ಜೆಟ್ ಮಾಲೀಕ ವಿಮಾನದಿಂದ ಔಟ್!

By Web DeskFirst Published May 26, 2019, 8:30 AM IST
Highlights

ವಿದೇಶಕ್ಕೆ ಹೊರಟಿದ್ದ ಗೋಯಲ್‌ ವಿಮಾನದಿಂದ ಕೆಳಗೆ| ಹೊರಟಿದ್ದ ವಿಮಾನ ನಿಲ್ಲಿಸಿ ಜೆಟ್‌ ಏರ್‌ವೇಸ್‌ ಮಾಜಿ ಅಧ್ಯಕ್ಷನ ಇಳಿಸಿದ್ರು| ಲುಕೌಟ್‌ ನೋಟಿಸ್‌ ಹಿನ್ನೆಲೆ: ನರೇಶ್‌, ಅನಿತಾ ವಿದೇಶ ಯಾತ್ರೆಗೆ ಬ್ರೇಕ್‌

ಮುಂಬೈ[ಮೇ.26]: ಸಾಲದ ಸುಳಿಯಲ್ಲಿ ಸಿಲುಕಿ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಬಲವಂತವಾಗಿ ಕೆಳಗೆ ಇಳಿಸಲ್ಪಟ್ಟಜೆಟ್‌ ಏರ್‌ವೇಸ್‌ನ ಮಾಜಿ ಅಧ್ಯಕ್ಷ ನರೇಶ್‌ ಗೋಯಲ್‌ ಅವರಿಗೆ ಮತ್ತೊಂದು ಸಂಕಷ್ಟಎದುರಾಗಿದೆ. ಲಂಡನ್‌ಗೆ ತೆರಳಲೆಂದು ಪತ್ನಿ ಸಮೇತ ವಿಮಾನ ಏರಿದ್ದ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಗೋಯಲ್‌ರನ್ನು ವಲಸೆ ವಿಭಾಗದ ಅಧಿಕಾರಿಗಳು ವಿಮಾನದಿಂದ ಕೆಳಗೆ ಇಳಿಸಿದ್ದಾರೆ.

ಬ್ಯಾಂಕ್‌ಗಳಿಗೆ ಜೆಟ್‌ ಏರ್‌ವೇಸ್‌ ಸಂಸ್ಥೆ ಸಾವಿರಾರು ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ, ಗೋಯಲ್‌ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲ ಸ್ಪಷ್ಟಪಡಿಸಿದೆ.

ಏನಾಯ್ತು?: ನರೇಶ್‌ ಗೋಯಲ್‌ ತಮ್ಮ ಪತ್ನಿಯೊಡಗೂಡಿ ಲಂಡನ್‌ಗೆ ತೆರಳಲು ಎಮಿರೇಟ್ಸ್‌ ವಿಮಾನ ಏರಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ವಿಮಾನ ಇನ್ನೇನು ಹೊರಡುಬೇಕು ಎನ್ನುವ ಹಂತದಲ್ಲಿ, ಲುಕೌಟ್‌ ನೋಟಿಸ್‌ ಪಟ್ಟಿಯಲ್ಲಿ ನರೇಶ್‌ ಹೆಸರು ಪತ್ತೆ ಮಾಡಿದ ವಲಸೆ ವಿಭಾಗದ ಅಧಿಕಾರಿಗಳು, ವಿಮಾನ ಹಾರಾಟಕ್ಕೆ ಬ್ರೇಕ್‌ ಹಾಕಿದ್ದಾರೆ. ಸಂಚಾರಕ್ಕೆ ಸಿದ್ಧವಾಗಿದ್ದ ವಿಮಾನವನ್ನು ಮರಳಿ ಬದಿಗೆ ತಂದು ನಿಲ್ಲಿಸಿ ಪತಿ, ಪತ್ನಿಯನ್ನು ಕೆಳಗೆ ಇಳಿಸಲಾಗಿದೆ.

ಅಲ್ಲದೆ ನರೇಶ್‌ ಪತ್ನಿ ಅನಿತಾ ಹೆಸರಲ್ಲಿ ಬುಕ್‌ ಮಾಡಲಾಗಿದ್ದ 4 ದೊಡ್ಡ ಸೂಟ್‌ಕೇಸ್‌ ಲಗೇಜ್‌ ಅನ್ನು ಕೂಡಾ ವಿಮಾನದಿಂದ ಕೆಳಗೆ ಇಳಿಸಲಾಗಿದೆ. ಹೀಗಾಗಿ ವಿಮಾನ ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಪ್ರಯಾಣ ಆರಂಭಿಸಿದೆ.

ಈ ಹಿಂದೆ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಸೇರಿದಂತೆ ಹಲವು ಸಾವಿರಾರು ಕೋಟಿ ರು. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬ್ಯಾಂಕ್‌ ಸಾಲ ಉಳಿಸಿಕೊಂಡವರ ವಿದೇಶ ಪ್ರಯಾಣದ ಮೇಲೆ ತೀವ್ರ ನಿಗಾ ಇಡಲಾಗಿದೆ.

ವಿಚಾರಣೆ ವೇಳೆ, ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ನಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಲಂಡನ್‌ ನಿವಾಸಿಗಳಾದ ಹಿಂದೂಜಾ ಸೋದರರು ಹೂಡಿಕೆ ಮಾಡುವ ಉತ್ಸುಕತೆ ತೋರಿದ್ದರು. ಆ ಕುರಿತು ಮಾತುಕತೆ ನಡೆಸಲು ಲಂಡನ್‌ಗೆ ತೆರಳುತ್ತಿದ್ದುದಾಗಿ ನರೇಶ್‌ ಹೇಳಿದ್ದಾರೆ ಎನ್ನಲಾಗಿದೆ. ನರೇಶ್‌ ಗೋಯಲ್‌ ಭಾರತೀಯ ಪೌರತ್ವ ಹೊಂದಿದ್ದು, ಅವರು ಬ್ರಿಟನ್‌ ಪೌರತ್ವ ಹೊಂದಿದ್ದಾರೆ.

click me!