ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ 106.08 ಕೋಟಿ ರು. ಲಾಭ

By Kannadaprabha NewsFirst Published Jul 28, 2021, 7:35 AM IST
Highlights
  • ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 106.08 ಕೋಟಿ ರು. ನಿವ್ವಳ ಲಾಭ 
  • ಬ್ಯಾಂಕ್‌ ಈ ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 31.03.2021ರಲ್ಲಿ 31.36 ಕೋಟಿ ರು. ಲಾಭ ದಾಖಲಿಸಿತ್ತು

 ಮಂಗಳೂರು (ಜು.28):  ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 106.08 ಕೋಟಿ ರು. ನಿವ್ವಳ ಲಾಭ ಘೋಷಿಸಿದೆ. ಬ್ಯಾಂಕ್‌ ಈ ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 31.03.2021ರಲ್ಲಿ 31.36 ಕೋಟಿ ರು. ಲಾಭ ದಾಖಲಿಸಿತ್ತು. ಇದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ ಶೇ.238.26 ಬೆಳವಣಿಗೆ ಸಾಧಿಸಿದಂತಾಗಿದೆ. ಅದಾಗ್ಯೂ ಪ್ರಸಕ್ತ ತ್ರೈಮಾಸಿಕದಲ್ಲಿ ಖಜಾನೆ ವ್ಯವಹಾರದಲ್ಲಿನ ಆದಾಯದ ಇಳಿಕೆಯಿಂದಾಗಿ ಕಳೆದ ವರ್ಷದ ಪ್ರಥಮ ತ್ರೈಮಾಸಿಕಕ್ಕೆ ಹೋಲಿಸಿದರೆ(ಜೂನ್‌ 2020) ನಿವ್ವಳ ಲಾಭದಲ್ಲಿ ಶೇ.45.98ರಷ್ಟುಇಳಿಕೆಯಾಗಿದೆ.

ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ವೆಬೆಕ್ಸ್‌ ಮುಖಾಂತರ ಸಂಪನ್ನಗೊಂಡ ಆಡಳಿತ ಮಂಡಳಿ ಸಭೆಯಲ್ಲಿ ವಿತ್ತೀಯ ವರ್ಷ 2021-22ರ ಮೊದಲ ತ್ರೈಮಾಸಿಕದ ಪರಿಶೋಧಿತ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

ಕರ್ಣಾಟಕ ಬ್ಯಾಂಕ್‌ : ವಾರ್ಷಿಕ ಲಾಭದಲ್ಲಿ ಸಾರ್ವಕಾಲಿಕ ದಾಖಲೆ

ಬ್ಯಾಂಕಿನ ನಿರ್ವಹಣಾ ಲಾಭ 30.06.2021ರ ಅಂತ್ಯಕ್ಕೆ 414.22 ಕೋಟಿ ರು.ಗಳಷ್ಟುತಲುಪಿ ಶೇಕಡಾ 7.96ರ ವೃದ್ಧಿಯನ್ನು ದಾಖಲಿಸಿದೆ. ಅದು ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ 383.69 ಕೋಟಿ ರು. ಆಗಿತ್ತು. ಅಂತೆಯೇ ನಿವ್ವಳ ಬಡ್ಡಿ ಆದಾಯ 574.79 ಕೋಟಿ ರು.ಗೆ ತಲುಪಿ ಶೇಕಡಾ 25.19ರ ವೃದ್ಧಿ ದಾಖಲಿಸಿದೆ. ಅದು ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ 459.14 ಕೋಟಿ ರು.ಗಳಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರ 30.06.2021ರ ಅಂತ್ಯಕ್ಕೆ 1,28,005.99 ಕೋಟಿ ರು. ತಲುಪಿದ್ದು, ಠೇವಣಿಗಳ ಮೊತ್ತ 76,214.78 ಕೋಟಿ ರು. ಹಾಗೂ ಮುಂಗಡ 51,791.21 ಕೋಟಿ ರು.ಗಳಿಗೆ ಏರಿವೆ.

ಬ್ಯಾಂಕಿನ ಅನುತ್ಪಾದಕ ಆಸ್ತಿಗಳಲ್ಲಿ ಸಾಕಷ್ಟುಚೇತರಿಕೆ ಕಂಡಿದ್ದು, ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು ಉಓPಂ ಶೇ.4.82 ಕ್ಕೆ ಇಳಿಕೆ ಕಂಡಿದ್ದು, ಅದು ಕಳೆದ ತ್ರೈಮಾಸಿಕಾಂತ್ಯಕ್ಕೆ ಅಂದರೆ31.3.2021ರಲ್ಲಿ ಶೇ 4.91ಆಗಿತ್ತು. ಅದರಂತೆಯೇ ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ. 3.00ಕ್ಕೆ ಇಳಿಕೆಯಾಗಿದ್ದು, ಈ ಮುಂಚೆ ಅದು ಶೇ. 3.18ರಷ್ಟಿತ್ತು. ಅಂತೆಯೇ ಸ್ಥೂಲ ಹಾಗೂ ನಿವ್ವಳ ಅನುತ್ಪಾದಕ ಸ್ವತ್ತುಗಳೂ ಸಾಕಷ್ಟುಇಳಿದಿವೆ.

ಕಳೆದ ವಿತ್ತೀಯ ವರ್ಷದ ಪ್ರಥಮ ತ್ರೈಮಾಸಿಕ ಅಂತ್ಯಕ್ಕೆ (30.06.2020) ಶೇ. 13.44ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತ (ಕ್ಯಾಪಿಟಲ್‌ ಅಡೆಕ್ವೆಸಿ ರೇಶ್ಯೋ) ಈ ತ್ರೈಮಾಸಿಕ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ. 14.58ರಷ್ಟಾಗಿದೆ.

click me!