LIC IPO: ಎರಡನೇ ದಿನ ದಾಖಲೆ ನಿರ್ಮಿಸಿದ ಎಲ್ಐಸಿ ಐಪಿಒ; ಶೇ.100ಕ್ಕಿಂತಲೂ ಹೆಚ್ಚು ಚಂದಾದಾರಿಕೆ ; ವಾರಾಂತ್ಯದಲ್ಲೂ ನಡೆಯಲಿದೆ ಬಿಡ್

By Suvarna News  |  First Published May 6, 2022, 11:14 AM IST

*16.68 ಕೋಟಿಗಿಂತಲೂ ಅಧಿಕ ಈಕ್ವಿಟಿ ಷೇರುಗಳಿಗೆ ಬಿಡ್ 
*1.03 ಬಾರಿ ಚಂದಾದಾರಿಕೆ ಆದ ಎಲ್ಐಸಿ ಷೇರುಗಳು
*ಪಾಲಿಸಿದಾರರ ವರ್ಗದಲ್ಲಿ3.11 ಪಟ್ಟು ಹಾಗೂ ಉದ್ಯೋಗಿಗಳ ವಿಭಾಗದಲ್ಲಿ  2.21 ಪಟ್ಟು ಚಂದಾದಾರಿಕೆ
 


ಮುಂಬೈ (ಮೇ 6): ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒಗೆ (IPO) ಎರಡನೇ ದಿನವಾದ ಗುರುವಾರ ( ಮೇ 5) ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. 15,115.5  ಕೋಟಿ ರೂ.ಮೌಲ್ಯದ ಬಿಡ್ (Bid) ಆಗಿದೆ. ಮೊದಲ ದಿನ ಮೇ 4ರಂದು 10,000  ಕೋಟಿ ರೂ. ಮೌಲ್ಯದ ಬಿಡ್ ಗಳು ಸಲ್ಲಿಕೆಯಾಗಿದ್ದವು. 

ಎಲ್ಐಸಿ ಐಪಿಒದ ಎರಡನೇ ದಿನ ಭಾರತದ ಷೇರು ಮಾರುಕಟ್ಟೆಯ (Stock Market) ಇತಿಹಾಸದಲ್ಲೇ ಅತೀದೊಡ್ಡ ಪ್ರಮಾಣದಲ್ಲಿ ಬಿಡ್ಡಿಂಗ್ ನಡೆದಿದ್ದು, ಎಲ್ಐಸಿ ಷೇರುಗಳು 1.03 ಬಾರಿ ಚಂದಾದಾರಿಕೆ ಆಗಿವೆ.  16.68 ಕೋಟಿಗಿಂತಲೂ ಅಧಿಕ ಈಕ್ವಿಟಿ ಷೇರುಗಳಿಗೆ ಬಿಡ್ ಬಂದಿದೆ. ಅಂದ್ರೆ ಎಲ್ಐಸಿ ಹೊಂದಿದ್ದ 16.20 ಕೋಟಿ ಷೇರುಗಳ ವಿತರಣೆ ಗುರಿಯನ್ನು ಇದು ಮೀರಿಸಿದೆ. ಆ ಮೂಲಕ ಶೇ.100ಕ್ಕಿಂತಲೂ ಹೆಚ್ಚು ಚಂದಾದಾರಿಕೆ ಆಗಿದೆ. ಎಲ್ಐಸಿ ಪಾಲಿಸಿದಾರರ ವರ್ಗದಲ್ಲಿ ಮೀಸಲಿಟ್ಟ ಪಾಲಿಗಿಂತ 3.11 ಪಟ್ಟು ಹೆಚ್ಚು ಬಿಡ್ ಗಳು ಬಂದಿವೆ.  ಇನ್ನು ಉದ್ಯೋಗಿಗಳ ವಿಭಾಗದಲ್ಲಿ ಮೀಸಲಿಟ್ಟ ಭಾಗಕ್ಕಿಂತ  2.21 ಪಟ್ಟು ಅಧಿಕ ಬಿಡ್ ಗಳು ಸಲ್ಲಿಕೆಯಾಗಿವೆ. ರಿಟೇಲ್ ಹೂಡಿಕೆದಾರರ ವಿಭಾಗದಲ್ಲಿ ಶೇ. 93 ಷೇರುಗಳ ಚಂದಾದಾರಿಕೆ ಆಗಿದೆ. ಅರ್ಹ ಸಾಂಸ್ಥಿಕ ಹೂಡಿಕೆದಾರರ (QIBs) ವಿಭಾಗದಲ್ಲಿ ಮೀಸಲಿಟ್ಟ ಕೋಟಾದಲ್ಲಿ ಶೇ.40ರಷ್ಟು ಷೇರುಗಳು ಬಿಡ್ ಆಗಿವೆ. ಇನ್ನು ಸಾಂಸ್ಥಿಕವಲ್ಲದ ಹೂಡಿಕೆದಾರರು (NII) ವಿಭಾಗದಲ್ಲಿ ಶೇ.47ರಷ್ಟು ಬಿಡ್ ಗಳು ನಡೆದಿವೆ.

Tap to resize

Latest Videos

LIC IPO:ಮೊದಲ ದಿನವೇ ಶೇ.67 ಚಂದಾದಾರಿಕೆ; ಶನಿವಾರವೂ ನಡೆಯಲಿದೆ ಬಿಡ್ಡಿಂಗ್

ಆ್ಯಂಕರ್‌ ಹೂಡಿಕೆದಾರರಿಗೆ ಮೇ 2ರಿಂದಲೇ ಆರಂಭಿಕ ಷೇರುಗಳನ್ನು ಬಿಡುಗಡೆ ಮಾಡಲಾಗಿದ್ದು, 5,627 ಕೋಟಿ ರೂ. ಸಂಗ್ರಹಿಸಲಾಗಿದೆ.123 ಆ್ಯಂಕರ್‌ ಹೂಡಿಕೆದಾರರಿಗೆ ಪ್ರತಿ ಷೇರಿಗೆ 949ರೂ.ನಂತೆ 5.93 ಕೋಟಿ ಇಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ  5,627 ಕೋಟಿ ರೂ. ಸಂಗ್ರಹಿಸಿದೆ.

ಎಲ್ಐಸಿ ಐಪಿಒ ಭಾರತದ ಅತೀದೊಡ್ಡ ಐಪಿಒ ಆಗಿದ್ದು,21,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.  ಎಲ್ಐಸಿ ಐಪಿಒ ಮೇ 4ರಿಂದ ಮೇ 9ರ ತನಕ ಚಂದಾದಾರಿಕೆಗೆ ತೆರೆದಿರುತ್ತದೆ. ಐಪಿಒ ಮೂಲಕ ಎಲ್ಐಸಿಯ ಶೇ.3.5 ಷೇರುಗಳನ್ನು ಮಾರಾಟ ಮಾಡುವ ಗುರಿಯನ್ನು ಎಲ್ಐಸಿ ಹೊಂದಿತ್ತು.  ಪ್ರತಿ ಈಕ್ವಿಟಿ ಷೇರಿಗೆ  902ರೂ. ನಿಂದ 949ರೂ. ದರ ನಿಗದಿಪಡಿಸಲಾಗಿದ್ದು,ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ  60ರೂ. ಡಿಸ್ಕೌಂಟ್ (Discount)ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ. 

ಅರ್ಜಿದಾರ ಲಾಟ್ ಲೆಕ್ಕದಲ್ಲಿ ಬಿಡ್ (Bid) ಮಾಡಬಹುದಾಗಿದೆ. ಒಂದು ಲಾಟ್ ನಲ್ಲಿ 15 ಎಲ್ ಐಸಿ ಷೇರುಗಳಿರುತ್ತವೆ. ಒಬ್ಬ ವ್ಯಕ್ತಿ ಕನಿಷ್ಠ ಒಂದು ಲಾಟ್ (lot) ಅಥವಾ 15 ಷೇರುಗಳಿಗೆ ಬಿಡ್ ಮಾಡಬಹುದು. ಇನ್ನು ಗರಿಷ್ಠ ಬಿಡ್ ಮಿತಿ 14 ಲಾಟ್ ಅಥವಾ 210 ಷೇರುಗಳು (Shares). ಕನಿಷ್ಠ ಹೂಡಿಕೆ ಮಿತಿ 14,235 ರೂ. ಇನ್ನು ಗರಿಷ್ಠ ಹೂಡಿಕೆ ಮಿತಿ 1,99,290 ರೂ.

LIC IPO: ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ

ಶನಿವಾರ, ಭಾನುವಾರ ಕೂಡ ಬಿಡ್ಡಿಂಗ್
ಎಲ್ಐಸಿ ಐಪಿಒ ಭಾನುವಾರ (ಮೇ 8) ಕೂಡ ಚಂದಾದಾರಿಕೆಗೆ ಲಭ್ಯವಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಹಿಂದೆ ಶನಿವಾರ (ಮೇ 7) ಬಿಡ್  ನಡೆಸಲು ಹೂಡಿಕೆದಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ಎಲ್ಐಸಿ ಐಪಿಒಗೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಹಾಗೂ ಭಾನುವಾರ ಕೂಡ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸಲಿವೆ. ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸುವುದಿಲ್ಲ. 


 

click me!