
ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ಇದೀಗ ಮೊಬೈಲ್ ಬಳಕೆದಾರರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಟೆಲಿಕಾಂ ಕಂಪನಿಗಳು ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಮೊಬೈಲ್ ಟ್ಯಾರಿಫ್‌ಗಳನ್ನು ಶೇ.12ರಿಂದ 15ರಷ್ಟು ಹೆಚ್ಚಿಸಲಿವೆ ಎಂದು ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ವರದಿ ಈ ಬಹಿರಂಗವಾಗಿದೆ.
ಇತ್ತೀಚೆಗೆ ಬಿಜೆಪಿ ಸಂಸದ ರಾಘವ್ ಚಡ್ಡಾ(BJP MP Raghav Chadha) ಅವರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ಟೆಲಿಕಾಂ ಕನ್ಸ್ಯೂಮರ್ ಪ್ರೊಟೆಕ್ಷನ್ (13ನೇ ತಿದ್ದುಪಡಿ) ನಿಯಮಗಳು 2026 ಅನ್ನು ಸ್ವಾಗತಿಸಿದ್ದರು. ಈ ನಿಯಮಗಳ ಪ್ರಕಾರ 30 ದಿನಗಳ ರೀಚಾರ್ಜ್ ಆಯ್ಕೆ ಹಾಗೂ ಪ್ರತಿ ತಿಂಗಳು ಒಂದೇ ದಿನದಲ್ಲಿ ನವೀಕರಣವಾಗುವ ಪ್ಲ್ಯಾನ್‌ಗಳಿಗೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ.
ಈ ಬಗ್ಗೆ ಸುದ್ದಿ ಸಂಸ್ಥ ANI ಬುಧವಾರ ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ವರದಿಯನ್ನು ಉಲ್ಲೇಖಿಸಿ, 'ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಪ್ರಮುಖ ಕಂಪನಿಗಳು ಉಳಿದಿರುವುದರಿಂದ ಟ್ಯಾರಿಫ್ ಹೆಚ್ಚಳಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದೆ. ವರದಿಯ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖವಾಗಿ 3+1 ಟೆಲಿಕಾಂ ಕಂಪನಿಗಳಿದ್ದು, ಮುಂದಿನ 4ರಿಂದ 5 ತಿಂಗಳಲ್ಲಿ ಶೇ.12ರಿಂದ 15ರಷ್ಟು ಮತ್ತೊಂದು ಟ್ಯಾರಿಫ್ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದಿದೆ.
ಈ ದರ ಏರಿಕೆ ಸದ್ಯಕ್ಕೆ ಬ್ರೋಕರೇಜ್ ಸಂಸ್ಥೆಯ ಅಂದಾಜು ಮಾತ್ರ. ಇನ್ನು ಟೆಲಿಕಾಂ ಕಂಪನಿಗಳು ತಮ್ಮ ಮೊಬೈಲ್ ಪ್ಲ್ಯಾನ್‌ಗಳ ದರ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸೆಂಟ್ರಮ್ ವರದಿಯಂತೆ ದರ ಹೆಚ್ಚಿಸಿದರೆ ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಸುವವರಿಗೆ ವಿವಿಧ ಪ್ಲ್ಯಾನ್‌ಗಳ ಬೆಲೆ ಹೆಚ್ಚಾಗಬಹುದು. ಆದರೆ ಪ್ರತಿಯೊಬ್ಬರ ಮೇಲೆ ಬೀರುವ ಪರಿಣಾಮವು ಆಯಾ ಕಂಪನಿಗಳು ದರ, ಪ್ಲ್ಯಾನ್‌ನ ಮಾನ್ಯತೆ, ಡೇಟಾ ಮಿತಿ ಮತ್ತು ಇತರ ಸೌಲಭ್ಯಗಳಲ್ಲಿ ಮಾಡುವ ಬದಲಾವಣೆಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ, ಗ್ರಾಹಕರು ತಮ್ಮ ಟೆಲಿಕಾಂ ಕಂಪನಿಗಳಿಂದ ಅಧಿಕೃತ ಮಾಹಿತಿ ಬರುವವರೆಗೆ ಕಾಯುವುದು ಉತ್ತಮ. ಪ್ರಸ್ತುತ ₹299, ₹349 ಅಥವಾ ಬೇರೆ ಯಾವುದೇ ಬೆಲೆಯಲ್ಲಿರುವ ಪ್ಲ್ಯಾನ್ ಶೇ.12ರಿಂದ 15ರಷ್ಟು ತಕ್ಷಣವೇ ದುಬಾರಿಯಾಗಲಿದೆ ಎಂದರ್ಥವ್ಲಲ.
ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಬಳಕೆದಾರರಿಂದ ಸಿಗುವ ಸರಾಸರಿ ಆದಾಯ (ARPU) 2026-27ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.0.8ರಿಂದ 2.0ರಷ್ಟು ತ್ರೈಮಾಸಿಕ ಆಧಾರದ ಮೇಲೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ 2G ಬಳಕೆದಾರರು 4G ಅಥವಾ 5Gಗೆ ಬದಲಾಗುತ್ತಿರುವುದು, ಪೋಸ್ಟ್‌ಪೇಯ್ಡ್ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಈ ತ್ರೈಮಾಸಿಕದಲ್ಲಿ ದಿನಗಳ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಏರ್‌ಟೆಲ್‌ನ ARPU ಶೇ.2ರಷ್ಟು ಏರಿಕೆಯಾಗಿ ತಿಂಗಳಿಗೆ ₹269ಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದು ಉದ್ಯಮದಲ್ಲೇ ಅತ್ಯಧಿಕ ARPU ಆಗಿರಲಿದೆ. ಕಂಪನಿಯ ಆದಾಯವು ತ್ರೈಮಾಸಿಕ ಆಧಾರದ ಮೇಲೆ ಸುಮಾರು ಶೇ.3.1ರಷ್ಟು ಹೆಚ್ಚಾಗಬಹುದು.
ಇನ್ನು ರಿಲಯನ್ಸ್ ಜಿಯೋನ ARPU ಶೇ.1ರಷ್ಟು ಹೆಚ್ಚಾಗಿ ತಿಂಗಳಿಗೆ ₹218ಕ್ಕೆ ತಲುಪುವ ನಿರೀಕ್ಷೆಯಿದೆ. ವೊಡಾಫೋನ್ ಐಡಿಯಾದ ಸರಾಸರಿ ARPU ಸುಮಾರು ಶೇ.0.8ರಷ್ಟು ಏರಿಕೆಯಾಗಿ ₹178ಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ವರದಿ ಪ್ರಕಾರ, ವೊಡಾಫೋನ್ ಐಡಿಯಾಗೆ ಹೋಲಿಸಿದರೆ ಏರ್‌ಟೆಲ್ ಮತ್ತು ಜಿಯೋ ತಮ್ಮ ಗ್ರಾಹಕರ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಜಿಯೋ ತ್ರೈಮಾಸಿಕ ಆಧಾರದ ಮೇಲೆ ಸುಮಾರು 80 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದ್ದು, ಒಟ್ಟು ಗ್ರಾಹಕರ ಸಂಖ್ಯೆ 54.1 ಕೋಟಿಗೆ ತಲುಪಬಹುದು. ಇದೇ ವೇಳೆ ಏರ್‌ಟೆಲ್ ಕೂಡ ಸುಮಾರು 30 ಲಕ್ಷ ವೈರ್‌ಲೆಸ್ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದ್ದು, ಒಟ್ಟು ಗ್ರಾಹಕರ ಸಂಖ್ಯೆ 38 ಕೋಟಿಗೆ ತಲುಪುವ ನಿರೀಕ್ಷೆಯಿದೆ.
ವೊಡಾಫೋನ್ ಐಡಿಯಾ ಸುಮಾರು 10 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆಯಿದ್ದು, ಅದರ ಒಟ್ಟು ಗ್ರಾಹಕರ ಸಂಖ್ಯೆ 19.4 ಕೋಟಿಗೆ ತಲುಪಬಹುದು. ಇದೇ ವೇಳೆ 4G ಮತ್ತು 5G ನೆಟ್‌ವರ್ಕ್ ಹೆಚ್ಚುತ್ತಿರುವುದರಿಂದ ಪ್ರತಿ ಗ್ರಾಹಕರ ಡೇಟಾ ಬಳಕೆ ಕೂಡ ಮುಂದೆಯೂ ಹೆಚ್ಚಾಗಿಯೇ ಇರಲಿದೆ ಎಂದು ಸೆಂಟ್ರಮ್ ಹೇಳಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.