
ಮುಂಬೈ (ಅ.23): ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಮಹಾ ಸುನಾಮಿ ಎದ್ದಿದೆ. ಬಹುನಿರೀಕ್ಷಿತ ಜಿಯೋ ಪ್ಲಾಟ್‌ಫಾರ್ಮ್ಸ್ (Jio Platforms) ಐಪಿಒ ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಇತಿಹಾಸ ಸೃಷ್ಟಿಸಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಕೋಟಿಗೂ (10 ಮಿಲಿಯನ್) ಅಧಿಕ ಅರ್ಜಿಗಳನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದೆ.
ವಿಶ್ವಾದ್ಯಂತ ಯಾವುದೇ ಕಂಪನಿಯ ಐಪಿಒಗೆ ಈ ಪ್ರಮಾಣದ ಹೂಡಿಕೆದಾರರ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇಂದು ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಳ್ಳಲಿದ್ದು, ಅಂತಿಮ ಸಂಖ್ಯೆ ಇನ್ನಷ್ಟು ಎತ್ತರಕ್ಕೆ ಜಿಗಿಯುವ ನಿರೀಕ್ಷೆಯಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಹೂಡಿಕೆದಾರರ ಉತ್ಸಾಹದಿಂದ ಹಳೆಯ ಎಲ್ಲಾ ಜಾಗತಿಕ ಹಾಗೂ ರಾಷ್ಟ್ರೀಯ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ:
ವಾರೀ ಎನರ್ಜೀಸ್ ದಾಖಲೆ ಬ್ರೇಕ್: ಇತ್ತೀಚೆಗಷ್ಟೇ ವಾರೀ ಎನರ್ಜೀಸ್ (Waaree Energies) ಐಪಿಒ ಸುಮಾರು 97 ಲಕ್ಷ ಅರ್ಜಿಗಳನ್ನು ಪಡೆದು ವಿಶ್ವದಾಖಲೆ ನಿರ್ಮಿಸಿತ್ತು. ಈಗ ಜಿಯೋ ಆ ದಾಖಲೆಯನ್ನು ಸುಲಭವಾಗಿ ಹಿಂದಿಕ್ಕಿದೆ.
ಬಜಾಜ್ ಹೌಸಿಂಗ್ ದಾಖಲೆಯೂ ಮುಕ್ತಾಯ: ಬಜಾಜ್ ಹೌಸಿಂಗ್ ಫೈನಾನ್ಸ್ ಹಾಗೂ ಬಿಸಿಸಿಎಲ್ ಸಂಸ್ಥೆಗಳು ತಲಾ ಸುಮಾರು 90 ಲಕ್ಷ ಅರ್ಜಿಗಳನ್ನು ಪಡೆದು ದಾಖಲೆ ಬರೆದಿದ್ದವು. ಈಗ ಜಿಯೋ ಪ್ಲಾಟ್‌ಫಾರ್ಮ್ಸ್ ಇವೆಲ್ಲವುಗಳಿಗಿಂತ ಮೈಲುಗಳಷ್ಟು ಮುನ್ನಡೆ ಸಾಧಿಸಿದೆ.
ಭಾರತದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಷೇರು ಮಾರುಕಟ್ಟೆಯ ಸಂಪತ್ತು ತಲುಪಬೇಕು ಎಂಬುದು ರಿಲಯನ್ಸ್ ಸಂಸ್ಥಾಪಕ ದಿವಂಗತ ಧೀರೂಭಾಯಿ ಅಂಬಾನಿ ಅವರ ಕನಸಾಗಿತ್ತು. ಇದೀಗ ಅವರ ಪರಂಪರೆಯನ್ನು ಮುಂದುವರಿಸಿರುವ ಮುಕೇಶ್ ಅಂಬಾನಿ, ತಂತ್ರಜ್ಞಾನ ಮತ್ತು ಸಂಪತ್ತು ಸೃಷ್ಟಿಯನ್ನು ದೇಶದ ಕಟ್ಟಕಡೆಯ ಹೂಡಿಕೆದಾರರಿಗೂ ತಲುಪಿಸುವಲ್ಲಿ (Democratising wealth creation) ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಕೋಟ್ಯಂತರ ಸಣ್ಣ ಚಿಲ್ಲರೆ (Retail) ಹೂಡಿಕೆದಾರರು ಜಿಯೋ ಐಪಿಒ ಮೇಲೆ ಅಚಲ ನಂಬಿಕೆ ಇರಿಸಿ ಮುಗಿಬಿದ್ದಿದ್ದಾರೆ.
ಇಂದು ಸಂಜೆ 7:00 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅಂತಿಮವಾಗಿ ಒಟ್ಟು ಎಷ್ಟು ಕೋಟಿ ಅರ್ಜಿಗಳು ದಾಖಲಾಗಲಿವೆ ಎಂಬ ಕುತೂಹಲ ಇಡೀ ಜಾಗತಿಕ ಮಾರುಕಟ್ಟೆಯಲ್ಲಿ ಮನೆಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.