Online Gaming: ರಾಜ್ಯದಲ್ಲಿ ಆನ್‌ಲೈನ್‌ ಆಟಗಳ ಭವಿಷ್ಯ ಹೇಗಿದೆ?

By Kannadaprabha NewsFirst Published Mar 10, 2022, 11:59 AM IST
Highlights

ಭಾರತದಲ್ಲಿ ಸದ್ಯ ಆನ್‌ಲೈನ್‌ ಗೇಮ್‌ಗಳು 17 ಸಾವಿರ ಕೋಟಿ ರು. ಮೌಲ್ಯದ ಮಾರುಕಟ್ಟೆಹೊಂದಿವೆ. ಇದು ಇನ್ನೈದು ವರ್ಷದಲ್ಲಿ 54 ಸಾವಿರ ಕೋಟಿ ರು. ಆಗಬಹುದು ಎಂಬ ಅಂದಾಜಿದೆ.

ಕಳೆದ ತಿಂಗಳ ಕರ್ನಾಟಕ ಹೈಕೋರ್ಟ್‌ ಆದೇಶ ಆನ್‌ಲೈನ್‌ ಕೌಶಲದ ಆಟಗಳನ್ನು ಮಾನ್ಯ ಮಾಡಿದೆ. ಉದ್ಯಮದ ದೃಷ್ಟಿಯಿಂದ ಕಳೆದ ಏಳು ತಿಂಗಳಲ್ಲಿ ಮೂರು ಬಾರಿ ಈ ವಿಚಾರ ನ್ಯಾಯಪೀಠದ ಮುಂದೆ ಬಂದಿದೆ. ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ತಡೆಯೊಡ್ಡಿದ ಕೋರ್ಟ್‌, ಇದು ಸಂವಿಧಾನ ವಿರೋಧಿ ಎಂದು ಹೇಳಿ ಆನ್‌ಲೈನ್‌ ಗೇಮಿಂಗ್‌ ಹಾದಿಯನ್ನು ಸುಗಮಗೊಳಿಸಿದೆ.

ಕೌಶಲ, ಚಾಕಚಕ್ಯತೆ ವೃದ್ಧಿಸುವ ರಮ್ಮಿ, ಚೆಸ್‌, ಕುದುರೆ ರೇಸ್‌ನಂತಹ ಫ್ಯಾಂಟಸಿ (ಕಲ್ಪಿತ) ಆಟಗಳು ಕಳೆದ 70 ವರ್ಷಗಳಿಂದ ಧನಾತ್ಮಕ ನೀತಿಯನ್ನೇ ಹೊಂದಿವೆ. ಅಲ್ಲದೇ ವಿವಿಧ ಹೈಕೋರ್ಟ್‌ಗಳು ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯ ಆರ್ಟಿಕಲ್‌(19)1(ಜಿ) ಈ ಆಟಗಳಿಗೆ ಅನುಮತಿ ಇದೆ ಎಂದು ತಿಳಿಸಿವೆ. ಆರಂಭದಲ್ಲಿ ಆಫ್‌ಲೈನ್‌ ಗೇಮ್‌ಗಳಾಗಿದ್ದ ರಮ್ಮಿ, ಕುದುರೆ ರೇಸ್‌, ಫುಟ್ಬಾಲ್‌, ಚೆಸ್‌ ಸೇರಿ ಇತರ ಕ್ರೀಡೆಗಳು ಇದೀಗ ಕೌಶಲ್ಯದ ಆಟಗಳಾಗಿ ಬದಲಾಗಿವೆ. ಕರ್ನಾಟಕ ಹೈಕೋರ್ಟ್‌ ಕೂಡ ತಂತ್ರಜ್ಞಾನದಿಂದಾಗಿ ಆಟಗಳೂ ರೂಪಾಂತರವಾಗಿವೆ ಎಂಬುದನ್ನು ಗುರುತಿಸಿದ್ದು, ಆನ್‌ಲೈನ್‌ ಆಟಗಳಿಗೆ ಅವಕಾಶ ಕೊಡಬಹುದು ಎಂದಿದೆ.

March Deadline: ತಿಂಗಳ ಅಂತ್ಯದೊಳಗೆ ಈ 6 ಕೆಲ್ಸ ಮಾಡಿದಿದ್ರೆ ಜೇಬಿಗೆ ಕತ್ತರಿ

ಬೇರೆ ಬೇರೆ ಕೋರ್ಟ್‌ಗಳಿಂದ ಒಂದೇ ರೀತಿಯ ತೀರ್ಪು

ಆನ್‌ಲೈನ್‌ ಆಟಗಳ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ತೀರ್ಪು ಕೂಡ ಮದ್ರಾಸ್‌ ಹೈಕೋರ್ಟ್‌ ಹಾಗೂ ಕೇರಳ ಹೈಕೋರ್ಟ್‌ನ ತೀರ್ಪುಗಳಂತೆಯೇ ಇದೆ. ಮೂರು ನ್ಯಾಯಪೀಠಗಳು ಕೌಶಲ್ಯಾಧಾರಿತ ಆಟಗಳ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯ ವಿವೇಚನೆಯನ್ನೇ ಪುನಃ ದೃಢೀಕರಿಸಿದ್ದು, ಕೌಶಲ್ಯಾಧಾರಿತ ಆಟಗಳು ಮತ್ತು ಅವಕಾಶದ ಆಟಗಳು (ಜೂಜು) ಎಂಬ ಸಂವಿಧಾನ ಪ್ರಾಮುಖ್ಯತೆಯ ಎರಡು ವಿಭಿನ್ನ ಪರಿಕಲ್ಪನೆಗಳನ್ನು ನೀಡಿವೆ. ಜತೆಗೆ, ಕೌಶಲ್ಯಾಧಾರಿತ ಆಟಗಳು ಸಂವಿಧಾನದ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲ್ಪಟ್ಟಕಾನೂನುಬದ್ಧ ವ್ಯಾಪಾರ ಚಟುವಟಿಕೆಗಳು ಎಂದು ತಿಳಿಸಿವೆ.

.17 ಸಾವಿರ ಕೋಟಿ ಮಾರುಕಟ್ಟೆ

ಜಾಗತಿಕ ಸಲಹಾ ಸಂಸ್ಥೆ ‘ರೆಡ್‌ಸೀರ್‌’ ಪ್ರಕಾರ ಭಾರತದ ಆನ್‌ಲೈನ್‌ ಆಟಗಳ ಮಾರುಕಟ್ಟೆ2.2 ಬಿಲಿಯನ್‌ ಡಾಲರ್‌ಗೂ (ಸುಮಾರು 17 ಸಾವಿರ ಕೋಟಿ ರು.) ಅಧಿಕವಿದ್ದು, ಇತರೆ ಮನರಂಜನೆ ಮತ್ತು ಮಾಧ್ಯಮ ವಲಯಗಳ ಆದಾಯಕ್ಕಿಂತ ಹೆಚ್ಚಿನದಾಗಿದೆ. 2026ರ ವೇಳೆಗೆ ಈ ಆನ್‌ಲೈನ್‌ ಆಟಗಳ ಮಾರುಕಟ್ಟೆ7 ಬಿಲಿಯನ್‌ ಡಾಲರ್‌ಗೆ (ಸುಮಾರು 54 ಸಾವಿರ ಕೋಟಿ ರು.) ತಲುಪಲಿದೆ ಎಂದು ತಿಳಿಸಿದೆ.

ಕೌಶಲ್ಯದ ಆಟಗಳಿಗೆ ನಿಷೇಧವಿಲ್ಲ

ಈ ವಿಚಾರದಲ್ಲಿ ಕಳೆದ ಏಳು ದಶಕಗಳಿಂದ ಕಾಲಕಾಲಕ್ಕೆ ಹೈಕೋರ್ಟ್‌ಗಳಿಂದ ಬಂದಂತಹ ತೀರ್ಪುಗಳು, ಸುಪ್ರೀಂಕೋರ್ಟ್‌ನ ಮಾನದಂಡವನ್ನೇ ಆಧರಿಸಿವೆ. ರಮ್ಮಿ, ಫ್ಯಾಂಟಸಿ(ಕಲ್ಪಿತ) ಮತ್ತು ಕೌಶಲ್ಯಾಧಾರಿತ ಆಟಗಳ ಮೌಲ್ಯೀಕರಣ ನಡೆಸಿಯೇ ಕೋರ್ಟ್‌ಗಳು ತೀರ್ಪು ನೀಡಿವೆ. ಇದು ಹಲವು ರಾಜ್ಯಗಳ ಜೂಜು ವಿರುದ್ಧದ ಕಾಯ್ದೆಗಳ ವಿಚಾರದಲ್ಲೂ ಕಂಡುಬರುತ್ತದೆ. ಕಾಯ್ದೆಗಳು ಕೌಶಲ್ಯಾಧಾರಿತ ಆಟಗಳನ್ನು ನಿಷೇಧಿಸಿಲ್ಲ. ಕೋರ್ಟ್‌ನ ಆದೇಶಗಳಲ್ಲೂ ಕೌಶಲ್ಯಾಧಾರಿತ ಆಟಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ ಎಂದೇ ಇದೆ.

Business Ideas: ಯೂಟ್ಯೂಬ್ ಚಾನಲ್ ಪ್ರಸಿದ್ದಿಗೆ ಹೀಗೆ ಮಾಡಿ

ಸರ್ಕಾರ ನಿಯಂತ್ರಣ ಹೊಂದಿರಲಿ

ಈ ಉದಾಹರಣೆಗಳ ಹೊರತಾಗಿಯೂ ಕರ್ನಾಟಕ ಸರ್ಕಾರ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಹೀಗಾಗಿ ಕರ್ನಾಟಕ ಹೈಕೋರ್ಟ್‌ ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತಿಳಿಸಿತ್ತು. ಸಂಪೂರ್ಣ ನಿಷೇಧಕ್ಕೆ ಆಕ್ಷೇಪಿಸಿ ಈ ರೀತಿಯ ನಿರ್ಬಂಧಗಳನ್ನು ಹೇರುವಾಗ ಕೆಲ ನೀತಿಗಳನ್ನು ರೂಪಿಸಬೇಕೆಂದು ತಿಳಿಸಿದೆ. ಹೀಗಾಗಿ ಕೌಶಲ್ಯಾಧಾರಿತ ಆನ್‌ಲೈನ್‌ ಆಟಗಳ ಉದ್ಯಮ ನಡೆಸುತ್ತಿರುವವರು ನಿಷೇಧ ಬೇಡ, ವಲಯವನ್ನು ನಿಯಂತ್ರಿಸಲು ನೀತಿಗಳಿರಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ ಈ ಉದ್ಯಮದಲ್ಲಿನ ದುಷ್ಟರನ್ನು ಕಿತ್ತುಹಾಕಲು ಸಾಗರೋತ್ತರ ದೇಶಗಳಂತೆ ಸಿಂಡಿಕೇಟ್‌ ಇರಲಿ ಎಂದು ತಿಳಿಸಿದ್ದಾರೆ.

ಇದರ ಜತೆಗೆ ದೇಶದಲ್ಲೇ ತಂತ್ರಜ್ಞಾನಾಧಾರಿತ ಎವಿಜಿಸಿ (ಆ್ಯನಿಮೇಷನ್‌, ವಿಶ್ಯುವಲ್‌ ಎಫೆಕ್ಟ್, ಗೇಮಿಂಗ್‌ ಮತ್ತು ಕಾಮಿಕ್‌) ಪ್ರಾರಂಭಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಉದಯಿಸುವ ಉದ್ಯಮವಾಗಿರುವ ಆನ್‌ಲೈನ್‌ ಆಟಗಳ ಮಾರುಕಟ್ಟೆಯಲ್ಲಿ ಭಾಗೀದಾರನಾಗುವ ಅವಕಾಶ ರಾಜ್ಯ ಸರ್ಕಾರದ ಮುಂದಿದೆ.

- ಸಮೀರ್‌ ಬರ್ಡೆ, ಸಿಇಒ, ಇ-ಗೇಮಿಂಗ್‌ ಫೆಡರೇಷನ್‌

click me!