LIC IPO:ಮೊದಲ ದಿನವೇ ಶೇ.67 ಚಂದಾದಾರಿಕೆ; ಶನಿವಾರವೂ ನಡೆಯಲಿದೆ ಬಿಡ್ಡಿಂಗ್

Published : May 05, 2022, 11:33 AM IST
LIC IPO:ಮೊದಲ ದಿನವೇ ಶೇ.67 ಚಂದಾದಾರಿಕೆ; ಶನಿವಾರವೂ ನಡೆಯಲಿದೆ ಬಿಡ್ಡಿಂಗ್

ಸಾರಾಂಶ

*ಬಿಡ್ಡಿಂಗ್ ಮೊದಲ ದಿನದ ಕೊನೆಯಲ್ಲಿ0.67 ಬಾರಿ ಎಲ್ಐಸಿ ಷೇರುಗಳ ಚಂದಾದಾರಿಕೆ *ಎಲ್ಐಸಿ ಪಾಲಿಸಿದಾರರು ಹಾಗೂ ಉದ್ಯೋಗಿಗಳ ಕೋಟಾ ಪೂರ್ಣ *ಮೇ 9ರ ತನಕ ನಡೆಯಲಿದೆ ಎಲ್ಐಸಿ ಐಪಿಒ  

ಮುಂಬೈ (ಮೇ 5): ನಿನ್ನೆ (ಮೇ 4) ಆರಂಭಗೊಂಡ ಭಾರತೀಯ ಜೀವ ವಿಮಾ ನಿಗಮದ (LIC) ಸಾರ್ವಜನಿಕ ಪ್ರಾರಂಭಿಕ ಷೇರು ಕೊಡುಗೆಗೆ (IPO) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ದಿನದ ಅಂತ್ಯಕ್ಕೆ ಶೇ.67ರಷ್ಟು ಷೇರುಗಳ ಚಂದಾದಾರಿಕೆ (subscribe) ಆಗಿದೆ.  ಶನಿವಾರವೂ (ಮೇ 7) ಸೇರಿದಂತೆ  ಸೋಮವಾರದ (ಮೇ 9) ತನಕ ಈ ಐಪಿಒ (IPO) ಸಾರ್ವಜನಿಕರ ಚಂದಾದಾರಿಕೆಗೆ ತೆರೆದಿರುತ್ತದೆ ಎಂದು ಎನ್ ಎಸ್ಇ (NSE) ತಿಳಿಸಿದೆ.

ಬಿಡ್ಡಿಂಗ್ ನ ಮೊದಲ ದಿನದ ಕೊನೆಯಲ್ಲಿ  0.67 ಬಾರಿ ಚಂದಾದಾರಿಕೆ (subscribe) ಆಗಿವೆ. ಇನ್ನು ಎಲ್ಐಸಿ  (LIC) ಪಾಲಿಸಿದಾರರಿಗೆ ಮೀಸಲಿಟ್ಟ ಕೋಟಾದಡಿಯಲ್ಲಿ 1.99 ಬಾರಿ ಚಂದಾದಾರಿಕೆ ಆಗಿದ್ದರೆ, ಉದ್ಯೋಗಿಗಳ ಪಾಲಿನಲ್ಲಿ 1.17 ಬಾರಿ ಚಂದಾದಾರಿಕೆ ಆಗಿದೆ. ಅಂದರೆ ಈ ಎರಡೂ ವಿಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಷೇರುಗಳ ಚಂದಾದಾರಿಕೆ ಆಗಿದೆ. ಅರ್ಹತೆ ಹೊಂದಿರುವ ಸಾಂಸ್ಥಿಕ ಖರೀದಿದಾರರು (QIBs) 0.33 ಬಾರಿ ಸಬ್ ಸ್ಕ್ರೈಬ್ ಮಾಡಿದ್ದರೆ, ಸಾಂಸ್ಥಿಕವಲ್ಲದ ಹೂಡಿಕೆದಾರರು 0.27 ಬಾರಿ ಸಬ್ ಸ್ಕ್ರೈಬ್ ಮಾಡಿದ್ದಾರೆ. ಇನ್ನು ಚಿಲ್ಲರೆ ವಲಯದಲ್ಲಿ 0.60 ಬಾರಿ ಚಂದಾದಾರಿಕೆ ನಡೆದಿದೆ. ಇನ್ನು ಆ್ಯಂಕರ್‌ ಹೂಡಿಕೆದಾರರಿಗೆ ಸೋಮವಾರದಿಂದಲೇ (ಮೇ 2) ಆರಂಭಿಕ ಷೇರುಗಳನ್ನು ಬಿಡುಗಡೆ ಮಾಡಲಾಗಿದ್ದು,  5,627 ಕೋಟಿ ರೂ. ಸಂಗ್ರಹಿಸಲಾಗಿದೆ.123 ಆ್ಯಂಕರ್‌ ಹೂಡಿಕೆದಾರರಿಗೆ ಪ್ರತಿ ಷೇರಿಗೆ 949ರೂ.ನಂತೆ 5.93 ಕೋಟಿ ಇಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ  5,627 ಕೋಟಿ ರೂ. ಸಂಗ್ರಹಿಸಿದೆ.

LIC IPO:ಮೊದಲ ದಿನವೇ ಷೇರುಗಳಿಗೆ ಭಾರೀ ಬೇಡಿಕೆ; ಆರಂಭವಾದ 2 ಗಂಟೆಯಲ್ಲಿ ಶೇ.28 ಷೇರುಗಳ ಮಾರಾಟ; ಇನ್ನಷ್ಟು ಮಾಹಿತಿ ಇಲ್ಲಿದೆ

ಶನಿವಾರವೂ ಚಂದಾದಾರಿಕೆ
ಎಲ್ಐಸಿ ಐಪಿಒ ಶನಿವಾರ (ಮೇ 7) ಕೂಡ ಚಂದಾದಾರಿಕೆಗೆ (subscribe) ಲಭ್ಯವಿದೆ.  ಶನಿವಾರ ಹಾಗೂ ಭಾನುವಾರ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ, ಎಲ್ಐಸಿ ಐಪಿಒಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಬಯಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10ರಿಂದ ರಾತ್ರಿ 7ರ ತನಕ ಎಲ್ಐಸಿ ಐಪಿಒ ಚಂದಾದಾರಿಕೆಗೆ ತೆರೆದಿರಲಿದೆ.  ಮೇ 17ರಂದು  ವಿನಿಮಯ ಕೇಂದ್ರಗಳಾದ ಬಿಎಸ್ ಇ (BSE) ಹಾಗೂ ಎನ್ಎಸ್ಇಯಲ್ಲಿ (NSE) ಷೇರುಗಳ ಲಿಸ್ಟಿಂಗ್ (Share listing) ನಡೆಯಲಿದೆ. 

21,000 ಕೋಟಿ ರೂ. ಸಂಗ್ರಹಿಸುವ ಗುರಿ
ಕೇಂದ್ರ ಸರ್ಕಾರ ಈ ಐಪಿಒ (IPO) ಮೂಲಕ ಎಲ್ಐಸಿಯ  ಶೇ. 3.5ರಷ್ಟು ಅಥವಾ 22,13,74,920 ಷೇರುಗಳನ್ನು ಮಾರಾಟ ಮಾಡುತ್ತಿದೆ. ಪ್ರತಿ ಈಕ್ವಿಟಿ ಷೇರಿಗೆ  902ರೂ. ನಿಂದ 949ರೂ. ದರ ನಿಗದಿಪಡಿಸಲಾಗಿದ್ದು, ಈ ಐಪಿಒ ಮೂಲಕ 21,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ (Central Government) ಹೊಂದಿದೆ. ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ  60ರೂ. ಡಿಸ್ಕೌಂಟ್ (Discount)ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ. 

LIC IPO: ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ

ಎಷ್ಟು ಷೇರುಗಳನ್ನು ಬಿಡ್ ಮಾಡಬಹುದು?
ಅರ್ಜಿದಾರ ಲಾಟ್ ಲೆಕ್ಕದಲ್ಲಿ ಬಿಡ್ (Bid) ಮಾಡಬಹುದಾಗಿದೆ. ಒಂದು ಲಾಟ್ ನಲ್ಲಿ 15 ಎಲ್ ಐಸಿ ಷೇರುಗಳಿರುತ್ತವೆ. ಒಬ್ಬ ವ್ಯಕ್ತಿ ಕನಿಷ್ಠ ಒಂದು ಲಾಟ್ (lot) ಅಥವಾ 15 ಷೇರುಗಳಿಗೆ ಬಿಡ್ ಮಾಡಬಹುದು. ಇನ್ನು ಗರಿಷ್ಠ ಬಿಡ್ ಮಿತಿ 14 ಲಾಟ್ ಅಥವಾ 210 ಷೇರುಗಳು (Shares). ಕನಿಷ್ಠ ಹೂಡಿಕೆ ಮಿತಿ 14,235 ರೂ. ಇನ್ನು ಗರಿಷ್ಠ ಹೂಡಿಕೆ ಮಿತಿ 1,99,290 ರೂ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!