇನು ಬ್ಯಾಂಕ್ ಖಾತೆಗೆ ಸಬ್ಸಿಡಿ ಬರಬಹುದು ಎಂದು ಕಾದಿದ್ದರೆ ಇಲ್ಲೊಮ್ಮೆ ಕೇಳಿ. ನಿಮ್ಮ ಖಾತೆಗೆ ಸಬ್ಸಿಡಿ ಹಣ ಬರುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ನ ಮೂಲ ಬೆಲೆಯನ್ನೇ ಹೆಚ್ಚಳ ಮಾಡಿದೆ ಎನ್ನಲಾಗುತ್ತಿದೆ. ಈ ಕುರಿತು ಇದುವರೆಗೆ ಕೇಂದ್ರ ಸರ್ಕಾರವಾಗಲೀ, ತೈಲ ಕಂಪನಿಗಳಾಗಲೀ ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರೂ, ಸಬ್ಸಿಡಿ ವಿತರಣೆ ಮಾಡದೇ ಇರುವುದು ಇಂಥದ್ದೊಂದು ಗುಸುಗುಸುಗೆ ಕಾರಣವಾಗಿದೆ.
ಕಳೆದ ಮಾಚ್‌ರ್‍ವರೆಗೂ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ನ ಮೂಲದರ ಮತ್ತು ಮಾರುಕಟ್ಟೆದರದ ನಡುವಿನ ವ್ಯತ್ಯಾಸದ ಹಣವನ್ನು ಸಬ್ಸಿಡಿ ರೂಪದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ವರ್ಗ ಮಾಡುತ್ತಿತ್ತು. ಆದರೆ ಕೋವಿಡ್ ಲಾಕ್ಡೌನ್ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದ ಕಾರಣ, ಎಲ್‌ಪಿಜಿ ದರವೂ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಮಾಚ್‌ರ್‍ನಲ್ಲಿ 860 ರು.ವರೆಗೂ ತಲುಪಿದ್ದ ದರ ಮೇ ವೇಳೆಗೆ 597ಕ್ಕೆ ಇಳಿದಿತ್ತು. ಹೀಗಾಗಿ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ನೀಡುವ ಪ್ರಮೇಯ ತಪ್ಪಿತ್ತು. ಜೊತೆಗೆ ನಂತರದ 7 ತಿಂಗಳಲ್ಲೂ ಮಾರುಕಟ್ಟೆದರ ಆಧರಿಸಿ ಎಲ್‌ಪಿಜಿ ದರದಲ್ಲಿ ತೈಲ ಕಂಪನಿಗಳು ಯಾವುದೇ ಬದಲಾವಣೆ ಮಾಡಿರಲಿಲ್ಲ.
undefined
ಆದರೆ ತೈಲ ಕಂಪನಿಗಳು ಡಿ.1ರಂದು 50 ರು. ಮತ್ತು ಡಿ.15ರಂದು 50 ರು. ಏರಿಕೆ ಮಾಡಿದ್ದವು. ಹೀಗಾಗಿ ಕರ್ನಾಟಕದಲ್ಲಿ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ದರ 697 ರು.ಗೆ ತಲುಪಿದೆ. ಆದರೆ ದರ ಏರಿದರೂ ಸಬ್ಸಿಡಿ ಹಣ ಬರಬಹುದೆಂಬ ನಿರೀಕ್ಷೆಯಲ್ಲಿ ಜನ ಸುಮ್ಮನಾಗಿದ್ದರು. ಆದರೆ ದರ ಏರಿಕೆಯಾಗಿ ತಿಂಗಳಾದರೂ ಸಬ್ಸಿಡಿ ವರ್ಗ ಆಗದೇ ಇರುವುದು, ಸರ್ಕಾರ ಎಲ್‌ಪಿಜಿ ಸಿಲಿಂಡರ್‌ನ ಮೂಲ ಬೆಲೆಯನ್ನೇ ಏರಿಕೆ ಮಾಡಿರಬಹುದು ಎಂಬ ಶಂಕೆಗೆ ಕಾರಣವಾಗಿದೆ.
250 ರು. ಹೆಚ್ಚಳ:
ಹಾಗೆಂದು ಸರ್ಕಾರ ಸದ್ದಿಲ್ಲದೇ ದರ ಏರಿಕೆ ಮಾಡಿರುವುದು ಇದೇ ಮೊದಲಲ್ಲ. ಮಾಸಿಕ ಸಣ್ಣ ಪ್ರಮಾಣದಲ್ಲಿ ಏರಿಕೆ ಮಾಡುತ್ತಾ ಮಾಡುತ್ತಾ 2019ರ ಜೂನ್‌ನಿಂದೀಚೆಗೆ 150 ರು. ಹೆಚ್ಚಿಸಿದೆ. ಅದಕ್ಕೆ 2020ರ ಡಿಸೆಂಬರ್ ತಿಂಗಳಿನಲ್ಲಿ ಮಾಡಿದ 100 ರು. ಹೆಚ್ಚಳವೂ ಸೇರಿದರೆ 14.2 ಕೆಜಿ ಸಿಲಿಂಡರ್ ಬೆಲೆ ಭರ್ಜರಿ 250 ರು.ನಷ್ಟುಹೆಚ್ಚಾಗಿದೆ.
ಈ ಬಗ್ಗೆ ಬೆಂಗಳೂರಿನ ಎಲ್‌ಪಿಜಿ ವಿತರಕರೊಬ್ಬರ ಬಳಿ ಮಾಹಿತಿ ಕೋರಿದಾಗ ‘ಕಳೆದ ಮಾಚ್‌ರ್‍ನಿಂದ ಸಬ್ಸಿಡಿ ಬಂದಿಲ್ಲ. ಈ ಬಗ್ಗೆ ಸರ್ಕಾರದಿಂದಾಗಲೀ, ತೈಲ ಕಂಪನಿಗಳಿಂದಾಗಲೀ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ದರ ಏರಿಕೆ ಸಹಜವಾಗಿಯೇ ಜನ ಸಾಮಾನ್ಯರನ್ನು ಹೈರಾಣಾಗಿಸಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅವಧಿ| ದರ| ಸಬ್ಸಿಡಿ
2020 ಜನವ|ರಿ 807 ರು.| 156
2020 ಮೇ| 597 ರು.| 000
2020 ಡಿಸೆಂಬರ್| 697 ರು|. 000