ಅಕ್ಟೋಬರ್‌ಗೆ LIC, ಸೆಪ್ಟೆಂಬರ್‌ಗೆ ಏರಿಂಡಿಯಾ, ಬಿಪಿಸಿಎಲ್ ಷೇರು ಮಾರಾಟ!

By Kannadaprabha NewsFirst Published Feb 3, 2021, 8:01 AM IST
Highlights

ಅಕ್ಟೋಬರ್‌ಗೆ ಎಲ್‌ಐಸಿ ಷೇರು, ಸೆಪ್ಟೆಂಬರ್‌ಗೆ ಏರಿಂಡಿಯಾ, ಬಿಪಿಸಿಎಲ್‌| ಐಡಿಬಿಐ ಸೇರಿ 3 ಸರ್ಕಾರಿ ಬ್ಯಾಂಕ್‌ ಷೇರು ಪಾಲು ಮಾರಾಟ| ಷೇರು ಮಾರಾಟದಿಂದ 1.75 ಲಕ್ಷ ಕೋಟಿ ಬಂಡವಾಳ ಸಂಗ್ರಹ ನಿರೀಕ್ಷೆ

ನವದೆಹಲಿ(ಫೆ.03): ಭಾರತದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಷೇರು (ಐಪಿಒ) ಅಕ್ಟೋಬರ್‌ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದೇ ವೇಳೆ ನಷ್ಟದ ಸುಳಿಯಲ್ಲಿರುವ ಏರ್‌ ಇಂಡಿಯಾ ಮತ್ತು ಬಿಪಿಸಿಎಲ್‌ ತೈಲ ಕಂಪನಿಗಳ ಷೇರು ಮಾರಾಟ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೋನಾ ವೈರಸ್‌ನಿಂದ ನಲುಗಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಷೇರು ಮಾರಾಟದಿಂದ 1.75 ಲಕ್ಷ ಕೋಟಿ ರು. ಬಂಡವಾಳ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅಲ್ಲದೇ ಸರ್ಕಾರ ಶಿಪ್ಪಿಂಗ್‌ ಕಾಪ್‌ರ್‍ ಆಫ್‌ ಇಂಡಿಯಾ (ಎಸ್‌ಸಿಐ), ಐಡಿಬಿಐ ಬ್ಯಾಂಕ್‌ ಹಾಗೂ ಇತರ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಷೇರುಗಳ ಮಾರಾಟಕ್ಕೆ ಉದ್ದೇಶಿಸಲಾಗಿದೆ ಎಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ ತಿಳಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಎಲ್‌ಐಸಿ ತಿದ್ದುಪಡಿ ಕಾಯ್ದೆ ಮತ್ತು ಐಡಿಬಿಐ ತಿದ್ದುಪಡಿ ಕಾಯ್ದೆಯನ್ನು ಹಣಕಾಸು ಮಸೂದೆಯ ಭಾಗವನ್ನಾಗಿ ಮಾಡಲಾಗಿದೆ. ಹೀಗಾಗಿ ಪ್ರತ್ಯೇಕ ಮಸೂದೆಗಳು ಇರುವುದಿಲ್ಲ. ಎಲ್‌ಐಸಿ ಐಪಿಒ ಅಕ್ಟೋಬರ್‌ ಬಳಿಕ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

click me!