ಆದಾಯ ತೆರಿಗೆ ಭಾರ ತಗ್ಗಿಸೋ ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ

By Suvarna NewsFirst Published Jul 27, 2021, 12:11 PM IST
Highlights

ಸಂಪಾದಿಸಿದ ಹಣದಲ್ಲಿ ಬಹುಪಾಲು ತೆರಿಗೆಗೇ ಹೋದ್ರೆ ಯಾರಿಗಾದ್ರೂ ಹೊಟ್ಟೆಯುರಿಯೋದು ಸಹಜ.ಆದ್ರೆ ಸೂಕ್ತ ಯೋಜನೆ ಮೂಲಕ ತೆರಿಗೆ ಹಣವನ್ನು ಉಳಿಸಲು ಸಾಧ್ಯವಿದೆ.

ಆದಾಯದ ದೊಡ್ಡ ಭಾಗವನ್ನು ನೀವು ತೆರಿಗೆಗಾಗಿ ವ್ಯಯಿಸುತ್ತಿದ್ರೆ, ನೀವು ತೆರಿಗೆಗೆ ಸಂಬಂಧಿಸಿ ಸೂಕ್ತ ಯೋಜನೆ ರೂಪಿಸಿಲ್ಲ ಎಂದೇ ಅರ್ಥ. ಭಾರತದ ಆದಾಯ ತೆರಿಗೆ ಕಾಯ್ದೆ ಅನ್ವಯ ಕೆಲವೊಂದು ವಿನಾಯ್ತಿಗಳ  ಮೂಲಕ ತೆರಿಗೆ ಉಳಿಸಬಹುದು. ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡೋ ಸಮಯದಲ್ಲಿ ಕಡಿತಗಳನ್ನು ಕ್ಲೈಮ್‌ ಮಾಡಿಕೊಳ್ಳಬಹುದು. ತೆರಿಗೆ ಹಣ ಉಳಿಸೋ ಮಾರ್ಗಗಳಿಗೆ ಸಂಬಂಧಿಸಿ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.

ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ?

ಸೆಕ್ಷನ್‌ 80 ಸಿ ಅಡಿಯಲ್ಲಿ ವಿನಾಯ್ತಿ
ಆದಾಯ ತೆರಿಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ. ಇದರಡಿಯಲ್ಲಿ1.50 ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಯಲ್ಲಿ ಹೂಡಿಕೆ ಮಾಡಿರೋರು ಇದರ ಜೊತೆಗೆ 80 ಸಿಸಿಡಿ ಅಡಿಯಲ್ಲಿ 50,000 ರೂ. ಹೆಚ್ಚುವರಿ ವಿನಾಯ್ತಿ ಪಡೆಯಬಹುದು.  ಜೀವ ವಿಮೆ ಪ್ರೀಮಿಯಂ, ಗೃಹ ಸಾಲ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್‌ಸಿ), ಪಿಪಿಎಫ್‌, ಎನ್‌ಪಿಎಸ್‌, ತೆರಿಗೆ ಉಳಿಸೋ ಫಿಕ್ಸಡ್‌ ಡೆಫಾಸಿಟ್‌, ಇಪಿಎಫ್‌, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ, ಟ್ಯೂಷನ್‌ ಶುಲ್ಕ ಇತ್ಯಾದಿಗಳನ್ನು ಹೊಂದಿರೋರು ಸೆಕ್ಷನ್‌ 80 ಸಿ ಅಡಿಯಲ್ಲಿ ನಿರ್ದಿಷ್ಟ ಮೊತ್ತದ ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. 

ವೈದ್ಯಕೀಯ ವೆಚ್ಚಗಳು
ತೆರಿಗೆದಾರರು ತಾವು ವೈದ್ಯಕೀಯ ಚಿಕಿತ್ಸೆಗಳಿಗಾಗಿ ವ್ಯಯಿಸಿದ ಹಣದ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದು. ವೈದ್ಯಕೀಯ ಬಿಲ್‌ಗಳನ್ನು ಪ್ರಸ್ತುತಪಡಿಸಿದ್ರೆ ಆ ಮೊತ್ತದ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಲಾಗೋದಿಲ್ಲ. ಅಲ್ಲದೆ, ಸಂಸ್ಥೆಗಳು ಕೂಡ ತಮ್ಮ ಉದ್ಯೋಗಿಗಳಿಗೆ ವೈದ್ಯಕೀಯ ಭತ್ಯೆ ಸೌಲಭ್ಯ ಕಲ್ಪಿಸಿವೆ. ವೈದ್ಯಕೀಯ ಬಿಲ್‌ಗಳನ್ನು ಆಧರಿಸಿ ವಾರ್ಷಿಕ ಗರಿಷ್ಠ 15,000 ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು. ತೆರಿಗೆದಾರ ತನ್ನ ಅಥವಾ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸಿದ್ರೆ ಅದಕ್ಕೂ ಕೂಡ ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯಲು ಅವಕಾಶವಿದೆ.

ಗೃಹ ಸಾಲ
ತೆರಿಗೆ ಉಳಿಸಲು ಬಹುತೇಕರು ಕಂಡುಕೊಂಡ ಅತ್ಯುತ್ತಮ ಮಾರ್ಗವೆಂದ್ರೆ ಅದು ಗೃಹ ಸಾಲ. ಹೌದು, ಆದಾಯ ತೆರಿಗೆ ಕಾಯ್ದೆಯ 3 ಸೆಕ್ಷನ್‌ಗಳಡಿಯಲ್ಲಿ ಗೃಹ ಸಾಲದ ಮೇಲೆ ತೆರಿಗೆ ಕಡಿತ ಹೊಂದಲು ಅವಕಾಶವಿದೆ. ಹೀಗಾಗಿ ಗೃಹ ಸಾಲ ಹೊಂದಿದ್ರೆ ದೊಡ್ಡ ಮೊತ್ತವನ್ನೇ ತೆರಿಗೆಯಿಂದ ಉಳಿಸಲು ಸಾಧ್ಯವಿದೆ. ಗರಿಷ್ಠ 2 ಲಕ್ಷ ರೂ. ತನಕ ತೆರಿಗೆ ಕಡಿತ ಹೊಂದಲು ಕೆಲವು ಪ್ರಕರಣಗಳಲ್ಲಿ ಅವಕಾಶವಿದೆ. ಆದ್ರೆ ಕೆಲವು ಪ್ರಕರಣಗಳಲ್ಲಿ ತೆರಿಗೆ ಕಡಿತಕ್ಕೆ ಯಾವುದೇ ಗರಿಷ್ಠ ಮಿತಿ ವಿಧಿಸಿಲ್ಲ, ಗೃಹ ಸಾಲ ಬಡ್ಡಿ ಪಾವತಿಗೆ ವ್ಯಯಿಸಿದ ಹಣದ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಗೃಹ ಸಾಲದ ಪ್ರಧಾನ ಮೊತ್ತದ ಮೇಲೂ ತೆರಿಗೆ ವಿನಾಯ್ತಿ ಪಡೆಯಬಹುದು.

ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ತೀರಾ?

ಶೈಕ್ಷಣಿಕ ಸಾಲ
ತೆರಿಗೆದಾರ ತನ್ನ ಹೆಸರಿನಲ್ಲಿ ಅಥವಾ ಮಕ್ಕಳು ಅಥವಾ ಸಂಗಾತಿ ಹೆಸರಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಹೊಂದಿದ್ರೆ, ಅದರ ಬಡ್ಡಿ ಮೇಲೆ ಕೂಡ ತೆರಿಗೆ ವಿನಾಯ್ತಿ ಪಡೆಯಬಹುದು. ಸಾಲದ ಬಡ್ಡಿ ಪಾವತಿಸಲು ವ್ಯಯಿಸಿದ ಹಣದ ಮೇಲೆ ತೆರಿಗೆ ವಿನಾಯ್ತಿ ಸಿಗುತ್ತದೆ. ತೆರಿಗೆ ವಿನಾಯ್ತಿ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿ ವಿಧಿಸಿಲ್ಲ.


ಷೇರುಗಳು ಹಾಗೂ ಮ್ಯೂಚುವಲ್‌ ಫಂಡ್ಸ್
ಷೇರುಗಳು ಹಾಗೂ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹಣ ಹೂಡಿಕೆ ಮಾಡೋ ಮೂಲಕ ಕೂಡ ತೆರಿಗೆ ಉಳಿತಾಯ ಮಾಡಬಹುದು. ವಾರ್ಷಿಕ 12 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರೋರಿಗೆ ಮಾತ್ರ ಇದು ಅನ್ವಯಿಸುತ್ತದೆ. ಅಲ್ಲದೆ, ಕೆಲವು ಕಂಪನಿಗಳ ಷೇರುಗಳು ಹಾಗೂ ನಿರ್ದಿಷ್ಟ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡಿದ್ರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ರಾಜೀವ್‌ ಗಾಂಧಿ ಇಕ್ವಿಟಿ ಸೇವಿಂಗ್ಸ್‌ ಸ್ಕೀಮ್‌ ಅಡಿಯಲ್ಲಿ ಈ ಅವಕಾಶ ನೀಡಲಾಗಿದ್ದು, ಇದು ಮೊದಲ ಬಾರಿಗೆ ಹೂಡಿಕೆ ಮಾಡೋರಿಗೆ ಮಾತ್ರ ಅನ್ವಯಿಸುತ್ತದೆ.

ದೀರ್ಘಾವಧಿ  ಬಂಡವಾಳ ಹೂಡಿಕೆ ಲಾಭ
ತೆರಿಗೆದಾರರು ತಮ್ಮ ದೀರ್ಘಾವಧಿ ಬಂಡವಾಳ ಹೂಡಿಕೆ ಮೇಲಿನ ಲಾಭಕ್ಕೆ ತೆರಿಗೆ ವಿನಾಯ್ತಿ ಪಡೆಯಬಹುದು. ಆದ್ರೆ ಅವರು ಹೂಡಿಕೆ ಅಥವಾ  ಆಸ್ತಿಯನ್ನು ಮಾರಾಟ ಮಾಡಿ ಅದ್ರಿಂದ ಬಂದ ಹಣವನ್ನುನಿರ್ದಿಷ್ಟ ಕಡೆ ಮರು ಹೂಡಿಕೆ ಮಾಡಿದ್ರೆ ಮಾತ್ರ ಈ ಅವಕಾಶ ಲಭಿಸುತ್ತದೆ.  ತೆರಿಗೆದಾರರು 3 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಹೊಂದಿರೋ ಆಸ್ತಿ ಅಥವಾ ಹೂಡಿಕೆ ದೀರ್ಘಾವಧಿಯದ್ದಾಗಿರುತ್ತದೆ.

ಇಕ್ಷಿಟಿ ಷೇರುಗಳ ಮಾರಾಟ
ಜನರು ಷೇರುಗಳು ಹಾಗೂ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡೋದನ್ನು ಉತ್ತೇಜಿಸೋ ಸಲುವಾಗಿ ಸರ್ಕಾರ ಇಕ್ಷಿಟಿ ಷೇರುಗಳ ಮಾರಾಟದಿಂದ ಗಳಿಸೋ ದೀರ್ಘಾವಧಿ ಲಾಭಾಂಶಕ್ಕೆ ತೆರಿಗೆ ವಿನಾಯ್ತಿ ನೀಡಿದೆ. ಜನರು ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ಈ ಷೇರುಗಳನ್ನು ಹೊಂದಿದ್ರೆ ಮಾತ್ರ ತೆರಿಗೆ ವಿನಾಯ್ತಿ ನೀಡಲಾಗುತ್ತದೆ.  

ದಾನಗಳು
ಸಾಮಾಜಿಕ ಕಾರ್ಯಗಳಿಗೆ ಅಥವಾ ದಾನ ಅಥವಾ ರಾಷ್ಟ್ರೀಯ ವಿಪತ್ತು ನಿಧಿಗೆ ಹಣ ನೀಡೋ ಮೂಲಕ ಕೂಡ ತೆರಿಗೆ ಹಣ ಉಳಿಸಬಹುದು. ದಾನಕ್ಕೆ ವ್ಯಯಿಸಿದ ಹಣಕ್ಕೆ ತೆರಿಗೆ ವಿನಾಯ್ತಿ ಇದೆ. ಆದ್ರೆ ತೆರಿಗೆದಾರರು ಹಣ ದಾನ ಮಾಡೋ ಸಂಸ್ಥೆ ಹೆಸರು ಕೇಂದ್ರ ಹಣಕಾಸು ಸಚಿವಾಲಯ ಸಿದ್ಧಪಡಿಸಿರೋ ಪಟ್ಟಿಯಲ್ಲಿರಬೇಕು. ಅಲ್ಲದೆ, ಯಾವ ಉದ್ದೇಶಕ್ಕಾಗಿ ಹಣವನ್ನು ದಾನ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ತೆರಿಗೆ ವಿನಾಯ್ತಿ ನೀಡಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಅನುಕಂಪ ಅಥವಾ ಕರುಣೆ ಆಧಾರದಲ್ಲಿ ನೀಡಿದ ದಾನಕ್ಕೆ ತೆರಿಗೆ ವಿನಾಯ್ತಿ ಸಿಗೋದಿಲ್ಲ. ತೆರಿಗೆದಾರರು ನಗದು ಹಣ ದಾನ ಮಾಡಿದ್ರೆ 10 ಸಾವಿರ ರೂ. ತನಕ ಹಾಗೂ ಚೆಕ್‌ ಮೂಲಕ ಪಾವತಿ ಮಾಡಿದ್ರೆ 10 ಸಾವಿರಕ್ಕಿಂತಲೂ ಹೆಚ್ಚಿನ ಹಣಕ್ಕೆ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. 

ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ

ಮನೆ ಬಾಡಿಗೆ
ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಪಡೆಯಲು ಅವಕಾಶವಿದೆ. ಇದನ್ನು ಆದಾಯದಿಂದ ಕಡಿತ ಮಾಡಲಾಗುತ್ತದೆ. ಎಚ್‌ಆರ್‌ಎ ಜನರಿಗೆ ತೆರಿಗೆ ಹಣ ಉಳಿಸಲು ನೆರವು ನೀಡುತ್ತದೆ. ಕಡಿತ ಸೆಕ್ಷನ್‌ ಅಡಿಯಲ್ಲಿ ಈ ಹಣವನ್ನು ಕ್ಲೈಮ್‌ ಮಾಡಿಕೊಳ್ಳಬಹುದು. ವಾರ್ಷಿಕ ಒಂದು ಲಕ್ಷಕ್ಕಿಂತಲೂ ಹೆಚ್ಚು ಬಾಡಿಗೆ ಪಾವತಿಸೋರು ಮನೆ ಮಾಲೀಕರ ಪ್ಯಾನ್‌ ಕಾರ್ಡ್‌, ಲೀಸ್‌ ಅಗ್ರೀಮೆಂಟ್‌, ಬಾಡಿಗೆ ಪತ್ರ ಇತ್ಯಾದಿ ದಾಖಲೆಗಳನ್ನು ಸಲ್ಲಿಸೋ ಮೂಲಕ ತೆರಿಗೆ ವಿನಾಯ್ತಿ ಪಡೆಯಬಹುದು. 

ರಜೆ ಪ್ರವಾಸ ಭತ್ಯೆ (ಎಲ್‌ಟಿಎ)
ಕಂಪನಿಗಳಿಂದ ಎಲ್‌ಟಿಎ ಸೌಲಭ್ಯ ಹೊಂದಿರೋ ತೆರಿಗೆದಾರರು ಇದರ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. 4 ವರ್ಷಗಳ ಅವಧಿಯಲ್ಲಿ 2 ಬಾರಿ ಇದನ್ನು ಕ್ಲೈಮ್‌ ಮಾಡಬಹುದು. ಆದ್ರೆ ಕ್ಲೈಮ್‌ ಮಾಡಿಕೊಳ್ಳಲು ಅವರು ತಮ್ಮ ರಜಾವಧಿಯಲ್ಲಿ ಭಾರತದೊಳಗೆ ಎಲ್ಲಿಗಾದ್ರೂ ಪ್ರವಾಸ ಕೈಗೊಂಡಿರಬೇಕು. 
 

click me!