
ಬೆಂಗಳೂರು (ಮೇ 19): ಕರ್ನಾಟಕ ಸರ್ಕಾರ ರಿಯಲ್ ಎಸ್ಟೇಟ್ ವಲಯದ ಮಾರ್ಗದರ್ಶನ ಅಥವಾ ಮಾರ್ಗಸೂಚಿ ದರವನ್ನು ಶೇ.10-30ರಷ್ಟು ಹೆಚ್ಚಳ ಮಾಡಲು ಯೋಚಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಮಾಹಿತಿ ನೀಡಿದೆ. ಮಾರ್ಗಸೂಚಿ ದರ ಕನಿಷ್ಠ ಮೌಲ್ಯವಾಗಿದ್ದು, ಇದರ ಮೂಲಕ ಆಸ್ತಿ ಮಾರಾಟವನ್ನು ರಾಜ್ಯ ಸರ್ಕಾರದಲ್ಲಿ ನೋಂದಣಿ ಮಾಡಬಹುದು. ಕೆಲವು ರಾಜ್ಯಗಳಲ್ಲಿ ಇದನ್ನು ಸರ್ಕಲ್ ರೇಟ್ ಎಂದು ಕೂಡ ಕರೆಯಲಾಗುತ್ತದೆ.ರಾಜ್ಯದಲ್ಲಿ 2018-19ರಲ್ಲಿ ಮಾರ್ಗಸೂಚಿ ದರವನ್ನು ಶೇ.25ರಷ್ಟು ಹೆಚ್ಚಿಸಲಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಹೆಚ್ಚಳ ಮಾಡುವ ಕುರಿತು ಸರ್ಕಾರ ಯೋಚಿಸಿದೆ.ಈ ಹಿಂದೆ ಕೋವಿಡ್ -19 ಹಿನ್ನೆಲೆಯಲ್ಲಿ 2022ರ ಜುಲೈ ತನಕ ಸರ್ಕಾರ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ಇಳಿಕೆ ಮಾಡಿತ್ತು. ಮಾರ್ಗಸೂಚಿ ದರ ಹೆಚ್ಚಳದಿಂದ ಏರಿಕೆಯಿಂದ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಹೆಚ್ಚಳವಾಗಲಿದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಕೂಡ ಏರಿಕೆಯಾಗಲಿದೆ.
'ಒಮ್ಮೆ ಹೊಸ ಸಚಿವ ಸಂಪುಟ ರಚನೆಯಾದ ಬಳಿಕ ನಾವು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಅಧಿಸೂಚನೆ ಹೊರಡಿಸುತ್ತೇವೆ. ಪ್ರಸ್ತುತ ಕೋವಿಡ್ ಭಯ ದೂರವಾಗಿದೆ ಹಾಗೂ ರಾಜ್ಯಾದ್ಯಂತ ರಿಯಲ್ ಎಸ್ಟೇಟ್ ಕ್ಷೇತ್ರ ಏಳ್ಗೆ ಕಾಣುತ್ತಿದೆ. ಹೀಗಾಗಿ ನಾವು ಮಾರ್ಗಸೂಚಿ ದರ ಹೆಚ್ಚಳಕ್ಕೆ ಎದುರು ನೋಡುತ್ತಿದ್ದೇವೆ' ಎಂದು ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಲಾಖೆ ನೀಡಿರುವ ಮಾಹಿತಿ ಅನ್ವಯ ಕಳೆದ ಹಣಕಾಸು ಸಾಲಿನಲ್ಲಿ ಮುದ್ರಾಂಕ ಹಾಗೂ ನೋಂದಣಿಯಿಂದ 17,874 ಕೋಟಿ ರೂ. ಸಂಗ್ರಹಿಸಲಾಗಿದೆ. ಇದು 17,000 ಕೋಟಿ ರೂ. ಗುರಿಗಿಂತ ಹೆಚ್ಚು. 2023ರ ಏಪ್ರಿಲ್ ನಲ್ಲಿ ಇಲಾಖೆ ಒಂದು ಸಾವಿರ ಕೋಟಿ ರೂ. ಸಂಗ್ರಹಿಸಿದೆ. ಇದು ಮನೆ ಖರೀದಿದಾರರ ಮೇಲೆ ಕನಿಷ್ಠ ಪರಿಣಾಮ ಬೀರುವ ಸಾಧ್ಯತೆಯಿದ್ದರೂ ಈಗಿನಿಂದ 1-2 ವರ್ಷಗಳ ಅವಧಿಯಲ್ಲಿ ಈ ಗಣನೀಯ ಏರಿಕೆ ಸ್ವಲ್ಪ ಮಟ್ಟಿನ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Bengaluru ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್! ಶೇ.5 ರಿಯಾಯಿತಿ ವಿಸ್ತರಣೆ ಸಾಧ್ಯತೆ
ಮಾರ್ಗಸೂಚಿ ದರ ಲೆಕ್ಕಾಚಾರ ಹೇಗೆ?
ಕರ್ನಾಟಕದಲ್ಲಿ ನಿವೇಶನದ ನ್ಯಾಯಸಮ್ಮತ ಬೆಲೆ ಲೆಕ್ಕಾಚಾರಕ್ಕೆ ಸರ್ಕಾರ ಬಳಸುವ ಸೂತ್ರ ನಿವೇಶನವಿರುವ ಪ್ರದೇಶ, ಗಾತ್ರ ಹಾಗೂ ಮಾರುಕಟ್ಟೆ ಮೌಲ್ಯ ಅಥವಾ ಆಸ್ತಿಯ ಬಂಡವಾಳ ಮೌಲ್ಯ ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿದೆ ಎಂದು ಕೊಲ್ಲೆರಸ್ ಇಂಡಿಡಯಾದ ಸಲಹಾ ಸೇವೆಯ ನಿರ್ದೇಶಕ ಉಮಾಕಾಂತ್ ವೈ ತಿಳಿಸಿದ್ದಾರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಇಂದಿರಾನಗರ ಹಾಗೂ ವೈಟ್ ಫೀಲ್ಡ್ ಮುಂತಾದ ವಿವಿಧ ಪ್ರದೇಶಗಳು ಭೂಮಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಮಾರ್ಗಸೂಚಿ ದರ ಹೊಂದಿವೆ.ಆಯಾ ಪ್ರದೇಶಕ್ಕೆ ಸಂಬಂಧಿಸಿದ ಮಾರ್ಗಸೂಚಿ ದರಗಳ ಮಾಹಿತಿ ರಾಜ್ಯ ಮುದ್ರಾಂಕ ಹಾಗೂ ನೋಂದಣಿ ಇಲಾಖೆ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸೋರಿಗೆ TDS ಕುರಿತ ಈ ಮಾಹಿತಿ ತಿಳಿದಿರೋದು ಅಗತ್ಯ
ಮಾರ್ಗಸೂಚಿ ದರ ಹೆಚ್ಚಳ ಖಚಿತವೇ?
ಈ ಹಿಂದಿನ ರಾಜ್ಯ ಸರ್ಕಾರ ಈ ಸಂಬಂಧ ಮುದ್ರಾಂಕ ಹಾಗೂ ನೋಂದಣಿ ಇಲಾಖೆಗೆ ಮಾರ್ಗಸೂಚಿ ದರಗಳ ಮಾಹಿತಿ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಅಲ್ಲದೆ, ಸುಮಾರು ಐದು ವರ್ಷಗಳಿಂದ ಕೋವಿಡ್ ಸೇರಿದಂತೆ ಅನೇಕ ಕಾರಣಗಳಿಂದ ದರ ಪರಿಷ್ಕರಣೆ ಮಾಡಿಲ್ಲ ಎಂಬುದನ್ನು ಕೂಡ ಉಲ್ಲೇಖಿಸಿತ್ತು ಎಂದು ಉಮಾಕಾಂತ್ ತಿಳಿಸಿದ್ದಾರೆ. ಶೇ.30ರಷ್ಟು ಏರಿಕೆ ಮಾಡದಿದ್ದರೂ ಶೇ.10ರಷ್ಟು ಹೆಚ್ಚಳವಂತೂ ಆಗಲಿದೆ ಎಂದು ಅವರು ಹೇಳಿದ್ದಾರೆ.ಮಾರ್ಗಸೂಚಿ ದರ ಹೆಚ್ಚಳ ತಕ್ಷಣಕ್ಕೆ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀರದಿದ್ದರೂ ನಂತರದ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.