Vegetable Price Hike:ಕೈ ಸುಡುತ್ತಿದೆ ತರಕಾರಿ ಬೆಲೆ; ಈ ದುಬಾರಿ ದರಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ

Published : May 04, 2022, 08:02 PM IST
Vegetable Price Hike:ಕೈ ಸುಡುತ್ತಿದೆ ತರಕಾರಿ ಬೆಲೆ; ಈ ದುಬಾರಿ ದರಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಹಗಲಕಾಯಿ ಮಾತ್ರವಲ್ಲ,ಯಾವ ತರಕಾರಿ ತಿಂದ್ರೂ ಕಹಿಯ ಅನುಭವ.ಇದಕ್ಕೆ ಕಾರಣ ಬೆಲೆಯೇರಿಕೆ. ಕೆಲವು ದಿನಗಳಿಂದ ತರಕಾರಿ ಬೆಲೆ ದಿನೇದಿನೆ ಏರುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಹಾಗಾದ್ರೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಲು ಕಾರಣವೇನು?   

Business Desk: ತರಕಾರಿ (Vegetable) ಆರೋಗ್ಯಕ್ಕೇನೂ ಒಳ್ಳೆಯದು ಆದ್ರೆ ಅದರ ಬೆಲೆ (Price) ಮಾತ್ರ ಸದ್ಯ ಜೇಬಿಗೆ ಹೊರೆ. ಮಾರುಕಟ್ಟೆಗೆ ಹೋಗಿ ಚೀಲದ ತುಂಬಾ ತರಕಾರಿ ಹೊತ್ತು ತರುವುದು ಈಗ ಜನಸಾಮಾನ್ಯರಿಗೆ ಕನಸಿನ ಮಾತೇ ಸರಿ. ಇದಕ್ಕೆ ಕಾರಣ ಗಗನಕ್ಕೇರಿರುವ ತರಕಾರಿ ಬೆಲೆ.  ಪರಿಣಾಮ ಕಳೆದ ಕೆಲವು ದಿನಗಳಿಂದ ಗೃಹಿಣಿಯರಿಗೆ ಅಡುಗೆ ಮಾಡುವುದೇ ದೊಡ್ಡ ತಲೆನೋವಾಗಿದೆ. ಕನಿಷ್ಠ ಟೊಮ್ಯಾಟೋ (Tomato) ಬಳಸಿಯಾದ್ರೂ ಅಡುಗೆ ಮಾಡೋಣ ಅಂದ್ರೆ ರಾಜ್ಯದಲ್ಲಿ ಅದರ ಬೆಲೆಯೂ ಏರಿಕೆಯಾಗಿದೆ. 

ದುಬಾರಿ ತರಕಾರಿಗಳು
ರಾಜ್ಯದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಏರಿಕೆಯಾಗಿದೆ.  ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಅಭಾವದಿಂದ ಟೊಮ್ಯಾಟೋ ಬೆಳೆ ಚೆನ್ನಾಗಿ ಬಂದಿಲ್ಲ. ಇದ್ರಿಂದ ಮಾರುಕಟ್ಟೆಗೆ ಟೊಮ್ಯಾಟೋ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಟೊಮ್ಯಾಟೋ ಕೆ.ಜಿ.ಗೆ 60ರೂ. ಇದೆ. ಇನ್ನು ಆನ್ ಲೈನ್ ನಲ್ಲಿ ಕೆ.ಜಿ. ಟೊಮ್ಯಾಟೋಗೆ 70ರೂ. ಇದೆ. ಹಾಗೆಯೇ ಹುರುಳಿಕಾಯಿ, ದಪ್ಪ ಮೆಣಸಿನಕಾಯಿ ಬೆಲೆ 80ರ ಗಡಿಯಲ್ಲಿದೆ. ಇನ್ನು ನಿಂಬೆ ಹಣ್ಣಿನ ಬೆಲೆ ಕೇಳೋದೇ ಬೇಡ, ಕೆ.ಜಿ.ಗೆ 300ರೂ. ಆಗಿದೆ. 

Repo Rate Hike:ಮಿತಿ ಮೀರಿದ ಹಣದುಬ್ಬರಕ್ಕೆ RBI ಕಡಿವಾಣ; ರೆಪೋ ದರ ಏರಿಕೆ; ಹೆಚ್ಚಲಿದೆ ಸಾಲದ ಬಡ್ಡಿದರ

ಬೆಲೆಯೇರಿಕೆಗೆ ಕಾರಣವೇನು?
ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಲು ಒಂದಲ್ಲ, ಹಲವು ಕಾರಣಗಳಿವೆ. ಹಾಗಾದ್ರೆ ಆ ಕಾರಣಗಳು ಯಾವುವು? ಇಲ್ಲಿದೆ ಮಾಹಿತಿ.
1.ಹವಾಮಾನ ವೈಪರೀತ್ಯ
ಅತೀ ಮಳೆಯಾದ್ರೂ ತರಕಾರಿ ಬೆಲೆ ಹೆಚ್ಚುತ್ತದೆ. ಹಾಗೆಯೇ ಅತೀ ಬಿಸಿಲಾದ್ರೂ ತರಕಾರಿ ದರ ಏರುತ್ತದೆ. ಅತಿಯಾದ ಮಳೆ ಹಾಗೂ ಬಿಸಿಲು ಎರಡೂ ಬೆಳೆಗಳಿಗೆ ಹಾನಿಯುಂಟು ಮಾಡುವ ಮೂಲಕ ಉತ್ಪಾದನೆಯನ್ನು ತಗ್ಗಿಸುತ್ತವೆ.

2. ಇಂಧನ ದರ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಇದು ತರಕಾರಿ ಸಾಗಣೆ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿದೆ. ಪರಿಣಾಮ ತರಕಾರಿ ಬೆಲೆಗಳಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ.

3.ಬೇಡಿಕೆ ಹೆಚ್ಚಳ
ಕೆಲವೊಂದು ತರಕಾರಿಗಳ ಬೆಲೆ ಕೆಲವು ಸಮಯದಲ್ಲಿ ಮಾತ್ರ ಏರಿಕೆಯಾಗುತ್ತದೆ. ಉದಾಹರಣೆಗೆ ಸೌತೇಕಾಯಿ, ನಿಂಬೆಹಣ್ಣು, ಸೊಪ್ಪು ಸೇರಿದಂತೆ ಕೆಲವು ತರಕಾರಿಗಳ ಬೆಲೆ ಬೇಸಿಗೆಯಲ್ಲಿ ಏರಿಕೆಯಾಗುತ್ತದೆ.  ಇದಕ್ಕೆ ಕಾರಣ ಹೆಚ್ಚಿನ ಬೇಡಿಕೆ ಹಾಗೂ ಕಡಿಮೆ ಪೂರೈಕೆ. ಹೌದು, ಕೆಲವು ಸಮಯದಲ್ಲಿ ಕೆಲವು ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಆದ್ರೆ ಆಗ ಪೂರೈಕೆ ಕಡಿಮೆದ್ದಾಗ ಬೆಲೆಯಲ್ಲಿ ಹೆಚ್ಚಳವಾಗುತ್ತದೆ. ಇಂದಿನ ಜನರು ಹಸಿರು ಸೊಪ್ಪು, ತರಕಾರಿಗಳಿಗೆ ತಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪರಿಣಾಮ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣ.

4.ಹಣದುಬ್ಬರ ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಭಾರತದಲ್ಲಿ ಮಾರ್ಚ್ ನಲ್ಲಿ  ಚಿಲ್ಲರೆ (Retail) ಹಣದುಬ್ಬರ (Inflation)17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ್ದು,  ಶೇ.6.95ಕ್ಕೆ ಏರಿಕೆಯಾಗಿದೆ. ಇದು ಕೂಡ ತರಕಾರಿ ಬೆಲೆಯೇರಿಕೆಗೆ ಕಾರಣವಾಗಿದೆ. 

5.ಸ್ಥಳಾವಕಾಶ ಕೊರತೆ
ಜನಸಂಖ್ಯೆ ಹೆಚ್ಚಿದಂತೆ ತರಕಾರಿಗೆ ಬೇಡಿಕೆಯೂ ಹೆಚ್ಚುತ್ತದೆ. ಆದ್ರೆ ಜನದಟ್ಟಣೆ ಕಾರಣಕ್ಕೆ ಕೃಷಿಯೋಗ್ಯ ಭೂಮಿಗಳು ವಸತಿ ಪ್ರದೇಶಗಳಾಗಿ ಪರಿವರ್ತನೆ ಹೊಂದುತ್ತಿರುವ ಕಾರಣ ಬೆಳೆ ಬೆಳೆಯಲು ಸ್ಥಳಾವಕಾಶದ ಕೊರತೆ ಕೂಡ ಎದುರಾಗಿದೆ. ಇದು ಉತ್ಪಾದನೆ ಇಳಿಕೆಗೆ ಕಾರಣವಾಗಿದೆ. 

Fixed Deposits:ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಬಡ್ಡಿದರ ಎಷ್ಟಿದೆ? ಯಾವ ಬ್ಯಾಂಕಿನಲ್ಲಿ FD ಖಾತೆ ತೆರೆಯೋದು ಬೆಸ್ಟ್?

6.ಹೆಚ್ಚಿದ ಉತ್ಪಾದನಾ ವೆಚ್ಚ
ಬೀಜ, ರಸಗೊಬ್ಬರ, ಕೀಟನಾಶಕಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಜೊತೆಗೆ ಕೂಲಿ ಕಾರ್ಮಿಕರ ವೇತನ ಕೂಡ ಹೆಚ್ಚಿದೆ. ಇದ್ರಿಂದ ತರಕಾರಿ ಬೆಳೆಯುವ ವೆಚ್ಚ ಹೆಚ್ಚುತ್ತಿದೆ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ ಮಾಡುವುದು ಅನಿವಾರ್ಯವಾಗಿದೆ. 

7.ಅಕ್ರಮ ಸಂಗ್ರಹಣೆ
ಕೆಲವು ಬೆಳೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು, ಬೆಲೆ ಹೆಚ್ಚಳವಾದಾಗ ಮಾರಾಟ ಮಾಡಲಾಗುತ್ತದೆ. ಈ ರೀತಿ ದಾಸ್ತಾನು ಇಟ್ಟುಕೊಳ್ಳುವುದ್ರಿಂದ ಪೂರೈಕೆ ತಗ್ಗಿ ಬೇಡಿಕೆ ಹೆಚ್ಚಿ ಬೆಲೆಯಲ್ಲಿ ಏರಿಕೆಯಾಗುತ್ತದೆ. 

8.ನಿರ್ವಹಣೆ ಹಾಗೂ ವಿತರಣೆಯಲ್ಲಿ ದೋಷ
ವೈಜ್ಞಾನಿಕ ನಿರ್ವಹಣೆ ಹಾಗೂ ವಿತರಣೆ ಕೊರತೆಯಿಂದ ಬೆಳೆಗಳು ಹಾಳಾಗುತ್ತವೆ. ಇದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. 

9.ಹೆಚ್ಚಿದ ಮಧ್ಯವರ್ತಿಗಳ ಹಾವಳಿ
ಭಾರತದಲ್ಲಿ ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕದ ಕೊರತೆಯಿದೆ. ರೈತರು ಹಾಗೂ ಗ್ರಾಹಕರ ನಡುವೆ ಮಧ್ಯವರ್ತಿಗಳು ಕಾರ್ಯನಿರ್ವಹಿಸುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌