* ತೈಲ ಕಂಪನಿಗಳಿಗೆ ಪ್ರತಿ ಸಿಲಿಂಡರ್‌ಗೆ 100 ರೂ. ಹೊರೆ
* ನವೆಂಬರ್ 1ರ ಪರಿಷ್ಕರಣೆ ವೇಳೆ ದರ ಭಾರೀ ಹೆಚ್ಚಳ ಸಂಭವ
* LPG ಒಂದೇ ಬಾರಿ 100 ರೂ. ಏರಿಕೆ: ಗ್ರಾಹಕ ಕಂಗಾಲು
ನವದೆಹಲಿ(ಅ.28): ಈಗಾಗಲೇ ಪೆಟ್ರೋಲ್ (Petrol), ಡೀಸೆಲ್ (Diesel) ಅಡುಗೆ ಅನಿಲ (Coocking gas) ದರ ಏರಿಕೆ ಭಾರೀ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮುಂದಿನ ವಾರ ಮತ್ತೊಂದು ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ. ಸೆ.1ರಂದು ಪರಿಷ್ಕರಣೆಯಾಗಲಿರುವ ಎಲ್‌ಪಿಜಿ (LPG) ದರದ ವೇಳೆ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ.
ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆದರಗಳಿಗೆ ಅನ್ವಯವಾಗಿ ಪ್ರತಿ 15 ದಿನಕ್ಕೊಮ್ಮೆ ಎಲ್‌ಪಿಜಿ ದರ (LPG Rate) ಪರಿಷ್ಕರಣೆ ಮಾಡುತ್ತಿದೆ. ಆದರೆ ಎಲ್‌ಪಿಜಿ ದರ ಭಾರೀ ಏರಿಕೆಯಾದ ಹೊರತಾಗಿಯೂ ಏಕಾಏಕಿ ಅದರ ಹೊರೆಯನ್ನು ಜನರಿಗೆ ಹೊರಿಸದೇ ಇರಲು ಸರ್ಕಾರ ನಿರ್ಧರಿಸಿದ ಕಾರಣ ಪ್ರತಿ 15 ದಿನಗಳಿಗೊಮ್ಮೆ 25 ರು. ಏರಿಕೆ ಮಾಡುತ್ತಾ ಬರುತ್ತಿದೆ. ಹಿಂದಿನ ಪರಿಷ್ಕರಣೆ ವೇಳೆ 15 ರು. ಹೆಚ್ಚಳ ಮಾಡಲಾಗಿತ್ತು. ಆದರೆ ಹೀಗೆ ವಾಸ್ತವ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು (Oil Companies) ಇದೀಗ ಪ್ರತಿ ಸಿಲಿಂಡರ್ ಮೇಲೆ ಅನುಭವಿಸುತ್ತಿರುವ ನಷ್ಟ100 ರು. ದಾಟಿದೆ. ಹೀಗಾಗಿ ಸೆ.1ರಂದು ಮಾಡಲಾಗುವ ಪರಿಷ್ಕರಣೆ ವೇಳೆ ಹೆಚ್ಚಿನ ಪ್ರಮಾಣದ ದರ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಜುಲೈನಿಂದ ಈವರೆಗೆ 14 ಕೆಜಿಯ ಸಿಲಿಂಡರ್ ಬೆಲೆಯಲ್ಲಿ 90 ರುಪಾಯಿ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದು, ಸೌದಿಯಲ್ಲಿ ಎಲ್‌ಪಿಜಿ ಬೆಲೆ ಶೇ.60ರಷ್ಟುಏರಿಕೆಯಾಗಿದ್ದು, 1 ಟನ್ ಎಲ್‌ಪಿಜಿ ಬೆಲೆ 60 ಸಾವಿರ ದಾಟಿದೆ. ಇನ್ನು 1 ಬ್ಯಾರಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 6400 ರುಪಾಯಿ ದಾಟಿದೆ. ಈ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ನಷ್ಟಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿವೆ.
ಪೆಟ್ರೋಲ್, ಡೀಸೆಲ್ ತಲಾ 35 ಪೈಸೆ ಏರಿಕೆ ತಿಂಗಳಲ್ಲಿ 24ನೇ ಏರಿಕೆ!
ಕಳೆದ ಎರಡು ದಿನ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಯಥಾಪ್ರಕಾರ ಬುಧವಾರ ಏರಿಕೆಯಾಗಿದ್ದು, ಮತ್ತೆ 35 ಪೈಸೆ ಹೆಚ್ಚಳವಾಗಿದೆ. ಪರಿಣಾಮ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 107.99 ರು.,ಬೆಂಗಳೂರಲ್ಲಿ 111.70 ರು.ಗೆ, ಮುಂಬೈನಲ್ಲಿ 113. 80 ರು.ಗೆ ತಲುಪಿದೆ. ಇನ್ನು ಡೀಸೆಲ್ ದೆಹಲಿಯಲ್ಲಿ 96.67 ರು.ಗೆ, ಬೆಂಗಳೂರಲ್ಲಿ 102.60 ರು.ಗೆ ಮುಂಬೈನಲ್ಲಿ 104.75ಕ್ಕೆ ತಲುಪಿದೆ.
ದೇಶದ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 110 ರುಪಾಯಿ ದಾಟಿದ್ದು, ಡೀಸೆಲ್ ಕೂಡ ದೇಶದ ಅರ್ಧದಷ್ಟುರಾಜ್ಯಗಳಲ್ಲಿ ಈಗಾಗಲೇ ನೂರರ ಗಡಿ ದಾಟಿ ಮುನ್ನುಗ್ಗುತ್ತಿದೆ. ಸ್ಥಳೀಯ ತೆರಿಗೆ ಹಿನ್ನೆಲೆ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾದರೂ, ಬಹುತೇಕ ಕಡೆ ಪೆಟ್ರೋಲ್ 110 ರುಪಾಯಿ, ಡೀಸೆಲ್ 100 ರುಪಾಯಿ ದಾಟಿಯಾಗಿದೆ.
ಸೆ.28ರಿಂದ ಅ.27ರವರೆಗೆ ಪೆಟ್ರೋಲ್ 22 ಬಾರಿ ಏರಿಕೆಯಾಗಿದ್ದು, ಒಂದೇ ತಿಂಗಳಲ್ಲಿ 6.75 ರುಪಾಯಿ ಏರಿಕೆ ಕಂಡಿದೆ. ಇನ್ನು ಸೆ.24ರಿಂದ ಇಲ್ಲಿಯವರೆಗೆ ಡೀಸೆಲ್ 24 ಬಾರಿ ಏರಿಕೆಯಾಗಿದ್ದು, 1 ತಿಂಗಳಲ್ಲಿ 8.05 ರುಪಾಯಿ ಏರಿಕೆಯಾಗಿದೆ.
ಪಡಿತರ ಅಂಗಡಿಗಳಿಗೆ ಜೀವ ತುಂಬಲು ಹೊಸ ಕ್ರಮ
ನವದೆಹಲಿ: ಪಡಿತರ ಅಂಗಡಿಗಳಲ್ಲಿ ಚಿಕ್ಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ಮತ್ತು ಕೆಲವೊಂದು ಹಣಕಾಸು ಸೇವೆಗಳನ್ನು ಒದಗಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಇರಿಸಿದೆ.
ದೇಶದಲ್ಲಿ ಒಟ್ಟು 5.32 ಲಕ್ಷ ನ್ಯಾಯಬೆಲೆ ಅಂಗಡಿಗಳಿವೆ. ಈ ಅಂಗಡಿಗಳ ಮೂಲಕ ತೀರಾ ಅಗತ್ಯ ಇರುವ ಗ್ರಾಹಕರಿಗೆ ಹಾಗೂ ಬಡವರಿಗೆ ಎಲ್‌ಪಿಜಿ ಸಿಲಿಂಡರ್ ನೀಡಿಕೆ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಇದಕ್ಕಾಗಿ ರೇಶನ್ ಅಂಗಡಿ ಮಾಲೀಕರಿಗೆ ಹಣಕಾಸು ನೆರವು ಒದಗಿಸುವುದು ಹಾಗೂ ಮುದ್ರಾ ಯೋಜನೆಯಡಿ ಸಾಲ ನೀಡುವ ಪ್ರಸ್ತಾಪ ಕೂಡ ಸರ್ಕಾರದ ಮುಂದಿದೆ.
ಇತ್ತೀಚೆಗೆ ವಿವಿಧ ಸಚಿವಾಲಯಗಳು ಹಾಗೂ ತೈಲ ಕಂಪನಿಗಳ ಪ್ರತಿನಿಧಿಗಳ ಜತೆಗೆ ನಡೆದ ಸಭೆಯಲ್ಲಿ ಕೇಂದ್ರ ಪಡಿತರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಪ್ರಸ್ತಾಪವನ್ನು ವಿವಿಧ ತೈಲ ಕಂಪನಿಗಳ ಪ್ರತಿನಿಧಿಗಳು ಇದನ್ನು ಸ್ವಾಗತಿಸಿದರು. ಅಗತ್ಯ ಇರುವ ರಾಜ್ಯಗಳ ಜತೆ ಸಮನ್ವಯ ಸಾಧಿಸಿ ಎಲ್‌ಪಿಜಿ ಒದಗಿಸುವಿಕೆಯ ಭರವಸೆ ನೀಡಿದರು.