Karnataka Budget 2023:ಮುಧೋಳ ಶ್ವಾನ ತಳಿ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

By Suvarna News  |  First Published Feb 17, 2023, 4:36 PM IST

ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಹೈನುಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿ ಮಹತ್ವದ ಘೋಷಣೆಗಳೇನೂ ಮಾಡದಿದ್ದರೂ ಕಳೆದ ವರ್ಷದ ಕೆಲವು ಜನಪ್ರಿಯ ಯೋಜನೆಗಳನ್ನು ಈ ವರ್ಷವೂ ಮುಂದುವರಿಸೋದಾಗಿ ಸಿಎಂ ತಿಳಿಸಿದ್ದಾರೆ. 


ಬೆಂಗಳೂರು (ಫೆ.17):  ಇಂದು ಮಂಡನೆಯಾದ ರಾಜ್ಯ ಬಜೆಟ್ ನಲ್ಲಿ ಹೈನುಗಾರಿಕಾ ಕ್ಷೇತ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಜಾನುವಾರುಗಳ ರೋಗ ನಿವಾರಣೆ ತಡೆಗೆ ಕ್ರಮ ಸೇರಿದಂತೆ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಚರ್ಮಗಂಟು ರೋಗ ತಡೆಗೆ 1 ಕೋಟಿಗೂ ಅಧಿಕ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಇನ್ನು ಈ ಸೋಂಕಿನಿಂದ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ 55 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ ಎಂದು ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ರೈತರು ಹೈನುಗಾರಿಕೆಯನ್ನು ಅವಲಂಬಿಸಿರುವ ಕಾರಣ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಈ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗೆ 1,067 ಕೋಟಿ ರೂ. ಪ್ರೋತ್ಸಾಹಧನವನ್ನು ನೇರ ನಗದು ಪಾವತಿ ಮೂಲಕ ವರ್ಗಾವಣೆ ಮಾಡಲಾಗಿದೆ. ಇನ್ನು ಗೋಸಂಪತ್ತಿನ ರಕ್ಷಣೆಗಾಗಿ ಸರ್ಕಾರ ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಗೊಳಿಸಿದೆ. ಹಾಗೆಯೇ 290 ಸಂಚಾರಿ ಪಶುಚಿತ್ಸಾಲಯಗಳನ್ನು ಪ್ರಾರಂಭಿಸಿದೆ ಎಂದು ಸಿಎಂ ಬಜೆಟ್ ನಲ್ಲಿ ಮಾಹಿತಿ ನೀಡಿದ್ದಾರೆ.

ಹೈನುಗಾರಿಕಾ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಏನಿದೆ?
*ಹಾವೇರಿಯಲ್ಲಿ 1ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. 
*ಇನ್ನು ಈ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಳಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. 
*ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ.

Latest Videos

undefined

ಕರ್ನಾಟಕ ರಾಜ್ಯ ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕಿಸಿ

*ರೈತ ಮಹಿಳೆಯರಲ್ಲಿ ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ 16,642 ಫಲಾನುಭವಿಗಳಿಗೆ 3.33ಲಕ್ಷ ಕೋಳಿಮರಿಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಈ ವರ್ಷ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು.
*ಪ್ರಾಣಿಗಳ ಮೇಲಿನ ಹಿಂಸೆತಡೆ ಮತ್ತು ಪ್ರಾಣಿ ಕಲ್ಯಾಣಕ್ಕಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಮಂಡಳಿ ವತಿಯಿಂದ ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಚಿಕಿತ್ಸೆಗಾಗಿ ಸಂಚಾರಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
*ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಬ್ಯೂರೋದಿಂದ ಭಾರತೀಯ ದೇಶಿ ಶ್ವಾನ ತಳಿ ಎಂದು ಮಾನ್ಯತೆ ಗಳಿಸಿರುವ ಮುಧೋಳ ಹೌಂಡ್ ಶ್ವಾನ ತಳಿ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ನೀಡಲಾಗುವುದು.
*ಬೀದಿನಾಯಿಗಳ ಆರೈಕೆ ಮತ್ತು ಪೋಷಣೆಗಾಗಿ ಸಾರ್ವಜನಿಕರಿಗೆ ದತ್ತು ತೆಗೆದುಕೊಳ್ಳಲು ನೆರವು ನೀಡಲು ಒಂದು ಆನ್ ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಆಸಕ್ತ ಶ್ವಾನ ಪ್ರೇಮಿಗಳು ಹೆಸರು ನೋಂದಾಯಿಸಿಕೊಂಡು ದತ್ತು ಪಡೆಯಲು ಅವಕಾಶ ಸಿಗಲಿದೆ. 
 

click me!