
Business Desk:ರಿಯಲ್ ಎಸ್ಟೇಟ್ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆ ಅಡಿಯಲ್ಲಿ ನೋಂದಣಿಯಾಗದ ಯೋಜನೆಯೊಂದರ ಡೆವಲಪರ್ ಗೆ ಕರ್ನಾಟಕ ಸಹಕಾರ ಸೊಸೈಟಿ ಕಾಯ್ದೆ 1959ರ (ಕೆಎಸ್ ಸಿಎ) ಅನ್ವಯ ಖರೀದಿದಾರರ ಸಂಘ ಸ್ಥಾಪಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರ (ಕೆರೇರಾ) ಸೂಚನೆ ನೀಡಿದೆ. ಪಶ್ಚಿಮ ಬೆಂಗಳೂರಿನಲ್ಲಿ ಇಷ್ಟಾರ್ಥ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ಖರೀದಿಸೋರಿಗೆ ಸಂಬಂಧಿಸಿ ಆದೇಶ ಹೊರಡಿಸಿರುವ ರೇರಾ, ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡುವಂತೆ ಡೆವಲಪರ್ ಗೆ ಸೂಚಿಸಿದೆ. ಹಾಗೆಯೇ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್ ಡಬ್ಲ್ಯುಎ) ಸ್ಥಾಪನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದೆ ಕೂಡ. ನಿವಾಸಿಗಳ ಸಂಘ ಸ್ಥಾಪಿಸೋದು ಡೆವಲಪರ್ ಕರ್ತವ್ಯವಾಗಿದೆ ಎಂದು ಕೆರೇರಾ ತಿಳಿಸಿದೆ. ಈ ಪ್ರಕರಣದಲ್ಲಿ ಇಷ್ಟಾರ್ಥ ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಿರುವ ಚೇತನ್ ಕೆ.ಟಿ. ಎಂಬುವರು ಪ್ರಾಧಿಕಾರವನ್ನು ಸಂಪರ್ಕಿಸಿ ಮನೆ ಖರೀದಿದಾರರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸದಿರುವ ಹಾಗೂ ವಾಸಯೋಗ್ಯ ಪ್ರಮಾಣಪತ್ರ ನೀಡಲು ವಿಫಲವಾಗಿರುವ ಬಗ್ಗೆ ದೂರು ನೀಡಿದ್ದರು.
'ಹಂಚಿಕೆದಾರರು ಅಭಿವೃದ್ಧಿ ಹಾಗೂ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲು ಕೆಎಸ್ ಸಿಎ 1959ರ ಅಡಿಯಲ್ಲಿ ಸಂಘ ರಚಿಸಿಕೊಳ್ಳುವುದು ಅಗತ್ಯ' ಎಂದು ಜುಲೈ 31ರಂದು ಹೊರಡಿಸಿರುವ ಆದೇಶದಲ್ಲಿ ರೇರಾತಿಳಿಸಿದೆ. ಇನ್ನು ಸಂಘ ರಚಿಸೋದು ಡೆವಲಪರ್ ಅವರ ಕರ್ತವ್ಯ ಎಂದು ಕೂಡ ಹೇಳಿದೆ. 'ಯೋಜನೆಯನ್ನು ಮುಂದುವರಿಸಲು ಮನೆ ಖರಿದಿದಾರರಿಗೆ ನೆರವಾಗಲು ಹಂಚಿಕೆದಾರರ ಸಹಕಾರ ಸೊಸೈಟಿ ಸ್ಥಾಪಿಸೋದು ಅತ್ಯಗತ್ಯ ಎಂದು ರೇರಾ ಅಭಿಪ್ರಾಯಪಟ್ಟಿದೆ.
ಭೂಮಿ ತಾಯಿಗಿಲ್ಲಿ ಬಂಗಾರಕ್ಕೂ ಅಧಿಕ ಬೆಲೆ: ಎಕರೆಗೆ 100 ಕೋಟಿ ರೂ. ಗೆ ಮಾರಾಟ!
ಚೇತನ್ ಕೆ.ಟಿ. ಎಂಬುವರು ಡೆಲವಪರ್ ವಿರುದ್ಧ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಇದರ ಅನ್ವಯ 2018ರ ಜುಲೈನಲ್ಲಿ ಡೆವಲಪರ್ 64ಲಕ್ಷ ರೂಗೆ ಸೇಲ್ ಡೀಡ್ ಮಾಡಿದ್ದಾರೆ. ಆದರೆ, ಇಲ್ಲಿಯ ತನಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ಎಂಬುದು ಚೇತನ್ ಅವರ ಆರೋಪ. ನಿರ್ವಹಣಾ ಶುಲ್ಕವನ್ನು ಪ್ರತಿ ತಿಂಗಳು ಸಂಗ್ರಹಿಸಲಾಗುತ್ತಿದ್ದರೂ ಲಿಫ್ಟ್ ಸೇರಿದಂತೆ ಅಗತ್ಯ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇನ್ನು ವಿದ್ಯುತ್ ಬಿಲ್ ಗಳನ್ನು ಮನೆ ಖರೀದಿದಾರರ ಹೆಸರಿಗೆ ವರ್ಗಾವಣೆ ಮಾಡಿಲ್ಲ. ಹಾಗೆಯೇ ಈ ತನಕ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘ ಕೂಡ ರಚಿಸಿಲ್ಲ' ಎಂದು ಅವರು ರೇರಾಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಡೆವಲಪರ್ ಕೂಡ ರೇವಾದ ಮುಂದೆ ತಮ್ಮ ವಾದ ಮಂಡಿಸಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆ 2022ರಲ್ಲಿ ಹೊರಡಿಸಿರುವ ಆದೇಶದ ಅನ್ವಯ ಕಾನೂನುಬದ್ಧ ದಾಖಲೆಆದ ಖಾತಾವನ್ನು ಮನೆಗಳ ಮಾಲೀಕರ ಹೆಸರಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಇನ್ನು ವಿದ್ಯುತ್ ಬಿಲ್ ಗಳನ್ನು ಕೂಡ ವೈಯಕ್ತಿಕ ಮಾಲೀಕರ ಹೆಸರುಗಳಿಗೆ ವರ್ಗಾಯಿಸಲಾಗಿದೆ. ಮನೆ ಖರೀದಿದಾರರು ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿ ಲಿಮಿಟೆಡ್ ಅನ್ನು ಸಂಪರ್ಕಿಸಿ ವಿದ್ಯುತ್ ಬಿಲ್ ಅನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕು ಎಂದು ಡೆವಲಪರ್ ರೇರಾಗೆ ತಿಳಿಸಿದ್ದಾರೆ.
40 ಸಾವಿರ ರೂ. ಭೋಗ್ಯದ ಜಮೀನಿನಲ್ಲಿ ಟೊಮೆಟೊ ಬೆಳೆದು 1 ಕೋಟಿ ರೂ. ಸಂಪಾದಿಸಿದ ರೈತ
ಎರಡೂ ಕಡೆಯವರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ರೇರಾ, ಖಾತೆಯನ್ನು ಪ್ರತಿ ಖರೀದಿದಾರರ ಹೆಸರಿಗೆ ವರ್ಗಾಯಿಸಿರೋದನ್ನು ಖಚಿತಪಡಿಸಿಕೊಂಡಿದೆ. ಆದರೆ, ಡೆವಲಪರ್ 2016ರಲ್ಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡಿರೋದಾಗಿ ಮಾಹಿತಿ ನೀಡಿದ್ದರೂ ಇದಕ್ಕೆ ಸಂಬಂಧಿಸಿ ಸೂಕ್ತ ದಾಖಲೆಗಳನ್ನು ನೀಡಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ ಪ್ರಾಧಿಕಾರ ಖರೀದಿದಾರರ ಸಂಘ ರಚಿಸುವಂತೆ ಡೆವಲಪರ್ ಗೆ ಆದೇಶ ನೀಡಿದೆ. ಅಲ್ಲದೆ, ಈ ಆದೇಶ ನೀಡಿದ 60 ದಿನಗಳೊಳಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡುವಂತೆ ಸೂಚಿಸಿದೆ. ಅಲ್ಲದೆ, ಖರೀದಿದಾರರಿಗೆ ಕಿರುಕುಳ ನೀಡಿದ್ದಕ್ಕೆ 5ಲಕ್ಷ ರೂ. ಪಾವತಿಸುವಂತೆ ಆದೇಶಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.