ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ!

By Suvarna News  |  First Published Jul 20, 2021, 1:00 PM IST

* ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ

* 2020-21ರಲ್ಲಿ ಸುಂಕ ದಾಖಲೆ ಪ್ರಮಾಣ ಏರಿಕೆ

* 2019-20ಕ್ಕಿಂತ ಶೇ.88ರಷ್ಟುಹೆಚ್ಚು ಆದಾಯ

* ಈ ವರ್ಷದ ಮೊದಲ 3 ತಿಂಗಳಲ್ಲಿ 1.01 ಲಕ್ಷ ಕೋಟಿ ಕಲೆಕ್ಷನ್‌


ನವದೆಹಲಿ(ಜು.20): ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ ನಂತರ ಕೇಂದ್ರ ಸರ್ಕಾರಕ್ಕೆ 2020-21ನೇ ವಿತ್ತೀಯ ವರ್ಷದಲ್ಲಿ 3.35 ಲಕ್ಷ ಕೋಟಿ ರು. ಆದಾಯ ಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಎರಡು ತೈಲೋತ್ಪನ್ನಗಳ ತೆರಿಗೆ ಸಂಗ್ರಹ ಶೇ.88ರಷ್ಟುಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವೇ ಲೋಕಸಭೆಗೆ ಸೋಮವಾರ ಈ ಮಾಹಿತಿ ನೀಡಿದೆ.

ಕೊರೋನಾ ಮೊದಲ ಅಲೆ ಎದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆ ದಾಖಲೆ ಪ್ರಮಾಣಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ನಷ್ಟಸರಿದೂಗಿಸಿಕೊಳ್ಳಲು ಸರ್ಕಾರ ಲೀಟರ್‌ಗೆ 19.98 ರು. ಇದ್ದ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 32.9 ರು.ಗೆ ಕಳೆದ ವರ್ಷ ಹೆಚ್ಚಿಸಿತ್ತು. ಡೀಸೆಲ್‌ ಮೇಲಿನ ತೆರಿಗೆಯನ್ನು 15.83 ರು.ನಿಂದ 31.8 ರು.ಗೆ ಹೆಚ್ಚಿಸಿತ್ತು. ಈ ದಾಖಲೆ ಪ್ರಮಾಣದ ಏರಿಕೆಯಿಂದ 2020-21ನೇ ಸಾಲಿನಲ್ಲಿ 3.35 ಲಕ್ಷ ಕೋಟಿ ರು. ತೆರಿಗೆ ಹರಿದುಬಂದಿದೆ. 2019-20ನೇ ಸಾಲಿನಲ್ಲಿ 1.78 ಲಕ್ಷ ಕೋಟಿ ರು. ಹಾಗೂ 2018-19ರಲ್ಲಿ 2.13 ಲಕ್ಷ ಕೋಟಿ ರು. ತೆರಿಗೆ ಸಂಗ್ರಹ ಆಗಿತ್ತು ಎಂದು ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಹೇಳಿದ್ದಾರೆ. ತೆರಿಗೆ ಇನ್ನೂ ಜಾಸ್ತಿ ಸಂಗ್ರಹಿಸಬಹುದಾಗಿತ್ತು. ಆದರೆ ಲಾಕ್‌ಡೌನ್‌ ಕಾರಣ ತೈಲ ಮಾರಾಟ ಇಳಿದಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

ಇದೇ ವೇಳೆ, ಏಪ್ರಿಲ್‌ನಿಂದ ಜೂನ್‌ವರೆಗಿನ 2021ರ ಹೊಸ ವಿತ್ತೀಯ ವರ್ಷದಲ್ಲಿ ಈಗಾಗಲೇ 1.01 ಲಕ್ಷ ಕೋಟಿ ರು. ಸಂಗ್ರಹವಾಗಿದೆ ಎಂದು ಪ್ರತ್ಯೇಕ ಪ್ರಶ್ನೆಗೆ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಉತ್ತರಿಸಿದ್ದಾರೆ.

click me!