ವೈದ್ಯಕೀಯ ತುರ್ತು ವೆಚ್ಚಕ್ಕೆ ವಿಮೆ ಬಿಟ್ರೆ ಬೇರೆ ಅವಕಾಶಗಳೇನಿವೆ?

By Suvarna News  |  First Published Jul 20, 2021, 2:26 PM IST

ಕೊರೋನಾ ವೈದ್ಯಕೀಯ ತುರ್ತು ನಿಧಿಯೊಂದರ ಅಗತ್ಯವನ್ನು ಮನದಟ್ಟು ಮಾಡಿಸಿದೆ. ಆರೋಗ್ಯ ವಿಮೆಯಿಂದ ಸಂಪೂರ್ಣ ವೆಚ್ಚ ಭರಿಸೋದು ಕಷ್ಟ.ಹಾಗಾದ್ರೆ ತುರ್ತಾಗಿ ಹಣ ಹೊಂದಿಸಲು ಬೇರೆ ಮಾರ್ಗಗಳೇನಿವೆ?


ಕೊರೋನಾ ತುರ್ತುನಿಧಿಯೊಂದರ ಅಗತ್ಯವನ್ನು ಮನದಟ್ಟು ಮಾಡಿಸಿದೆ. ವೈದ್ಯಕೀಯ ವೆಚ್ಚಗಳಿಗೆಂದೇ ಒಂದಿಷ್ಟು ಹಣ ಎತ್ತಿಡೋದು ಎಷ್ಟು ಮುಖ್ಯ ಎನ್ನೋದು ಎಲ್ಲರಿಗೂ ಅರಿವಾಗಿದೆ. ರೋಗ ಬಂದಾಗ ಚಿಕಿತ್ಸೆಗೆ ಮಾತ್ರವಲ್ಲ,ಅದರ ಬಳಿಕ ಎದುರಾಗೋ ವೈದ್ಯಕೀಯ ವೆಚ್ಚಗಳು ಕೂಡ ಹೆಚ್ಚಿರುತ್ತವೆ.

ಬಹುತೇಕರು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಆರೋಗ್ಯ ವಿಮೆಗಳು ನೆರವಿಗೆ ಬರುತ್ತವೆ ಎಂದು ಭಾವಿಸಿರುತ್ತಾರೆ. ಆದ್ರೆ ಗಗನಕ್ಕೇರಿರೋ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ವಿಮೆಯೊಂದೇ ಸಾಕಾಗೋದಿಲ್ಲ. ಇಂಥ ಸಮಯದಲ್ಲಿ ಹಣಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಿರೋವಾಗ ತುರ್ತು ಹಣ ಒದಗಿಸಬಲ್ಲ ಆಯ್ಕೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ನಮ್ಮ ಮುಂದಿರೋ ಅಂಥ ಆಯ್ಕೆಗಳು ಯಾವುವು?

Tap to resize

Latest Videos

undefined

ಮ್ಯೂಚುವಲ್‌ ಫಂಡ್‌ ಮೇಲೆ ಸಾಲ ಪಡೆಯೋದು ಹೇಗೆ?

ಆರೋಗ್ಯ ವಿಮೆಯಿದ್ರೆ ಸಾಲದು

ವೈದ್ಯಕೀಯ ವೆಚ್ಚಗಳನ್ನು ಭರಿಸಲು ಆರೋಗ್ಯ ವಿಮೆ ನೆರವು ನೀಡುತ್ತದೆ ಎಂಬುದು ನಿಜ. ಆದ್ರೆ ಎಲ್ಲ ಸಂದರ್ಭಗಳಿಗೂ ಇದು ಅನ್ವಯಿಸೋದಿಲ್ಲ. ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಆರೋಗ್ಯ ವಿಮೆಯಿಂದ ಭರಿಸಲು ಸಾಧ್ಯವಿಲ್ಲ. ಕೆಲವೊಂದು ಷರತ್ತುಗಳಿರುತ್ತವೆ. ಹೀಗಾಗಿ ವಿಮಾ ಸಂಸ್ಥೆ ಅಂತಿಮವಾಗಿ ಪಾವತಿ ಮಾಡೋ ಹಣ ಬಿಲ್‌ನ ಮೊತ್ತಕ್ಕಿಂತ ಕಡಿಮೆಯಾಗಿರೋ ಸಾಧ್ಯತೆ ಹೆಚ್ಚು. ಹೀಗಾಗಿ ಉಳಿದ ಹಣವನ್ನು ಕೈಯಿಂದಲೇ ತುಂಬಬೇಕಾದ ಅನಿವಾರ್ಯತೆ ಇರುತ್ತದೆ. ಕೋವಿಡ್‌ ಪ್ರಕರಣಗಳಲ್ಲೂ ಇದೇ ಆಗಿರೋದು. ಆಸ್ಪತ್ರೆಗಳ ದುಬಾರಿ ಬಿಲ್‌ ಆರೋಗ್ಯ ವಿಮೆಯಲ್ಲಿ ಕವರ್‌ ಆಗದ ಕಾರಣ ವೆಚ್ಚದ ಶೇ.40-50 ಭಾಗವನ್ನು ಕೈಯಿಂದಲೇ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕ್ರೆಡಿಟ್‌ ಕಾರ್ಡ್

ತುರ್ತಾಗಿ ಹಣದ ಅಗತ್ಯವಿದ್ರೆ ಕ್ರೆಡಿಟ್‌ ಕಾರ್ಡ್‌ ಬಳಸೋದು ಉತ್ತಮ. ಆದ್ರೆ ಬಿಲ್‌ ಪಾವತಿ ದಿನಾಂಕದಂದು ಆ ಹಣವನ್ನು ನೀವು ಮರಳಿ ಬ್ಯಾಂಕ್‌ಗೆ ಪಾವತಿಸಲು ಸಿದ್ಧರಿರಬೇಕು. ಕ್ರೆಡಿಟ್‌ ಕಾರ್ಡ್‌ ಬಳಕೆಯಿಂದ ನಿಮಗೆ ಹಣ ಹೊಂದಿಸಲು ಗರಿಷ್ಠ 45 ದಿನಗಳ ಸಮಯಾವಕಾಶ ಸಿಗುತ್ತದೆ. ಆದ್ರೆ ನೆನಪಿಡಿ ಸಮಯಕ್ಕೆ ಸರಿಯಾಗಿ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಲು ಸಾಧ್ಯವಾಗದಿದ್ರೆ ಆ ಹಣಕ್ಕೆ ಅತೀಹೆಚ್ಚು ಬಡ್ಡಿಯನ್ನು ಬ್ಯಾಂಕ್‌ ವಿಧಿಸುತ್ತದೆ. ಈ ಬಡ್ಡಿ ದರ ಕೆಲವೊಮ್ಮೆ ವಾರ್ಷಿಕ ಶೇ.42ರಷ್ಟಿರುತ್ತೆ. ಹೀಗಾಗಿ ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸಲು ಸಾಧ್ಯವಾಗದಿದ್ರೆ ಕ್ರೆಡಿಟ್‌ ಕಾರ್ಡ್‌ ಸಾಲ ಆಯ್ಕೆ ಮಾಡಿಕೊಳ್ಳೋದು ಉತ್ತಮ. ಇದ್ರಿಂದ ಬಾಕಿಯಿರೋ ಬಿಲ್‌ ಮೊತ್ತವನ್ನು ಇಎಂಐ ಮೂಲಕ ನಿರ್ದಿಷ್ಟ ಅವಧಿಯೊಳಗೆ ಪಾವತಿಸಬಹುದು.

ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ?

ಪರ್ಸನಲ್‌ ಲೋನ್

ಇತ್ತೀಚಿನ ದಿನಗಳಲ್ಲಿ ಪ್ರೀ ಅಪ್ರೂಡ್‌ ಇನ್‌ಸ್ಟಂಟ್ ಪರ್ಸನಲ್‌ ಲೋನ್‌ಗಳನ್ನು ಬ್ಯಾಂಕ್‌ ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಗಳು ನೀಡುತ್ತಿವೆ. ಈ ಸಾಲಕ್ಕೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ಬ್ಯಾಂಕ್‌ ಹಾಗೂ ಎನ್‌ಬಿಎಫ್‌ಸಿಗಳು ತ್ವರಿತವಾಗಿ ಸಾಲ ಮಂಜೂರು ಮಾಡುತ್ತವೆ. ಆದ್ರೆ ಈ ಸಾಲವನ್ನು ಸಾಮಾನ್ಯವಾಗಿ ನಿಗದಿತ ಸಂಖ್ಯೆ ಗ್ರಾಹಕರಿಗೆ ಮಾತ್ರ ನೀಡಲಾಗುತ್ತದೆ. ಉತ್ತಮವಾದ ಕ್ರೆಡಿಟ್‌ ಸ್ಕೋರ್‌, ಬ್ಯಾಂಕ್‌ನೊಡನೆ ಸಂಬಂಧ ಇತ್ಯಾದಿ ಅಂಶಗಳನ್ನು ಗಮನಿಸಿ ಈ ಸಾಲ ನೀಡಲಾಗುತ್ತದೆ. ಬ್ಯಾಂಕ್‌ಗಳ ವೆಬ್‌ಸೈಟ್‌ಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯಿರುತ್ತದೆ. 

ಟಾಪ್‌—ಅಪ್‌ ಗೃಹ ಸಾಲ

ನೀವು ಈಗಾಗಲೇ ಗೃಹ ಸಾಲ ಹೊಂದಿದ್ದರೆ, ಮೊದಲೇ ಅಂಗೀಕರಿಸಲ್ಪಟ್ಟ ಟಾಪ್‌—ಅಪ್‌ ಲೋನ್‌ ಪಡೆಯಲು ನೀವು ಅರ್ಹರಾಗಿದ್ದೀರಾ ಎಂಬುದನ್ನು ಪರಿಶೀಲಿಸಿ. ನಿಮಗೆ ಗೃಹ ಸಾಲ ಮಂಜೂರು ಮಾಡೋವಾಗಲೇ ಈ ಆಯ್ಕೆ ನೀಡಿರುತ್ತಾರೆ. ಹೀಗಾಗಿ ಈ ಸಾಲ ನಿಮಗೆ ತಕ್ಷಣ ಸಿಗುತ್ತದೆ. ಅಲ್ಲದೆ, ಬಡ್ಡಿಯೂ ಕಡಿಮೆಯಾಗಿದ್ದು, ಸಾಲ ಮರುಪಾವತಿ ಅವಧಿಯೂ ದೀರ್ಘವಾಗಿರುತ್ತದೆ. 

ಕೋವಿಡ್‌ ಸ್ಪೆಷಲ್‌ ಪರ್ಸನಲ್‌ ಲೋನ್

ಕೋವಿಡ್‌ -19 ಗೆ ತುತ್ತಾದವರಿಗೆ ಅನೇಕ ಬ್ಯಾಂಕ್‌ಗಳು ವಿಶೇಷ ವೈಯಕ್ತಿಕ ಸಾಲ ಸೌಲಭ್ಯ ಕಲ್ಪಿಸಿವೆ. ಎಸ್‌ಬಿಐ, ಪಿಎನ್‌ಬಿ, ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಉದಾಹರಣೆಗೆ ಎಸ್‌ಬಿಐ ʼಕವಚ್‌ʼ ಎಂಬ ಹೆಸರಿನಲ್ಲಿ ವೈಯಕ್ತಿಕ ಸಾಲ ನೀಡುತ್ತಿದೆ. ಇದರಡಿಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ಒಬ್ಬ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರಿಗೆ 25 ಸಾವಿರದಿಂದ 5 ಲಕ್ಷದ ತನಕ ಶೇ.8.5 ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. 

ಎಫ್‌ಡಿ ಮೇಲೆ ಸಾಲ

ಕೆಲವರು ದೀರ್ಘಾವಧಿ ಸ್ಥಿರ ಠೇವಣಿ ( ಎಫ್‌ಡಿ)ಯಲ್ಲಿ ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಹೆಚ್ಚಿನ ಬಡ್ಡಿಯೂ ಇರೋ ಜೊತೆಗೆ ಸುರಕ್ಷಿತ  ಹೂಡಿಕೆ ಕೂಡ. ಆದ್ರೆ ಅವಧಿಗೂ ಮುನ್ನ ಎಫ್‌ಡಿ ಹಣ ಹಿಂಪಡೆಯಲು ಹೋದ್ರೆ ಬಡ್ಡಿ ಕಳೆದುಕೊಳ್ಳೋ ಜೊತೆಗೆ ದಂಡ ಕೂಡ ಕಟ್ಟಬೇಕಾಗುತ್ತದೆ. ಹೀಗಾಗಿ ತುರ್ತು ಸಮಯದಲ್ಲಿ ಎಫ್‌ಡಿ ಹಣ ತೆಗೆಯೋ ಬದಲು ಅದರ ಮೇಲೆ ಸಾಲ ತೆಗೆಯೋದು ಉತ್ತಮ. ಈ ಸಾಲದ ಮೇಲಿನ ಬಡ್ಡಿ ಕೂಡ ಕಡಿಮೆಯಿರುತ್ತದೆ.

ದುಡ್ಡು ಮಾಡೋದು ಹೇಗೆ? ಇಲ್ಲಿವೆ ನೋಡಿ ಸಿಂಪಲ್‌ ಟ್ರಿಕ್ಸ್‌

ಚಿನ್ನದ ಮೇಲೆ ಸಾಲ

ಪರ್ಸನಲ್‌ ಲೋನ್ ಪಡೆಯಲು ಸಾಧ್ಯವಾಗದವರು ತಮ್ಮ ಬಳಿಯಿರೋ ಬಂಗಾರವನ್ನು ಅಡವಿಟ್ಟು ಸಾಲ ಪಡೆಯಬಹುದು. ಚಿನ್ನ ಅಡವಿಟ್ಟರೆ ಅದೇ ದಿನ ಸಾಲ ಸಿಗೋ ಕಾರಣ ವೈದ್ಯಕೀಯ ತುರ್ತು ಎದುರಾದಾಗ ಇದು ಅತ್ಯುತ್ತಮ ಮಾರ್ಗ. 

ಇಪಿಎಫ್‌ ಅಡ್ವಾನ್ಸ್

ನೌಕರರ ಭವಿಷ್ಯ ನಿಧಿ (ಇಪಿಎಫ್‌) ಮೇಲೆ ಮರುಪಾವತಿಸಬೇಕಾದ ಅಗತ್ಯವಿಲ್ಲದ ಅಡ್ವಾನ್ಸ್‌ ಪಡೆಯಲು ಸಾಧ್ಯವಿದೆ. ಮೂರು ತಿಂಗಳ ಬೇಸಿಕ್‌ ವೇತನ ಅಥವಾ ಇಪಿಎಫ್‌ ಒಟ್ಟು ಕ್ರೆಡಿಟ್‌ ಬ್ಯಾಲೆನ್ಸ್ನ ಶೇ.75, ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ನೀವು ಪಡೆಯಬಹುದು. ಅಡ್ವಾನ್ಸ್‌ ಪಡೆಯಲು 20 ದಿನಗಳ ಕಾಲಾವಕಾಶವಿದ್ರೂ ಮೂರು ದಿನಗಳೊಳಗೆ ಪಡೆಯಬಹುದಾಗಿದೆ. 

ಮ್ಯೂಚುವಲ್ ಫಂಡ್ಸ್, ವಿಮೆ ಮೇಲೆ ಸಾಲ

ಷೇರು, ಮ್ಯೂಚುವಲ್‌ ಫಂಡ್ಸ್‌ ಹಾಗೂ ಜೀವ ವಿಮೆ ಪಾಲಿಸಿಗಳ ಮೇಲೂ ಸಾಲ ಪಡೆಯಬಹುದು. ಶೇ.10-13 ಬಡ್ಡಿದರದಲ್ಲಿ ಈ ಸಾಲಗಳು ಸಿಗುತ್ತವೆ. 

click me!