ಯುವಕನ ರಾತ್ರೋರಾತ್ರಿ ಕೋಟ್ಯಾಧಿಪತಿ ಮಾಡಿದ್ದ 35 ವರ್ಷಗಳ ಹಿಂದೆ ಅಪ್ಪ ಖರೀದಿಸಿದ್ದ ಷೇರು

Published : Jun 10, 2025, 11:58 AM ISTUpdated : Jun 10, 2025, 12:00 PM IST
Forgotten shares make an overnight billionaire

ಸಾರಾಂಶ

ಮನೆ ಸ್ವಚ್ಛತೆ ಮಾಡುವಾಗ ಸಿಕ್ಕ 35 ವರ್ಷಗಳ ಹಳೆಯ ಷೇರು ದಾಖಲೆಗಳು ವ್ಯಕ್ತಿಯೊಬ್ಬರನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿವೆ. 

ಕೆಲವೊಮ್ಮೆ ಮನೆ ಸ್ವಚ್ಛತೆ ಮಾಡುವಾಗ ಹಳೆಯ ಅಮೂಲ್ಯ ವಸ್ತುಗಳು ಹಲವು ನೆನಪುಗಳಿರುವ ಡೈರಿಗಳು, ಹಳೆಯ ಫೋಟೋಗಳು, ಆಭರಣಗಳು, ಹಳೆಯ ನೋಟುಗಳು ಸಿಕ್ಕಿ ನಮ್ಮನ್ನು ಗತಕ್ಕೆ ಜಾರಿಸುತ್ತವೆ. ಆದರೆ ಇಲ್ಲೊಬ್ಬರಿಗೆ ದೊಡ್ಡ ನಿಧಿಯೇ ಸಿಕ್ಕಿದೆ. ಹೌದು ಅಚ್ಚರಿ ಆದರೂ ಸತ್ಯ, ನಿಧಿ ಎಂದ ಕೂಡಲೇ ನೀವು ಚಿನ್ನ ಬೆಳ್ಳಿ, ನಗದು ಅಲ್ಲ, ಇಲ್ಲಿ ಇವರ ತಂದೆ ಸುಮಾರು 35 ವರ್ಷಗಳ ಹಿಂದೆ ಖರೀದಿಸಿ ಮರೆತು ಹೋಗಿದ್ದ ಷೇರುಗಳ ದಾಖಲೆ ಪತ್ರವೊಂದು ಸಿಕ್ಕಿದ್ದು, ಇದು ಅವರನ್ನು ರಾತ್ರೋರಾತ್ರಿ ಕೋಟ್ಯಾಧಿಪತಿಯನ್ನಾಗಿ ಮಾಡಿದೆ.

ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇವರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಸೌರಭ್ ದತ್‌ ಎನ್ನುವವರು ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ. ಈ ವಿಚಾರ ಸಿನಿಮಾವೊಂದರ ಕತೆಯಂತೆ ಇದೆ ಎಂದರೂ ತಪ್ಪಗಲಾರದು. ಇವರ ತಂದೆ 1990ರಲ್ಲಿ ಒಂದು ಲಕ್ಷ ನೀಡಿ ಜೆಎಸ್‌ಡ್ಬ್ಯೂ ಸ್ಟೀಲ್‌ನ ಷೇರುಗಳನ್ನು ಖರೀದಿಸಿದ್ದರು. ಈಗ ಇವುಗಳ ಮೌಲ್ಯ ಸುಮಾರು 80 ಕೋಟಿ ಎಂಬುದು ತಿಳಿದು ಬಂದಿದೆ.

ರೆಡ್ಡಿಟರ್ ತನ್ನ ಮನೆಯನ್ನು ಸ್ವಚ್ಛಗೊಳಿಸುವಾಗ 35 ವರ್ಷ ಹಳೆಯ ದಾಖಲೆಗಳ ಸೆಟ್ ಅನ್ನು ಆಕಸ್ಮಿಕವಾಗಿ ನೋಡಿದರು.. ಆರಂಭದಲ್ಲಿ ಅವು ನಿಷ್ಪ್ರಯೋಜಕವೆಂದು ಭಾವಿಸಿದರೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವು 1990 ರ ದಶಕದ ಷೇರು ಪ್ರಮಾಣಪತ್ರಗಳಾಗಿದ್ದವು ಎಂದು ತಿಳಿದು ಬಂದಿದೆ. ಆ ಸಮಯದಲ್ಲಿ ಅವರ ತಂದೆ ಮಾಡಿದ ಹೂಡಿಕೆಗಳು 1 ಲಕ್ಷ ರೂ ಎಂದು ಎಕ್ಸ್‌ನಲ್ಲಿ ಸೌರಬ್ ದತ್ ಬರೆದಿದ್ದಾರೆ.

ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್‌ನಲ್ಲಿ ಖರೀದಿಸಲಾದ ಆ ಷೇರುಗಳು ಅನಿರೀಕ್ಷಿತ ಚಿನ್ನದ ಗಣಿಯಾಗಿ ಪರಿಣಮಿಸಿದವು. ನಂತರ 2005 ರಲ್ಲಿ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ JSW ಸ್ಟೀಲ್‌ನೊಂದಿಗೆ ವಿಲೀನಗೊಂಡಗ ಕಂಪನಿಯು ಗಮನಾರ್ಹ ರೂಪಾಂತರಕ್ಕೆ ಒಳಗಾಯಿತು. ಇದು ಹಲವು ವರ್ಷಗಳಲ್ಲಿ ಅದರ ಷೇರುಗಳ ಮೌಲ್ಯದಲ್ಲಿ ನಿರಂತರ ಏರಿಕೆಯಾಗುವಂತೆ ಮಾಡಿತ್ತು.

ಆ ವ್ಯಕ್ತಿಯ ತಂದೆ 35 ವರ್ಷಗಳ ಹಿಂದೆ ಕಂಪನಿಯ 5,000 ಷೇರುಗಳನ್ನು ಖರೀದಿಸಿದ್ದರು. ಆದರೆ ಜೆಎಸ್‌ಡ್ಬ್ಯು ಜೊತೆ ವಿಲೀನದ ನಂತರ, ಆ ಷೇರುಗಳು 80,000 JSW ಸ್ಟೀಲ್ ಷೇರುಗಳಾಗಿ ಬದಲಾದವು ಮತ್ತು 2017 ರಲ್ಲಿ ಷೇರು ವಿಭಜನೆಯ ನಂತರ (1:10 ಅನುಪಾತದಲ್ಲಿ) ಇವುಗಳ ಸಂಖ್ಯೆ 8 ಲಕ್ಷ ಷೇರುಗಳಿಗೆ ಏರಿತು.

ಪ್ರಸ್ತುತ ಜೆಎಸ್‌ಡಬ್ಲ್ಯೂ ಸ್ಟೀಲ್ ನ ಒಂದು ಷೇರಿಗೆ ಸುಮಾರು 1,000 ರೂ. ಮೌಲ್ಯವಿದೆ ಹೀಗಾಗಿ ಈಗ ಷೇರುಖರೀದಿದಾರರ ಮಗನಿಗೆ ಸಿಕ್ಕ ಷೇರು ಸರ್ಟಿಫಿಕೇಟ್‌ಗಳ ಒಟ್ಟು ಮೌಲ್ಯ ಈಗ 80 ಕೋಟಿ ರೂ.ಗಳಷ್ಟಾಗಿದೆ. ಅಷ್ಟೇ ಅಲ್ಲ ಜೆಎಸ್‌ಡಬ್ಲ್ಯೂ ಸ್ಟೀಲ್ ವರ್ಷಗಳಿಂದ ಪಾವತಿಸುತ್ತಿರುವ ಲಾಭಾಂಶಗಳು ಒಟ್ಟು ಲಾಭವನ್ನು ಮತ್ತಷ್ಟು ಹೆಚ್ಚು ಮಾಡಿವೆ.

ಉದಾಹರಣೆಗೆ ಕೇವಲ 2022 ನೇ ಇಸವಿಯೊಂದರಲ್ಲೇ ಜೆಎಸ್‌ಡ್ಬ್ಲು ಪ್ರತಿ ಷೇರಿಗೆ 17.30 ರೂ.ಗಳ ಲಾಭಾಂಶವನ್ನು ನೀಡಿತು, ಇದು ಆ ವ್ಯಕ್ತಿಯ ಪ್ರಸ್ತುತ ಷೇರುಗಳ ಮೇಲೆ 1.38 ಕೋಟಿ ರೂ.ಗಳಾಗಿರುತ್ತದೆ. ಹಾಗೆಯೇ ಕಳೆದ ಮೂರು ದಶಕಗಳಲ್ಲಿ ವಿತರಿಸಲಾದ ಲಾಭಾಂಶವನ್ನು ಲೆಕ್ಕಹಾಕಿದರೆ, ಆ ವ್ಯಕ್ತಿ ಹೆಚ್ಚುವರಿಯಾಗಿ 5 ಕೋಟಿ ರೂ.ಗಳನ್ನು ಗಳಿಸಿದ್ದಾರೆ. ಇದು ಈ ಷೇರುಗಳ ಒಟ್ಟಾರೆ ಮೌಲ್ಯವನ್ನು 85 ಕೋಟಿ ರೂ.ಗಳಿಗೆ ಏರಿಸುತ್ತದೆ.

ಹೀಗಾಗಿ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಕ್ಷಿಪ್ರವಾಗಿ ವೈರಲ್ ಆಗಿದ್ದು ಅನೇಕರು ಆ ವ್ಯಕ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕೆಲವರು ತೆರಿಗೆ ಸಂಬಂಧಿ ಸಲಹೆ ನೀಡುತ್ತಿದ್ದಾರೆ. ಒಬ್ಬ ಬಳಕೆದಾರರು ನೀವು ಆ 80 ಕೋಟಿ ರೂ.ಗೆ 30% ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ನನ್ನ ತಂದೆ 1993 ರಲ್ಲಿ ತಿಂಗಳಿಗೆ 800 ರೂ. ಗಳಿಸುತ್ತಿದ್ದರು. ಆದರೆ ನಿಮ್ಮ ತಂದೆ ಆಗಲೇ ​​1 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎಂದರೆ ನೀವು ಸೂಪರ್ ಶ್ರೀಮಂತರು ಎಂದರ್ಥ. 1990 ರ ದಶಕದ ಉತ್ತರಾರ್ಧದಲ್ಲಿ ಕಂಪನಿಯ ಐಪಿಒ ಸಮಯದಲ್ಲಿ ಮೂಲ ಹೂಡಿಕೆ ಬಂದಿರಬಹುದು ಎಂದು ಕೆಲವರು ಹೇಳಿದ್ದಾರೆ.

ಜೆಎಸ್‌ಡ್ಬ್ಯು ಸ್ಟೀಲ್‌ನ ಷೇರುಗಳ ಈ ಭಾರಿ ಏರಿಕೆಗೆ ಹಲವು ಕಾರ್ಪೋರೇಟ್‌ ಘಟನೆಗಳು ಕಾರಣವಾಗಿವೆ. 2005ರಲ್ಲಿ ಜೆಎಸ್‌ಡ್ಬ್ಲು ಜೊತೆಗಿನ ಸಂಸ್ಥೆಯ ವಿಲೀನವು ಜಿಂದಾಲ್ ವಿಜಯನಗರ ಸ್ಟೀಲ್ ಷೇರುದಾರರಿಗೆ ಅವರು ಹೊಂದಿದ್ದ ಪ್ರತಿ 1 ಷೇರಿಗೆ ಪ್ರತಿಯಾಗಿ 16 JSW ಸ್ಟೀಲ್ ಷೇರುಗಳನ್ನು ನೀಡಿತು. ಇದಾದ ನಂತರ 2017 ರಲ್ಲಿ ಷೇರು ವಿಭಜನೆ ಮಾಡಿದಾಗ ಮತ್ತೆ ಷೇರುಗಳ ಸಂಖ್ಯೆಯನ್ನು ಹತ್ತು ಪಟ್ಟು ಹೆಚ್ಚಿಸಿತು. ಹೀಗಾಗಿ 35 ವರ್ಷಗಳ ಹಿಂದೆ ಅವರು ಖರೀದಿಸಿದ 5000 ಸಾವಿರ ಷೇರುಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಒಟ್ಟಿನಲ್ಲಿ ಅಪ್ಪ 35 ವರ್ಷಗಳ ಹಿಂದೆ ಖರೀದಿಸಿದ ಷೇರುಗಳು ಮಗನನ್ನು ರಾತ್ರೊರಾತ್ರಿ ಶ್ರೀಮಂತನನ್ನಾಗಿ ಮಾಡಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ