ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!

By Suvarna NewsFirst Published Aug 5, 2020, 6:52 PM IST
Highlights

ಚೀನಾ ಮೂಲಕ ಟಿಕ್‌ಟಾಕ್ ಆ್ಯಪ್ ಅಮೆರಿಕ ಆವೃತ್ತಿ ಖರೀದಿಸು ಮೈಕ್ರೋಸಾಫ್ಟ್ ಸೇರಿದಂತೆ ಕೆಲ ಕಂಪನಿಗಳು ಮುಂಚೂಣಿಯಲ್ಲಿದೆ. ಇತ್ತ ಖರೀದಿ ವೇಳೆ ಕೆಲ ನಿಯಮಗಳನ್ನು ಪಾಲಿಸಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಕೆಲ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಡಿದ್ದಾರೆ.

ವಾಶಿಂಗ್ಟನ್(ಆ.05): ಚೀನಾ ಮೂಲದ ಟಿಕ್‌ಟಾಕ್ ಖರೀದಿಸಲು ಅಮೆರಿಕದ ಯಾವುದೇ ಕಂಪನಿಗೆ ಅವಕಾಶ ನೀಡಲಾಗುವುದು. ಆದರೆ ಖರೀದಿ ವೇಳೆ ಸರ್ಕಾರದ ಕೆಲ ಸೂಚನೆಗಳನ್ನು ಪಾಲಿಸಲೇಬೇಕು. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಟಿಕ್‌ಟಾಕ್ ಖರೀದಿಗೆ ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ಮಾತುಕತೆ ನಡೆಸಿದೆ. 

ಕೊರೋನಾ ವಿರುದ್ಧ ಅಮೆರಿಕ ದಿಟ್ಟ ಹೋರಾಟ, ಭಾರತದ ಪರಿಸ್ಥಿತಿ ಕೈಮೀರುತ್ತಿದೆ; ಟ್ರಂಪ್!..

ಮೈಕ್ರೋಸಾಫ್ಟ್ ಅಥವಾ ಯಾವುದೇ ಕಂಪನಿ ಅಮೆರಿಕದಲ್ಲಿ ಟಿಕ್‌ಟಾಕ್ ಖರೀದಿಸಿದರೆ ಇದರಲ್ಲಿ ಒಂದು ಪಾಲು ಅಮೆರಿಕ ಖಜಾನೆಗೆ ಸೇರಬೇಕು ಎಂದು ಟ್ರಂಪ್ ಹೇಳಿದ್ದರು. ಟ್ರಂಪ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಟ್ರಂಪ್ ನಿಲುವ ಅಸಂವಿಧಾನಿಕ ಹಾಗೂ ಸುಲಿಗೆ ಎಂದು ಹಲವರು ಆರೋಪಿಸಿದ್ದರು. ಆದರೆ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಯಾವ ವ್ಯವಹಾರ, ಉದ್ದಿಮೆ ಅಮೆರಿಕದಲ್ಲಿ ಇದೆ ಅಂದರೆ ಅದಕ್ಕೆ ಸರ್ಕಾರ ಕಾರಣವಾಗಿದೆ. ಇಲ್ಲಿ ನಡೆಸುವ ಎಲ್ಲಾ ವ್ಯವಹಾರಗಳಿಗೆ ಬಾಡಿಗೆ ಅಥವಾ ಲೀಸ್ ಒಪ್ಪಂದ ಮೂಲಕ ಹಣ ನೀಡಬೇಕು. ಟಿಕ್‌ಟಾಕ್ ಖರೀದಿ ಹಾಗೂ ಮಾರಾಟದಲ್ಲಿನ ಒಂದು ಪಾಲು ಅಮೆರಿಕ ಖಜಾನೆಗೆ ಸೇರಬೇಕು. ಈ ಮಾತನ್ನು ಮೈಕ್ರೋಸಾಫ್ಟ್ ಕೂಡ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ನಿರ್ಧಾರದಿಂದ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ನಿಯಮ ಉಲ್ಲಂಘನೆಯಾಗಲಿದೆ. ಇಷ್ಟೇ ಅಲ್ಲ ಇದು ಅಮೆರಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾಫಿಯಾ ರೀತಿಯಲ್ಲಿ ಹಣ ಸಂಗ್ರಹಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಈ ರೀತಿಯ ಮಾಫಿಯಾ ತಂತ್ರಗಳು ರಷ್ಯಾದಲ್ಲಿ ಕಾಣ ಸಿಗುತ್ತದೆ. ಆದರೆ ಅಮೆರಿಕದಲ್ಲಿ ಇದು ಉತ್ತಮ ಸಂಪ್ರದಾಯವಲ್ಲ ಎಂದು ಟೆಕ್ನಾಲಜಿ ಪಾಲಿಸಿ ಸೆಂಟರ್ ಹಾಗೂ ಅಂತಾರಾಷ್ಟ್ರೀಯ ಸ್ಟ್ರಾಟರ್ಜಿಕ್ ಸ್ಟಡಿ ನಿರ್ದೇಶಕ ಜೇಮ್ಸ್ ಲಿವಿಸ್ ಹೇಳಿದ್ದಾರೆ.

click me!